ನಿಮ್ಮ ಹೃದಯದಲ್ಲಿ ಉಕ್ಕಲಿ ಈ ಯುವ ಕ್ರೀಡಾಕಲಿಗಳ ಕುರಿತು ಹೆಮ್ಮೆ!

 

ಡಿಜಿಟಲ್ ಕನ್ನಡ ಟೀಮ್

ಕ್ರಿಕೆಟ್ ನ ವಿಷಯಕ್ಕೆ ಬಂದರೆ ನಾವೆಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಯಾವ ಬ್ಯಾಟ್ಸ್ ಮನ್ ಎಷ್ಟು ರನ್, ಎಷ್ಟು ಶತಕ, ಎಷ್ಟು ಸರಾಸರಿ ಗಳಿಸಿದ್ದಾನೆ? ಎಸೆತಗಾರ ಕಿತ್ತ ವಿಕೆಟ್ ಗಳೆಷ್ಟು ಇತ್ಯಾದಿ.. ಇತ್ಯಾದಿ.. ಉಳಿದಂತೆ ಟೆನಿಸ್ ನಲ್ಲಿ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ಬಗ್ಗೆ ಓದುತ್ತೇವೆ, ಮಾತಾಡ್ತೇವೆ. ಬ್ಯಾಡ್ಮಿಂಟನ್ ಎಂದಾಗ ಸೈನಾ ನೆಹ್ವಾಲ್, ಪ್ರಫುಲ್ಲ ಗೋಪಿಚಂದ್ ನೆನಪಾಗುತ್ತಾರೆ. ಕ್ರಿಕೆಟ್ ಬಗೆಗಿನ ಅತಿ ವ್ಯಾಮೋಹದಿಂದ ಬೇರೆ ಕ್ರೀಡೆಗಳೆಲ್ಲ ಸೌಕರ್ಯಹೀನ ಸ್ಥಿತಿಯಲ್ಲಿದ್ದರೂ, ಅಂಥ ವಿಷಮ ಪರಿಸ್ಥಿತಿ ಮಧ್ಯದಲ್ಲೂ ಹಲವು ಕ್ರೀಡೆಗಳು ಮತ್ತು ಹಲವು ಪ್ರತಿಭೆಗಳು ಪರಿಶ್ರಮದಿಂದ ತಲೆ ಎತ್ತುತ್ತಿದ್ದಾರೆ. ಅಂಥವರನ್ನು ಪರಿಚಯಿಸಿಕೊಳ್ಳುವ ಪ್ರಯತ್ನ ನಮ್ಮದಾಗಬೇಕಲ್ಲವೇ?

 ಬಿಲ್ವಿದ್ಯೆ

ಆರ್ಚರಿ ಅಥವಾ ಬಿಲ್ಲು-ಬಾಣದ ಕ್ರೀಡೆಯಲ್ಲಿ ಭಾರತ ಹೆಮ್ಮೆ ಪಡುವುದಕ್ಕೆ ಕಾರಣರಾಗಿರುವವರು ವಿಶ್ವಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿರುವ ದೀಪಿಕಾ ಕುಮಾರಿ. 2002ರಲ್ಲಿ ಅವರು ವಿಶ್ವಶ್ರೇಯಾಂಕದ ಅಗ್ರಸ್ಥಾನದಲ್ಲಿದ್ದರು. 2010ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಎರಡು ಬಂಗಾರದ ಪದಕಗಳು, 2012ರಲ್ಲಿ ಗೆದ್ದ ಮೊದಲನೇ ವಿಶ್ವಕಪ್, 2015ರ ವಿಶ್ವಕಪ್ ನಲ್ಲಿ ಬೆಳ್ಳಿ ಹೀಗೆ ಹಲವು ಸಾಧನೆಗಳು ಅವರ ಹಾದಿಯಲ್ಲಿವೆ. ಜಾರ್ಖಂಡ್ ನ ರಾಂಚಿಯಿಂದ ಬಂದು ಸಾಧನೆಯ ಶಿಖರ ಏರಿದ ದೀಪಿಕಾ ಕುಮಾರಿ, 2012ರಲ್ಲಿ ಅರ್ಜುನ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

ಸ್ಕ್ವಾಶ್

ಸ್ಕ್ವಾಶ್ ಎಂದೊಡನೆ ಬಹುತೇಕರು ಕೇಳಿರಬಹುದಾದ ಹೆಸರು ದೀಪಿಕಾ ಪಳ್ಳಿಕಲ್. ವಿಶ್ವ ಸ್ಕ್ವಾಶ್ ಶ್ರೇಯಾಂಕ ಅಗ್ರ- 10ರ ಪಟ್ಟಿಯಲ್ಲಿ ಕಾಣಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಅವರ ಪಾಲಿಗಿದೆ. ಇವರ ಹಾದಿಯಲ್ಲೇ ಸಾಗಿ ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬೆಳಗುತ್ತಿರುವ ಇನ್ನೊಂದು ಪ್ರತಿಭೆ ಎಂದರೆ ಜೋಶ್ನಾ ಚಿನ್ನಪ್ಪ. ಬ್ರಿಟಿಷ್ ಜೂನಿಯರ್ ಒಪನ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯಳೆಂಬ ಖ್ಯಾತಿಗೆ 2005ರಲ್ಲಿ ಪಾತ್ರರಾದರು. 2014ರ ಕಾಮನ್ ವೆಲ್ತ್ ಕ್ರೀಡೆಯಲ್ಲಿ ಪಳ್ಳಿಕಲ್ ಅವರ ಜತೆಗೂಡಿ ಭಾರತಕ್ಕೆ ಬಂಗಾರದ ಪದಕ ತಂದರು. ಇದೇ ವರ್ಷದ ಅಕ್ಟೋಬರ್ ನಲ್ಲಿ ನಡೆದ ಕತಾರ್ ಕ್ಲಾಸಿಕ್ ಚಾಂಪಿಯನ್ ಶಿಪ್ ನಲ್ಲಿ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಈಜಿಪ್ತ್ ನ ಆಟಗಾರ್ತಿಯನ್ನು ಮೊದಲ ಸುತ್ತಿನಲ್ಲಿ ಹಣಿದಾಗ ಜಗತ್ತೇ ಬೆರಗಾಯಿತು.

ಇದೇ ಆಟದಲ್ಲಿ ಪುರುಷರ ವಿಭಾಗದತ್ತ ಗಮನಹರಿಸಿದರೆ ಕಣ್ಣಿಗೆ ಬೀಳುವ ಪ್ರತಿಭೆ 29ರ ಹರೆಯದ ಸೌರವ್ ಘೋಷಾಲ್. ಜ್ಯೂನಿಯರ್ ವಿಶ್ವ ನಂಬರ್ ಒನ್ ಪಟ್ಟಕ್ಕೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇವರಿಗೆ ಸಂದಿತ್ತು. 2014ರ ಏಷ್ಯನ್ ಗೇಮ್ಸ್ ನಲ್ಲಿ ತಂಡದ ಪಾಲ್ಗೊಳ್ಳುವಿಕೆಯಲ್ಲಿ ಬಂಗಾರವನ್ನೂ, ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿಯನ್ನೂ ಗಳಿಸಿದ ಖ್ಯಾತಿ ಇವರದ್ದು.

ಇನ್ನುಳಿದಂತೆ, ಇತರ ಕ್ರೀಡೆಗಳಲ್ಲಿ ಮಿನುಗುತ್ತಿರುವ ಯುವ ಸಮೂಹವನ್ನು ಸಂಕ್ಷಿಪ್ತವಾಗಿ ಗಮನಿಸೋಣ.

ಚೆಸ್ ಎಂದೊಡನೆ ವಿಶ್ವನಾಥನ್ ಆನಂದ್ ಹೆಸರು ಹೆಮ್ಮೆಯಿಂದ ನೆನಪಾಗುತ್ತದೆ. ಅವರ ಯುವ ಅವತರಣಿಕೆಯನ್ನು ಇಂದಲ್ಲ ನಾಳೆ ದೇಶ ನೋಡಲೇಬೇಕಲ್ಲ? ಸದ್ಯಕ್ಕೆ ಜೊವಿಯಲ್ ಹರಿಕಾ ದ್ರೊಣಾವಲಿ ಎಂಬ ಹೆಸರನ್ನು ಪ್ರಸ್ತಾಪಿಸಬಹುದು. 24ರ ಹರೆಯದ ಈಕೆ, ವಿಶ್ವ ಶ್ರೇಯಾಂಕದಲ್ಲಿ 14ನೇ ಸ್ಥಾನದಲ್ಲಿದ್ದಾರೆ. ದೇಶದ ಗೌರವಾನ್ವಿತ ಅರ್ಜುನ ಪ್ರಶಸ್ತಿ ಪುರಸ್ಕೃತೆ. ‘ಕ್ರಿಕೆಟ್, ಫುಟ್ಬಾಲ್ ಗಳಂತೆ ದೊಡ್ಡ ಸಮೂಹವೊಂದಕ್ಕೆ ಆಕರ್ಷಣೀಯ ಎಂದೇನೂ ಎನಿಸದ ಚೆಸ್ ಗೆ ದಿನವೂ 7-8 ತಾಸುಗಳ ಪರಿಶ್ರಮ ಹಾಕಬೇಕು. ಕುಟುಂಬದ ಸಹಕಾರವಿಲ್ಲದಿದ್ದರೆ ಈ ಉನ್ನತಿ ಸಾಧ್ಯವಿರಲಿಲ್ಲ’ ಅಂತಾರೆ ಹರಿಕಾ.

ಪೇಸ್- ಭೂಪತಿಗಳ ಜಮಾನಾದ ನಂತರ ಭಾರತೀಯ ಟೆನಿಸ್ ನ, ವಿಶೇಷವಾಗಿ ಸಿಂಗಲ್ ವಿಭಾಗದ ಆಶಾದಾಯಕ ಆಟಗಾರರಾಗಿ ಹೊರಹೊಮ್ಮುತ್ತಿರುವವರು 23ರ ಹರೆಯದ ಯುಕಿ ಭಾಂಬ್ರಿ. ಎಟಿಪಿ ಚಾಲೆಂಜರ್ ಮತ್ತು ಶಾಂಘೈ ಚಾಲೆಂಜರ್ ಟೂರ್ನಿಗಳನ್ನು ಗೆದ್ದುಕೊಂಡಿರುವ ಇವರು, ತಮ್ಮ ನಿರಂತರ ಕ್ಷಮತೆಯಿಂದ ವಿಶ್ವದ ನೂರು ಉತ್ತಮ ಟೆನಿಸ್ ಆಟಗಾರರ ಪಟ್ಟಿಯಲ್ಲಿ ಜಾಗ ಪಡೆದುಕೊಂಡಿದ್ದಾರೆ.

ಬ್ಯಾಡ್ಮಿಂಟನ್ ನಲ್ಲಿ ಪುಲ್ಲೇಲ ಗೋಪಿಚಂದ್ ಮತ್ತು ಪ್ರಕಾಶ್ ಪಡುಕೋಣೆ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಯಾರಿದ್ದಾರೆ? 2012ರಲ್ಲಿ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 240ನೆಯವರಾಗಿ ಗುರುತಿಸಿಕೊಂಡು, ಈಗ ಐದನೇ ಶ್ರೇಯಾಂಕದಲ್ಲಿ ಮಿಂಚುತ್ತಿರುವ 22ರ ಹರೆಯದ ಶ್ರೀಕಾಂತ ಕಿದಂಬಿ ಬಹುದೊಡ್ಡ ಭರವಸೆ ಮೂಡಿಸಿದ್ದಾರೆ.

ವಿದೇಶಿ ಪೋರಿಯರು ಜಿಮ್ಮನಾಸ್ಟಿಕ್ ನಲ್ಲಿ ಮಾಡುವ ಕಸರತ್ತುಗಳನ್ನು ನೋಡಿ ಕಣ್ಣರಳಿಸಿಕೊಂಡು ಬಂದಿದ್ದೇವಲ್ಲವೇ? ಅದು ನಮ್ಮ ಜಾಯಮಾನಕ್ಕಲ್ಲ ಅಂತಲೂ ಅಂದುಕೊಂಡಿರುತ್ತೇವೆ. 2010ರ ಕಾಮನ್ ವೆಲ್ತ್ ಕೂಟದಲ್ಲಿ ಅನೀಶ್ ಕುಮಾರ್ ಅವರು ಕಂಚು ಗೆದ್ದಾಗ, ಅದುವೇ ಜಿಮ್ಮನಾಸ್ಟಿಕ್ ಕ್ರೀಡೆಯಲ್ಲಿ ಭಾರತಕ್ಕೆ ಬಂದ ಮೊದಲ ಪದಕವೆಂದು ಇತಿಹಾಸ ನಿರ್ಮಾಣವಾಯಿತು. ನಂತರ, ತ್ರಿಪುರಾದಿಂದ ಎದ್ದು ಬಂದಳು ನೋಡಿ 22ರ ಪೋರಿ ಡಿಪಾ ಕರ್ಮಕರ್! 2014ರ ಕಾಮನ್ ವೆಲ್ತ್ ನಲ್ಲಿ ಕಂಚು ತಂದಳು. ಚಪ್ಪಟೆ ಪಾದದ ಸಮಸ್ಯೆಯಿದ್ದ ಈ ಹುಡುಗಿ, ಅದನ್ನು ಸರಿಪಡಿಸಿಕೊಂಡು ಕಂಬದ ಮೇಲೆ ಕಸರತ್ತಿಗಿಳಿದು ಸೈ ಎನಿಸಿಕೊಂಡಳಲ್ಲ! ಉಕ್ಕದಿರಲು ಸಾಧ್ಯವೇ ಅಭಿಮಾನ?

ಇಂಥ ಸಾಧನೆಗಳ ಬಗ್ಗೆ, ಯುವ ಪ್ರತಿಭೆಗಳ ಬಗ್ಗೆ ಹೆಮ್ಮೆ ಪಡುವ, ಆ ಬಗ್ಗೆ ಹೆಚ್ಚು ಹೆಚ್ಚು ಮಾತಿಗಿಳಿಯುವ ಕಾಯಕ ನಮ್ಮದಾಗಲಿ. ಆಗಮಾತ್ರ ವಿಶ್ವ ಭೂಪಟದಲ್ಲಿ ಭಾರತ ಎಲ್ಲ ಆಯಾಮಗಳಲ್ಲೂ ಮಿಂಚುವ ದಿನ ಬಂದೀತು.

Leave a Reply