ಇವರು ತೊಂಬತ್ತರ ಪ್ರಾಯದ ಸೆಕ್ಸ್ ಗುರು!

ಚಿತ್ರಕೃಪೆ- ಬಿಬಿಸಿ

ಜೋತ್ಸ್ನಾ ಹಳ್ಳಿಮನೆ

‘ನಾನು 23 ವರ್ಷದ ತರುಣ. ನನಗನ್ನಿಸುತ್ತೆ, ನನ್ನ ಶಿಶ್ನದ ಬೆಳವಣಿಗೆಯೇ ನಿಂತುಹೋಗಿದೆ. ಇದೇನಾದರೂ ರೋಗವಾ? ಅಥವಾ ಶಿಶ್ನ ಬೆಳೆಯಲು ಇನ್ನೊಂದಿಷ್ಟು ಕಾಲ ತೆಗೆದುಕೊಳ್ಳುವುದೋ?’

ಈ ಪ್ರಶ್ನೆಗೆ ಹೀಗೆ ಉತ್ತರ ಬರುತ್ತದೆ…

‘ಹೌದು. ನಿನಗೆ ಕಾಡುತ್ತಿರುವ ರೋಗಕ್ಕೆ ಅಜ್ಞಾನ ಅಂತ ಹೆಸರು. 18ರ ವಯಸ್ಸಿಗೆಲ್ಲ ನಿನ್ನ ಶಿಶ್ನ ಬೆಳೆಯುವುದು ನಿಂತಿರುತ್ತದೆ. ಇಂಟರ್ನೆಟ್ ನಲ್ಲಿ ಜಾಲಾಡಿ ಈ ಬಗ್ಗೆ ಶಿಕ್ಷಣ ಪಡಿ.’

ಈ ಮೇಲಿನ ಸಂಭಾಷಣೆ ಓದಿ ಕೆಲವರು ಥೂ ಥೂ ಅಂತ ಮೂಗು ಮುರಿದುಕೊಳ್ಳುತ್ತಾರೇನೋ? ಅದರಲ್ಲೂ ಸ್ವಲ್ಪ ವಯಸ್ಸು ಮಾಗಿದವರ ಗಮನಕ್ಕೆ ಬಂದರೆ ಅವರಲ್ಲಿ ಹೆಚ್ಚಿನವರು, ‘ಏನ್ ಕಾಲನಪ್ಪಾ! ಹಿಂಗೆಲ್ಲ ಚರ್ಚೆ ಆಗುತ್ತಾ? ಇಂಥ ವಿಚಾರಗಳನ್ನೆಲ್ಲ ಬಹಿರಂಗವಾಗಿ ಹೇಳೋದಾ’ ಅಂತ್ಲೂ ಹೇಳಿಯಾರು? ಆದರೆ ಇಂಥದೇ ಶಂಕೆಗಳಿಂದ ಬಳಲುತ್ತ, ಸರಿ ಉತ್ತರ ಹುಡುಕೋದೆಲ್ಲಿ ಅಂತ ಹಿಂಜರಿಕೆಯಿಂದ ಇರುವ ಎಷ್ಟೋ ಯುವಕರಿಗೆ ಈ ಮೇಲಿನ ಸಂಭಾಷಣೆ ಹೊಸನೋಟ ಒದಗಿಸಬಹುದೇನೋ? ಖಾಸಗಿ ಅಂಗದ ಪ್ರಮಾಣ ಇಷ್ಟೇ ಇರಬೇಕು, ಇರದಿದ್ದರೆ ನಮ್ಮ ಔಷಧ ತಗೊಳ್ಳಿ ಅಂತ ಯಾಮಾರಿಸುವವರ ಬಲೆಗೆ ಬೀಳೋದ್ರಿಂದ ಕೆಲವರಾದ್ರೂ ತಪ್ಪಿಸಿಕೊಳ್ಳುವುದಕ್ಕೆ ಅನುವಾದೀತು.

ಹೌದು… ಹಿಂಗೆಲ್ಲ ‘ಸೆಕ್ಸ್ ಪರ್ಟ್’ ಸ್ಥಾನದಲ್ಲಿ ನಿಂತು ಲಘುಮಾತಿನ, ಆದರೆ ವಾಸ್ತವದ ಉತ್ತರಗಳನ್ನು ಕೊಡುತ್ತಿರುವ ವ್ಯಕ್ತಿಯನ್ನು ನೀವು ಹೇಗೆ ಕಲ್ಪಿಸಿಕೊಳ್ಳುವಿರಿ? ಲಿಬರಲ್ ಎಂಬ ಹೊಸವ್ಯಾಖ್ಯೆಗೆ ಒಳಪಡುವುದಕ್ಕೆ ಉತ್ಸುಕತೆಯಿಂದಿರುವ ಈ ತಲೆಮಾರಿನ ತರುಣ ವೈದ್ಯರ್ಯಾರೋ ಇರಬಹುದು ಎಂಬ ಕಲ್ಪನೆ ಬರಬಹುದಲ್ಲವೇ? ಪತ್ರಿಕೆಯಲ್ಲಿ ಈ ತಲೆಮಾರಿನವರನ್ನು ಸೆಳೆಯುವುದಕ್ಕೆ ಹಿಂಗೊಂದು ವೇದಿಕೆ ಇರಲಿ ಅಂತ ಅಲ್ಲಿನವರೇ ಯಾರೋ ಹಿಂಗೆಲ್ಲ ಪ್ರಶ್ನೋತ್ತರ ಹೊಸೆಯುತ್ತಿರಬಹುದು ಎಂದುಕೊಳ್ಳುವುದಕ್ಕೂ ಆಸ್ಪದವಿದೆ.

ಆದರೆ ಅಂಥವೆಲ್ಲ ಊಹೆಗಳು ತಪ್ಪು. ಈ ತಲೆಮಾರಿನ ಯುವ ಸಮೂಹಕ್ಕೆ ಹೀಗೆಲ್ಲ ಆಪ್ತ ಸಮಾಧಾನ ಹೇಳಿಕೊಂಡಿರುವ ವ್ಯಕ್ತಿಗೆ ಆಗಲೇ 90ರ ಪ್ರಾಯ! ಅವರೇ ಡಾಕ್ಟರ್ ಮಹಿಂದರ್ ವತ್ಸ. ಬೆಂಗಳೂರು ಮಿರರ್ ಪತ್ರಿಕೆಯ ಪುಣೆ, ಮುಂಬೈ, ಅಹಮದಾಬಾದ್ ನ ಆವೃತ್ತಿಗಳಲ್ಲೆಲ್ಲ ಇವರ ಸೆಕ್ಸ್ ಸಮಾಧಾನದ ಕಾಲಂ ಪ್ರಸ್ತುತ ಪ್ರಕಟವಾಗುತ್ತಿದೆ. 1960ರಲ್ಲಿ, ತಮ್ಮ 30ನೇ ವಯಸ್ಸಿನಲ್ಲಿ ಡಾಕ್ಟರಿಕೆ ಪ್ರಾರಂಭಿಸಿದ ವತ್ಸ, ಮಹಿಳಾ ನಿಯತಕಾಲಿಕದಲ್ಲಿ ಸ್ತ್ರೀಯರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಅಂಕಣ ಬರೆಯುತ್ತಿದ್ದರು. ಆಗ ಲೈಂಗಿಕತೆಗೆ ಸಂಬಂಧಿಸಿದ ಪ್ರಶ್ನೆಗಳೂ ಢಾಳಾಗಿ ಬರುತ್ತಿದ್ದವು. ಆದರೆ ಈ ಬಗ್ಗೆ ಹೆಚ್ಚು ಬರೆಯುವುದು ಆ ನಿಯತಕಾಲಿಕಕ್ಕೆ ಇಷ್ಟವಿರಲಿಲ್ಲ. ಹಾಗೆಂದೇ ಪುರುಷ ನಿಯತಕಾಲಿಕಕ್ಕೂ ಬರೆಯುವುದನ್ನು ಶುರು ಮಾಡಿದರು. ನಂತರ ಫೆಮಿನಾ, ಫ್ಲೇರ್ ಗಳಂತಹ ನಿಯತಕಾಲಿಕಗಳಲ್ಲಿ ಪ್ರಸಿದ್ಧಿ ಪಡೆದರು.

ಲೈಂಗಿಕತೆ ಸಮಸ್ಯೆಗಳನ್ನು ತೋಡಿಕೊಳ್ಳುವ ಸರಾಸರಿ 20 ಪತ್ರಗಳು ದಿನವೊಂದಕ್ಕೆ ಇವರನ್ನು ತಲುಪುತ್ತವೆ. ಆ ಪೈಕಿ ಮೂರು-ನಾಲ್ಕು ಪತ್ರಗಳಿಗೆ ಮಾತ್ರ ಉತ್ತರದ ಭಾಗ್ಯ. ಇವರ ಲೈಂಗಿಕತೆ ಕುರಿತ ಅಂಕಣ ಅಶ್ಲೀಲತೆ ಪಸರಿಸುತ್ತಿದೆ; ಇದನ್ನು ಕಾಲ್ಪನಿಕವಾಗಿ ಬರೆಯಲಾಗುತ್ತಿದೆ ಅಂತ ನ್ಯಾಯಾಲಯದಲ್ಲಿ ದಾವೆಯೂ ಆಗಿತ್ತು. ಆದರೆ ಫೆಮಿನಾ ಸಂಪಾದಕರು ಇವರಿಗೆ ಬರುತ್ತಿದ್ದ ಪತ್ರಗಳ ಕಟ್ಟನ್ನು ನ್ಯಾಯಮೂರ್ತಿಗಳ ಮುಂದಿಟ್ಟು, ವಸ್ತುಸ್ಥಿತಿ ಅರ್ಥಮಾಡಿಸಿದಾಗ ಪ್ರಕರಣ ಖುಲಾಸೆಯಾಯಿತು.

ಈಗಿನ ಜನಪ್ರಿಯ ಪ್ರಶ್ನೋತ್ತರ ಅಂಕಣ ‘ಆಸ್ಕ್ ಸೆಕ್ಸ್ ಪರ್ಟ್’ ಪ್ರಾರಂಭವಾಗಿದ್ದು ಅವರ 80ನೇ ವಯಸ್ಸಿನಲ್ಲಿ. ತಮ್ಮ ಉತ್ತರಗಳಲ್ಲಿ ಅಗಾಧ ಲೈಂಗಿಕ ತಿಳಿವಳಿಕೆ ನೀಡುತ್ತಲೇ, ಅರ್ಥಕ್ಕೆ ಅಪಚಾರವಾಗದ ತುಂಟಾಟದ ಭಾಷೆ, ವಾಸ್ತವ ಅರ್ಥ ಮಾಡಿಸುವ ಸಣ್ಣ ಗದರಿಕೆಗಳನ್ನು ರೂಢಿಸಿಕೊಂಡಿರುವುದು ಡಾಕ್ಟರ್ ಮಹಿಂದರ್ ವತ್ಸ ಅವರ ಹೆಗ್ಗಳಿಕೆ. ಉದಾಹರಣೆಗೆ ಕೆಲವನ್ನು ಗಮನಿಸಬಹುದು.

ನಾನು, ನನ್ನ ಗೆಳತಿ ಆರು ತಿಂಗಳ ಹಿಂದೆ ಲೈಂಗಿಕ ಸುಖ ಅನುಭವಿಸಿದೆವು. ಆದರೆ ಈ ಪ್ರಕ್ರಿಯೆಯಲ್ಲಿ ಆಕೆಯ ಗುಪ್ತಾಂಗದಿಂದ ರಕ್ತ ಒಸರಲೇ ಇಲ್ಲ. ಆಕೆ ಕನ್ಯತ್ವ ಹೊಂದಿದ್ದಾಳೆಯೇ ಎಂಬ ಅನುಮಾನ ಹೇಗೆ ಪರಿಹರಿಸಿಕೊಳ್ಳಲಿ.

ಉತ್ತರ: ಇದೆಂಥ ಪ್ರೀತಿ ಮಾರಾಯಾ ನಿಂದು. ನೀನೊಬ್ಬ ಅನುಮಾನದ ಪ್ರಾಣಿ. ಕನ್ಯತ್ವ ಪೊರೆ ಮೊದಲೇ ಹರಿದಿರುವುದಕ್ಕೆ ಆಟೋಟಗಳಲ್ಲಿ ತೊಡಗಿಸಿಕೊಳ್ಳೋದೂ ಸೇರಿದಂತೆ ಹಲವು ಕಾರಣಗಳಿರೋದು ನಿಂಗೆ ಗೊತ್ತಿಲ್ವೇ?

ನಾನು ಆಗಾಗ ಹಸ್ತಮೈಥುನ ಮಾಡಿಕೊಳ್ತೇನೆ. ಇದರಿಂದ ಶಿಶ್ನ ಚಿಕ್ಕದಾಗಿಹೋಗುತ್ತಾ?

ಉತ್ತರ: ನೀನು ಸಿಕ್ಕಾಪಟ್ಟೆ ಮಾತಾಡ್ತಿ. ಅದರರ್ಥ ನಿನ್ನ ನಾಲಗೆ ಬಿದ್ದುಹೋಗುತ್ತೆ ಅಂತಾನಾ?

ಈ ತಾತ ಶತಾಯುಷಿಯಾಗಿ, ಇನ್ನೂ ಹಲವು ವರ್ಷ ಲೈಂಗಿಕ ಪಾಠ ಹೇಳಲಿ!

1 COMMENT

  1. ಶೃಂಗಾರಃ ಶುಚಿರುಜ್ವಲಃ
    ದೀರ್ಘಾಯುಷ್ಮಾನ್ ಭವ ಡಾಕ್ಟರ್ ಮಹಿಂದರ್ ವತ್ಸ
    ನೂರು ವರುಷ ಬಾಳಿರಿ ನೂರು ದೀಪ ಬೆಳಗಿರಿ
    ನೂರು ಬಾಳು ಬೆಳಗಲು ನೀವೇ ಜ್ಯೋತಿ ಆಗಿರಿ

Leave a Reply