ಮಂಗಳನಲ್ಲಿ ನೀರಿದೆ, ಹೌದಾ ಏನೀವಾಗ?

(ಆಧಾರ- ದ ಕನ್ವರ್ಸೇಷನ್ ಜಾಲತಾಣ)

ಮಂಗಳನಲ್ಲಿ ನೀರಿನ ಕುರುಹು ಇದೆ ಅಂತ ಸೆಪ್ಟೆಂಬರ್ 29ರಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ‘ನಾಸಾ’ ಸಾರಿತು. ಮಂಗಳನಲ್ಲಿ ನೀರಿದೆ ಎಂಬ ಉದ್ಗಾರ ಮೊದಲ ಬಾರಿಯದ್ದೇನಲ್ಲ. ಅಲ್ಲಿ ಇಳಿಸಿರುವ ಕ್ಯೂರಿಯಾಸಿಟಿ ಶೋಧಯಂತ್ರ ಕಳುಹಿಸಿಕೊಡುತ್ತಿರುವ ಮಾಹಿತಿಯನ್ನು ವಿಶ್ಲೇಷಿಸುತ್ತ, ಮಂಗಳ ಗ್ರಹದಲ್ಲಿ ನೀರಿದೆ ಅಂತ ಈ ಮೊದಲೂ ಹೇಳಲಾಗಿತ್ತು. ಈ ಬಾರಿ ಹೇಳುತ್ತಿರುವುದು, ಮಂಗಳ ಗ್ರಹದ ಶಿಲೆಗಳಲ್ಲಿ ಮೂಡಿರುವ ಕಪ್ಪು ಗೆರೆಗಳನ್ನು ಅಧ್ಯಯನ ಮಾಡಿದಾಗ ಅಲ್ಲಿ ಲವಣಾಂಶದ ನೀರು ಇದ್ದಿರುವ ಸಾಧ್ಯತೆ ದಟ್ಟವಾಗಿದೆ ಅಂತ.

ಅದ್ಯಾವ ರೂಪದಲ್ಲಾದ್ರೂ ನೀರು ಇದ್ದರ್ಲಿ. ಅದರರ್ಥ ಏನು? ಈ ಸಾಧ್ಯತೆಯನ್ನು ನಾವು ಹೇಗೆ ವ್ಯಾಖ್ಯಾನಿಸಬೇಕು ಎಂಬುದಷ್ಟೇ ನಮ್ಮೆದುರಿಗಿನ ಪ್ರಶ್ನೆ.

  • ಜಲದ ಕಣ್ಣು ಮಿನುಗುತ್ತಿದೆ ಎಂದಾಕ್ಷಣ ಅದು ವಾಸಯೋಗ್ಯ ಅಂತಲ್ಲ. ಅತಿನೇರಳೆ ಕಿರಣಗಳಿಂದ ಕೂಡಿರುವ ಅಂಗಾರಕನ ಎದೆಯಲ್ಲಿ ಪಸೆಯಿದ್ದರೂ ಜೀವಿಗಳನ್ನು ಕ್ಷಣಮಾತ್ರದಲ್ಲಿ ಕೊಲ್ಲುವ ವಾತಾವರಣ ರೂಪುಗೊಂಡಿರುತ್ತದೆ. ಆದರೆ, ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಯಾವುದಾದರೂ ಸೂಕ್ಷ್ಮಜೀವಿ ಹೋರಾಡಿಕೊಂಡಿದೆಯಾ ಎಂಬುದರ ಅಗೆತಕ್ಕೆ ವಸ್ತು ಸಿಕ್ಕಂತಾಗಿದೆ.
  • ಕಲ್ಲುಗಳಲ್ಲಿರುವ ದ್ರವರೂಪ ಮಂಗಳನ ಇನ್ಯಾವುದಾದರೂ ಭಾಗದಲ್ಲಿ ಜಲಬುಗ್ಗೆಯಾಗಿ ಎದ್ದಿಹುದಾ? ಆ ನಿರ್ದಿಷ್ಟ ಪ್ರದೇಶವೇನಾದರೂ ಅತಿನೇರಳೆ ಕಿರಣಗಳಿಂದ ಅಬಾಧಿತವಾಗಿ ಇರುವ ವಾತಾವರಣ ಹೊಂದಿಹುದಾ ಎಂಬುದೆಲ್ಲ ರೋಚಕ ಸಾಧ್ಯತೆ ಮತ್ತು ಆಶಾವಾದಗಳನ್ನು ಜೀವಂತ ಇಟ್ಟಿರುವ ಜಿಜ್ಞಾಸೆಗಳು.
  • ಅಲ್ಲಿ ಜೀವ ಇದೆಯಾ ಎಂಬುದಕ್ಕಿಂತ ಹೆಚ್ಚಾಗಿ, ಈ ನೀರಿನ ಇರುವಿಕೆಯು ಭವಿಷ್ಯದ ಮಾನವ ಅನ್ವೇಷಣೆಗೆ ಪೂರಕವಾಗಿದೆ. ಒಂದೊಮ್ಮೆ, ಅತಿನೇರಳೆ ಕಿರಣಗಳಿಂದ ರಕ್ಷಿಸಿಕೊಂಡು ಮಂಗಳನಲ್ಲಿ ಇಳಿಯುವುದಕ್ಕೆ ಬಾಹ್ಯಾಕಾಶ ಯಾತ್ರಿಗೆ ಸಾಧ್ಯವಾದರೆ, ಅಲ್ಲಿ ನೀರಿನ ಮೂಲದಿಂದ ಆಮ್ಲಜನಕ ಬೇರ್ಪಡಿಸಿ ಉಪಯೋಗಿಸಿಕೊಳ್ಳುವ ಸಾಧ್ಯತೆಯನ್ನು ಇದು ತೆರೆದಿರಿಸಿದೆ. ನೀರಿದೆ ಅಂತಾದರೆ ಅಲ್ಲಿ ರಾಕೆಟ್ ಇಂಧನಕ್ಕೆ ಉಪಯೋಗಿಸುವ ಅಂಶಗಳಾದ ಆಕ್ಸಿಜನ್ ಮತ್ತು ಹೈಡ್ರೊಜನ್ ಗಳು ಇವೆ ಅಂತಾಯ್ತು. ಇಂಥ ಸಣ್ಣಪುಟ್ಟ ಸಂಗತಿಗಳೂ ಬಾಹ್ಯಾಕಾಶ ವಿಜ್ಞಾನಿಗಳಿಗೆ ನಿಧಿ ಸಿಕ್ಕಂತೆ ಏಕೆಂದರೆ, ಇಲ್ಲಿಂದ ಮಂಗಳನವರೆಗೆ ಕೊಂಡೊಯ್ಯುವ ಪ್ರತಿ ಒಂದು ಕೆಜಿಗೆ ವ್ಯಯಿಸಬೇಕಾದ ವೆಚ್ಚ 30 ಲಕ್ಷ ಡಾಲರ್ ಗಳು! ಹೀಗಾಗಿ ಮಂಗಳನಲ್ಲಿ ಆಕ್ಸಿಜನ್, ಹೈಡ್ರೊಜನ್ ಲಭ್ಯತೆ ಮತ್ತು ಅವುಗಳಿಂದ ಅಭಿವೃದ್ಧಿಪಡಿಸಿಕೊಳ್ಳಬಹುದಾದ ಪರಿಕರಗಳನ್ನು ಊಹಿಸಿಕೊಂಡಾಗ ಭವಿಷ್ಯದ ಮಂಗಳಾನ್ವೇಷಣೆಗಳ ವೆಚ್ಚ ಅಷ್ಟರಮಟ್ಟಿಗೆ ತಗ್ಗಬಹುದಾದ ಸೂಚನೆ ಸಿಗುತ್ತದೆ.
  • 2020ರಲ್ಲಿ ಕ್ಯೂರಿಯಾಸಿಟಿ ಥರದಲ್ಲೇ ಇನ್ನೊಂದು ಯಂತ್ರವನ್ನು ಅಮೆರಿಕವು ಮಂಗಳನಲ್ಲಿ ಇಳಿಸಲಿದೆ. ಅದು ಮಂಗಳದ ಇನ್ನಷ್ಟು ಪ್ರಪಾತ- ಓರೆಕೋರೆಗಳಲ್ಲೂ ಸಂಚರಿಸುವ ಹಾಗೂ ವಾತಾವರಣದಿಂದ ಆಮ್ಲಜನಕವನ್ನು ಹೀರಿಕೊಂಡು ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಅದು ಮೇಲ್ಪದರದ ಅಡಿಯನ್ನೂ ಶೋಧಿಸುವ ಬಲ ಹೊಂದಿರುತ್ತದಾದ್ದರಿಂದ, ಜೀವವ್ಯವಸ್ಥೆಯ ಯಾವುದೇ ಕುರುಹಿದ್ದರೂ ತಿಳಿಯಲಿದೆ.
  • ಮುಂದಿನ ವರ್ಷ ನಾಸಾವು ಮಂಗಳಕ್ಕೆ ‘ಇನ್ ಸೈಟ್’ ಮಿಷನ್ ಬಿಡಲಿದೆ. ಫ್ರೆಂಚ್ ಬಾಹ್ಯಾಕಾಶ ಏಜೆನ್ಸಿ ರೂಪಿಸಿದ ಸೂಕ್ಷ್ಮ ಸೆಸ್ಮೊಮೀಟರ್ ಇದರ ಭಾಗ. ಅದು ಮಂಗಳನ ಅಂತರಂಗಕ್ಕೆ ಇಳಿದು ಮಾಹಿತಿ ಕಲೆಹಾಕಲಿದೆ.

ಹೀಗಾಗಿ, ಮಂಗಳನಲ್ಲಿ ನೀರಿನಂಶ ಪತ್ತೆ ಎಂಬುದು ಅದನ್ನು ವಾಸಯೋಗ್ಯವಾಗಿಸದಿದ್ದರೂ ಮುಂದಿನ ಮಹಾ ಅನ್ವೇಷಣೆಗಳಿಗೆ ಶುಭಸೂಚನೆ ಎನ್ನಬಹುದು.

Leave a Reply