ಆಟ ಮುಂದುವರೀಲೇಬೇಕು! ಬದುಕಿಗೂ ಅನ್ವಯಿಸಬಹುದಾದ ಸಚಿನ್ ಪಿಲಾಸಫಿ

 

ಚಿನ್ಮಯಿ

ನಿವೃತ್ತಿ ನಂತರ ಕ್ರಿಕೆಟ್ ನ ದಂತಕತೆ ಸಚಿನ್ ತೆಂಡುಲ್ಕರ್ ತುಳಿದ ಹಾದಿ ಮಾತ್ರ ವಿಭಿನ್ನ ಅಂತ ಒಪ್ಪಿಕೊಳ್ಳಲೇಬೇಕಿದೆ! ಉಳಿದ ನಿವೃತ್ತರ ವಿಷಯದಲ್ಲಿ ಸರಿಯೇನೋ? ಆದರೆ ಸಚಿನ್ ತೆಂಡುಲ್ಕರ್ ಬಹುತೇಕ ನಿವೃತ್ತರಂತೆ ಕಾಮೆಂಟರಿ ಬಾಕ್ಸಿನಲ್ಲೋ, ಕ್ರಿಕೆಟ್ ಆಡಳಿತ ಮಂಡಳಿಯ ಯಾವುದೋ ಹುದ್ದೆಯಲ್ಲೋ ವಿರಾಜಮಾನರಾಗಿಬಿಡುವುದು ಅವರು ಗಳಿಸಿದ್ದಂಥ ವೈಭವದ ಹೀರೋಗಿರಿಗೆ ಅಷ್ಟೇನೂ ಸರಿ ಹೊಂದುವಂಥದ್ದಾಗಿರಲಿಲ್ಲ. ಭಾರತದ ಕ್ರಿಕೆಟ್ ತಂಡದಲ್ಲಿ ಹೊಸ ತಲೆಮಾರಿಗೆ ಅವಕಾಶ ಬೇಕೇ ಬೇಕು. ಆ ನಿಟ್ಟಿನಲ್ಲಿ ತೆಂಡುಲ್ಕರ್ ನಿವೃತ್ತಿಯೂ ಅಗತ್ಯದ ಪ್ರಕ್ರಿಯೆಯೇ ಆಗಿತ್ತೆನ್ನಿ.

ಅಷ್ಟೆಲ್ಲ ಆದ ನಂತರ ಸಚಿನ್ ತೆಂಡುಲ್ಕರ್ ಹೊರಗೆ ನಿಂತು, ನಿವೃತ್ತರನ್ನೇ ಸೇರಿಸಿಕೊಂಡು ಎರಡು ತಂಡಗಳನ್ನು ಕಟ್ಟಿ, ಆಟದ ವಿಭಿನ್ನ ಮಜದ ಹೊಸ ವೇದಿಕೆಯೊಂದನ್ನು ಕಟ್ಟಿರುವ ರೀತಿ ಇದೆಯಲ್ಲ…! ಹೊಗಳಲೇಬೇಕು ಅದನ್ನು.

ಈ ಹಂತದಲ್ಲಿ ಸಚಿನ್ ತೆಂಡುಲ್ಕರ್ ಅವರು ಅದಾಗಲೇ ದೇಶೀಯ ಮಟ್ಟದಲ್ಲಿ ಮತ್ತು ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿ ಪ್ರಚಲಿತದಲ್ಲಿರುವ ಮಾದರಿಗಳ ಜತೆ ಪೈಪೋಟಿ ನಡೆಸಲೇ ಇಲ್ಲ. ತಮ್ಮ ‘ ಕ್ರಿಕೆಟ್ ಆಲ್ ಸ್ಟಾರ್ಸ್ ‘ ಪರಿಕಲ್ಪನೆ ಮೂಲಕ ಕ್ರಿಕೆಟ್ ಅನ್ನು ಜಗತ್ತಿನ ಬೇರೆ ರಾಷ್ಟ್ರಗಳಿಗೆ ಪಸರಿಸುವ ಅಜೆಂಡಾ ಇಟ್ಟುಕೊಂಡರು. ನಾವಿನ್ಯ ಮತ್ತು ಮಾರ್ಕೆಟಿಂಗ್ ಎರಡೂ ದೃಷ್ಟಿಯಿಂದಲೂ ಇದು ಲಿಟ್ಲ್ ಮಾಸ್ಟರ್ ಬಾರಿಸಿದ ‘ಮಾಸ್ಟರ್ ಸ್ಟ್ರೋಕ್’.

ಸಚಿನ್ ನಾಯಕತ್ವದ ಬ್ಲಾಸ್ಟರ್ಸ್ ಮತ್ತು ಶೇನ್ ವಾರ್ನೆ ನೇತೃತ್ವದ ವಾರಿಯರ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆದಿದ್ದು ಅಮೆರಿಕದ ಹೂಸ್ಟನ್ ನಲ್ಲಿ. ಅಮೆರಿಕವೇನೂ ಕ್ರಿಕೆಟ್ ಆಡುವ ದೇಶವಲ್ಲ. ಆದರೆ ಆ ನೆಲದಲ್ಲಿ ಕ್ರಿಕೆಟ್ ಆಸಕ್ತರಂತೂ ಇದ್ದೇ ಇದ್ದಾರೆ. ಏಕೆಂದರೆ, ಭಾರತವೂ ಸೇರಿದಂತೆ ಜಗತ್ತಿನ ನಾನಾ ದೇಶಗಳ ವಲಸಿಗರು ಹೆಚ್ಚಿನದಾಗಿ ನೆಲೆಸಿರುವ ದೇಶ ಅದು. ಅಲ್ಲಿ ಬ್ಲಾಸ್ಟರ್ಸ್ ವಿರುದ್ಧ ವಾರಿಯರ್ಸ್ ಗೆದ್ದ ವಿಶಿಷ್ಟ ಕ್ರಿಕೆಟ್ ಪಂದ್ಯವನ್ನು ನೋಡುವ ಅವಕಾಶ ಎದುರಾಯಿತು. ಇಲ್ಲೇ ಭಾರತದಲ್ಲೋ, ಮತ್ತೆ ಶಾರ್ಜಾದಲ್ಲೋ ಇಂಥದೇ ಪಂದ್ಯವನ್ನು ಆಯೋಜಿಸಿದ್ದರೂ ಸಚಿನ್ ಗೆ ಪ್ರಚಾರಕ್ಕೇನೂ ಕೊರತೆಯಾಗುತ್ತಿರಲಿಲ್ಲ. ಆದರೆ ಈ ಟಿ-20 ಟೂರ್ನಿಯು ಐಪಿಎಲ್ ನಂಥ ಅವತರಣಿಕೆಗಳಿಗಿಂತ ಭಿನ್ನ ಎಂಬ ಭಾವನೆ ಮೂಡಿಸುವುದು ಹೇಗೆ? ಹೀಗಾಗಿಯೇ, ‘ನಮ್ಮ ಉದ್ದೇಶ ಜಗತ್ತಿನ ಬೇರೆ ಭಾಗಗಳಲ್ಲಿ ಕ್ರಿಕೆಟ್ ಆಟವನ್ನು ಪ್ರಚುರಪಡಿಸುವುದು. ಡೇವಿಡ್ ಬೆಕ್ ಹ್ಯಾಮ್ ಎಂಬಾತ ಅಮೆರಿಕದಲ್ಲಿ ಸಾಸರ್ ಅನ್ನು ಹೇಗೆ ಜನಪ್ರಿಯಗೊಳಿಸಿದನೋ, ಅದೇರೀತಿ ಕ್ರಿಕೆಟ್ ಅನ್ನು ಮತ್ತಷ್ಟು ವ್ಯಾಪಕಗೊಳಿಸುವುದು ತಮ್ಮ ಗುರಿ’ ಅಂತ ಸಚಿನ್, ವಾರ್ನೆ ಅಭಿಪ್ರಾಯಪಟ್ಟಾಗ ಅಲ್ಲಿಂದಲೇ ಹೊಸ ಉತ್ಸಾಹವೊಂದು ಮೊಳಕೆ ಒಡೆಯಿತು.

‘ಅಮೆರಿಕ ಮಾತ್ರವಲ್ಲಿ ಚೀನಾದ ನೆಲದಲ್ಲೂ ಕ್ರಿಕೆಟ್ ಬೆಳಗುವಂತಾಗಬೇಕು’ ಅಂತ ವಾರ್ನೆ ವಾರಿಯರ್ಸ್ ತಂಡದಲ್ಲಿರುವ ರಿಕಿ ಪಾಂಟಿಂಗ್ ದನಿಗೂಡಿಸಿದರು.

ಭಾರತೀಯ ಉಪಖಂಡದಲ್ಲಿ ಐಪಿಲ್, ಅಂತಾರಾಷ್ಟ್ರೀಯ ಪಂದ್ಯಗಳು ಇವೆಲ್ಲದರಿಂದಾಗಿ ಕ್ರಿಕೆಟ್ ಅತಿಯಾಗಿ ಆಡಲಾಗುತ್ತಿದೆ. ಹೀಗಾಗಿ ಮತ್ತಿದೇ ಮಾರುಕಟ್ಟೆ ವ್ಯಾಪ್ತಿಯಲ್ಲಿ ಆಡಹೊರಟಿದ್ದರೆ ಅದು ಹತ್ತರಲ್ಲಿ ಹನ್ನೊಂದಾಗಿಬಿಡಬಹುದಿತ್ತು. ಹಾಗೆಂದೇ ಸಚಿನ್ ತೆಂಡುಲ್ಕರ್, ಅಮೆರಿಕದಂಥ ದೇಶಗಳಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸುವುದು ಎಂಬ ಹೊಸದೊಂದು ಶಾಟ್ ಹೊಡೆದಿದ್ದಾರೆ. ಶೊಯೆಬ್ ಅಖ್ತರ್, ವಾಸಿಂ ಅಕ್ರಂ, ವೀರೇಂದ್ರ ಸೆಹ್ವಾಗ್, ಜಾಕಸ್ ಕಾಲಿಸ್, ಬ್ರಯಾನ್ ಲಾರಾ, ವೀರೇಂದ್ರ ಸೆಹ್ವಾಗ್ ಇಂಥವರೆಲ್ಲರ ಆಟವನ್ನು ವಿರಾಮದಲ್ಲಿ ಕಣ್ತುಂಬಿಸಿಕೊಳ್ಳುವುದು ಇಷ್ಟವಾಗಬಹುದಾದ ಸಂಗತಿಯೇ. ಹೊಸಬರೆದುರು ಇವರು ತಾಳೆಯಾಗುವುದು ಕಷ್ಟವಿರಬಹುದಾದರೂ ನಿವೃತ್ತರದ್ದೇ ಆಟವೆಂಬುದು ಮಜದ ಕಲ್ಪನೆಯೇ.

ಇದು ಭವಿಷ್ಯದಲ್ಲಿ ಎಷ್ಟರಮಟ್ಟಿಗೆ ಕ್ಲಿಕ್ ಆಗುವುದೋ ತಿಳಿದಿಲ್ಲ. ಆದರೆ ಈ ಮೂಲಕ, ಸಚಿನ್ ತೆಂಡುಲ್ಕರ್, ಯಾವುದೇ ವೃತ್ತಿಯಲ್ಲಿದ್ದಿರಬಹುದಾದ ನಮ್ಮೆಲ್ಲರಿಗೂ ಬದುಕಿನ ಪಾಠವೊಂದನ್ನು ಸಾರುತ್ತಿದ್ದಾರೆ. ಅದೆಂದರೆ…

ಬದುಕಿನಲ್ಲಿ ನಿಮ್ಮನ್ನು ನೀವು ಮರು ಅನ್ವೇಷಣೆಗೆ ಒಳಪಡಿಸುತ್ತಲೇ ಇರಬೇಕು. ಅದು ಕೇವಲ ಹಣದ ವಿಷಯವಲ್ಲ. ನಿಮ್ಮನ್ನು ನೀವು ಜಗತ್ತಿಗೆ ಹೇಗೆ ಪ್ರಸ್ತುತರನ್ನಾಗಿಸಿಕೊಳ್ಳುವಿರಿ ಎಂಬ ಪ್ರಶ್ನೆ ಇದು. ನಿಜವೇ, ಈ ಮೂಲಕ ತೆಂಡುಲ್ಕರ್ ಅವರ ಬ್ರಾಂಡ್ ವ್ಯಾಲ್ಯೂ ನೇಪಥ್ಯಕ್ಕೆ ಸರಿಯದೇ ಜಾಹೀರಾತು ಒಪ್ಪಂದಗಳು ಮುಂದುವರಿಯುವ ಸಾಧ್ಯತೆ ಅಂಶವೂ ಇದೆ. ಆದರೆ ಇಟ್ಸ್ ನಾಟ್ ಎಬೌಟ್ ಮನಿ ಓನ್ಲಿ.

ತೆಂಡುಲ್ಕರ್ ಅಂತಲ್ಲ, ಯಾವುದೇ ವೃತ್ತಿಯಲ್ಲಿ ದೀರ್ಘಕಾಲ ಇದ್ದವರಿಗೆ ಅದರಿಂದ ಸಂಪೂರ್ಣ ಆಚೆ ಹೋಗಿಬಿಡುತ್ತೇನೆ ಎಂಬಂಥ ಮಾನಸಿಕ ಸ್ಥಿತಿ ರೂಪುಗೊಳ್ಳುವುದಿಲ್ಲ. ನಾನು ನಿವೃತ್ತಿ ನಂತರ ಕಾಲು ಚಾಚಿಕೊಂಡಿರುತ್ತೇನೆ ಎಂಬುದು ಕೇಳುವುದಕ್ಕೆ ಆಪ್ಯಾಯಮಾನವಾಗಿರಬಹುದಾದರೂ, ಆ ಮೂಲಕ ಸಂತೋಷವಾಗಿರುವುದು ಬಹುತೇಕರಿಗೆ ಸಾಧ್ಯವಿಲ್ಲ. ಜಗತ್ತಿಗೆ ಬಂದಿದ್ದೇವೆ ಎಂದಮೇಲೆ, ಜಗತ್ತಿನೊಂದಿಗೆ ಒಂದಿಲ್ಲೊಂದು ಬಗೆಯಲ್ಲಿ ಸಂವಹನ ಸ್ಥಿತಿಯಲ್ಲೇ ಇರಬೇಕಾಗುತ್ತದೆ. ಹೀಗಿರುವಾಗ, ಕಾಲಾಂತರದಲ್ಲಿ ನಮ್ಮನ್ನು ಮರು ಅನ್ವೇಷಣೆಗೆ ಒಳಪಡಿಸಿಕೊಳ್ಳೋದು ಹೇಗೆ ಎಂಬುದು ಎಲ್ಲರಿಗೂ ಕಾಡುವಂಥದ್ದು.

ಸಚಿನ್ ತೆಂಡುಲ್ಕರ್, ಅಮಿತಾಭ್ ಬಚ್ಚನ್ ಇಂಥ ದಿಗ್ಗಜರು ತಮ್ಮ ನಡೆಗಳ ಮೂಲಕ ಈ ಮರು ಅನ್ವೇಷಣೆಯ ಆನಂದದ ಅಧ್ಯಾಯವನ್ನೂ, ಸಾಧ್ಯತೆಗಳನ್ನೂ ತೆರೆದಿರಿಸುತ್ತಿದ್ದಾರೆ. ಇಷ್ಟವಾದ ಒಳ್ಳೆಯ ಅಂಶಗಳನ್ನು ಎತ್ತಿಕೊಳ್ಳೋಣ, ಅಲ್ವೇ?

Leave a Reply