ಈ ಟಚ್ಚಲಿ ಭರವಸೆ ಇದೆ!

ಡಿಜಿಟಲ್ ಕನ್ನಡ ತಂಡ

ವೈದ್ಯ ವಿಜ್ಞಾನ ಮುಂದುವರಿದಂತೆ, ಮನುಷ್ಯನ ಶರೀರ ವ್ಯವಸ್ಥೆಯಲ್ಲಿ ಲೋಪಗಳಾದಾಗ ಅಲ್ಲಿ ಕೃತಕ ವ್ಯವಸ್ಥೆ ನಿರ್ಮಿಸುವ, ಕೆಲವು ಕೃತಕ ಅವಯವಗಳನ್ನು ಜೋಡಿಸುವುದು ಸಾಧ್ಯವಾಗಿದೆ.

ಇದೀಗ ಸ್ಟ್ಯಾನ್ ಫೋರ್ಡ್ ನ ಎಂಜಿನಿಯರ್ ಗಳು ಒಂದು ಹೆಜ್ಜೆ ಮುಂದೆ ಹೋಗಿ ಕೃತಕ ಚರ್ಮ ಸೃಷ್ಟಿಸಿದ್ದಾರೆ.

ಕಾಲು-ಕೈಗಳನ್ನೇ ಕೃತಕವಾಗಿ ಸೃಷ್ಟಿಸಿದ ಮೇಲೆ ಚರ್ಮದಂಥ ಪರದೆಯೊಂದನ್ನು ಸೃಷ್ಟಿಸುವುದೇನು ಮಹಾ ಅಂದಿರಾ? ಉಹುಂ, ಇದು ಪರದೆ ಸುತ್ತುವಂಥ ವಿಷಯ ಅಲ್ಲವೇ ಅಲ್ಲ. ಚರ್ಮದ ಮೂಲ ಗುಣವೇನು ಹೇಳಿ? ಮೈಗೆ ಹೊದಿಕೆ ಮಾತ್ರವೇ ಅಲ್ಲ, ಸ್ಪರ್ಶಜ್ಞಾನದಿಂದಾಗಿ ಅದು ವಿಶಿಷ್ಟವೆನಿಸುತ್ತದೆ.

ಸ್ಟ್ಯಾನ್ ಫೋರ್ಡ್ ನ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಝೆನಾನ್ ಬಾವೊ ನೇತೃತ್ವದ 17 ಸಂಶೋಧಕರ ತಂಡ ಇಂಥ ಕೃತಕ ಚರ್ಮದ ರೂವಾರಿಗಳಾಗಿದ್ದಾರೆ. ದಶಕಗಳ ಪರಿಶ್ರಮದ ಫಲವಿದು.

ಚರ್ಮವನ್ನು ಹೋಲುವ ಪದಾರ್ಥವು ಒತ್ತಡವನ್ನು ಗುರುತಿಸಿ ಅದರ ಸಿಗ್ನಲ್ ಗಳನ್ನು ಮಿದುಳಿಗೆ ರವಾನಿಸುತ್ತದೆ. ಇದರ ಅಗತ್ಯ ಬಹುಮುಖ್ಯವಾಗುವುದು ಪ್ರಾಸ್ಥೆಟಿಕ್ ಕಾಲು, ಕೃತಕ ಕಾಲುಗಳಲ್ಲಿ. ಕಾಲು ಅಥವಾ ಕೈ ಕೃತಕ ಅವಯವವಾಗಿದ್ದರೆ, ಅದರ ಮೇಲೆ ಈ ಕೃತಕ ಚರ್ಮದ ಹೊದಿಕೆಯಾದರೆ ಆಗ ಸ್ಪರ್ಶದ ಮೂಲಕ ಸಂವೇದನೆಯನ್ನು ಗುರುತಿಸುವುದು ಸಾಧ್ಯವಾಗುತ್ತದೆ. ನಮಗೆ ಯಾರಾದರೂ ಹಸ್ತಲಾಘವ ಕೊಟ್ಟರೆ ಅದರಲ್ಲಿ ಬಿಗಿ ಹಿಡಿತವೋ, ಸಡಿಲವೋ ಅರಿವಾಗಿ ಆ ಮೂಲಕ ಅವರ ಸಂವಹನದಲ್ಲಿರುವುದು ಹಿಂಜರಿಕೆಯೇ ಅಥವಾ ದೃಢತೆಯಾ ಅಂತೆಲ್ಲ ನಿರ್ಧರಿಸುತ್ತೇವಲ್ಲವೇ? ಸ್ಪರ್ಶವು ಮಿದುಳಿಗೆ ಕಳುಹಿಸುವ ಸಿಗ್ನಲ್ ವಿಶ್ಲೇಷಿಸಿಯೇ ಬುದ್ಧಿಯು ಆ ತೀರ್ಮಾನಕ್ಕೆ ಬಂದಿರುತ್ತದಷ್ಟೆ. ಇದೇ ಸಾಧ್ಯತೆ ಕೃತಕ ಅವಯವಗಳ ವಿಷಯದಲ್ಲೂ ಸಾಕಾರವಾಗುವ ಅವಕಾಶವನ್ನು ಸ್ಟ್ಯಾನ್ಫೋರ್ಡ್ ಅಧ್ಯಯನ ತೆರೆದಿರಿಸಿದೆ.

ಸಂಶೋಧನಾ ತಂಡವು ಈ ತಂತ್ರಜ್ಞಾನದಲ್ಲಿ ಬಳಸುವ ಸೆನ್ಸಾರ್ ಗಳ ಉತ್ತಮಿಕೆಗಾಗಿ ಶ್ರಮಿಸುತ್ತಿದೆ. ಹೀಗಾಗಿ ಈ ಸಂಶೋಧನೆಯು ಸಂಪೂರ್ಣವಾಗಿ ಉತ್ಪನ್ನದ ರೂಪ ಪಡೆದುಕೊಳ್ಳುವುದಕ್ಕೆ ಇನ್ನೂ ಕೆಲ ಸಮಯ ಬೇಕಾಗಬಹುದು. ಮುಟ್ಟಿದ ಮಾತ್ರಕ್ಕೆ ಅದು ರೇಷ್ಮೆ ಬಟ್ಟೆಯೋ, ತಣ್ಣನೆ ನೀರಿರುವ ಗ್ಲಾಸೋ ಎಂದು ಮುಂತಾಗಿ ಹಲವು ಮಾಹಿತಿಗಳನ್ನು ಸ್ಪರ್ಶ ಮಾತ್ರದಿಂದ ಅನಾಯಾಸವಾಗಿ ಪಡೆದುಕೊಳ್ಳುತ್ತಿರುತ್ತೇವೆ ತಾನೇ? ಅಂಥ ಎಲ್ಲ ಹರವುಗಳಿಗೆ ಕೃತಕ ಚರ್ಮವನ್ನು ಒಗ್ಗಿಸುವುದಕ್ಕೆ ಇನ್ನೂ ಕೆಲಸವಾಗಬೇಕಿದೆ.

ಅದೇನೇ ಇದ್ದರೂ ಸದ್ಯಕ್ಕಂತೂ ಪ್ರಾಸ್ಥೆಟಿಕ್ ಅವಯವದ ಸಹಾಯಕ್ಕೆ ಬರುವಲ್ಲಿ ಇದೊಂದು ಕ್ರಾಂತಿಕಾರಿ ಸಂಶೋಧನೆಯೇ ಎಂಬುದರಲ್ಲಿ ಸಂಶಯವಿಲ್ಲ.

Leave a Reply