ನೀವೆಷ್ಟೇ ಹಾರಾಡಿದರೂ ಈ ಉಗ್ರರನ್ನು ಹೊಸಕದೇ ಬಿಡೆವು- ಇದು ಭಾರತೀಯರೆಲ್ಲ ಕಾಶ್ಮೀರಿ ಮುಸ್ಲಿಮರಿಗೆ ಮುಟ್ಟಿಸಬೇಕಾದ ಸಂದೇಶ

ಡಿಜಿಟಲ್ ಕನ್ನಡ ವಿಶೇಷ:

ಕಾಶ್ಮೀರದಲ್ಲಿ ಮನೆ ಮನೆಗೂ ಪರಿಚಿತನಾಗಿದ್ದ ಪ್ರತ್ಯೇಕವಾದಿ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ನ ಕಾರ್ಯಾಚರಣೆ ಮುಖ್ಯಸ್ಥ ಬುರ್ಹಾನ್ ವನಿಯನ್ನು ಭದ್ರತಾ ಸಿಬ್ಬಂದಿ ಶುಕ್ರವಾರ ಹತ್ಯೆ ಮಾಡಿದ್ದಾರೆ. ಈತ ಎಷ್ಟರ ಮಟ್ಟಿಗೆ ಕಾಶ್ಮೀರದ ಭದ್ರತೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದ ಅಂದ್ರೆ, ಈತನ ಹತ್ಯೆಯನ್ನು ಇತ್ತೀಚಿನ ವರ್ಷಗಳಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಸಿಕ್ಕ ದೊಡ್ಡ ಜಯ ಎಂದು ಅಧಿಕಾರಿಗಳು ಸಂಭ್ರಮಿಸುವಷ್ಟು…

ಆದ್ರೆ, ಕಾಶ್ಮೀರದ ಒಂದು ವರ್ಗದ ಜನ ಈ ಹತ್ಯೆಯನ್ನು ಅರಗಿಸಿಕೊಳ್ಳಲು ಸಿದ್ಧರಿಲ್ಲ. ಭದ್ರತಾ ಸಿಬ್ಬಂದಿಯ ಈ ಕ್ರಮದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹತ್ಯೆಯನ್ನು ಖಂಡಿಸಿ ಕಾಶ್ಮೀರದಲ್ಲಿ ಕೆಲವೆಡೆ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದು ನಾಲ್ವರು ಕಲ್ಲು ತೂರಾಟಗಾರರು ಸತ್ತಿದ್ದಾರೆ. ಮೂವರು ಪೊಲೀಸರು ಸೇರಿದಂತೆ 11 ಮಂದಿ ಗಾಯಗೊಂಡಿದ್ದಾರೆ ಎಂಬ ವರದಿಗಳು ಬಂದಿವೆ.  ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕಾಶ್ಮೀರದ ಕೆಲವೆಡೆ ಕರ್ಫ್ಯೂ ಜಾರಿ ಮಾಡಲಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಅಮರನಾಥ ಯಾತ್ರೆಯನ್ನೂ ಸ್ಥಗಿತಗೊಳಿಸಿ,  ಶಿಬಿರಾರ್ಥಿಗಳಿಗೆ ಭದ್ರತೆ ಹೆಚ್ಚಿಸಲಾಗಿದೆ.

ಈ ಬುರ್ಹಾನ್’ನನ್ನು ಸಾಯಿಸಿ ಹುತಾತ್ಮ ಹೀರೋ ಮಾಡಿಬಿಟ್ಟರೇ ಅಂತಲೂ ಕೆಲವರು ವಿಶ್ಲೇಷಿಸುತ್ತಿದ್ದಾರೆ. ಇದಕ್ಕೆ ವಿಚಲಿತಗೊಳ್ಳಬೇಕಿಲ್ಲ. ಈ ಹೊತ್ತಿಗೆ ಭದ್ರತಾ ಪಡೆ ಮತ್ತು ಸರ್ಕಾರಗಳು ಜಮ್ಮು- ಕಾಶ್ಮೀರದಲ್ಲಿ ಸಾಬೀತುಗೊಳಿಸಬೇಕಿರುವುದು ಆಯುಧ ಹಿಡಿದವರಿಗೆ ಸಾವೇ ಗತಿ ಎಂಬುದನ್ನು. ಹೀಗಾಗಿ ಉಗ್ರನ ಸಾವಿಗೆ ಸಾವಿರಗಟ್ಟಲೇ ಸಂಖ್ಯೆಯಲ್ಲಿ ಸಂತಾಪಕ್ಕೆ ಸೇರುವ ಕಾಶ್ಮೀರಿ ಮುಸ್ಲಿಮರನ್ನು ಕಂಡು, ಅಯ್ಯೋ ಇವರು ನಮ್ಮದೇ ಪ್ರಜೆಗಳಲ್ಲವೇ ಎಂದು ಮರುಗುವ ನಾಟಕ ಬೇಕಿಲ್ಲ. ಖಂಡಿತ, ಜಮ್ಮು-ಕಾಶ್ಮೀರವು ಹೊಸಹಾದಿ ತುಳಿಯುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಕಾರ್ಯಕ್ರಮಗಳನ್ನೆಲ್ಲ ಹಾಕಿಕೊಳ್ಳಬೇಕು, ಅದಾಗಲೇ ಅಂಥ ಕಾರ್ಯಕ್ರಮಗಳಾಗುತ್ತಿವೆ. ಆದರೆ, ‘ಜೀಲೇ ಜೀಲೇ ಪಾಕಿಸ್ತಾನ್’ ಅಂತ ಬಾವುಟ ಹಿಡಿದ ಮಾತ್ರಕ್ಕೆ, ಪ್ರತ್ಯೇಕತೆ ಅಂತ ಬಂದೂಕು ಎತ್ತಿದ ಮಾತ್ರಕ್ಕೆ ಅವರಿಗೆ ಪ್ಯಾಕೇಜು ಕೊಡುವ ಕೆಟ್ಟ ಪರಿಪಾಠಕ್ಕೆ ಅರ್ಥವಿಲ್ಲ. ಇವರಿಗೆಲ್ಲ ಬುರ್ಹಾನ್’ಗೆ ಸಿಕ್ಕಿದ ಉಡುಗೊರೆಯೇ ಸಿಗಲಿರುವುದು ಖಾತ್ರಿಯಾಗಬೇಕು.

ಇದಕ್ಕೆ ಪರ್ಯಾಯವಾಗಿ, ಜಮ್ಮು-ಕಾಶ್ಮೀರದಿಂದ ಐಎಎಸ್ ಪಾಸು ಮಾಡಿದ ಶಾ ಫೈಸಲ್, ಅಥರ್ ಅಮೀರ್ ಅಂಥವರನ್ನು ಹೀರೋಗಳನ್ನಾಗಿ ಬಿಂಬಿಸಬೇಕಿದೆ. ಕಲ್ಲು ತೂರಾಟಗಾರರು ಹಿಜ್ಬುಲ್ ಉಗ್ರನಿಗೆ ಜೈ ಅಂದುಕೊಂಡಿರಲಿ. ಆದರೆ ಸರ್ಕಾರದಿಂದ ಪ್ರತಿಫಲ ಸಿಗುವುದು ಮುಖ್ಯಧಾರೆಯೊಂದಿಗೆ ಬೆಸೆಯುವ ಪ್ರಯತ್ನಗಳಿಗೆ ಮಾತ್ರ ಎಂಬ ಸಂದೇಶ ಗಟ್ಟಿಯಾಗುತ್ತ ಹೋದಂತೆಲ್ಲ, ಇವರಿಗೆ ಇಸ್ಲಾಮಿಕ್ ಧ್ವಜ ಹಿಡಿದು ಕುಣಿದರೆ ಏನೂ ಗಿಟ್ಟದು ಎಂಬುದು ಮನದಟ್ಟಾಗುತ್ತದೆ.

ಬುರ್ಹಾನ್ ಈಗಾಗಲೇ ಯುವ ಪ್ರತ್ಯೇಕವಾದಿ ಹಾಗೂ ಉಗ್ರರಿಗೆ ಐಕಾನ್ ಆಗಿ ಬಿಟ್ಟಿದ್ದ. 2010 ರಲ್ಲಿ 15ನೇ ವಯಸ್ಸಿನವನಿದ್ದಾಗಲೇ ಬುರ್ಹಾನ್ ಉಗ್ರ ಸಂಘಟನೆ ಸೇರಿದ. ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆದ ಈತನನ್ನು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ 2011 ರಲ್ಲಿ ಸೇರಿಸಿಕೊಂಡಿತು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ತಮ್ಮ ಸಂಘಟನೆಯನ್ನು ಸೇರಿಕೊಳ್ಳುವ ಸಂದೇಶ ರವಾನಿಸುತ್ತಾನೆ. ಅಷ್ಟೇ ಅಲ್ಲದೆ ದಕ್ಷಿಣ ಕಾಶ್ಮೀರದಿಂದ 30 ಯುವಕರನ್ನು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿಸುತ್ತಾನೆ. ಕಾಶ್ಮೀರ ಪಂಡಿತರ ಕಾಲೋನಿ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬುರ್ಹಾನ್ ಸೈನಿಕ್ ಕಾಲೋನಿ ಹಾಗೂ ಸೇನೆಯ ಸಮವಸ್ತ್ರ ಧರಿಸಿದವರ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ.  ತನ್ನ ಫೊಟೊ ಹಾಗೂ ವಿಡಿಯೋ ಮತ್ತು ಆಡಿಯೋಗಳ ಸಂದೇಶವನ್ನು ಕಾಶ್ಮೀರದ ಯುವಕರ ಮೊಬೈಲ್ ಗಳಿಗೆ ತಲುಪಿಸಿದ್ದ. ಆ ಮೂಲಕ 20 ರ ಆಸುಪಾಸಿನಲ್ಲಿದ್ದ ಬುರ್ಹಾನ್ ಕಳೆದ ಐದು ವರ್ಷಗಳಲ್ಲಿ ಉಗ್ರರಿಗೆ ಐಕಾನ್ ಆಗಿ ಬೆಳೆದಿದ್ದ.

ಉಗ್ರನ ಸಾವಿಗೆ ದುಃಖಿಸುವವರು ನೀವಾದರೆ ಅದು ನಿಮ್ಮ ಕರ್ಮ, ಭಾರತ ಈ ವಿಷಯದಲ್ಲಿ ನಿಮ್ಮ ಜತೆಗಿಲ್ಲ ಎಂಬ ಸಂದೇಶ ಕಣಿವೆಯನ್ನು ತಲುಪಲಿ. ಕಲ್ಲು ತೂರಾಟಗಾರರ ಮಾನವ ಹಕ್ಕಿನ ಕತೆ ಕೇಳುತ್ತ ಕೂರುವ ಸಹಿಷ್ಣುತೆ ಯಾರಿಗೂ ಬೇಕಿಲ್ಲ.

1 COMMENT

  1. ಜೈ ಜವಾನ್ ಜೈ ಕಿಸಾನ್, ಜೈ ಭಾರತ್ ಮಾತಾ ಜೈ ಹಿಂದ್.

Leave a Reply