ದಿಲ್ವಾಲೆ ಸೋಲ್ತಿರೋದು ಹಳೆ ಸುದ್ದಿ, ಜನ ತೋರಿಸ್ತಾರಾ ಈ ಭಿನ್ನ ಚಿತ್ರಗಳನ್ನು ಗೆಲ್ಸೋ ಬುದ್ಧಿ?

 

ಸೌಮ್ಯ ಸಂದೇಶ್

‘ಅಸಹಿಷ್ಣುತೆ ಕುರಿತ ನನ್ನ ಮಾತುಗಳನ್ನು ಜನ ತಪ್ಪಾಗಿ ಅರ್ಥಮಾಡಿಕೊಂಡಿದ್ದರಿಂದ ದಿಲ್ವಾಲೆ ಚಿತ್ರಕ್ಕೆ ನಿರೀಕ್ಷಿತ ಯಶ ಸಿಗಲಿಲ್ಲ’ ಅಂತ ಖುದ್ದು ಶಾರುಖ್ ಖಾನ್ ಹೇಳಿದ್ದಾರೆ. ಶಾರುಖ್ ಚಿತ್ರ ಮುಗ್ಗರಿಸುತ್ತಿರುವುದಕ್ಕೆ ಖುಷಿ ಪಡುತ್ತಿರುವ ಹೆಚ್ಚಿನವರು, ಹೇಳಿಕೆಗೆ ತಕ್ಕ ಶಾಸ್ತಿ ಆಗಿದೆ ಎಂದುಕೊಂಡಿರುವವರು.

ಶಾರುಖ್ ಅಸಹಿಷ್ಣುತೆಯ ಹೇಳಿಕೆ ಕೊಡದೇ ಇದ್ದರೂ ದಿಲ್ವಾಲೆ ಅಥವಾ ಅಂಥ ಜಾಯಮಾನದ ಚಿತ್ರಗಳು ಸೋಲಬೇಕಿತ್ತು. ಇನ್ನೂ ಎಷ್ಟು ದಿನ ಡ್ಯೂಯೆಟ್ ಹಾಡಿಕೊಂಡು, ಪ್ರೇಮದ ಡೈಲಾಗ್ ಹೊಡೆದುಕೊಂಡು ಅದೇ ಹಳೇ ಸೂತ್ರವನ್ನು ಪೋಣಿಸಿಕೊಂಡಿರೋದು? ಮನರಂಜನೆಯೇ ಮುಖ್ಯ ಗುರಿಯಾಗಿರಬೇಕು ಸರಿ. ಆದರೆ ಭಾರತದಂಥ ದೊಡ್ಡ ದೇಶ, ಬಾಲಿವುಡ್ ಎಂಬುದನ್ನು ಇಷ್ಟರಮಟ್ಟಿಗೆ ಶೋಕೇಸ್ ಮಾಡಿಕೊಂಡಿರುವಾಗ ಈ ಪ್ರೀತಿ- ಪ್ರೇಮ, ನಾಯಕ-ನಾಯಕಿ ವೈಭವೀಕರಣದ ಹೊರತಾದ ಚಿತ್ರಗಳು ಬರಲಿ; ಮನರಂಜನೆ ಜತೆ ಮನೋವಿಕಾಸವೂ ಆಗಲಿ ಅಂತ ಬಯಸೋದು ತಪ್ಪೇ? ಈ ಅರ್ಥದಲ್ಲಿ ‘ದಿಲ್ವಾಲೆ’ಯಂಥ ಪ್ರೇಮ ನರಳಿಕೆಗಳು ಸೋಲೋದು ಒಳ್ಳೇ ಲಕ್ಷಣ.

ಆದರೆ… ಹೆಚ್ಚಿನವರ ಖುಷಿ ದಿಲ್ವಾಲೆ ಸೋಲಿಗೆ ಮಾತ್ರ ಸೀಮಿತವಾಗಿರುತ್ತೋ ಅಥವಾ ಭಿನ್ನ ಸೃಜನಾತ್ಮಕ ಪ್ರಯತ್ನಗಳಾದಾಗ ಅಂಥವುಗಳನ್ನು ಗೆಲ್ಲಿಸುವ ಉಮೇದೂ ಇರುತ್ತದೋ ಎಂಬುದರಲ್ಲಿ ಜನ ಸಮೂಹದ ಅರ್ಹತೆಯ ಪರೀಕ್ಷೆ ಆಗುತ್ತದೆ.

2016ರಲ್ಲಿ ಬಾಲಿವುಡ್ ನ ಅಂಥ ಎರಡು ಚಿತ್ರಗಳು ನಮ್ಮೆದುರು ತೆರೆದುಕೊಳ್ಳಲಿವೆ. ಮೊದಲನೆಯದ್ದು ಜನವರಿ 26ರಂದು ಬಿಡುಗಡೆ ಆಗಲಿರುವ ಅಕ್ಷಯ್ ಕುಮಾರ್ ಅಭಿನಯದ ‘ಏರ್ಲಿಫ್ಟ್’.

1990ರಲ್ಲಿ ಕುವೈತ್ ಮೇಲೆ ಇರಾಕ್ ಆಕ್ರಮಣ ಮಾಡಿತು. ಆ ಸಂದರ್ಭದಲ್ಲಿ ಅಲ್ಲಿದ್ದ 1,11,716 ಭಾರತೀಯರನ್ನು, 59 ದಿನಗಳ ಅವಧಿಯಲ್ಲಿ, ವಾಯುಮಾರ್ಗದ ಮೂಲಕ ಮುಂಬೈಗೆ ಕರೆತರಲಾಯಿತು! ಯೆಸ್.. ನೀವು ಓದಿದ ಸಂಖ್ಯೆ ಸರಿಯಾಗಿಯೇ ಇದೆ. ಗಿನ್ನಿಸ್ ದಾಖಲೆಯಲ್ಲೂ ಸೇರಿಕೊಂಡ ನಿಜಘಟನೆ ಇದು. ಆದರೆ ಭಾರತದ ಇಂಥದೊಂದು ಮಹಾನ್ ಕಾರ್ಯಾಚರಣೆ ಬಗ್ಗೆ ನಮಗೆಷ್ಟು ಗೊತ್ತು? ರಾಜಾ ಮೆನನ್ ನಿರ್ದೇಶನದ ‘ಏರ್ ಲಿಫ್ಟ್’ ಚಿತ್ರ ಇದರದ್ದೇ ಕತೆಯನ್ನು ಹೇಳಲಿದೆ. ಆಗ ತೆರವು ಕಾರ್ಯಾಚರಣೆಯಲ್ಲಿ ಭಾರತ ಸರ್ಕಾರಕ್ಕೆ ಸಹಕರಿಸಿದ ಉದ್ಯಮಿ ರಂಜಿತ್ ಕತ್ಯಾಲ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಇದ್ದಾರೆ.

ಮುಂದಿನ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವ ಇನ್ನೊಂದು ಹಿಂದಿ ಚಲನಚಿತ್ರ ‘ನೀರಜಾ’. ಇದು ಭಾರತದ ಹೆಮ್ಮೆಯ ಗಗನಸಖಿ, ಮರಣೋತ್ತರ ಅಶೋಕ ಚಕ್ರ ಪುರಸ್ಕಾರ ಪಡೆದ ನೀರಜ್ ಭಾನೋಟ್ ಶೌರ್ಯಗಾಥೆ. 1986ರ ಸೆಪ್ಟೆಂಬರ್ ನಲ್ಲಿ 360 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನವನ್ನು ಕರಾಚಿಯಲ್ಲಿ ಲಿಬಿಯಾ ಉಗ್ರರು ಹೈಜಾಕ್ ಮಾಡುತ್ತಾರೆ. ಆಗ ತನ್ನ ಕ್ಷಮತೆ ಮೆರೆದು, ಪೈಲಟ್ ಗಳನ್ನು ಎಚ್ಚರಿಸಿ, ಉಗ್ರರ ಕಾರ್ಯಯೋಜನೆ ಸಂಪೂರ್ಣವಾಗದಂತೆ ನೋಡಿಕೊಳ್ಳುತ್ತಾರೆ ನೀರಜಾ. ಅಮೆರಿಕನ್ನರ ಪಾಸ್ ಪೋರ್ಟ್ ಗಳನ್ನು ಬಚ್ಚಿಟ್ಟು, ಅವರ ಗುರುತು ಸಿಗದಂತೆ ಮಾಡಿ, ಉಗ್ರರ ಗುಂಡಿಗೆ ಆಹುತಿಯಾಗದಂತೆ ತಡೆಯುತ್ತಾರೆ. ಕೊನೆಯಲ್ಲಿ ಉಗ್ರರು ಸ್ಫೋಟಕ್ಕೆ ಮುಂದಾದಾಗ ತುರ್ತು ನಿರ್ಗಮನ ದ್ವಾರವನ್ನು ತೆಗೆದು ಎಲ್ಲರನ್ನೂ ಪಾರು ಮಾಡಿ, ತಾನು ಗುಂಡೇಟು ತಿಂದು ಮೃತರಾಗುತ್ತಾರೆ ನೀರಜಾ. ನೀರಜಾ ಭಾನೋಟ್ ಪಾತ್ರವನ್ನು ಸೋನಮ್ ಕಪೂರ್ ನಿರ್ವಹಿಸುತ್ತಿದ್ದಾರೆ. ಯೂಟ್ಯೂಬ್ ನಲ್ಲಿ ಅದಾಗಲೇ ಜನಪ್ರಿಯವಾಗಿರುವ ಚಿತ್ರದ ಟ್ರೈಲರ್ ಇಲ್ಲಿದೆ.

ಭಾರತೀಯ ಪ್ರೇಕ್ಷಕ ಇಂಥ ಚಿತ್ರಗಳನ್ನು ಗೆಲ್ಲಿಸಿ, ತನ್ನ ಭವ್ಯ ಇತಿಹಾಸವನ್ನು ನೆನಪು ಮಾಡಿಕೊಳ್ಳುತ್ತಾನಾ? 2016 ಉತ್ತರ ನೀಡಲಿದೆ.

Leave a Reply