ಕಾರ್ತಿ ಚಿದಂಬರಂ ಬೇನಾಮಿ ಸಾಮ್ರಾಜ್ಯದ ಎಳೆ ಬಿಚ್ಚಿಟ್ಟಿರುವ ಸ್ಫೋಟಕ ತನಿಖಾ ವರದಿ!

ಡಿಜಿಟಲ್ ಕನ್ನಡ ಟೀಮ್

‘ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ ಎಸ್. ಗುರುಮೂರ್ತಿ ಬರೆದಿದ್ದಾರೆ ಅಂತಂದ್ರೆ ಅದೇನೋ ಸಂಚಲನವಾಗಿರಲೇಬೇಕು ಎಂಬಷ್ಟರಮಟ್ಟಿಗೆ ಲಾಗಾಯ್ತಿನ ಟ್ರ್ಯಾಕ್ ರೆಕಾರ್ಡ್ ಇದೆ. ಏಪ್ರಿಲ್ 26ರ ಸಂಚಿಕೆಯಲ್ಲಿ ಪಿ. ಚಿದಂಬರಂ- ಕಾರ್ತಿ ಚಿದಂಬರಂ ಅವರ ಬೇನಾಮಿ ಆಸ್ತಿಯ ಸಾಮ್ರಾಜ್ಯವನ್ನು ಮೇಲ್ನೋಟಕ್ಕೆ ಒಪ್ಪಿಗೆಯಾಗುವ ನಿಖರ ಸಾಕ್ಷ್ಯಗಳೊಂದಿಗೆ ಬಯಲಿಗೆಳೆಯಲಾಗಿದೆ.

ಕಾರ್ತಿ ಚಿದಂಬರಂ ಅವರ ಉದ್ಯಮ ಸಾಮ್ರಾಜ್ಯದ ಮೇಲೆ ನಿರಂತರ ಐಟಿ ದಾಳಿಗಳಾಗುತ್ತಿದ್ದದ್ದು, ಪರಿಶೀಲನೆಗಳು ನಡೆಯುತ್ತಿರುವುದು ಹಳೇ ಸುದ್ದಿ. ಈ ಕುರಿತು ಪ್ರಕಟಿಸಿದ್ದ ವರದಿಯನ್ನು ನೀವಿಲ್ಲಿ ಓದಬಹುದು.

ಆದರೆ, ಬೇನಾಮಿ ಆಸ್ತಿಗಳಿಗೂ ಚಿದಂಬರಂ ಕುಟುಂಬಕ್ಕೂ ಇರುವ ಕೊಂಡಿಯನ್ನು ‘ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಅರ್ಥವಾಗುವಂತೆ ತೆರೆದಿಟ್ಟಿದೆ. ಇಲ್ಲಿನ ವಿಧಾನ ಹೀಗಿದೆ. ಕಾರ್ತಿ ಚಿದಂಬರಂ ಅವರ ಪಕ್ಕದ ಮನೆಯವನೂ ಸೇರಿದಂತೆ ಹಲವರು ಯಾವ್ಯಾವುದೇ ಕಂಪನಿಗಳನ್ನು ಕಟ್ಟಿದ್ದಾರೆ. ಇವರೆಲ್ಲರೂ ಈ ಪ್ರಮಾಣದ ಆಸ್ತಿ ತಮ್ಮ ಮರಣಾನಂತರ ಯಾರಿಗೆ ಸೇರಬೇಕು ಅಂತ ವಿಲ್ ಬರೆದಿಟ್ಟಿದ್ದಾರೆ. ಆ ಎಲ್ಲ ಉಯಿಲುಗಳೂ ಇವರ ಆಸ್ತಿಯನ್ನು ಮರಣ ಸಂದರ್ಭದಲ್ಲಿ ಅದಿತಿ ಚಿದಂಬರಂಗೆ ಹಸ್ತಾಂತರಿಸಬೇಕು ಅಂತ ಉಲ್ಲೇಖಿಸಿವೆ. ಈ ಅದಿತಿ ಬೇರೆ ಯಾರೂ ಅಲ್ಲ, ಕಾರ್ತಿ ಚಿದಂಬರಂ ಮಗಳು!

ಈ ಬಗ್ಗೆ ವರದಿ ಈ ಕೆಳಗಿನಂತೆ ವಿವರಿಸಿದೆ.

ಅಡ್ವಾಂಟೇಜ್ ಇಂಡಿಯಾ ಮತ್ತು ಅಡ್ವಾಂಟೇಜ್ ಸಿಂಗಾಪುರ್, ಬೇನಾಮಿ ಹೆಸರಲ್ಲಿರುವ ಚಿದಂಬರಂ ಕುಟುಂಬದ ಬಹು ದೊಡ್ಡ ಆಸ್ತಿ. ಈ ಅಡ್ವಾಂಟೇಜ್ ಆಫ್ ಇಂಡಿಯಾದ ಮಾಲೀಕತ್ವವನ್ನು ಗಮನಿಸೋದಾದರೆ, ಇದರ 5 ಲಕ್ಷ ಬಂಡವಾಳ ಷೇರುಗಳ ಪೈಕಿ 2 ಲಕ್ಷ ಷೇರು (ಶೇ.40 ರಷ್ಟು) ಆಸ್ಬ್ರಿಡ್ಜ್ ಕಂಪನಿಯದಾಗಿದೆ.

2006-2011ರವರೆಗೆ ಈ ಆಸ್ಬ್ರಿಡ್ಜ್ ಕಂಪನಿ ಮಾಲೀಕತ್ವ ಕಾರ್ತಿ ಚಿದಂಬರಂ ಅವರದಾಗಿತ್ತು. 2006ರಲ್ಲಿ ಮೋಹನನ್ ರಾಜೇಶ್ ಅವರಿಂದ ಷೇರು ಪಡೆದರು. ನಂತರ 2011ರಲ್ಲಿ ಮತ್ತೇ ಆ ಷೇರುಗಳನ್ನು ಮೋಹನನ್ ರಾಜೇಶ್ ಗೆ ವರ್ಗಾಯಿಸಿದರು. ಇಲ್ಲಿ ಕಾರ್ತಿ ಇಚ್ಛೆ ಹಾಗೂ ಅನುಕೂಲಕ್ಕೆ ತಕ್ಕಂತೆ ಕಂಪನಿಯ ಷೇರುಗಳು ವರ್ಗಾವಣೆಯಾಗುತ್ತವೆ. ಹಾಗಾಗಿ ಮೋಹನನ್, ಕಾರ್ತಿಯ ಆಸ್ತಿಗೆ ಬೇನಾಮಿ ಮಾಲೀಕ.

ಅಡ್ವಾಂಟೇಜ್ ಇಂಡಿಯಾದ ಇನ್ನುಳಿದ ಮೂರು ಲಕ್ಷ ಷೇರು (ಶೇ.60 ರಷ್ಟು) ನಾಲ್ಕು ಜನರ ಹೆಸರಲ್ಲಿದೆ. ಅದು ಸಿಬಿಎನ್ ರೆಡ್ಡಿ (2,11,430 ಷೇರು), ಪದ್ಮ ವಿಶ್ವನಾಥನ್ ಹಾಗೂ ರವಿ ವಿಶ್ವನಾಥನ್ (32,600 ಷೇರು) ಮತ್ತು ಭಾಸ್ಕರರಮಣ್ (17,4000 ಷೇರು). ಈ ನಾಲ್ವರ ಪೈಕಿ ಸಿಬಿಎನ್ ರೆಡ್ಡಿ ಅವರ ಬಳಿ ಹೆಚ್ಚು ಷೇರುಗಳಿದ್ದು, ಇವರು ಕಾರ್ತಿಯ ಆಪ್ತರು. ಈ ನಾಲ್ವರೂ ಈ ಷೇರುಗಳನ್ನು ಚಿದಂಬರಂ ಮೊಮ್ಮಗಳು ಅಂದರೆ, ಕಾರ್ತಿಯ ಮಗಳು ಅದಿತಿ ನಳಿನಿ ಚಿದಂಬರಂ ಹೆಸರಿಗೆ ಉಯಿಲು ಬರೆದಿದ್ದಾರೆ. ಅಡ್ವಾಂಟೇಜ್ ಇಂಡಿಯಾದ ಒಡೆತನದ ಅಡ್ವಾಂಟೇಜ್ ಸಿಂಗಾಪುರ್ ಸಹ ಅದಿತಿ ಹೆಸರಿಗೆ ಬರೆಯಲಾಗಿದೆ.

ಇಲ್ಲಿ ನಾಲ್ವರು ಷೇರುದಾರರು ಉಯಿಲು ಬರೆದುಕೊಟ್ಟಿರುವ ರೀತಿ ಮತ್ತಷ್ಟು ಅಚ್ಚರಿ ಮೂಡಿಸುತ್ತದೆ. ಈ ನಾಲ್ವರೂ ಒಂದೇ ದಿನ (ಜೂನ್ 19, 2013) ಉಯಿಲು ಬರೆದಿದ್ದಾರೆ. ಸಿಬಿಎನ್ ರೆಡ್ಡಿ ಬರೆದ ಉಯಿಲಿನಲ್ಲಿ ರವಿ ವಿಶ್ವನಾಥ್ ಮೊದಲ ಸಾಕ್ಷಿಯಾದರೆ, ಉಳಿದ ಮೂವರ ವಿಲ್ ನಲ್ಲಿ ಮೊದಲ ಸಾಕ್ಷಿಯಾಗಿ ನಿಲ್ಲುವುದು ಸಿಬಿಎನ್ ರೆಡ್ಡಿ. ಇನ್ನು ಈ ನಾಲ್ವರ ವಿಲ್ ಗೆ ಎರಡನೇ ಸಾಕ್ಷಿಯಾಗಿ ನಿಲ್ಲುವವರು ವಿ.ಮುರಳಿ.

ಈ ವಿಲ್ ಅನ್ನು ಎರಡು ಭಾಗ ಮಾಡಿದ್ದಾರೆ. ಒಂದು ವೈಯಕ್ತಿಕ ಆಸ್ತಿ, ಮತ್ತೊಂದು ಅಡ್ವಾಂಟೇಜ್ ಮತ್ತು ಇತರೆ ಕಂಪನಿಗಳ ಬೇನಾಮಿ ಷೇರುಗಳು. ಇವರು ವೈಯಕ್ತಿಕ ಆಸ್ತಿಯನ್ನು ಗಂಡ ಅಥವಾ ಪತ್ನಿ ಮತ್ತು ಮಕ್ಕಳ ಹೆಸರಿಗೆ ಬರೆದಿದ್ದಾರೆ.

ನೂರಾರು ಕೋಟಿ ಮೌಲ್ಯದ ಬೇನಾಮಿ ಷೇರುಗಳನ್ನು ಅವರ ಮಕ್ಕಳಿಗೊ, ಬಡವರಿಗೊ ಅಥವಾ ದೇಣಿಗೆಗೊ ನೀಡಿಲ್ಲ. ಅವರು ಈ ಷೇರುಗಳನ್ನು ಉಡುಗೊರೆಯಾಗಿ ನೀಡಿರುವುದು ಅದಿತಿ ನಳಿನಿ ಚಿಂದಂಬರಂಗೆ. ಚಿದಂಬರಂ ಕುಟುಂಬಕ್ಕೆ ಸಂಬಂಧಪಡದವರು ಯಾಕೆ ಉಡುಗೊರೆಯಾಗಿ ನೀಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಅದಕ್ಕೆ ಪ್ರತಿಯೊಬ್ಬರೂ ತಮ್ಮ ಉಯಿಲಿನಲ್ಲಿ ಕಾರಣವನ್ನು ನೀಡಿದ್ದಾರೆ.

ವಿಲ್ ನಲ್ಲಿ ಅವರು ನೀಡಿರುವ ಕಾರಣ, ದಿವಂಗತ ಡಾ.ಬಿ ರಂಗರಾಜನ್. ಇವರು ಕಾರ್ತಿಗೆ ಹೆಣ್ಣು ಕೊಟ್ಟ ಮಾವ. ರಂಗರಾಜನ್ ಅವರು ನನಗೆ ಆಪ್ತರು, ಸ್ನೇಹಿತರು ಹಾಗೂ ಮಾರ್ಗದರ್ಶಕರಾಗಿದ್ದರು. ಅವರ ಸಹಾಯಕ್ಕೆ ಉಡುಗೊರೆಯಾಗಿ ಅವರ ಕುಟುಂಬದ ಮೇಲಿನ ಪ್ರೀತಿಯಿಂದಾಗಿ ಮೊಮ್ಮಗಳಿಗೆ ಷೇರು ನೀಡುತ್ತಿರುವುದಾಗಿ ಸಿಬಿಎನ್ ರೆಡ್ಡಿ ವಿವರಿಸಿದ್ದಾರೆ. ಇಲ್ಲಿ ಕೇವಲ ಅಡ್ವಾಂಟೇಜ್ ಷೇರುಗಳಷ್ಟೇ ಅಲ್ಲ, ಕ್ರಿಯಾ ಎಫ್ಎಂಸಿಜಿ (22,500 ಷೇರು) ಮತ್ತು ರೊಚೆಸ್ಟರ್ ಟೆಕ್ನಾಲಜಿ ಸೊಲ್ಯೂಷನ್ಸ್ ಪ್ರೈ.ಲಿ. (5000 ಷೇರು) ಸಹ ಅದಿತಿ ಹೆಸರಿಗೆ ಬರೆಯಲಾಗಿದೆ. ಈ ಹಿಂದೆ ಕ್ರಿಯಾ ಎಫ್ಎಂಸಿಜಿ ಕಂಪನಿಯ ಮಾಲೀಕತ್ವವನ್ನು ಕಾರ್ತಿ ಪತ್ನಿ ಶ್ರೀನಿಧಿ ಮತ್ತು ಮಗಳು ಅದಿತಿ ಹೊಂದಿದ್ದರು. 2008ರಲ್ಲಿ ಇದನ್ನು ಸಿಬಿಎನ್ ರೆಡ್ಡಿಗೆ ವರ್ಗಾಯಿಸಲಾಗಿತ್ತು.

ಸಿಬಿಎನ್ ರೆಡ್ಡಿ ಜತೆಗೆ ಉಳಿದ ಮೂವರು ಕೊಟ್ಟಿರುವ ಕಾರಣಗಳನ್ನು ನೋಡೊದಾದ್ರೆ, ರವಿ ವಿಶ್ವನಾಥನ್ ಸಹ ರೆಡ್ಡಿ ಅವರ ಸ್ನೇಹ, ಮಾರ್ಗದರ್ಶನದ ಸೂತ್ರವನ್ನೇ ಬಳಸಿದ್ದಾರೆ. ಉಳಿದಂತೆ ಭಾಸ್ಕರನ್ ಮತ್ತು ಪದ್ಮ ವಿಶ್ವನಾಥನ್, ‘ತಮ್ಮ ಜೀವನದಲ್ಲಿ ಡಾ.ರಂಗರಾಜನ್ ಅವರ ನೆರವು ಹಾಗೂ ಕೊಡುಗೆ ಅಪಾರವಾಗಿತ್ತು, ಅದಕ್ಕೆ ಪ್ರತಿಯಾಗಿ ಈ ವಿಲ್ ಬರೆಯುತ್ತಿರುವುದಾಗಿ’ ತಿಳಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಚಿದಂಬರಂ ಮತ್ತು ಕಾರ್ತಿಯ ಹೆಸರನ್ನು ವ್ಯವಸ್ಥಿತವಾಗಿ ದೂರವಿರಿಸಲಾಗಿದೆ. ಇಲ್ಲಿ ಚಿದಂಬರಂ ಅವರನ್ನು ಅದಿತಿ ಅವರ ತಾತಾ ಅಂತಲೂ, ಕಾರ್ತಿಯನ್ನು ತಂದೆ ಎಂದು ನಮೂದಿಸಿಲ್ಲ. ಕೇವಲ ತಾತ ರಂಗರಾಜನ್ ಹಾಗೂ ತಾಯಿ ಶ್ರೀನಿಧಿ ಎಂದು ತಿಳಿಸಲಾಗಿದೆ. ಆದರೆ, ಈ ನಾಲ್ವರೂ ತಮ್ಮ ದಿಢೀರ್ ಮರಣದ ಸಂದರ್ಭದಲ್ಲಿ ಉಯಿಲನ್ನು ಕಾರ್ಯರೂಪಕ್ಕೆ ತರುವ ಅಧಿಕಾರವನ್ನು ಕಾರ್ತಿ ಚಿದಂಬರಂ ಹೆಸರಿಗೆ ಬರೆದಿದ್ದಾರೆ. ಅರ್ಥಾತ್, ಈ ನಾಲ್ವರಲ್ಲಿ ಯಾರಾದರೂ ಒಂದುವೇಳೆ ವಿಧಿವಶರಾದರೆ, ಕಾರ್ತಿ ಯಾವುದೇ ಅಡೆತಡೆ ಇಲ್ಲದೇ, ಮಗಳ ನೆಪದಲ್ಲಿ ಈ ಎಲ್ಲ ಆಸ್ತಿಯ ಜವಾಬ್ದಾರಿಯನ್ನು ಪಡೆಯಬಹುದು. ಆಗ ಈ ಬೇನಾಮಿ ಷೇರುಗಳನ್ನು ಹೊಂದಿರುವುದಕ್ಕೆ ಕಾರ್ತಿಯನ್ನು ಯಾರೂ ಪ್ರಶ್ನಿಸಲು ಅವಕಾಶವಿರುವುದಿಲ್ಲ.

ಇದೇ ಮಾದರಿಯಲ್ಲಿ ಕಾರ್ತಿ ಚಿದಂಬರಂ ಜಾಗತಿಕ ಉದ್ಯಮ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ ಎಂದು ವಿಶ್ಲೇಷಿಸಿರುವ ವರದಿ, ಎಲ್ಲದರ ವಿವರ ಪಡೆಯುವುದು ದುಸ್ತರ ಹಾಗೂ ಕಾನೂನು ಚೌಕಟ್ಟಿಗೆ ಒಳಪಡಿಸುವುದೂ ಕ್ಲಿಷ್ಟ ಎಂದಿದೆ.

Leave a Reply