ಪ್ಯಾರಿಸ್ ಸ್ವರ್ಗವಾಗಿ ಉಳಿದಿಲ್ಲ, ವಲಸಿಗರು ಸೃಷ್ಟಿಸಿರುವ ಆತಂಕಕ್ಕೆ ಕೊನೆಯಿಲ್ಲ!

ತಿರುಗಾಟ- ಹುಡುಕಾಟ

ಪ್ರವಾಸ ಪ್ರಸಂಗಗಳು- 1

authors-rangaswamyಸ್ಥಳ ಯಾವುದೇ ಇರಲಿ , ಪ್ರವಾಸ  ಹೊರಡುವುದೆಂದರೆ ಒಂಥರಾ ಖುಷಿ. ಅದಕ್ಕೆ ಕಾರಣ ಪ್ರತಿ ಟ್ರಿಪ್ ಒಂದು ಹೊಸ ಅನುಭವ ಕಟ್ಟಿ ಕೊಡುತ್ತೆ. ನೆನಪಿನ ಬುತ್ತಿಯ ಮತ್ತಷ್ಟು ಹಿಗ್ಗಿಸುತ್ತೆ. ಬದುಕಲ್ಲಿ ಕೊನೆ ತನಕ ನಮ್ಮ ಜೊತೆ ಬರುವುದು ನಮ್ಮ ನೆನಪುಗಳು ಮಾತ್ರ ಎಂದು ಅಚಲವಾಗಿ ನಂಬಿರುವ ನನಗೆ ಪ್ರತಿ ಪ್ರಯಾಣ/ಪ್ರವಾಸ  ಒಂದು ಹೊಸ ಬದುಕು, ಆ ಬದುಕ ಬದುಕಲು ಒಂದು ಹೊಸ ಆಯಾಮ ಒದಗಿಸುತ್ತೆ. ಜೊತೆಗೆ ಇಷ್ಟ ಪಡುವ ಜನರ ಸಂಗವೂ ಇದ್ದರೆ  ಖುಷಿ ದುಪ್ಪಟ್ಟು, ವರ್ಷದಲ್ಲಿ ಎರಡು ಬಾರಿ ನೋಡದ ದೇಶಗಳ ಭೇಟಿ ನೀಡುವುದು ಕಳೆದ ಒಂದೂವರೆ ದಶಕನಿಂದ ಅನೂಚಾನವಾಗಿ ನಡೆದು ಬಂದಿರುವ ಪದ್ಧತಿ.  ಈ ಸರ್ತಿ ಕೂಡ ಹೀಗೆ ಆಯ್ತು. ಆದರೆ ನೋಡಿದ ದೇಶಗಳಿಗೆ ಮತ್ತೊಮ್ಮೆ ಹೋಗುವ ಹಾಗೆ ಆಯ್ತು. ಅದಕ್ಕೆ ಕಾರಣ ನನ್ನ ಮಗಳು ಅನ್ನಿ, ಪ್ಯಾರಿಸ್ ಬಳಿ ಇರುವ ಡಿಸ್ನಿಲ್ಯಾಂಡ್ ನೋಡಬೇಕೆನ್ನುವುದು ಅವಳ ಬಯಕೆ, ಡಿಸ್ನಿ ಲ್ಯಾಂಡ್ ನಲ್ಲಿ ಇರುವ ಅನೇಕ ಕ್ಯಾರೆಕ್ಟರ್ ಗಳ ಹೆಸರು ಹೇಳಿಕೊಂಡು ‘ ಮಿಕ್ಕಿ’ ಯನ್ನು ಭೇಟಿ ಮಾಡುತ್ತೇನೆ ಎಂದು ತಿಂಗಳ ಮುಂಚೆಯಿಂದ ಸಿಕ್ಕ ಸಿಕ್ಕವರ ಬಳಿಯೆಲ್ಲ ಹೇಳಿಕೊಂಡು ಬರುತಿದ್ದಳು. ಮಗಳ ಬೇಡಿಕೆ, ಗೃಹ ಸಚಿವರ ಹುಕುಂ ನಿರಾಕರಿಸಿ ನೆಮ್ಮದಿಯಾಗಿ ಇರುವ ಒಬ್ಬನೇ ಒಬ್ಬ ವ್ಯಕ್ತಿ ಇರುವುದು ನಾನಂತೂ ಕಂಡಿಲ್ಲ, ಇರಲಿ…

ನೀವು ಫ್ರಾನ್ಸ್ ಗೆ ಪ್ರವಾಸ ಹೋಗುವರಿದ್ದರೆ ಮುಂಚಿತವಾಗಿ ಹೋಟೆಲ್, ಏರ್ ಟಿಕೆಟ್ ಬುಕ್ ಮಾಡಿಕೊಳ್ಳುವುದು ಒಳ್ಳೆಯದು. ಬಹಳ ಸರಳವಾಗಿ ಲೆಕ್ಕ ಹೇಳಿಬಿಡುತ್ತೇನೆ- ಬೆಂಗಳೂರಿನಲ್ಲಿ ನೀವು ಹೇಗೆ ಜೀವಿಸುತಿದ್ದೀರಿ ಅದೇ ದರ್ಜೆಯ ಬದುಕು ಬದುಕಲು ಇಲ್ಲಿಗಿಂತ 8 ಪಟ್ಟು ಹೆಚ್ಚು ಹಣ ವ್ಯಯಿಸಬೇಕು. ಮುಂಗಡ ಕಾಯ್ದಿರಿಸುವುದರಿಂದ ಉಳಿತಾಯ ಹೆಚ್ಚು. ಉದಾಹರಣೆಗೆ ಡಿಸ್ನಿ ಲ್ಯಾಂಡ್ ಗೆ ಪ್ರವೇಶ ಶುಲ್ಕ ಮುಂಗಡವಾಗಿ ಕಾಯ್ದಿರಿಸಿದರೆ ಮೂರು ಜನಕ್ಕೆ 134 ಯುರೋ, ಅದೇ ನೀವು ಅಲ್ಲಿಯೇ ಹೋಗಿ ಕೌಂಟರ್ ನಲ್ಲಿ ಖರೀದಿಸಿದರೆ 268 ಯುರೋಗಳು! ಅಂದರೆ ಬರೋಬ್ಬರಿ ದುಪಟ್ಟು.

ಹಾಗೆಯೇ ಇಂಟರ್ಸಿಟಿ ರೈಲು, ವಿಮಾನ ಕೂಡ ಮುಂಗಡ ಬುಕ್ ಮಾಡಿ ಇಡುವುದು ಹಣ, ಸಮಯ ಜೊತೆಗೆ ಕೊನೆ ಗಳಿಗೆಯಲ್ಲಿ ಆಗುವ ಆತಂಕ ಎಲ್ಲವನ್ನೂ ತಪ್ಪಿಸುತ್ತದೆ. ಎಲ್ಲಕ್ಕೂ ಮುಖ್ಯ ಹೊರಡುವುದಕ್ಕೆ ಮುಂಚೆ ಇಂತ ಸ್ಥಳಗಳಿಗೆ ಹೋಗಬೇಕು/ ಹೋಗುತ್ತೇವೆ, ಅಲ್ಲಿ ಇಂಥ ವಸ್ತು, ವಿಷಯಗಳಿವೆ ನೋಡುವುದಿದೆ  ಎನ್ನುವುದರ ನೀಲಿನಕ್ಷೆ ಸಿದ್ಧಪಡಿಸಿ ಇಟ್ಟುಕೊಂಡರೆ ಪ್ರವಾಸ ಸುಲಭವಾಗಿರುತ್ತದೆ. ನನ್ನ ಇಷ್ಟೂ ವರ್ಷಗಳ ಪ್ರವಾಸದಲ್ಲಿ ಪ್ರವಾಸಿಗಳು ಮಾಡುವ ಅತೀ ಸಾಮಾನ್ಯ ತಪ್ಪು ಇದು- ಮುಂಗಡ ಕಾಯ್ದಿರಿಸದೆ ಇರುವುದು. ಹೋಟೆಲ್, ವಿಮಾನ ಕಾಯ್ದಿರಿಸುತ್ತಾರೆ ಆದರೆ ಅತ್ಯಂತ ಪ್ರಸಿದ್ಧ ಸ್ಮಾರಕಗಳ ಪ್ರವೇಶಕ್ಕೆ ಮುಂಗಡ ಬುಕ್ ಮಾಡದೆ ನಾಲ್ಕೋ , ಆರೋ ಗಂಟೆ ಪ್ರವೇಶಕ್ಕೆ ಕಾಯುವುದು ಕಂಡಿದ್ದೇನೆ.
ನೆನಪಿರಲಿ ಪ್ರವಾಸಿಗಳಿಗೆ ಸಿಕ್ಕುವ ಕಡಿಮೆ ಸಮಯವನ್ನು ಹೆಚ್ಚು ಜಾಣ್ಮೆಯಿಂದ ಬಳಸಿಕೊಂಡಷ್ಟು ಹೆಚ್ಚು ಸ್ಥಳ, ಹೆಚ್ಚು ಅನುಭವ ಪಡೆಯಬಹುದು.
ಅಕಸ್ಮಾತ್ ನಿಮ್ಮ ಪ್ರವಾಸ ಗೈಡೆಡ್ ಆಗಿದ್ದರೆ ಸಮಸ್ಯೆಯೇ ಇಲ್ಲ, ನಿಮ್ಮ ಟ್ರಾವೆಲ್ ಏಜೆಂಟ್ ಎಲ್ಲ ನೋಡಿ ಕೊಳ್ಳುತ್ತಾನೆ. ನಿಮ್ಮದೇನಿದ್ದರೂ ಸರಿಯಾಗಿ ಸಮಯ ಪಾಲನೆ ಮಾಡಿದರೆ ಆಯಿತು.
ಸರಿ, ಇನ್ನು ಮುಖ್ಯ ವಿಷಯಕ್ಕೆ ಬರುತ್ತೇನೆ. ನನ್ನ ಹಿಂದಿನ ಪ್ರವಾಸಿ ಲೇಖನಗಳಂತೆ ಇಲ್ಲಿ ಕೂಡ ನನ್ನ ಮುಖ್ಯ ಉದ್ದೇಶ ಗೂಗಲ್ ಮಾಡಿದರೆ ಸಿಗದ, ಸಿಕ್ಕರೂ ಅಲ್ಪಸ್ವಲ್ಪ ಮಾಹಿತಿ ಇರುವ ವಿಷಯಗಳ ಬಗ್ಗೆ ನನಗನಿಸಿದ್ದು, ಅನುಭವಿಸಿದ್ದು ಘಟನೆಗಳ ಮೂಲಕ ಕಟ್ಟಿ ಕೊಡುವುದು. ಐಫೆಲ್ ಟವರ್ ಉದ್ದ ಎಷ್ಟು? ಲೌರ್ಬೆ ಸಂಗ್ರಹಾಲಯದಲ್ಲಿ ಏನೇನಿದೆ? ಪ್ಯಾರಿಸ್ ನಲ್ಲಿ ನೋಡಲೇಬೇಕಾದ ಸ್ಥಳಗಳು ಯಾವುವು? ಇವೇ ಮೊದಲಾದ ಹಲವು ವಿಷಯಗಳು ಮಾಹಿತಿ ತಂತ್ರಜ್ಞಾನದಲ್ಲಿ ಪರಿಣಿತರಲ್ಲದ ಸಾಮಾನ್ಯರಿಗೂ ಇಂದು ಇಂಟರ್ನೆಟ್ ಮೂಲಕ ಲಭ್ಯ! ಹಾಗಾಗಿ ನಾನು ಅವುಗಳಿಂದ ಗಾವುದ ದೂರ. ತೀರಾ ಮನಸ್ಸಿಗೆ ನಾಟಿದ ಒಂದಷ್ಟು ಘಟನೆಗಳ ಸುತ್ತ ಒಂದು ಸುತ್ತು ಹಾಕೋಕೆ ರೆಡಿ ಇದ್ದೀರಾ? ಎಸ್ ಎಂದಾದರೆ ತಡ ಏಕೆ ಬನ್ನಿ   ಪ್ರವಾಸ ಹೊರಡೋಣ!

ಘಟನೆ 1:
ಫ್ರಾನ್ಸ್ ಗೆ ಇದು ಆರನೇ ಭೇಟಿ. ಇದನ್ನ ಹೇಳಬೇಕಿರಲಿಲ್ಲ, ಹಾಗಾದರೆ ಇದನ್ನೇ ಮೊದಲು ಹೇಳಲು ಕಾರಣ? ಸ್ಪಷ್ಟ.. ದಶಕದ ಹಿಂದಿನ ಫ್ರಾನ್ಸ್ , ಮತ್ತು ಇಂದಿನ ಫ್ರಾನ್ಸ್ ತಾಳೆ ಹಾಕುವುದಕ್ಕೆ, ಆ ಮೂಲಕ ಬದಲಾದ ಸನ್ನಿವೇಶದಲ್ಲಿ ಬದುಕು ಅಲ್ಲಿನ ನಿವಾಸಿಗಳಿಗೆ ಹೇಗೆ ಬದಲಾಗಿದೆ? ಪ್ರವಾಸಿಗರ ಬದುಕು ಹೇಗೆ? ಅಲ್ಲಿನ ಜನ ಸ್ನೇಹಪರರೆ?

ಸಿರಿಯಾದಿಂದ , ಆಫ್ರಿಕಾದಿಂದ ಬಂದ ವಲಸಿಗರ ಸಂಖ್ಯೆ ತೀರಾ ಹೆಚ್ಚಾಗಿದೆ. ದಶಕದ ಹಿಂದೆ ಪ್ಯಾರಿಸ್ ನಗರದ ರಸ್ತೆಗಳಲ್ಲಿ ಬಿಡುಬೀಸಾಗಿ ಓಡಾಡಬಹುದಿತ್ತು. ಆದರೆ ಇದು ಇಂದಿಗೆ ಅಸಾಧ್ಯ. ನಾಲ್ಕೋ ಐದೋ ಆಫ್ರಿಕನ್ನರು ಇಲ್ಲವೇ ಸಿರಿಯನ್ನರು , ಮೊರೋಕ್ಕಿಗಳು ಗುಂಪಾಗಿ ಅಸಭ್ಯವಾಗಿ ಅರಚುತ್ತಾ ರಸ್ತೆ ತುಂಬಾ ಅಡ್ಡಾದಿಡ್ಡಿ ನಡೆಯುತ್ತಾರೆ. ಪ್ರವಾಸಿಗಳ ದುರುಗುಟ್ಟಿ ನೋಡುವುದು, ಸ್ವಲ್ಪ ಯಾಮಾರಿದರೂ ಕ್ಷಣ ಮಾತ್ರದಲ್ಲಿ ನಿಮ್ಮ ಕೈಚೀಲ ಎಗರಿಸಿ ಓಡಿ ಹೋಗುವುದು ತುಂಬಾ ಸಾಮಾನ್ಯವಾಗಿ ಹೋಗಿದೆ. ಎಷ್ಟರ ಮಟ್ಟಿಗೆ ಎಂದರೆ ಹೋಟೆಲ್ ನ ಸಿಬ್ಬಂದಿ  ‘ಸರ್ ರಸ್ತೆಯಲ್ಲಿ ಹೋಗುವಾಗ , ಸ್ಮಾರಕಗಳ ನೋಡುವಾಗ ಮೈಮರೆಯಬೇಡಿ , ನಿಮ್ಮ ಕೈಚೀಲ ಮತ್ತು ಇತರೆ ಬೆಲೆ ಬಾಳುವ ವಸ್ತುಗಳ ಮೇಲೆ ಗಮನ ಇರಲಿ’ ಎಂದು ಎಚ್ಚರಿಸಿ ಕಳಿಸುವಷ್ಟು!
ಇವರಲ್ಲಿ ಬಹುಸಂಖ್ಯಾತರಿಗೆ ಮನೆ ಇಲ್ಲ. ಹೀಗಾಗಿ ರಸ್ತೆ ಬದಿಯಲ್ಲಿ, ಎಟಿಎಂ ಮಷೀನ್ ಗಳ ಬಳಿ, ರೈಲ್ವೆ ನಿಲ್ದಾಣಗಳ ಬಳಿ ಹೀಗೆ ಎಲ್ಲಿ ಒಂದಷ್ಟು ಜಾಗ ಸಿಕ್ಕುತ್ತೋ ಅಲ್ಲಿ ಬೀಡಾರ ಹೂಡಿದ್ದಾರೆ. ಮನೆಯೇ ಇಲ್ಲ ಎಂದ ಮೇಲೆ ಇವರ ಸ್ನಾನ, ವಿಸರ್ಜನೆ  ಎಲ್ಲಿ? ಪಬ್ಲಿಕ್ ಟಾಯ್ಲೆಟ್ ಗಳಲ್ಲಿ, ಪಾವತಿ ಟಾಯ್ಲೆಟ್ ಗಳಲ್ಲಿ ಸ್ನಾನ ವಿಸರ್ಜನೆ ಮುಗಿಸುತ್ತಾರೆ. ಆದರೆ ಮೂತ್ರ ದಿನದಲ್ಲಿ ಒಂದು ಸಲ ಮಾಡಿ ಮುಗಿಸುವುದಲ್ಲವಲ್ಲ… ಅಲ್ಲದೆ ನೀರಿಗಿಂತ ಇಲ್ಲಿ ಬೀಯರ್ ಚೀಪ್! ಮನೋಸೋಇಚ್ಚೆ  ಹೀರಿದ ಮೇಲೆ ಅದು ಹೊರಬರಲೇ ಬೇಕಲ್ಲವೇ? ಬೆಳಗಿನ ಹೊತ್ತು ಹಾಗೂ ಹೀಗೂ ಶಿಷ್ಟಾಚಾರ ಪಾಲಿಸುವ ಇವರು ರಾತ್ರಿ ಕಂಡಕಂಡಲ್ಲಿ ಮೂತ್ರಿಸುವ ಪರಿಣಾಮ ಹಲವು ರಸ್ತೆಗಳಲ್ಲಿ ಉಚ್ಚೆಯ ವಾಸನೆ ಮೂಗಿಗಡರುತ್ತದೆ.

ಗಾರ್ ದು  ನೋರ್ಡ್ ( gare du nord) ಪ್ಯಾರಿಸ್ ನ ಮುಖ್ಯ ರೈಲ್ವೆ ನಿಲ್ದಾಣ. ಇಲ್ಲಿಂದ ಲಂಡನ್ ನಗರಕ್ಕೆ, ಬಾರ್ಸಿಲೋನಾ, ಹೀಗೆ ಯೂರೋಪಿನ ಪ್ರಮುಖ ನಗರಗಳಿಗೆ ರೈಲು ಹೊರಡುತ್ತದೆ. ಅಲ್ಲದೆ ಫ್ರಾನ್ಸ್ ಇತರ ಪ್ರಮುಖ ನಗರಗಳಿಗೆ ಸಂಚಾರ ಇಲ್ಲಿಂದ ಪ್ರಾರಂಭವಾಗುತ್ತದೆ. ಪ್ಯಾರಿಸ್ ನಗರದಿಂದ ವರ್ಸೆಲಿಸ್ ಎನ್ನುವ ನಗರಕ್ಕೆ ಹೋಗಲು ಇಲ್ಲಿಂದ ನಾವು ರೈಲು ಹಿಡಿದೆವು. ಈ ರೈಲ್ವೆ ನಿಲ್ದಾಣದ ಸುತ್ತ ಮುತ್ತ ಇರುವ ವಲಸಿಗರ ಹಾವಭಾವ, ವರ್ತನೆ ನೋಡಿ ಅರೆಕ್ಷಣ ನಾವು ಇರುವುದು ಫ್ರಾನ್ಸ್ ನಲ್ಲೋ? ಆಫ್ರಿಕಾ ದಲ್ಲೋ? ಎನ್ನುವ ಸಂಶಯ ಮೂಡಿತು. ಪ್ರವೇಶಕ್ಕೆ ಮುನ್ನವೇ ಗಾಢವಾಗಿ ಮೂತ್ರದ ವಾಸನೆ , ಹಾದು ಹೋಗುವ ವಲಸಿಗ ಜನರ ಮೈ ಇಂದ ಬರುವ ಸುವಾಸನೆ! ಹ್ಹೋ!
ಅನನ್ಯ ‘ಪಪ್ಪಾ ನನಗೆ ಇನ್ನ್ಮುಂದೆ ಸುಳ್ಳು ಹೇಳಬೇಡ’ ಎಂದಳು. ‘ಯಾಕೆ ಪುಟ್ಟ ನಾನೇನು ಸುಳ್ಳು ಹೇಳಿದೆ?’  ಎಂದೇ, ‘ಮತ್ತೆ ನಿನೇಳಿದ್ದೆ ಪ್ಯಾರಿಸ್  ತುಂಬಾ ಸುವಾಸನೆ ಇರುತ್ತೆ, ತುಂಬಾ ಕ್ಲೀನ , ಸುಂದರ ಅಂತ’ ಬಿಡದೆ ಮುಂದುವರಿಸಿದಳು ಅನ್ನಿ. ಅವಳಿಗೆ ಏನು ಹೇಳಲಿ?  ‘ಪುಟ್ಟ ಪ್ಯಾರಿಸ್ ಸುಂದರವಾಗೇ ಇದೆ, ಹಲವು ಭಾಗ ಮಾತ್ರ ಹೀಗಾಗಿದೆ ಅಷ್ಟೇ’ ಎಂದು ಸಮಜಾಯಿಷಿ ನೀಡಿದೆ. ಅದೆಷ್ಟರ ಮಟ್ಟಿಗೆ ಅವಳು ಅದನ್ನು ಸ್ವಿಕರಿಸಿದಳೋ? ನನಗಂತೂ ಗೊತ್ತಿಲ್ಲ.
ಇದೇ ವಲಸಿಗರು ರಸ್ತೆ ಬದಿಯಲ್ಲಿ ಸ್ಮಾರಕಗಳ ನೆನಪಿನ ಕಿಟ್, ಉದಾಹರಣೆಗೆ ಐಫೇಲ್ ಟವರ್ ನ ಕೀ ಚೈನ್ ಮುಂತಾದವು ಗಳ ಮಾರಲು ಪ್ರವಾಸಿಗರ ಹಿಂದೆ ಬೀಳುತ್ತಾರೆ. ಐಫೇಲ್ ಟವರ್ ಮುಂದೆ ಗುಂಪು ಗುಂಪಾಗಿ ಇವುಗಳನ್ನು ಮಾರುವರ ಹಿಂಡೇ ಇದೆ. ‘ಇಂಡಿಯಾ, ಇಂಡಿಯಾ  ನಮಸ್ತೆ   ಜಸ್ಟ್ ಫೈವ್ ಯುರೋಸ್ ‘ ಎನ್ನುತ್ತಾ ಕೊಳ್ಳುವ ವರೆಗೂ ಬಿಡದೆ ನಕ್ಷತ್ರಿಕರಂತೆ ಹಿಂದೆ ಬೀಳುತ್ತಾರೆ. ಸಮಸ್ಯೆ ಇರುವುದು ಇಲ್ಲಲ್ಲ, ನೀವು ಒಬ್ಬನ ಬಳಿ ಕೊಂಡ ನಂತರವೂ , ಹಿಂದೆಯೇ ನನ್ನ ಬಳಿಯೂ ಕೊಳ್ಳಿ ಎಂದು ದುಂಬಾಲು ಬೀಳುವ ಹತ್ತೆಂಟು ಮಾರಾಟಗಾರರದ್ದು. ಥತ್  ಇವರಿಂದ ಬಿಡಿಸಿ ಕೊಂಡು ಹೋದರೆ ಸಾಕು ಎನ್ನುವಷ್ಟು ಬೇಸರ ತರಿಸುತ್ತಾರೆ.

ರಸ್ತೆ ಬದಿಯ ಮಾರಾಟದಿಂದ ಅಂಗಡಿಗೆ ಬಾಡಿಗೆ ಕಟ್ಟಿ, ಸರಕಾರಕ್ಕೆ ತೆರಿಗೆ ಕಟ್ಟಿ ಮಾರುವ ವ್ಯಾಪಾರಸ್ಥರಿಗೆ ಸಹಜವಾಗೇ ವಲಸಿಗರ ಬಗ್ಗೆ ಕೋಪ, ತಿರಸ್ಕಾರ, ಹೇಸಿಗೆ ಎಲ್ಲವೂ ಇದೆ. ರುಮೇನಿಯ ದೇಶದ ವಲಸಿಗರದು ಬಿಕ್ಷೆ ಬೇಡುವುದಕ್ಕೆ ಪ್ರಸಿದ್ಧಿ. ಜೇಬು ಕಳ್ಳತನ , ರಸ್ತೆ ಬದಿಯಲ್ಲಿ ನಿಂತು ಟ್ರಾಫಿಕ್ ಸಿಗ್ನಲ್ ಬಿದ್ದಾಗ ಕಾರ್ ನ ಗ್ಲಾಸ್ ಕ್ಲೀನ್ ಮಾಡಿ ಹಣ ಕೇಳುವುದು ಇವರ ಉಪ ಕಸುಬು.
ಪ್ರವಾಸಿಗರು ಅಪ್ಪಿ ತಪ್ಪಿ ಅಡ್ರೆಸ್ ಕೇಳಿದರೆ ಸ್ಥಳೀಯ ಫ್ರೆಂಚರು ‘Je ne sais pas’  (ನಂಗೊತ್ತಿಲ್ಲ) ಎಂದು ಕೈ ಆಡಿಸಿ ಮುಂದೆ ಹೋಗುತ್ತಾರೆ. ಅವರು  ಪ್ರವಾಸಿಗಳ ಮತ್ತು ವಲಸಿಗರ ನಡುವಿನ ಅಂತರ ಗುರುತಿಸಲಾಗದಷ್ಟು ಬೇಸತ್ತಿದ್ದಾರೆ. ಇದೊಂತರ ತೆನಾಲಿ ರಾಮನ ಬೆಕ್ಕಿನ ಕಥೆ. ನಿಲ್ಲಿಸಿ ಕೇಳುವರು ಭಿಕ್ಷೆ ಕೇಳಲಿಕ್ಕೆ ಎಂದು ಅವರು ಅರ್ಥೈಸಿಕೊಂಡು  ನೋ ನೋ ಅಂತಲೋ Je ne sais pas’  ಅಂತಲೋ ಹೇಳಿ ಕೊಂಡು ಹೊರಟು ಹೋಗುತ್ತಾರೆ. ಇವೆಲ್ಲ ಹೊಸ ಅನುಭವಗಳು, ದಶಕದ ಹಿಂದಿನ ಚಿತ್ರಣವೇ ಬೇರೆ, ನಿಂತು ಐದು ನಿಮಿಷ ವ್ಯಯಿಸಿ  ಹೋಗುವ ದಾರಿ ನಿನಗೆ ತಿಳಿಯಿತೆ ಎಂದು ಖಾತರಿ ಪಡಿಸಿಕೊಂಡು ಮುಂದು ಹೋಗುತಿದ್ದ ಜನರೆಲ್ಲಿ? ಕೇಳುವ ಮೊದಲೇ ಕೈ ಬಿಸಿ ಮುಂದೂಗುವ ಈಗಿನ ಫ್ರೆಂಚ ರೆಲ್ಲಿ!
ಇವೆಲ್ಲವುಗಳ ನಡುವೆ ಹೈರಾಣಗಿರುವ ಫ್ರೆಂಚರಿಗೆ , ಫ್ರಾನ್ಸ್ ಗೆ ಟೆರರಿಸ್ಟ್ ಗಳ ಭಯ!  ಹೌದು, ರಸ್ತೆ ರಸ್ತೆ ಯಲ್ಲಿ ಏಕೆ 45 ಅಥವಾ 56 ಹಿಡಿದು ನಿಂತಿರುವ ಕಮಾಂಡೋ ಪಡೆ, ಒಂದು ನಿಮಿಷಕ್ಕೆ ಪ್ರವಾಸಿಗರ ಅವಾಕ್ಕಾಗಿಸುತ್ತೆ. ದೊಡ್ಡ ದೊಡ್ಡ ಸ್ಮಾರಕಗಳ ಮುಂದಷ್ಟೇ ಅಲ್ಲದೆ ಪಾರ್ಕ್, ಜನ ನಿಬಿಡ ಪ್ರದೇಶ, ರಸ್ತೆಗಳಲ್ಲಿ ಕಮಾಂಡೋ ಗಳು ಪಹರೆ ಕಾಯುವುದು ಕೂಡ ಪ್ಯಾರಿಸ್ನಲ್ಲಿ ಸಾಮಾನ್ಯ ಚಿತ್ರಣವಾಗಿದೆ.

paris security
ದಶಕದ ಹಿಂದೆ ಐಫೇಲ್ ಟವರ್ ಕೆಳೆಗೆ ಕುಂಟೆ ಬಿಲ್ಲೆ ಆಡುವ ಮಕ್ಕಳು ಇರುತ್ತಿದ್ದರು. ಪಕ್ಕದಲ್ಲೇ ಇರುವ ಪಾರ್ಕ್ ನಲ್ಲಿ ಮಕ್ಕಳ ಕಲರವ ಇನ್ನೂ ಕಿವಿಯಲ್ಲಿ ಇದೆ. ಇಂದು ಆ ಜಾಗವನ್ನು ಆಟೋಮ್ಯಾಟಿಕ್ ಮಷೀನ್ ಗನ್ ಹಿಡಿದ ಸೈನಿಕರು, ಬಿಕೋ ಎನ್ನುವ ಪಾರ್ಕ್ ಆಕ್ರಮಿಸಿ ಬದಲಾದ ಸನ್ನಿವೇಶದ ದ್ಯೋತಕದಂತಿವೆ.

(ವಾರಕ್ಕೊಮ್ಮೆ ಲೇಖಕರ ಪ್ರವಾಸಾನುಭವ ಕಥನ ಕೆಲವು ಸರಣಿಗಳಲ್ಲಿ ಪ್ರಕಟಗೊಳ್ಳಲಿದೆ. ಪ್ರವಾಸಿ ತಾಣಗಳ ಪಟ್ಟಿ ಒಪ್ಪಿಸುವ ಕೆಲಸಕ್ಕೆ ಹೋಗದೇ, ತಮ್ಮ ಇತ್ತೀಚಿನ ನೋಟಕ್ಕೆ ದಕ್ಕಿದ ಯುರೋಪು ಅದಕ್ಕೂ ಮೊದಲಿನ ಯುರೋಪಿಗಿಂತ ಹೇಗೆ ಭಿನ್ನ, ಜನಜೀವನ- ಆಲೋಚನಾ ಕ್ರಮಗಳಲ್ಲಿ ಆಗುತ್ತಿರುವ ಬದಲಾವಣೆಗಳೇನು ಎಂಬುದಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಲೇಖಕರದ್ದು. ಲೆಕ್ಕ ಪರಿಶೋಧಕರಾಗಿ ಹಲವು ದೇಶಗಳನ್ನು ಸುತ್ತಿರುವ, ಹಣಕಾಸು ಜಗತ್ತನ್ನು ಹತ್ತಿರದಿಂದ ನೋಡಿರುವ ಅನುಭವ ಲೇಖಕರದ್ದು. 15 ವರ್ಷಗಳ ಕಾಲ ಸ್ಪೇನ್ ನಿವಾಸಿಯಾಗಿದ್ದವರು ಈಗ ಬೆಂಗಳೂರಿನಲ್ಲಿ ಪೆಟ್ರಾಬೈಟ್ಸ್ ಎಂಬ ತೈಲಕ್ಕೆ ಸಂಬಂಧಿಸಿದ ಡಾಟಾ ಅನಾಲಿಸಿಸ್ ನವೋದ್ದಿಮೆಯ, ವಹಿವಾಟು ವೃದ್ಧಿಯ (ಬಿಸಿನೆಸ್ ಡಿವಲಪ್ಮೆಂಟ್) ಹೊಣೆ ನಿರ್ವಹಿಸುತ್ತಿದ್ದಾರೆ.)

4 COMMENTS

  1. ರಂಗಸ್ವಾಮಿ ಸಾರ್,

    ಬಹಳ ದಿನಗಳ ನಂತರ ನಿಮ್ಮ ಪ್ರವಾಸ ಲೇಖನ ಓದಿ ಖುಷಿಯಾಯ್ತು. ನಿಮ್ಮ ಲೇಖನದ highlight ಅಂದರೆ, ನೀವು ಬೇರೆ ಪ್ರವಾಸಿಗರಂತೆ wikipedia ತರಹ ಒಂದು ಸ್ಥಳದ ಪ್ರಸಿದ್ಧ ಜಾಗಗಳ ಪಟ್ಟಿ ಮಾಡಿ, ಒಂದಷ್ಟು pictures
    post ಮಾಡಿ ಇದಮಿತ್ತಂ ಎಂದು ಕೂರುವುದಿಲ್ಲ. ನೀವು ಪ್ರವಾಸ ಕೈಗೊಂಡ ಸ್ಥಳದ ಬಗ್ಗೆ, ಅಲ್ಲಿನ ಜನರ socio-economic condition as well as cultural matters ಇತ್ಯಾಗಿ ವಿಷಯಗಳ ಬಗ್ಗೆ ಚೆನ್ನಾಗಿ ಬಿಚ್ಚಿಡುತ್ತೀರ. ಓದುಗನಿಗೆ ಒಂದಷ್ಟು ಮಾಹಿತಿ, ಸ್ವಲ್ಪ guidance ಒದಗಿಸುವುದರ ಜೊತೆಗೆ , ಆ ಸ್ಥಳ, ಸ್ಥಳೀಯರ ಬಗ್ಗೆ ನಿಮ್ಮ ತುಲನಾತ್ಮಕ ಅಭಿಪ್ರಾಯ ಮಂಡಿಸುತ್ತೀರಿ. Look forward to read your articles every week in the days to come in Digital Kannada. If there is no space constraint (as this is a e paper) it would be nice if your article is a little more lengthier !!!

  2. ಲೇಖನ ಖುಷಿ ಕೊಟ್ಟಿತು. ಸಾಮಾನ್ಯವಾಗಿ ಪ್ರವಾಸಿ ಕಥನಗಳೆಂದರೆ ಬೋರು ಹೊಡೆಸುತ್ತವೆ. ಇದು ಪ್ರವಾಸದ ಜೊತೆಗೆ ಲಲಿತ ಪ್ರಬಂಧದಂಥ ಅನುಭವವನ್ನೂ ತಂದು ಕೊಟ್ಟಿತು. ನಿಮ್ಮ ಮುಂದಿನ ಕಥನಕ್ಕಾಗಿ ಎದಿರು ನೋಡುತ್ತಿದ್ದೇನೆ.
    – Rj

Leave a Reply