ಬಂಗಾರದ ಯೋಜನೆಗೆ ಮಿಶ್ರ ಪ್ರತಿಕ್ರಿಯೆ: ಭಾರತೀಯರು ಚಿನ್ನವ ಬಿಡರೆಂಬುದು ಸಾಬೀತಾಯ್ತು

 

ವಿಷ್ಣುಕಾಂತ

ಈ ವರ್ಷದ ಸೆಪ್ಟೆಂಬರ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರವು ಬಂಗಾರದ ಆರ್ಥಿಕತೆಯನ್ನು ಗುರಿಯಾಗಿರಿಸಿಕೊಂಡು ಯೋಜನೆಯೊಂದನ್ನು ಪ್ರಕಟಿಸಿತು. ‘ಗೋಲ್ಡ್ ಬಾಂಡ್’ ಅಂತಲೇ ಅದು ಸುದ್ದಿಯಲ್ಲಿ ಪ್ರಚಾರಗೊಂಡಿತು. ನವೆಂಬರ್ 5ರಂದು ಆ ಯೋಜನೆ ಕೊನೆಗೊಂಡಾಗ ಎರಡು ಬಗೆಯ ಚಿತ್ರಣಗಳು ನಮ್ಮ ಮುಂದೆ ತೆರೆದುಕೊಂಡವು. ಗೋಲ್ಡ್ ಬಾಂಡ್ ಯೋಜನೆಗೆ ಉತ್ತಮ ಪ್ರತಿಕ್ರಿಯೆಯೇ ವ್ಯಕ್ತವಾಗಿ ಸುಮಾರು 246 ಕೋಟಿ ರುಪಾಯಿಗಳು ಸಂಗ್ರಹವಾಗಿದ್ದರೆ, ಚಿನ್ನವನ್ನು ಕೊಟ್ಟು ಬದಲಿಗೆ ಬಾಂಡ್ ಖರೀದಿಸುವ ಇನ್ನೊಂದು ಯೋಜನೆ ಮುಗ್ಗರಿಸಿ ಬಿದ್ದಿದೆ. ಅಂದರೆ, ಚಿನ್ನವನ್ನು ಹೂಡಿಕೆ ಮಾರ್ಗವಾಗಿ ನೋಡಿ ಅದನ್ನು ಖರೀದಿಸುವ ಬದಲು, ಅಷ್ಟೇ ಮೌಲ್ಯದ ಸರ್ಕಾರಿ ಬಾಂಡ್ ಖರೀದಿಸುವುದಕ್ಕೆ ಹಲವರಲ್ಲಿ ಆಸಕ್ತಿ ಇದೆ. ಆದರೆ ಈಗಾಗಲೇ ತಮ್ಮಲ್ಲಿರುವ ಚಿನ್ನವನ್ನು ಸರ್ಕಾರಕ್ಕೆ ಕೊಟ್ಟು, ಅದರ ಬದಲು ಬಾಂಡ್ ಪಡೆಯುವ ವಿಧಾನಕ್ಕೆ ಮಾತ್ರ ಯಾರೂ ಉತ್ಸಾಹ ತೋರಿಲ್ಲ!

ಭಾರತೀಯರಲ್ಲಿ ಬಂಗಾರ ಹೊಂದುವ ಗೀಳನ್ನು ಕಡಿಮೆ ಮಾಡಿ, ಅದರಷ್ಟೇ ಮೌಲ್ಯದ ಅರ್ಥಾತ್ ಗೋಲ್ಡ್ ಬ್ಯಾಕ್ ಅಪ್ ಹೊಂದಿರುವ ಬಾಂಡ್ ಗಳನ್ನು ಬ್ಯಾಂಕ್ ಗಳಿಂದ ಪಡೆಯುವ ವ್ಯವಸ್ಥೆ ರೂಪಿಸುವ ಆಶಯ ಸರ್ಕಾರದ್ದಾಗಿತ್ತು. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಭಾರತೀಯರಿಗೆ, ಅದರಲ್ಲೂ ಬೃಹತ್ ಸಂಖ್ಯೆಯ ಮಧ್ಯಮ ವರ್ಗಕ್ಕೆ ಚಿನ್ನ ಖರೀದಿ ಹುಚ್ಚು ಜೋರು. ಆದರೆ ಬಂಗಾರಕ್ಕಾಗಿ ನಾವು ಹೆಚ್ಚಿನದಾಗಿ ಬೇರೆ ರಾಷ್ಟ್ರಗಳನ್ನೇ ಅವಲಂಬಿಸಿದ್ದೇವೆ. ಹೀಗಾಗಿ, ಚಿನ್ನವನ್ನು ಆಮದು ಮಾಡಿಕೊಂಡಷ್ಟೂ ಅದು ನಮ್ಮ ಆಯಾತ-ನಿರ್ಯಾತದ ಪಟ್ಟಿಯ ಆರೋಗ್ಯವನ್ನು ಏರುಪೇರು ಮಾಡುತ್ತದೆ. ಇದಲ್ಲದೇ, ಭಾರತದ ಗೃಹಿಣಿಯರು ಮತ್ತು ದೇವಾಲಯಗಳ ಸಂಗ್ರಹವನ್ನು ಸೇರಿಸಿದರೆ ಸುಮಾರು 20 ಸಾವಿರ ಟನ್ ಗಳಷ್ಟು ಚಿನ್ನವು ಪೆಟ್ಟಿಗೆ ಕಾಯ್ದುಕೊಂಡಿದೆ ಅನ್ನೋದೊಂದು ಅಂದಾಜು. ಇದು ಚಲಾವಣೆಗೆ ಬಂದು ಉಪಯೋಗವಾಗಲಿ ಎಂಬ ಉದ್ದೇಶ ಯೋಜನೆ ಹಿಂದಿತ್ತು.

ಆದರೆ, ಭಾರತೀಯರಿಗೆ ಚಿನ್ನದ ಕುರಿತಾಗಿರುವ ಭಾವನಾತ್ಮಕ ಬೆಸುಗೆಯನ್ನು ಗಮನಿಸಿದಾಗ, ಇದೊಂದು ವೈಫಲ್ಯ ಅನುಭವಿಸಲಿರುವ ಯೋಜನೆಯಾಗಲಿದೆ ಅಂತ ಯಾರಾದರೂ ಹೇಳಬಹುದು. ಹೂಡಿಕೆಗೆ ಅಂತ ಚಿನ್ನ ಖರೀದಿಸುವವರು ಅಲ್ಲಿಗಿಂತ ಉತ್ತಮ ಹೂಡಿಕೆ ಅವಕಾಶ ತೆರೆದುಕೊಳ್ಳುತ್ತಲೇ ಬಂಗಾರದ ವ್ಯಾಮೋಹ ಬಿಡಬಹುದೇನೋ? ಹೀಗೆ ಹೂಡಿಕೆಗೆ ಅಂತಲೇ ಬಂಗಾರದ ಬಿಸ್ಕೆಟ್ ಕೊಳ್ಳುವ ಪ್ರಮಾಣ ಭಾರತದಲ್ಲಿ ಅಂದಾಜು ಪ್ರತಿವರ್ಷ 300 ಟನ್ ಗಳು. ಹೀಗೆ ಬಂಗಾರದ ಮೇಲೆ ಹಣ ವ್ಯಯಿಸುವುದಕ್ಕೆ ಬದಲಾಗಿ, ಅದನ್ನು ನಮ್ಮ ಬಾಂಡ್ ಗಳಲ್ಲಿ ವ್ಯಯಿಸಿ. ಈ ಬಾಂಡ್ ಗಳಿಗೆ ಗೋಲ್ಡ್ ಬ್ಯಾಕ್ ಅಪ್ ಇರುತ್ತದೆ ಎಂದಿತ್ತು ಸರ್ಕಾರದ ಹೊಸ ಸ್ಕೀಮ್. ಈ ಯೋಜನೆಯನ್ವಯ ವ್ಯಕ್ತಿಯೊಬ್ಬ ವರ್ಷದಲ್ಲಿ 500 ಗ್ರಾಮ್ ಗಳಷ್ಟು ಚಿನ್ನ ಖರೀದಿಸುವುದಕ್ಕೆ ಎಷ್ಟು ವ್ಯಯಿಸುತ್ತಾನೋ ಅಷ್ಟರ ಮೌಲ್ಯದ ಬಾಂಡ್ ಖರೀದಿಸಬಹುದಾಗಿತ್ತು. ಈ ಬಾಂಡ್ ಗಳನ್ನು ಬೇರೆಯವರಿಗೆ ಮಾರಬಹುದಾದ, ಇದರ ಮೇಲೆ ಸಾಲ ಮಾಡಬಹುದಾದ ಆಯ್ಕೆಯೂ ಇರುವುದರಿಂದ, ಶುದ್ಧ ಹೂಡಿಕೆ ಉದ್ದೇಶಕ್ಕೆ ಬಂಗಾರದ ಗಟ್ಟಿಯನ್ನು ಖರೀದಿಸುವಾತ, ಅದರ ಬದಲು ಇಂಥ ಬಾಂಡ್ ಗಳಿಗೆ ಮನಸ್ಸು ಮಾಡಲಿ ಎಂಬ ಯೋಚನೆ ಇಲ್ಲಿತ್ತು. ಇದು ಮೇಲೆ ಹೇಳಿದಂತೆ ಸ್ವಲ್ಪಮಟ್ಟಿಗೆ ಸಕ್ಸಸ್ ಆಗಿದೆ.

ಆದರೆ ಹೆಂಗಸರು ಮತ್ತು ದೇವಾಲಯಗಳ ಚಿನ್ನವನ್ನು ಬಾಂಡ್ ರೂಪದಲ್ಲಿ ಸೆಳೆಯುವ ಯೋಚನೆ ಭಾರತದಂಥ ದೇಶದಲ್ಲಿ ಅಷ್ಟಾಗಿ ಸಾಕಾರವಾಗುವ ಸ್ಥಿತಿ ಇಲ್ಲ. ಏಕೆಂದರೆ ಇಲ್ಲೆಲ್ಲ ಬಂಗಾರ ಎಂಬುದು ಕೇವಲ ಅಲ್ಪಾವಧಿಯಲ್ಲಿ ಲಾಭ ತಂದುಕೊಡುವ ಹೂಡಿಕೆ ಅಲ್ಲವೇ ಅಲ್ಲ. ಇವರ ಚಿನ್ನ ಸಂಗ್ರಹಕ್ಕೆ ಪಾರಂಪರಿಕ, ಭಾವನಾತ್ಮಕ ಕವಚವೊಂದಿದೆ. ನಮ್ಮಲ್ಲಿ ಮಗುವಿಗೆ ಅನ್ನಪ್ರಾಶನ ಮಾಡಿಸುವಾಗಿಂದಲೇ ಬಂಗಾರದ ತುಡೊಂದಿರಲಿ ಅನ್ನುವದರೊಂದಿಗೆ ಈ ಲೋಹ ನಮ್ಮ ಬದುಕಿನ ಭಾಗವಾಗಿದೆ. ಮದುವೆಯಾಗುತ್ತಿರುವ ಮಗಳಿಗೆ ಕೊಡುವುದಕ್ಕೆ ಈ ಮುಂದುವರಿದ ಜಗತ್ತಿನಲ್ಲಿ ಏನೆಲ್ಲ ಆಯ್ಕೆಗಳಿಲ್ಲ? ಸ್ಮಾರ್ಟ್ ಫೋನ್ ನಿಂದ ಹಿಡಿದು ವಾಹನದವರೆಗೆ… ಆದಾಗ್ಯೂ ಅದೆಂಥದೇ ದುಬಾರಿ ಗಿಫ್ಟು ಕೊಟ್ಟರೂ ಮಂಗಲಕಾರ್ಯದಲ್ಲಿ ಒಡವೆ ಮಾಡಿಸಿದರಷ್ಟೇ ಸಮಾಧಾನ ಅಂತ ಯೋಚಿಸುವ ಸಮಾಜದ ಧೋರಣೆ ಬದಲಾಗಿಲ್ಲ.

ಸರ್ಕಾರ ಪ್ರಸ್ತಾವಿಸಿದ್ದ, ಚಿನ್ನವನ್ನು ಹಣವಾಗಿಸುವ ಯೋಜನೆ ಹೀಗಿತ್ತು- ಆಭರಣಗಳ ರೂಪದಲ್ಲಿರುವ ಚಿನ್ನವನ್ನು ಕರಗಿಸಿ, ನಿಗದಿತ ಕೇಂದ್ರಗಳಲ್ಲಿ ಅವುಗಳ ಶುದ್ಧತೆಗೆ ಪ್ರಮಾಣ ನೀಡಲಾಗುತ್ತದೆ. ಆ ಬಂಗಾರವನ್ನೆಲ್ಲ ಬ್ಯಾಂಕ್ ಇಟ್ಟುಕೊಂಡು, ನಿಗದಿತ ಅವಧಿಗೆ ಮೆಚೂರ್ ಆಗುವ ಬಾಂಡ್ ಒಂದನ್ನು ಗ್ರಾಹಕನಿಗೆ ನೀಡುತ್ತದೆ. ಇದಕ್ಕೆ ಬಡ್ಡಿಯೂ ಇದ್ದು, ಅಲ್ಪಾವಧಿ ಬಾಂಡ್ ಗಳಿಗೆ ಸಿಗುವ ಬಡ್ಡಿದರವನ್ನು ಆಯಾ ಬ್ಯಾಂಕ್ ಗಳೇ ನಿರ್ಧರಿಸಬಹುದಾಗಿದ್ದು, ದೀರ್ಘಾವಧಿ ಬಾಂಡ್ ಗಳ ಬಡ್ಡಿದರವನ್ನು ಆರ್ಬಿಐ ಜತೆ ಸಮಾಲೋಚಿಸಿ ನಿರ್ಧರಿಸುವ ನಿರ್ದೇಶನ ನೀಡಲಾಗಿತ್ತು.

ಜಾಗತಿಕ ಚಿನ್ನದ ಕೌನ್ಸಿಲ್ ನ ವರದಿಯೇ ಸಾರಿರುವಂತೆ, ಭಾರತದಲ್ಲಿ ಹೂಡಿಕೆಗೆ ಅಂತ ಬಂಗಾರ ಖರೀದಿಸುವುವವರಿಗಿಂತ, ವಿವಾಹಕ್ಕೆ ಖರೀದಿಸುವವರೇ ಹೆಚ್ಚು. ಈ ದೊಡ್ಡ ಸಮುದಾಯಕ್ಕೆ ನೀವು ಬಂಗಾರದ ಬದಲು ಈ ಕ್ಷಣಕ್ಕೆ ಅವೆಷ್ಟೇ ಹಣ ನೀಡುತ್ತೇನೆಂದರೂ ಆಭರಣ ರೂಪದಲ್ಲಿರುವ ‘ಆಪದ್ಧನ’ವನ್ನು ಅವರು ಬಿಡಲೊಪ್ಪುವುದಿಲ್ಲ. ಅಲ್ಲದೇ, ಇದು ಅಪ್ಪ- ಅಮ್ಮ ಕೊಟ್ಟಿದ್ದು, ಹಿರಿಯರ ಆಶೀರ್ವಾದ ಹೊತ್ತ ಬಳುವಳಿ ಎಂಬೆಲ್ಲ ಭಾವನಾತ್ಮಕ ಮೌಲ್ಯಗಳಿರುತ್ತವೆ. ಇವ್ಯಾವ ಗಟ್ಟಿತನವನ್ನೂ ಮುದ್ರಿತ ನೋಟುಗಳಾಗಲೀ, ಬಾಂಡ್ ಗಳಾಗಲೀ ಅವೆಷ್ಟೇ ಆಕರ್ಷಕ ಅವತಾರ ತೋರಿಸಿದರೂ ಮೆರೆಯುವುದಕ್ಕೆ ಸಾಧ್ಯವಿಲ್ಲ; ಅದೂ ಭಾರತದ ಮಟ್ಟಿಗೆ.

ತೀರ ಅರ್ಥಶಾಸ್ತ್ರವನ್ನೇ ಮಾತನಾಡುವುದಾದರೆ ಸರಾಸರಿ ಲೆಕ್ಕಾಚಾರದಲ್ಲಿ ಬಂಗಾರದ ಮೌಲ್ಯ ಹೆಚ್ಚಳವನ್ನೇನೂ ಸಾಧಿಸಿಲ್ಲ. ವಿತ್ತ ಪರಿಣತ ಸತ್ಯಜಿತ್ ದಾಸ್ ಬರೆಯುತ್ತಾರೆ-

‘2009ರಲ್ಲಿ ಚಿನ್ನದ ವ್ಯಾಮೋಹಿಗಳು ಈ ಲೋಹದ ಬೆಲೆ ಔನ್ಸ್ಗೆ 2300 ಡಾಲರ್ ಗಳಾಗಲಿವೆ ಅಂತ ಸಂಭ್ರಮಪಟ್ಟರು. ಇದೇ ಬೆಲೆಯನ್ನೇ ತೆಗೆದುಕೊಂಡರೂ, ಹಣದುಬ್ಬರದ ಪ್ರಮಾಣಗಳಿಗೆ ಸರಿದೂಗಿಸಿದರೆ, ಜನವರಿ 1980ರಲ್ಲಿ ಬಂಗಾರದ ಬೆಲೆ ಎಷ್ಟಿತ್ತೋ ಅಷ್ಟೇ ಆಗುತ್ತದೆ. ಅಂದರೆ 30 ವರ್ಷಗಳ ನಂತರವೂ ಬಂಗಾರದ ಹೂಡಿಕೆಯಿಂದ ನೀವೇನೂ ಗಳಿಸಿಲ್ಲವೆಂದಾಯ್ತು! 2010ರ ಬಂಗಾರದ ಬೆಲೆಯನ್ನು ಹಣದುಬ್ಬರಕ್ಕೆ ಸರಿಹೊಂದಿಸಿ ಲೆಕ್ಕ ಹಾಕಿದರೆ 1265ರಲ್ಲೂ ಇದೆ ಬೆಲೆ ಇತ್ತು ಅಂತ ಗೊತ್ತಾಗುತ್ತೆ.’

ಹೀಗೆಲ್ಲ, ಚಿನ್ನದ ಬೆಲೆಯನ್ನು ಆರ್ಥಿಕ ಪರಿಣತ ದೃಷ್ಟಿಕೋನದಿಂದ ವಿವರಿಸಬಹುದಾದರೂ, ಭಾರತೀಯರ ದೃಷ್ಟಿಕೋನ ಹೇಗೆಂದರೆ, ಚಿನ್ನವನ್ನು ಅವರು ಇನ್ಯಾವುದರೊಂದಿಗೂ ತುಲನೆ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಆಭರಣವನ್ನೇ ಅಡವಿಟ್ಟು ಕರೆನ್ಸಿಯಂತೆ ದುಡಿಸಿಕೊಳ್ಳುತ್ತಾರಾದರೂ, ಬೇರೆ ಮೂಲದಿಂದ ಹಣ ಬರುತ್ತಲೇ ಆ ಆಭರಣಗಳನ್ನು ಮತ್ತೆ ತಂದಿಟ್ಟುಕೊಳ್ಳಬೇಕು ಎಂಬ ಪ್ರಯತ್ನದಲ್ಲೇ ಇರುತ್ತಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಬಾಂಡ್ ಗಳು, ಮುದ್ರಿತ ಕರೆನ್ಸಿಗಳೆಲ್ಲ ಈ ಕ್ಷಣಕ್ಕೆ ಚಿನ್ನವನ್ನು ಮೀರಿಸುವಂತೆ ಹೊಳೆದರೂ, ದ್ವಿಗುಣವಾಗುವ ಕಲೆ ಹೊಂದಿದ್ದರೂ, ಇವೆಲ್ಲವೂ ಅಪ್ರಸ್ತುತವಾಗುವ ಕಾಲಕ್ಕೆ ಬಂಗಾರ ಮಿನುಗಿಯೇ ಮಿನುಗುತ್ತದೆಂದು ಭಾರತೀಯರು ತಮಗರಿವಿಲ್ಲದಂತೆ ನಂಬಿಕೆ ರೂಢಿಸಿಕೊಂಡಿದ್ದಾರೆ. ಹಾಗೆಂದೇ ಚಿನ್ನದಾಭರಣಗಳು ತಲೆಮಾರಿನಿಂದ ತಲೆಮಾರಿಗೆ ದಾಟಿಕೊಂಡು ಹೋಗಬೇಕಾದ, ಖರ್ಚಾಗಬಾರದಾಗಿರುವ ಪರಿಕಲ್ಪನೆಯೇ ನಮ್ಮನ್ನೆಲ್ಲ ಆಳಿಕೊಂಡಿದೆ.

ಸರ್ಕಾರದ ಚಿನ್ನದ ಬಾಂಡ್ ಯೋಜನೆ ಅಷ್ಟೇನೂ ಸಫಲವಾಗದೇ ಹೋಗಿದ್ದಕ್ಕೆ ಇವೆಲ್ಲವೂ ಕಾರಣಗಳು.

1 COMMENT

  1. Santhya…. Adare bangarada moha modalindaadaru, adannu promote maaduva jaahiraathugala bagge gamana vahisabeku… chinnada jaahiraathu galige kadivaana hakuhudarinda upyogavagabahudu , nanna nambike…

Leave a Reply