‘ಮೇಕ್ ಇನ್ ಇಂಡಿಯಾ’ ವನ್ನು ಬೇಳೆಕಾಳು ಕೃಷಿಗೂ ಅನ್ವಯಿಸಬಾರದೇ ಪ್ರಧಾನಿ ಮೋದಿ?

ನಾಗರಾಜ

ತಮಾಷೆ ಅಲ್ವೇ ಅಲ್ಲ! ಭಾರತದಲ್ಲೇ ತಯಾರಿಸಿ ಎಂಬ ಕೈಗಾರಿಕಾ ಅಭಿಯಾನವು ಉದ್ಯೋಗಾವಕಾಶ- ಆ ಮೂಲಕ ಬದುಕಿನ ನಿರ್ಮಾಣಕ್ಕೆ ಹೇಗೆ ಸಹಕಾರಿಯಾಗಬಲ್ಲುದೋ, ನಮ್ಮ ದೇಹಕ್ಕೆ ಪ್ರೋಟಿನ್ ಪೂರೈಕೆಯ ಮುಖ್ಯ ಆಕದವಾದ ಬೇಳೆಕಾಳು- ಧವಸಧಾನ್ಯಗಳ ಬೆಳೆ ಹೆಚ್ಚಿಸುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿರುವುದೂ ಅತಿ ಪ್ರಮುಖ ಮತ್ತು ತುರ್ತಿನ ವಿಷಯವೇ ಆಗಿದೆ.

ಸಾಮಾನ್ಯನ ಆಹಾರದ ಮುಖ್ಯ ಪದಾರ್ಥಗಳಾದ ತೊಗರಿಬೇಳೆ, ಉದ್ದಿನ ಬೇಳೆ ಮತ್ತು ಎಣ್ಣೆಧಾನ್ಯಗಳೆಲ್ಲ ಮಾರುಕಟ್ಟೆಯಲ್ಲಿ ಬಲು ದುಬಾರಿಯಾಗಿ ಬೊಬ್ಬೆ ಎದ್ದಿದೆ. ಇದು ಆಗಾಗ ಘಟಿಸುವ ವಿದ್ಯಮಾನವೇ ಆದರೂ ಈ ಬಾರಿಯ ಬಿಸಿ ಹೆಚ್ಚಿನದೇ. 2014ರ ಜೂನ್ ನಲ್ಲಿ ಕೆಜಿಗೆ 76 ರುಪಾಯಿ ಇದ್ದ ತೊಗರಿ ಬೇಳೆ, 2015ರ ಜೂನ್ ನಲ್ಲಿ ಕೆಜಿಗೆ ನೂರು ರುಪಾಯಿಗಳಾಗಿ, ಅಕ್ಟೋಬರ್ ವೇಳೆಗೆಲ್ಲ ಕೆಜಿಗೆ 170-180 ರುಪಾಯಿಗಳಿಗೆ ಮುಟ್ಟಿದೆ. ಅಂದಮೇಲೆ ಆಹಾರಧಾನ್ಯದ ಆಮದು ಅವಲಂಬನೆಯನ್ನು ತಪ್ಪಿಸಿಕೊಂಡು, ಭಾರತದಲ್ಲಿ ಇದರ ಉಪಭೋಗಕ್ಕೆ ಸಾಕಾಗುವಷ್ಟು ಉತ್ಪಾದನೆ ಪ್ರಮಾಣ ಹೆಚ್ಚಿಸಬೇಡವೇ? ನಮ್ಮದು ಕೃಷಿ ಪ್ರಧಾನ ದೇಶ ಅಂತ ಬೊಬ್ಬೆ ಹಾಕಿಕೊಂಡು, ಅಕ್ಕಿ ಮತ್ತು ಗೋಧಿ ಮಾತ್ರ ಬೆಳೆದುಕೊಂಡಿರುವ ಪರಿಪಾಠ ಮೋದಿಯುಗದಲ್ಲೂ ಮುಂದುವರಿಯಬೇಕೇ? ವಿಮರ್ಶೆಗಿದು ಸಕಾಲ.

  • ಭಾರತದಲ್ಲಿ ಬೇಳೆಕಾಳುಗಳ ಉಪಭೋಗ ಅಂದಾಜು 27 ಮಿಲಿಯನ್ ಟನ್. ಆದರೆ ಆಂತರಿಕ ಉತ್ಪಾದನೆ ಸರಾಸರಿ 17 ಮಿಲಿಯನ್ ಟನ್ ಮಾತ್ರ.
  • ಮಳೆಯಲ್ಲಾಗುವ ಏರುಪೇರು, ದಲ್ಲಾಳಿಗಳ ಕಳ್ಳಾಟಗಳೆಲ್ಲ ಧಾನ್ಯಗಳ ಬೆಲೆ ಏರಿಕೆಗೆ ಕಾರಣಗಳಾಗಿವೆ ಎಂಬುದೂ ನಿಜ. ಆದರೆ ಇವನ್ನೇ ಮುಖ್ಯ ಕಾರಣಗಳನ್ನಾಗಿಸುವಂತಿಲ್ಲ. ಏಕೆಂದರೆ ಇಂಥ ಸಮಸ್ಯೆಗಳು ಬೇರೆ ಬೆಳೆ- ಉತ್ಪನ್ನಗಳಿಗೂ ಇವೆಯಲ್ಲ? ವಾಸ್ತವ ಏನೆಂದರೆ, ಬೇಳೆ-ಕಾಳುಗಳ ಬೆಳೆ ಪ್ರಗತಿಗೆ ಉತ್ತೇಜಕ ಕ್ರಮಗಳನ್ನು ಕೈಗೊಳ್ಳುವಲ್ಲಿ ನಾಲ್ಕು ದಶಕದ ಸರ್ಕಾರಗಳು ವಿಫಲವಾಗಿವೆ. ಬಹುಬೆಳೆಗೆ ಬದಲಾಗಿ ಹೆಕ್ಟೇರುಗಟ್ಟಲೇ ಪ್ರದೇಶಗಳಲ್ಲಿ ಗೋಧಿ- ರಾಗಿಯನ್ನೇ ಬೆಳೆದು ‘ಹಸಿರು ಕ್ರಾಂತಿ’ ಮಾಡಿದ್ದೇನೋ ಹೌದು. ಆದರೆ ದೇಹಕ್ಕೆ ಶಕ್ತಿ ಪೂರೈಕೆಯ ಮುಖ್ಯ ಆಕರಗಳಾದ ಆಹಾರ ಧಾನ್ಯ, ಎಣ್ಣೆ ಕಾಳುಗಳ ಕೃಷಿ ಕಡಗಣನೆಯಾಗಿದ್ದು, ಆ ಮೂಲಕ ದೀರ್ಘಾವಧಿಯಲ್ಲಿ ಮಣ್ಣಿನ ಫಲವತ್ತತೆ ನಾಶವಾಗಿದ್ದೂ ಅಷ್ಟೇ ನಿಜ.
  • ಬೇಳೆಕಾಳುಗಳ ಆಮದಿಗಾಗಿ ಸರ್ಕಾರ ವ್ಯಯಿಸುತ್ತಿರುವ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. 2011-14ರ ನಡುವೆ ಕೆನಡಾದಿಂದ ಆಮದು ಮಾಡಿಕೊಂಡ ಧಾನ್ಯದ ಬೆಲೆಯೇ 15, 786 ಕೋಟಿ ರುಪಾಯಿಗಳಾಗುತ್ತವೆ ಎಂದಾದರೆ, ಒಟ್ಟಾರೆ ಧಾನ್ಯಗಳ ಆಮದು ವೆಚ್ಚ ಎಷ್ಟಾದೀತು? 2014-15ರ ಸಾಲಿನಲ್ಲೇ 3.3 ಮಿಲಿಯನ್ ಟನ್ ಗಳಷ್ಟು ಧಾನ್ಯವನ್ನು ಭಾರತ ಆಮದು ಮಾಡಿಕೊಂಡಿದೆ. ಇಷ್ಟು ಬೆಲೆಯ ಆಹಾರ ಧಾನ್ಯಗಳನ್ನು ನಮ್ಮ ರೈತರೇ ಬೆಳೆದು, ಅವರಿಗೇ ಈ ಬೆಲೆ ಸಿಗುವಂತಿದ್ದರೆ, ರೈತರ ಆತ್ಮಹತ್ಯೆ ಎಂಬ ಕರಾಳ ಅಧ್ಯಾಯ ಎಷ್ಟೋ ಚಿಕ್ಕದಾಗುತ್ತಿತ್ತಲ್ಲವೇ?
  • ಹತ್ತಿಯಂಥ ಬೆಳೆಗೆ ಸಿಗುವ ಕನಿಷ್ಠ ಬೆಂಬಲ ಬೆಲೆಯಂಥ ನೀತಿ, ಬೇಳೆಕಾಳುಗಳ ವಿಷಯದಲ್ಲಿ ಸ್ಪಷ್ಟತೆ ಹೊಂದಿಲ್ಲ. ಹೀಗಾಗಿ ರೈತರಿಗೆ ಈ ಪ್ರಯೋಗಕ್ಕೆ ಮುಂದಾಗಲು ಭಯವಿದೆ. ಅಲ್ಲದೇ ದಾಸ್ತಾನು ವ್ಯವಸ್ಥೆಯಲ್ಲಿ ಆಗಬೇಕಿರುವ ಸುಧಾರಣೆ ಬಹಳಷ್ಟಿದೆ. ಅಕ್ಕಿ- ಗೋಧಿಗಳು ಸರ್ಕಾರಿ ದಾಸ್ತಾನುಗಳಲ್ಲಿ ಹುಳ ಹಿಡಿಯುತ್ತಿವೆ ಎಂಬಂಥ ಸುದ್ದಿಗಳು ಆಗಾಗ ವರದಿಯಾಗುತ್ತಿರುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಬೇಳೆಕಾಳುಗಳನ್ನು ಸಂಗ್ರಹಿಸುವ ಮೂಲ ಸೌಕರ್ಯವೇ ಬಹಳ ಹಿಂದೆ ಬಿದ್ದಿದೆ. ಆಹಾರ ಧಾನ್ಯಗಳ ಉತ್ಪಾದನೆ ಪ್ರಮಾಣವು ಆಂತರಿಕ ಬೇಡಿಕೆಗಿಂತ ಬಹಳ ಕಡಿಮೆ ಇರುವುದು ನಿಚ್ಚಳವಾಗಿರುವಾಗ, ರೈತರಿಗೆ ಬೆಂಬಲ ಬೆಲೆ ನೀಡಿ ಖರೀದಿಸಿ, ನಂತರದ ಕೊರತೆಯನ್ನು ಆಮದಿನ ಮೂಲಕ ಪೂರೈಸಿಕೊಳ್ಳುವತ್ತ ಯೋಚಿಸಬೇಕಲ್ಲವೇ?

ಪ್ರಧಾನಿಯವರ ವಿದೇಶ ಪ್ರವಾಸ, ಜಾಗತಿಕವಾಗಿ ಭಾರತವನ್ನು ಸಶಕ್ತವನ್ನಾಗಿಸುತ್ತಿರುವ ಬಗೆ ಇವೆಲ್ಲವೂ ಪ್ರಶಂಸಾರ್ಹವೇ. ಆದರೆ ಅಂಥ ಆಸಕ್ತಿಯ ತುಸು ಗಮನವನ್ನಾದರೂ ಕೃಷಿಯತ್ತಲೂ ಹರಿಸಿ, ತಮ್ಮ ಅವಧಿಯಲ್ಲಿ ಭಾರತವನ್ನು ಆಹಾರ ಧಾನ್ಯಗಳ ಆಮದು ರಾಷ್ಟ್ರದ ಪಟ್ಟಿಯಿಂದ ಹೊರ ತಂದು ಆಂತರಿಕ ಸಮೃದ್ಧಿ ಸಾಧಿಸುವ ಪ್ರಯತ್ನಕ್ಕೆ ಇಂಬು ಕೊಟ್ಟರೆ ಜನಸಾಮಾನ್ಯನಿಗೆ ಮಾಡುವ ನಿಜ ಸೇವೆ ಅದಾಗಲಿದೆ.

 

Leave a Reply