ಭಾರತದ ಚಿತ್ರಗಳೇಕೆ ಆಸ್ಕರ್ ಗೆಲ್ಲಲ್ಲ? ಇಲ್ಲಿವೆ 5 ಕಾರಣಗಳು

 

ಯಾಮಿನಿ

ಪ್ರತಿವರ್ಷ ಜನವರಿಯಲ್ಲಿ ಘೋಷಣೆಯಾಗುವ ಆಸ್ಕರ್ ಪ್ರಶಸ್ತಿಗಳೆಂದರೆ ಜಗಕ್ಕೊಂದು ಆಕರ್ಷಣೆ. ಭಾರತವೂ ಪ್ರತಿವರ್ಷ ಚಿತ್ರವೊಂದನ್ನು ಅಧಿಕೃತ ಪ್ರವೇಶವನ್ನಾಗಿ ಆಸ್ಕರ್ ಗೆ ಕಳುಹಿಸುತ್ತದೆ. ಹೀಗೆ ಕಳುಹಿಸಿಲಾದ ಚಿತ್ರವು, ಜಗತ್ತಿನ ಬೇರೆ ಬೇರೆ ದೇಶಗಳ ಚಿತ್ರಗಳೊಂದಿಗೆ, ಹಾಲಿವುಡ್ ಹೊರತಾದ, ‘ವಿದೇಶಿ ಚಿತ್ರಗಳು’ ವಿಭಾಗದಲ್ಲಿ ಸ್ಪರ್ಧೆಗಿಳಿಯುತ್ತದೆ.

ನಮ್ಮ ಚಿತ್ರ ನಿರ್ಮಾಪಕರಿಗೆ ಆಸ್ಕರ್ ಗೆ ತಮ್ಮ ಚಿತ್ರವೇ ಹೋಗಲಿ ಎಂಬ ಉಮೇದು ಒಂದೆಡೆ ಆದರೆ, ಚಿತ್ರರಂಗದ ಒಂದು ವರ್ಗ- ವಿದೇಶಿಗರು ಕೊಡುವ ಆಸ್ಕರ್ ಮಾತ್ರ ಶ್ರೇಷ್ಠವೇ? ಅದಕ್ಕೆ ನಾವೇಕೆ ಹಾತೊರೆಯಬೇಕು ಎಂದು ಅಸಮಾಧಾನ ಪಡುವುದೂ ಇದೆ. ಆದರೆ ಆಸ್ಕರ್ ಅಂಗಳದಲ್ಲಿ ಚಿತ್ರವನ್ನು ನಿಲ್ಲಿಸುವುದೆಂದರೆ ಪಶ್ಚಿಮದವರ ಪ್ರಮಾಣಪತ್ರಕ್ಕೆ ನಿರೀಕ್ಷಿಸುವುದೆಂದೇ ಅರ್ಥವಲ್ಲ; ವಿದೇಶಗಳಲ್ಲಿ ನಮ್ಮ ಚಿತ್ರಕ್ಕೆ ಮಾರುಕಟ್ಟೆ ಒದಗಿಸಿಕೊಳ್ಳುವ ಪ್ರಯತ್ನ ಅಂತಲೂ ನೋಡಿದಾಗ ಆಸ್ಕರ್ ಪ್ರಾಮುಖ್ಯ ಅರ್ಥವಾಗುತ್ತದೆ.

ಈ ಬಾರಿ ಚೈತನ್ಯ ತಮ್ಹಾನೆ ನಿರ್ದೇಶನದ ‘ದ ಕೋರ್ಟ್’ ಮರಾಠಿ ಚಿತ್ರ ಆಸ್ಕರ್ ಅಂಗಳದಲ್ಲಿದೆ.

ಆದರೆ, ಆಸ್ಕರ್ ನಲ್ಲಿ ಭಾರತ ನಿರೀಕ್ಷೆ ಹುಟ್ಟಿಸುವ ಮಟ್ಟಕ್ಕೆ ಬೆಳೆದೇ ಇಲ್ಲ. ಅದೇಕೆ ನಮ್ಮ ಚಿತ್ರಗಳಲ್ಲಿ ಗುಣಮಟ್ಟವಿಲ್ಲವೇ? ಜಾಗತಿಕ ಆಲೋಚನಾ ಧಾಟಿ, ತಂತ್ರಜ್ಞಾನವನ್ನು ಹೊಸ ತಲೆಮಾರಿನ ನಿರ್ದೇಶಕರು ಮೈಗೂಡಿಸಿಕೊಂಡಿರುವಾಗಲೂ ಅದೇಕೆ ಇಲ್ಲಿ ಗಮನ ಸೆಳೆಯುವಲ್ಲಿ ವಿಫಲರಾಗುತ್ತೇವೆ ಎಂಬ ಪ್ರಶ್ನೆಗೆ ಹಲವು ಉತ್ತರಗಳು ಸಿಗುತ್ತವೆ.

1) ಆಸ್ಕರ್ ಅರ್ಹತೆಗೆ ಗುಣಮಟ್ಟ, ಕತೆ- ಪ್ರಸ್ತುತಿಗಳೆಲ್ಲ ಮುಖ್ಯವಾಗುತ್ತವೆಯಾದರೂ ಅದಕ್ಕೂ ಮುಂಚಿನ ಪಾತ್ರ ವಹಿಸುವಂಥದ್ದು ಮಾರ್ಕೆಟಿಂಗ್. ಚಿತ್ರ ಕೊಂಡೊಯ್ದರಷ್ಟೇ ಆಗದು. ಅಮೆರಿಕದ ಥಿಯೇಟರುಗಳಲ್ಲಿ ಪ್ರದರ್ಶನಗಳನ್ನು ಕಾಣುವಂತಾಗಬೇಕು. ಅಷ್ಟೇ ಅಲ್ಲ, ಅಲ್ಲಿನ ಜೂರಿ ಸದಸ್ಯರು, ಸೆಲೆಬ್ರಿಟಿಗಳೆಲ್ಲ ನೂರಾರು ಚಿತ್ರಗಳ ನಡುವೆ ಈ ಚಿತ್ರವನ್ನೂ ಗಮನಿಸುವುದಕ್ಕೆ ಮಾರುಕಟ್ಟೆಯಲ್ಲಿ ಚಿತ್ರದ ಕುರಿತ ಹವಾ ಒಂದನ್ನು ಸೃಷ್ಟಿಸಬೇಕಾಗುತ್ತದೆ. ಇದಕ್ಕೆ ಡಾಲರುಗಳ ಮೌಲ್ಯದಲ್ಲಿ ಹಣ ಬೇಕಾಗುತ್ತದೆ.

2) ಹಾಡು- ಮಸಾಲೆಗಳ ಸೂತ್ರದಲ್ಲಿ ಹೆಣೆದ ಬಾಕ್ಸ್ ಆಫೀಸ್ ಚಿತ್ರಗಳಿಗೆ ಕತೆ- ನಿರೂಪಣೆಗಳ ಗುಣಮಟ್ಟದ ಬೆಂಬಲ ಇರುವುದಿಲ್ಲ. ಇದಕ್ಕೆ ಹೊರತಾದ ಚಿತ್ರ ಮಾಡುವವರೆಂದರೆ ನಮ್ಮಲ್ಲಿ ಬೇರೆಯದೇ ಬಗೆಯ, ಕಮರ್ಷಿಯಲ್ ಸಕ್ಸಸ್ ಕಂಡಿರದ ನಿರ್ದೇಶಕ- ನಿರ್ಮಾಪಕರು. ಇವರ ಚಿತ್ರ ಎಷ್ಟೇ ಒಳ್ಳೆಯದಿದ್ದರೂ ಹಾಲಿವುಡ್ ಅಂಗಳದಲ್ಲಿ ‘ಮಾತು’ ಹುಟ್ಟಿಸಬಲ್ಲಷ್ಟು ಹಣ ಖರ್ಚು ಮಾಡಬಲ್ಲ ಶಕ್ತಿ ಅವರಿಗಿರುವುದಿಲ್ಲ.

3) ಭಾರತದ ಅಧಿಕೃತ ಆಯ್ಕೆಯನ್ನಾಗಿ ಚಿತ್ರವೊಂದನ್ನು ಆಯ್ಕೆ ಮಾಡುವ ನಮ್ಮಲ್ಲಿನ ಜೂರಿಗಳಿಗೆ ಹಣದ ತಾಕತ್ತು- ಗುಣಮಟ್ಟ ಎರಡರ ಮಿಳಿತದ ಚಿತ್ರ ಕಳುಹಿಸುವ ಕಾರ್ಯತಂತ್ರ ದೃಷ್ಟಿ ಇಲ್ಲ. ಉದಾಹರಣೆಗೆ, 2014ರ ಆಯ್ಕೆಯಾಗಿ ವಿಮರ್ಶಕರು ಮತ್ತು ಬಾಕ್ಸ್ ಆಫೀಸ್ ಎರಡರಲ್ಲೂ ಸೈ ಎನಿಸಿಕೊಂಡ ‘ಲಂಚ್ ಬಾಕ್ಸ್’ ಅವಕಾಶ ಪಡೆಯುವ ನಿರೀಕ್ಷೆ ಇತ್ತು. ಅದರ ಬದಲು ಗುಜರಾತಿ ಚಿತ್ರ ಗುಡ್ ರೋಡ್ ಆಯ್ಕೆಯಾದಾಗ ಚಿತ್ರರಂಗದಲ್ಲಿ ವಾಗ್ವಾದಗಳಾದವು. ಲಂಚ್ ಬಾಕ್ಸ್ ಗೆ ಕರಣ್ ಜೋಹರ್ ಅಂಥ ಬಲಾಢ್ಯ ನಿರ್ಮಾಪಕರು ಮತ್ತು ಅನುರಾಗ್ ಕಶ್ಯಪ್ ಥರದ ಪ್ರಶಸ್ತಿ ಸರ್ಕಲ್ಲಿಗೆ ಸೇರಿದ ಮಂದಿಯ ಬೆಂಬಲವಿತ್ತು. ಚಿತ್ರದಲ್ಲಿದ್ದ ಇರ್ಫಾನ್ ಖಾನ್ ರಂಥ ಕಲಾವಿದರು ಅಂತಾರಾಷ್ಟ್ರೀಯವಾಗಿಯೂ ಮನ್ನಣೆ ಪಡೆದವರಾದ್ದರಿಂದ ಆಸ್ಕರ್ ನಲ್ಲಿ ಉತ್ತಮ ಫೈಟ್ ಕೊಡುವ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿತ್ತು. ಗುಡ್ ರೋಡ್ ಚಿತ್ರ ಒಳ್ಳೆಯದೋ, ಅಲ್ಲವೋ ಬೇರೆ ಮಾತು. ಆದರೆ ಲಂಚ್ ಬಾಕ್ಸ್ ನ ವ್ಯಾಪ್ತಿ ಇಲ್ಲದ್ದರಿಂದ ಹೆಸರಿಲ್ಲದೇ ನೇಪಥ್ಯಕ್ಕೆ ಸರೀತು. ಡ್ಯಾನಿ ಬೊಯ್ಲ್ ರಂಥ ವಿದೇಶಿ ನಿರ್ದೇಶಕರ ಕಾರಣದಿಂದ, ಹಾಲಿವುಡ್ ವಿಭಾಗದಲ್ಲೇ ಸ್ಪರ್ಧಿಸಿ ‘ಸ್ಲಮ್ ಡಾಗ್ ಮಿಲಿಯನೇರ್’ ಪ್ರಶಸ್ತಿಗಳನ್ನು ಬಾಚಿತೆಂಬುದು ಉಲ್ಲೇಖಾರ್ಹ.

4) ವಿದೇಶದ ಎಂಟ್ರಿಗಳನ್ನು ಎರಡು ಹಂತದಲ್ಲಿ ಸೋಸಲಾಗುತ್ತದೆ. ಮೊದಲ ಸುತ್ತಿನಲ್ಲಿ ಒಂಬತ್ತು ಚಿತ್ರಗಳು ಆಯ್ಕೆಯಾದರೆ, ಎರಡನೇ ಸುತ್ತಿನಲ್ಲಿ ಜಗತ್ತಿನಾದ್ಯಂತ ಬಂದ ಚಿತ್ರಗಳ ಪೈಕಿ ಐದು ಮಾತ್ರ ಸ್ಪರ್ಧಾಕಣಕ್ಕೆ ಹೋಗುತ್ತವೆ. ಈ ಹಂತದಲ್ಲಿ ಚಿತ್ರದ ಸುತ್ತ ಗಮನ ಸೆಳೆಯುವ ಕ್ಯಾಂಪೇನ್ ಗಳು, ಅಲ್ಲಿನ ಪತ್ರಿಕೆಗಳಲ್ಲಿ ಸಂದರ್ಶನಗಳು, ಪ್ರಚಾರ ಎಲ್ಲವನ್ನೂ ಮಾಡಬೇಕಾಗುತ್ತದೆ. ಇದಕ್ಕೆ ಖರ್ಚಾಗುವ ಹಣ ಅಪಾರ. ಆರ್ಟ್ ಹೌಸ್ ಸಿನಿಮಾಗಳು ಇಲ್ಲಿಯೇ ಕುಸಿದು ಕುಳಿತುಬಿಡುತ್ತವೆ.

5)ಟಾಪ್ 5ರ ಹಂತಕ್ಕೆ ಹೋಗಿದ್ದ ಭಾರತೀಯ ಚಿತ್ರಗಳೆಂದರೆ ಮದರ್ ಇಂಡಿಯಾ, ಸಲಾಂ ಬಾಂಬೆ, ಲಗಾನ್. ಇವ್ಯಾವವೂ ಆಸ್ಕರ್ ಗೆಲ್ಲಲಿಲ್ಲ. ಆದರೆ ಪೈಪೋಟಿಯ ಹಂತದಲ್ಲಿ ಪ್ರಚಾರ- ಸಂದರ್ಶನ- ಲಾಬಿಗಳಿಗೆಲ್ಲ ಲಗಾನ್ ವ್ಯಯಿಸಿದ ಮೊತ್ತವೆಷ್ಟು ಗೊತ್ತೇ? ಇಪ್ಪತ್ತು ಲಕ್ಷ ಡಾಲರ್ ಗಳು!

ಕೆಲವು ಅಪಸ್ವರಗಳ ಹೊರತಾಗಿಯೂ ಆಸ್ಕರ್ ಗೆ ಅದರದ್ದೇ ಮಹತ್ವವಿರುವುದನ್ನು ಅಲ್ಲಗೆಳೆಯುವುದಕ್ಕೆ ಆಗುವುದಿಲ್ಲ. ನಮ್ಮಲ್ಲಿನ ಹಾಗೆ ಅಕಾಡೆಮಿ ಅವಾರ್ಡ್ ಗಳೆಂದರೆ ಜನ ನೋಡದ ಚಿತ್ರಗಳಿಗೆ ಕೊಡೋದು ಅನ್ನೋ ಪರಿಕಲ್ಪನೆ ಅಲ್ಲಿಲ್ಲ. ಆದರೆ ಆಸ್ಕರ್ ನಲ್ಲಿ ಪೈಪೋಟಿಗೆ ಇಳಿಯಬೇಕೆಂದರೆ ಚಿತ್ರವೂ ಶ್ರೀಮಂತವಾಗಿರಬೇಕು, ಪ್ರಚಾರವೂ ದುಬಾರಿಯದ್ದಾಗಿರಬೇಕು. ಅದೇ ಭಾರತದ ಸಮಸ್ಯೆ!

1 COMMENT

Leave a Reply