8,167 ಉದ್ದೇಶಪೂರ್ವಕ ಸುಸ್ಥಿದಾರರಿಂದ ಬ್ಯಾಂಕ್ ಗಳಿಗೆ ಬರಬೇಕಿರೋ ಬಾಕಿ ₹ 76 ಸಾವಿರ ಕೋಟಿ!

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ 8,167 ಉದ್ದೇಶಪೂರ್ವಕ ಸುಸ್ಥಿದಾರರಿದ್ದು, ಇವರಿಂದ ವಿವಿಧ ಬ್ಯಾಂಕ್ ಗಳಿಗೆ ಮರುಪಾವತಿ ಆಗಬೇಕಿರೋದು ₹ 76,685 ಕೋಟಿ ಸಾಲ… ಈ ಮಾಹಿತಿ ನೀಡಿರೋದು ಬೇರೆಯಾರು ಅಲ್ಲ, ಸ್ವತಃ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ.

ರಾಜ್ಯಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ನಾಯಕ ಆದ್ ಶರ್ಮಾ ಸಾಲ ವಸೂಲಾತಿ ನ್ಯಾಯಾಧಿಕರಣದಲ್ಲಿ ಸ್ಥಾನ ತೆರವಾಗಿರುವ ವಿಚಾರ ಪ್ರಸ್ತಾಪಿಸಿದ್ರು. ಇದಕ್ಕೆ ಉತ್ತರಿಸುತ್ತಾ ಜೇಟ್ಲಿ ಹೇಳಿದಿಷ್ಟು:

‘ದೇಶದಲ್ಲಿ 8,167 ಉದ್ದೇಶಪೂರ್ವಕ ಸುಸ್ಥಿದಾರರಿದ್ದು, ಆ ಪೈಕಿ 2015-16 ನೇ ಸಾಲಿನಲ್ಲಿ 1,724 ಸುಸ್ಥಿದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಬ್ಯಾಂಕ್ ಗಳಿಗೆ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಮಸೂದೆಯನ್ನು ತರುವ ಬಗ್ಗೆ ಸಂಸತ್ ಜಂಟಿ ಸಮಿತಿ ಪರಿಶೀಲನೆ ನಡೆಸುತ್ತಿದೆ. ಸಾಲ ವಸೂಲಾತಿ ನ್ಯಾಯಾಧಿಕರಣ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವ ಅಗತ್ಯವಿದೆ. ಸಂಸತ್ ಜಂಟಿ ಸದನ ಸಮಿತಿ ಪರಿಶೀಲಿಸುತ್ತಿರುವ ವಿಧೇಯಕದ ಮೂಲಕ ನ್ಯಾಯಾಧಿಕರಣ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಇನ್ನು ಸದ್ಯ ತೆರವಾಗಿರುವ ನ್ಯಾಯಾಧಿಕರಣಗಳ ಸ್ಥಾನವನ್ನು ತುಂಬಲು ಪ್ರಕ್ರಿಯೆಗಳು ನಡೆಯುತ್ತಿವೆ.’

ಈ ವೇಳೆ ಮಾತನಾಡಿದ ಮತ್ತೊಬ್ಬ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ‘ಈ ಉದ್ದೇಶಪೂರ್ವಕ ಸುಸ್ಥಿದಾರರ ವಿಷಯದಲ್ಲಿ ದೋಷಾರೋಪ ಪಟ್ಟಿ ಪ್ರಮಾಣ ಬಹಳ ಕಡಿಮೆ ಇದೆ. ಹಣಕಾಸು ಸಚಿವರು ನೀಡಿರುವ ಮಾಹಿತಿ ಪ್ರಕಾರ 2015-16ನೇ ಸಾಲಿನಲ್ಲಿ ಕೇವಲ ಶೇ. 1.14 ರಷ್ಟು ಮಾತ್ರ ದೋಷಾರೋಪ ಮಾಡಲಾಗಿದೆ. ಈ ಉದ್ದೇಶಪೂರ್ವಕ ಸುಸ್ಥಿದಾರರು ಸಾಲ ಮರುಪಾವತಿ ಮಾಡುವ ಸಾಮರ್ಥ್ಯವಿದ್ದರೂ ಮಾಡಿಲ್ಲ’ ಅಂದ್ರು.

‘ಈ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಒದಗಿಸುವ ಸಾಕ್ಷ್ಯಾಧಾರಗಳ ಮೇಲೆ ದೋಷಾರೋಪ ಮಾಡಲು ಸಾಧ್ಯ. ಇಲ್ಲಿ ಬಹುತೇಕ ಸುಸ್ಥಿದಾರರು ಕಬ್ಬಿಣ, ಮೂಲಭೂತ ಸೌಕರ್ಯ ಮತ್ತು ಇಂಧನ ಕ್ಷೇತ್ರಗಳಿಗೆ ಸಂಬಂಧಿಸಿದವರಾಗಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಸರ್ಕಾರ ಈ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ’ ಎಂಬುದು ಜೇಟ್ಲಿ ಅವರ ಉತ್ತರವಾಗಿತ್ತು.

ಇದಕ್ಕೂ ಮುನ್ನ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಸುಮಾರು ₹ 70 ಸಾವಿರ ಕೋಟಿ ಸಾಲ ಬಾಕಿ ಉಳಿಸಿಕೊಂಡಿರುವ 7 ಸಾವಿರ ಉದ್ದೇಶಪೂರ್ವಕ ಸುಸ್ಥಿದಾರರ ಹೆಸರನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿತ್ತು.

Leave a Reply