ಬೊಮನ್ ಇರಾನಿಯ ಸಹನೆಯ ಪಾಠ ಕೇಳಿಸಿಕೊಂಡಿದ್ದೀರಾ?

 

ಕಾತ್ಯಾಯಿನಿ

ಬೊಮನ್ ಇರಾನಿ ಎಂಬ ಬಾಲಿವುಡ್ ಪ್ರತಿಭಾವಂತ ಯಾರಿಗೆ ತಾನೇ ಗೊತ್ತಿಲ್ಲ? ಪೋಷಕ ಪಾತ್ರಕ್ಕೆ ಹೀರೋ ಗತ್ತು ತಂದವರಲ್ಲಿ ಇರಾನಿ ಪ್ರಮುಖರು. ಅವರ ಹೆಸರು ಹೇಳುತ್ತಿದ್ದಂತೆ ಮುನ್ನಾಭಾಯಿ ಸರಣಿ, ತ್ರೀ ಇಡಿಯಟ್ಸ್, ಡಾನ್ ನಂಥ ಚಿತ್ರಗಳು ಕಣ್ಮುಂದೆ ಕುಣಿಯುತ್ತವೆ. ಇಂಥ ತಾರಾ ಮೆರುಗಿನ ಬಹು ಜನಪ್ರಿಯ ಚಿತ್ರಗಳಲ್ಲಿ ಕಾಣಿಸಿಕೊಂಡ ಬೊಮನ್, ‘ವೆಲ್ ಡನ್ ಅಬ್ಬಾ’ದಂಥ ಭಿನ್ನ ಚಿತ್ರದಲ್ಲೂ ಮುಲಾಜಿಲ್ಲದೇ ತಮ್ಮೊಳಗಿನದನ್ನು ಅರಳಿಸಿದ್ದಾರೆ.

ಕುಶಾಲು- ಖಡೂಸುಗಳ ಮಿಶ್ರ ಚಿತ್ರಣವೊಂದು ನಮ್ಮನ್ನು ರಂಜಿಸುವ ಪಾಕವೇ ಬೊಮನ್. ಆದರೆ ಇಂಥ ಬೊಮನ್ ಚಿತ್ರರಂಗಕ್ಕೆ ಪ್ರವೇಶ ಪಡೆದುಕೊಂಡಿದ್ದಾದರೂ ಯಾವ ಹಂತದಲ್ಲಿ ಅಂತ ಗಮನಿಸಿದಾಗ ಅಚ್ಚರಿಯಾಗದೇ ಇರದು. 2000ನೇ ಇಸ್ವಿಯಲ್ಲಿ ಬಾಲಿವುಡ್ ಅಂಗಳ ಪ್ರವೇಶಿಸಿದಾಗ ಅವರಿಗಾಗಲೇ 40 ವರ್ಷ. 2003ರಲ್ಲಿ ‘ಮುನ್ನಾಭಾಯಿ ಎಂಬಿಬಿಎಸ್’ ಬಂದಾಗ ಅವರು ಪ್ರಸಿದ್ಧರಾದರು. ನಂತರ ಹಿಂತಿರುಗಿ ನೋಡಲೇ ಇಲ್ಲ.

ಅದಿರಲಿ, ನಟನೆಯಲ್ಲಿ ಎಲ್ಲರ ವೃತ್ತಿ ನಕ್ಷೆಯು ತಾನಿನ್ನು ಯಾವ ಹೊರಳು ಪಡೆದುಕೊಳ್ಳಲಿ ಎಂಬ ಯೋಚನೆಯಲ್ಲಿರುವ ಹಂತ 40ರ ಪ್ರಾಯ. ಅದೇಕೆ ಪ್ರಾರಂಭಕ್ಕೇ ಅಷ್ಟು ಸಮಯ ತೆಗೆದುಕೊಂಡಿತು ಎಂಬ ಪ್ರಶ್ನೆಗೆ ಬೊಮನ್ ಒಂಚೂರು ವಿಚಲಿತರಾಗದೇ ಕೊಡುವ ಉತ್ತರ- ‘ಜೀವನದಲ್ಲಿ ಕೆಲವು ಬಾಕಿಗಳನ್ನು ತೀರಿಸಬೇಕಾಗುತ್ತದೆ.’ ಹಾಗಂತ ಅನುಪಮ್ ಖೇರ್ ನಡೆಸಿಕೊಡುವ ಟಿವಿ ಕಾರ್ಯಕ್ರಮದಲ್ಲಿ ಬೊಮನ್ ಮಾತಿಗೆ ಇಳಿದಾಗ ಹಲವು ಸಂಗತಿಗಳು ತೆರೆದುಕೊಂಡವು. ಬೊಮನ್ ಫಿಲ್ಮಿ ಸಂಸಾರದಿಂದಲೇನೂ ಬಂದವರಲ್ಲ. ಆದರೆ ಬುದ್ಧಿ ತಿಳಿದಾಗಿನಿಂದಲೇ ಅವರು ತಾವು ಜೀವನದಲ್ಲಿ ನಟರಾಗಬೇಕು ಅಂತ ತೀರ್ಮಾನಿಸಿಬಿಟ್ಟಿದ್ದರಂತೆ. ಹಾಗಂತ ಎಲ್ಲವನ್ನೂ ಬಿಟ್ಟು, ಆದರೆ ನಟ ಮಾತ್ರ ಎಂಬ ಪ್ರಯಾಣಕ್ಕೆ ತೊಡಗಲಿಲ್ಲ. ಏಕೆಂದರೆ ಆರ್ಥಿಕ ಸ್ಥಿತಿಯನ್ನೂ ಸುಧಾರಿಸಿಕೊಳ್ಳಬೇಕಿದ್ದ ಅಗತ್ಯವಿತ್ತು.

ಇವತ್ತಿಗೆ ಹೀರೋಗಳ ಸಾಲಿನಲ್ಲೇ ಸಂಭಾವನೆ ಪಡೆಯುವ ಬೊಮನ್ ಏನೆಲ್ಲ ನೌಕರಿ ಮಾಡಿದ್ದರು ಗೊತ್ತೇ? ಮೊದಲಿಗೆ ಹೊಟೇಲ್ ನಲ್ಲಿ ಸರ್ವರ್ ಆಗಿದ್ದರಂತೆ. ಮೊದಲ ಬಾರಿ ಐದು ರುಪಾಯಿ ಟಿಪ್ಸ್ ಬಂದಾಗ ಅಮ್ಮನಿಗೆ ಫೋನ್ ಮಾಡಿ ಸಂತಸ ಹಂಚಿಕೊಂಡಿದ್ದನ್ನು ಕಾರ್ಯಕ್ರಮದಲ್ಲಿ ನೆನೆದು ರೋಮಾಂಚನಗೊಳಿಸಿದ್ರು! ನಂತರ ಅಂಗಡಿ ಇಟ್ಟುಕೊಂಡಿದ್ರಂತೆ. ಅಲ್ಲೇ ಇವರಿಗೆ ಬಾಳ ಸಂಗಾತಿ ಸಿಕ್ಕಿದ್ದು. ಪ್ರೀತಿ ಕುದುರಿದ್ದು!

ಗುರಿಯನ್ನು ಪೋಷಿಸಿಕೊಂಡಿರಬೇಕು. ಹತಾಶೆ- ಹಪಾಹಪಿಗಳಿಗೆ ಬೀಳಬಾರದು. ಎಲ್ಲವಕ್ಕೂ ಒಂದು ಕಾಲ ಬರಲೇಬೇಕಾಗುತ್ತದೆ. ಟಿಲ್ ದೆನ್ ವಿ ಮಸ್ಟ್ ಪೇ ಅವರ್ ಡ್ಯೂಸ್- ಎಂಬ ನಿರ್ವಿಣ್ಣ ಭಾವ ಬೊಮನ್ ಅವರದ್ದು.

ಬದುಕಲ್ಲಿ ಏನೋ ಆಗಬೇಕೆಂದು ಕನಸಿ, ಅದಿನ್ನೂ ಬಹುದೂರ ಅಂತ ಹತಾಶೆಗೆ ಬೀಳುವವರಿಗೆ ಬೊಮನ್ ಸಾಗಿಬಂದ ಮಾರ್ಗ ಪ್ರೇರಣಾದಾಯಿ ಆಗಬಲ್ಲುದು.

Leave a Reply