ತೈಲೋತ್ಪಾದನೆ ದಿಕ್ಕನ್ನೇ ಬದಲಿಸಲು ‘ಹೆಲ್ಪ್’ ಮಾಡಲಿದೆ ಮೋದಿ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ!

praveen kumar shetty (2)ಪ್ರವೀಣ್ ಶೆಟ್ಟಿ, ಕುವೈತ್

ಗುತ್ತಿಗೆ ಅನ್ನುವುದು ಬಹಳ ಸರಳ ಮತ್ತು ಸುಲಭವಾದ ಕರಾರು. ಈಗಲೂ ಹಳ್ಳಿಗಳಲ್ಲಿ ಇಂತಹ ಗುತ್ತಿಗೆ ವ್ಯವಹಾರಗಳು ಯಾವುದೇ ತಕರಾರಿಲ್ಲದೆ ನೆಡೆಯುತ್ತಿದೆ. ಗುತ್ತಿಗೆಯ ಕರಾರು ಮತ್ತು ಅದಾಯದಲ್ಲಿನ ಹಂಚಿಕೆಯು ಆಯಾಯ ವಹಿವಾಟಿನ ಮೇಲೆ ಅವಲಂಬಿತವಾಗಿರುತ್ತದೆ. ವ್ಯಾಪಾರದ ಪರಿಧಿ ಮತ್ತು ಗಾತ್ರಗಳು ಎಷ್ಟೇ ಸಂಕೀರ್ಣವಾಗಿದ್ದರೂ ಆದಾಯದ ಹಂಚಿಕೆಯನ್ನು ಬಹಳ ಸರಳವಾಗಿ ಮಾಡಿಕೊಂಡಿರುತ್ತಾರೆ. ಗುತ್ತಿಗೆ ಕೊಟ್ಟವನಿಗೂ ಮತ್ತು ಗುತ್ತಿಗೆ ಪಡೆದುಕೊಂಡವನಿಗೂ ನಷ್ಟವಾಗದಂತೆ ಯಾವುದೇ ಭಯಂಕರ ನಿಯಮಗಳು ಮತ್ತು ಷರತ್ತುಗಳನ್ನು ಹಾಕದೆ ಜನಸಾಮಾನ್ಯನಿಗೂ ಆರ್ಥವಾಗುವಂತೆ ಯಾವುದೇ ರೀತಿಯ ವ್ಯವಹಾರಕ್ಕೂ ಗುತ್ತಿಗೆ ಕರಾರು ಮಾಡಿಕೊಳ್ಳುತ್ತಾರೆ.

ಮಾವಿನ ತೋಪೊಂದನ್ನು ಗುತ್ತಿಗೆಗೆ ಕೊಡುವಾಗ ಬೆಳೆದ ಫಸಲಿನಲ್ಲಿ50:50 ಹಂಚಿಕೊಳ್ಳುವ ಬದಲು, ಆ ವರ್ಷದ ಖರ್ಚು ವೆಚ್ಚವನ್ನು ಕೆಳೆದು ಬಂದಂತಹ ಲಾಭಾಂಶದಲ್ಲಿ 50:50 ಹಂಚಿಕೊಳ್ಳೋಣವೆಂದು ಗುತ್ತಿಗೆ ಕರಾರು ಮಾಡಿಕೊಂಡರೆ ಏನಾಗಬಹುದು? ಲಾಭಾಂಶದ ಲೆಕ್ಕಾಚಾರ ಮಾಡಲು ವರ್ಷವಿಡಿ ಮಾವಿನ ತೋಪಿಗೆ ಮಾಡಿದ ಖರ್ಚು ವೆಚ್ಚ, ಬಂದಂತಹ ಫಸಲಿನ ಸರಿಯಾದ ಲೆಕ್ಕ, ಹೆಚ್ಚಿನ ಬೆಲೆಗೆ ಯಾವ ಮಾರುಕಟ್ಟೆಯಲ್ಲಿ ಮಾರಬೇಕೆಂಬ ನಿರ್ಧಾರ, ಮಾವಿನ ಮರಕ್ಕೆ ಹಾಕುತ್ತಿರುವ ಗೊಬ್ಬರದ ಗುಣಮಟ್ಟದ ಪರೀಕ್ಷೆ, ಗುತ್ತಿಗೆದಾರ ವೆಚ್ಚವನ್ನು ಜಾಸ್ತಿ ತೋರಿಸದಂತೆ ಸರಿಯಾದ ಖರ್ಚಿನ ಲೆಕ್ಕ ಹಾಕಲು ಒಬ್ಬ ಮೇಸ್ತ್ರಿಯ ನೇಮಕಗಳಂತಹ ಸಾವಿರಾರು ಜಟಿಲ ಸಮಸ್ಯೆಗಳಿವೆ. ಇಷ್ಟೆಲ್ಲ ಮಾಡಿ ಹಣವನ್ನು ಹಂಚಿಕೆ ಮಾಡಿಕೊಳ್ಳಲು ವರ್ಷವಿಡಿ ಕಾಯಬೇಕು. ಹಾಗಾಗಿ ಇಂತಹ ಆದಾಯ ಹಂಚಿಕೊಳ್ಳುವ ಗುತ್ತಿಗೆ ವ್ಯವಹಾರವನ್ನು ಅನಿಶ್ಚಿತ ಉತ್ಪಾದನಾ ರಂಗದ ವ್ಯವಹಾರದಲ್ಲಿ ಸಾಮಾನ್ಯವಾಗಿ ಯಾವ ಬೆಪ್ಪನೂ ನಮ್ಮ ಹಳ್ಳಿ ಕಡೆಗಳಲ್ಲಿ ಮಾಡಿಕೊಳ್ಳುವುದಿಲ್ಲ.

ಆದರೆ ಇಂತಹುದೆ ಒಂದು ಗುತ್ತಿಗೆ ವ್ಯವಹಾರವನ್ನು ನಮ್ಮ ಭಾರತದ ಸರ್ಕಾರವು 1997-1998 ರಲ್ಲಿ ಮಾಡಿಕೊಂಡಿತ್ತು. ಭಾರತದಲ್ಲಿ ತೈಲನಿಕ್ಷೇಪ ಪರಿಶೋಧನೆ ಮತ್ತು ತೈಲ ಉತ್ಪಾದನೆಗಾಗಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳೊಂದಿಗೆ (New exploration Policy -NELP) ಲಾಭಾಂಶ ಹಂಚಿಕೆಯ ಗುತ್ತಿಗೆ ಒಪ್ಪಂದ ಮಾಡಿಕೊಳ್ಳುವ ಕರಡು ನೀತಿಯೊಂದನ್ನು ಜಾರಿಗೆ ತಂದು ಹಲವಾರು ತೈಲ ನಿಕ್ಷೇಪಗಳನ್ನು ಗುತ್ತಿಗೆಗೆ ನೀಡಿತ್ತು. ಹಲವಾರು ವರ್ಷಗಳ ನಂತರವೂ ತೈಲ ನಿಕ್ಷೇಪಗಳ ಗುತ್ತಿಗೆಯಲ್ಲಿ ವ್ಯಾಜ್ಯಗಳಾಗಿ ಸರಕಾರಕ್ಕೆ ಸಾವಿರಾರು ಕೋಟಿಯ ಆದಾಯದ ನಷ್ಟವಾಗುತ್ತಿದೆ. ಅನಗತ್ಯ ಸುಳ್ಳು ಖರ್ಚಿನ ಲೆಕ್ಕ ತೋರಿಸಿ ಉತ್ಪಾದನ ವೆಚ್ಚವನ್ನು ತೋರಿಸಿತ್ತಿರುವ ಗುತ್ತಿಗೆದಾರರು ಒಂದು ಕಡೆಯಲ್ಲಾದರೆ, ಸುಳ್ಳಿನ ಲೆಕ್ಕವನ್ನು ಪತ್ತೆ ಹಚ್ಚಲು ಸರ್ಕಾರಿ ಲೆಕ್ಕಪರಿಶೋಧಕರು ಇನ್ನೊಂದು ಕಡೆ. ಕಾಮಗಾರಿ ಪೂರ್ತಿಯಾದಗಲೇ ಲಾಭಾಂಶದ ಸರಿಯಾದ ಹಂಚಿಕೆ ಮಾಡಲು ಸಾಧ್ಯವಾಗುವುದೆಂಬ ಸತ್ಯ ಗೊತ್ತಿರುವ ಕಂಪನಿಗಳು ಸುಳ್ಳು ನೆಪ ಹೇಳಿ ಯಾವುದೇ ಕಾಮಗಾರಿಯನ್ನೂ ಪೂರ್ಣಗೊಳಿಸುತ್ತಿಲ್ಲ. ಅರೆ ಬರೆ ಕಾಮಗಾರಿಯಲ್ಲಿ ಬಂದಂತಹ ತೈಲವನ್ನು ತಮಗಿಷ್ಟ ಬಂದಂತೆ ಮಾರಿಕೊಂಡು ತಮ್ಮ ವೆಚ್ಚಕ್ಕೆ ಸರಿದೂಗಿಸುವ ಲೆಕ್ಕ ಕೊಡುತ್ತಿವೆ. ಇಂತಹುದೇ ಸನ್ನಿವೇಶವು ಕೃಷ್ಣಗೋದಾವರಿ ತೈಲನಿಕ್ಷೇಪದಲ್ಲಿ ಅಪಾರ ಪ್ರಮಾಣದ ತೈಲ ಸಂಶೋಧನೆಯಾದಾಗ ಇಸವಿ 2005 ರಲ್ಲಿ ಭಾರತ ಸರಕಾರ ಮತ್ತು ರಿಲಾಯನ್ಸ್ ಕಂಪನಿಗಳ ನಡುವೆ ನಡೆದಿತ್ತು. ಈ ಸಂಘರ್ಷದ ನಂತರವೂ ನಮ್ಮ ಸರಕಾರವು ಎಚ್ಚೆತ್ತು ಕೊಳ್ಳಲಿಲ್ಲ. ಲಾಭಾಂಶ ಹೆಚ್ಚು ಮಾಡಿಕೊಳ್ಳಲು ತನಗಿಷ್ಟ ಬಂದಂತಹ ಬೆಲೆಯನ್ನು ನಿರ್ಧಾರ ಮಾಡಿದ ರಿಲಾಯನ್ಸ್ ಕಂಪೆನಿಯು ಸರ್ಕಾರಕ್ಕೆ ಸೆಡ್ಡು ಹೊಡೆದಿತ್ತು. ಖರ್ಚಿನ ಲೆಕ್ಕ ತೆಗೆಯಲು ಹೋದ ಮಹಾಲೆಕ್ಕಪರಿಶೋಧಕರಿಗೆ ಅಲ್ಲಿನ ವ್ಯವಹಾರದಲ್ಲಿ ಅನಗತ್ಯ ವೆಚ್ಚದ ವಾಸನೆ ಬಡಿದಿತ್ತು. ಇಷ್ಟಾದರೂ ಕಳೆದ ಹತ್ತು ವರ್ಷಗಳಲ್ಲಿ ಲಾಭಾಂಶ ಹಂಚಿಕೆಯ ಗುತ್ತಿಗೆಯ ನೀತಿಯನ್ನು ಬದಲಾಯಿಸಲೇ ಇಲ್ಲ. ಅದನ್ನು ಬದಲಾಯಿಸುವ ಉಮೇದು ಯಾರಿಗೂ ಇರಲಿಲ್ಲ. ಸರಕಾರದ ಬೊಕ್ಕಸ ತುಂಬಿಸಿ, ದೇಶದ ಸಂಪತ್ತನ್ನು ಪ್ರಜೆಗಳಿಗೆ ತಲುಪಿಸಬೇಕೆಂಬ ಹಪಾಹಪಿಯೂ ಇರಲಿಲ್ಲ. ಕಾಮಗಾರಿಯನ್ನು ಪೂರ್ತಿಯೆಂದು ಘೋಷಿಸದೆ, ಉತ್ಪಾದಿಸಿದ ತೈಲವನ್ನು ತಮಗಿಷ್ಟ ಬಂದಂತೆ ಮಾರಿಕೊಂಡು, ಸರ್ಕಾರದ ಖಜಾನೆಗೆ ಏನೂ ಬರದಂತೆ ಎಲ್ಲರೂ ನೋಡಿಕೊಂಡರು.

ಈ ಲಾಭಾಂಶ ಹಂಚಿಕೆಯೆಂಬ ಮೋಸದಾಟದ ಗುತ್ತಿಗೆ ವ್ಯವಹಾರವನ್ನು ಕಸದ ಬುಟ್ಟಿಗೆಸೆದು, ಹಳ್ಳಿಗಳಲ್ಲಿ ಸಾಮಾನ್ಯವಾಗಿರುವ ಆದಾಯ ಹಂಚಿಕೆಯ ಗುತ್ತಿಗೆಯನ್ನು ನರೇಂದ್ರ ಮೋದಿ ಸರಕಾರ ಮಾರ್ಚ್ 11, 2016 ಜಾರಿಗೆ ತಂದಿದೆ. ಭಾರತದ ಪೆಟ್ರೋಕೆಮಿಕಲ್ ಉದ್ಯಮದಲ್ಲಿ ಕ್ರಾಂತಿ ಉಂಟುಮಾಡಲಿರುವ ಈ ಹೊಸ ನೀತಿಯೇ, The Hydrocarbon Exploration and Licensing Policy (HELP). ಇದರ ಪ್ರಕಾರ ಯಾವುದೇ ನಿಕ್ಷೇಪವನ್ನು ಗುತ್ತಿಗೆ ಪಡೆದ ಸಂಸ್ಥೆಯು, ಉತ್ಪಾದಿಸಿದ ತೈಲ ಅಥವಾ ಅನಿಲವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಉತ್ಪಾದನೆಯ ಸಂಪೂರ್ಣ ವೆಚ್ಚ ಗುತ್ತಿಗೆದಾರನದ್ದೆ. ಹಾಗಾಗಿ ಸರಕಾರಕ್ಕೆ ಯಾವುದೇ ಲೆಕ್ಕಪರಿಶೋಧನೆಯ ಅಗತ್ಯವಿಲ್ಲ. ಗುತ್ತಿಗೆದಾರನಿಗೂ ತನ್ನ ವ್ಯವಹಾರದಲ್ಲಿಸರಕಾರದ ಹಸ್ತಕ್ಷೇಪವು ಕಡಿತಗೊಂಡು ಪಾರದರ್ಶಕ ವ್ಯವಹಾರದ ಸನ್ನಿವೇಶ ನಿರ್ಮಾಣವಾಗಲಿದೆ. ಗುತ್ತಿಗೆದಾರನು ಉತ್ಪಾದಿಸಿದ ಪ್ರಥಮ ಬ್ಯಾರೆಲ್ ತೈಲಕ್ಕೂ ಭಾರತ ಸರಕಾರಕ್ಕೆ ಆದಾಯ ಹರಿದು ಬರಲಿದೆ. ಅತೀ ಕಡಿಮೆ ಸಮಯದಲ್ಲಿ ಕಾಮಗಾರಿಯನ್ನು ಪೂರ್ತಿಗೊಳಿಸಿಕೊಂಡು ಆದಾಯ ತರಿಸಿಕೊಳ್ಳಬೇಕಾದ ಪರಿಸ್ಥಿತಿಗೆ ಗುತ್ತಿಗೆದಾರನು ನೂಕಲ್ಪಡುವುದರಿಂದ ದೇಶದಲ್ಲಿ ತೈಲ ಉತ್ಪಾದನೆಯ ಹೆಚ್ಚುಗೊಳ್ಳಲಿದೆ. ಭಾರತದಲ್ಲೇ ತೈಲ ಉತ್ಪಾದನೆಗೊಂಡರೆ ವಿದೇಶಿ ಆಮದು ಕಡಿಮೆಗೊಂಡ ಸರಕಾರದ ಬೊಕ್ಕಸಕ್ಕೆ ಕಡಿಮೆ ಹೊರೆ ಬೀಳಲಿದೆ.

ದೇಶದ್ರೋಹಿಗಳನ್ನು ವೈಭವಿಕರಿಸುತ್ತಿರುವ ಈ ದಿನಗಳಲ್ಲಿ, ರಾಷ್ಟ್ರಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲಂತಹ ಇಂತಹ ಉತ್ತಮ ಸರಕಾರಿ ಕ್ರಮಗಳು ಜನಸಾಮಾನ್ಯನಿಗೂ ತಲುಪಬೇಕು. ಇಂತಹ ಸರ್ಕಾರಿ ನೀತಿ ನಿಯಮಗಳು ಸಮಾಜದಲ್ಲಿ ಆಶಾದಾಯಕ ವಾತಾವರಣ ಮೂಡಿಸಿ, ಧನಾತ್ಮಕ ಬೆಳವಣಿಗೆಗೆ ಸ್ಫೂರ್ತಿಯಾಗಬಲ್ಲದು.

ದೇಶವನ್ನು ಕಟ್ಟಲು ಆಕ್ಸ್ ಪರ್ಡ್ ನಲ್ಲಿ ಕಲಿತವರೇ ಬೇಕಿಲ್ಲ, ಹತ್ತು ಡಿಗ್ರಿಗಳ ಸರದಾರನೇ ಬೇಕಿಲ್ಲ, ಇಂಗ್ಲೀಷು ಬಲ್ಲವನೇ ಬೇಕಿಲ್ಲ. ಆದರೆ ಕನಿಷ್ಟ ಸಾಮಾನ್ಯ ಜ್ಞಾನ ಮಾತ್ರ ಬೇಕು. ಹಳ್ಳಿಗರಿಗೂ ಗೊತ್ತಿದ್ದ ಸರಳ ಗುತ್ತಿಗೆಯನ್ನು ಪೆಟ್ರೋಲಿಯಂ ಉದ್ಯಮ ರಂಗದಲ್ಲಿ ಜಾರಿಗೆ ತರಲು ಚಾಯ್ ಮಾರುತ್ತಿದ್ದ ಆ ಮೋದಿಯೇ ಬರಬೇಕಾಯ್ತು.

2 COMMENTS

  1. Couple of months back there wan exclusive and well detailed article on Caravan Magazine how Pvt companies like Reliance are looting India.That was a real shocker to me .Within couple of weeks coming to power Modi Govt revised the pricing mechanism to benefit the nation and second step pointed out in this particular article.

    I wonder how shameless is Rahul Gandhi to call Modi Govt as suit-Boot ki sarkar

Leave a Reply