ಸೂಪರ್ ಪವರ್ ಆಗೋಕೆ ಆರೋಗ್ಯ ಸಹಕರಿಸದೆಂಬ ಶಂಕೆಗೆ 4 ಕಾರಣಗಳು

Blood pressure measuring studio shot

 

ಡಿಜಿಟಲ್ ಕನ್ನಡ ತಂಡ

ಹಲವು ದಶಕಗಳ ನಂತರ ಕೇಂದ್ರದಲ್ಲಿ ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಹಾಗೂ ನರೇಂದ್ರ ಮೋದಿಯವರಲ್ಲಿ ದೇಶದ ಬಹುಸಂಖ್ಯೆಯ ಜನ ಸಶಕ್ತ ನಾಯಕತ್ವವನ್ನು ಕಾಣುತ್ತಿರುವುದರಿಂದ, ಭಾರತವು 2020 ವೇಳೆಗೆ ಸೂಪರ್ ಪವರ್ ಎನ್ನಿಸಿಕೊಳ್ಳಬೇಕೆಂಬ ಕನಸಿಗೆ ಮತ್ತಷ್ಟು ಪುಕ್ಕ ಬಂದಿದೆ. ದೇಶದಲ್ಲಿ ಮಾತ್ರವಲ್ಲದೇ, ಜಗತ್ತಿನ ಮಟ್ಟದಲ್ಲಿ ಎಲ್ಲ ನಾಯಕರು ಜಿಡಿಪಿ, ಬೆಳವಣಿಗೆ ದರ, ಕೊಳ್ಳುವ ಶಕ್ತಿ, ಹೂಡಿಕೆ ಎಂಬ ಶಬ್ದಗಳಲ್ಲೇ ಮಾತನಾಡುತ್ತಾರೆ. ಹೀಗೆ ಕಣ್ಸೆಳೆಯುತ್ತಿರುವ ಅರ್ಥ ವ್ಯವಸ್ಥೆಗಳ ಪೈಕಿ ಭಾರತವೂ ಮುಂಚೂಣಿಯಲ್ಲಿದೆ ಎಂಬುದು ಹೆಮ್ಮೆಯ ಸಂಗತಿಯೇ.

ಈಗೊಂದು ಪ್ರಶ್ನೆ. ಯಾವುದೇ ದೇಶ ಬೆಳೆಯುವ ಭರದಲ್ಲಿ ಒಳಗೆ ಟೊಳ್ಳಾಗುತ್ತ ಸಾಗಿದರೆ, ನಂತರ ಫಲವನ್ನು ಅನುಭವಿಸೀತಾದರೂ ಹೇಗೆ? ಇದು ಕುಹಕದ ಪ್ರಶ್ನೆ ಅಲ್ಲ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ಅವರು 2015ರ ರಾಷ್ಟ್ರೀಯ ಆರೋಗ್ಯ ಪರಿಚಯ ವರದಿಯನ್ನು ಬಿಡುಗಡೆ ಮಾಡಿದರು. ಅದರಲ್ಲಿ ಹಲವಾರು ದಿಗಿಲಿಗೆ ಬೀಳಿಸುವ ಅಂಕಿಅಂಶಗಳಿವೆ.

  1. ಮುಖ್ಯವಾಗಿ ನಮ್ಮಲ್ಲಿ ವೈದ್ಯರು ಮತ್ತು ರೋಗಿಗಳ ಅನುಪಾತದಲ್ಲಿ ಒಂದಿನಿತೂ ತಾಳೆಯಿಲ್ಲ. ಪ್ರತಿ 11 ಸಾವಿರ ಮಂದಿಗೆ ಒಬ್ಬ ಸರ್ಕಾರಿ ಅಲೋಪಥಿ ವೈದ್ಯರು ಲಭ್ಯರಿದ್ದಾರೆ. ಭಾರತದ ಅಗಾಧ ಜನಸಂಖ್ಯೆಗೆ ಹೋಲಿಸಿದರೆ ಸರ್ಕಾರಿ ವ್ಯವಸ್ಥೆಯ ಎಲ್ಲ ಲಭ್ಯತೆಗಳೂ ಕುಬ್ಜವಾಗಿಯೇ ಕಾಣುತ್ತವೆ. 9,38, 861 ಅಲೋಪಥಿ ವೈದ್ಯರು, 7,36,538 ಆಯುಷ್ ವೈದ್ಯರು, 2,56,6067 ದಾದಿಯರು ಕಳೆದ ಜೂನ್ ವರೆಗೆ ನೋಂದಣಿಗೊಂಡವರು. ಸರ್ಕಾರಿ ಆಸ್ಪತ್ರೆಗಳ ಸರಾಸರಿ ಲೆಕ್ಕ ತೆಗೆದುಕೊಂಡರೆ 1833 ಜನರಿಗೆ ಒಂದು ಹಾಸಿಗೆ ಲಭ್ಯ.
  2. ಆಧುನಿಕರೂ, ಬೆಳವಣಿಗೆ ಪ್ರಿಯರೂ ಆಗುತ್ತಿದ್ದಂತೆ ಇನ್ನಿಲ್ಲದಂತೆ ಹಾಳಾಗಿರುವುದೆಂದರೆ ವಾತಾವರಣ; ನಾವು ಸೇವಿಸುವ ಗಾಳಿ. ಶ್ವಾಸಕೋಶದ ಸೋಂಕು ಮತ್ತು ಉಸಿರಾಟದ ತೊಂದರೆಯ ಅನಾರೋಗ್ಯಗಳು ಗಣನೀಯವಾಗಿ ಹೆಚ್ಚುತ್ತಿವೆ. ವಾಯುಮಾಲಿನ್ಯದಿಂದಾದ ಶ್ವಾಸಕೋಶ ಸೋಂಕಿನಿಂದಾಗಿ ಬಳಲಿದ 3,48,14,636 ಪ್ರಕರಣಗಳು 2014ರಲ್ಲಿ ವರದಿಯಾಗಿದ್ದವು. ಅದೇ ವರ್ಷ ಆ ಸಮಸ್ಯೆಯಿಂದಾಗಿ ಪ್ರಾಣ ತೆತ್ತವರು 2932 ಮಂದಿ.
  3. ಬೆಳವಣಿಗೆ ದೌಢಿನಲ್ಲಿ ದೇಶವಾಸಿಗಳು ಇನ್ನಿಲ್ಲದ ಒತ್ತಡಕ್ಕೂ ಒಳಗಾಗುತ್ತಿದ್ದಾರೆಯೇ? 5,59,718 ಕ್ಕೆ ನಿಂತಿರುವ ಮಧುಮೇಹ ರೋಗಿಗಳ ಸಂಖ್ಯೆ ನೋಡಿದಾಗ ಹಾಗನಿಸುತ್ತದೆ. 2015ರ ಆರೋಗ್ಯ ವರದಿಯಲ್ಲಿ ಎಲ್ಲ ರಾಜ್ಯಗಳ ಮಾಹಿತಿ ಸಂಗ್ರಹವಾಗಿಲ್ಲ. ಲಭ್ಯವಿರುವಷ್ಟೇ ಅಂಕಿಅಂಶಗಳನ್ನು ಗಮನಿಸಿದಾಗ 1,61,578 ಮಧುಮೇಹಿಗಳನ್ನು ಹೊಂದಿರುವ ಗುಜರಾತ್ ಅಗ್ರಸ್ಥಾನದಲ್ಲಿ ನಿಂತಿದೆ. ಹೈಪರ್ ಟೆನ್ಶನ್ ವ್ಯಾಧಿಗೆ ತುತ್ತಾಗುತ್ತಿರುವವರ ಮಾರ್ಚ್ ವರೆಗೆ ಲಭ್ಯವಿರುವ ಅಂಕಿಅಂಶ ತೆಗೆದುಕೊಂಡರೆ ಅದು 7,15,382ಕ್ಕೆ ನಿಲ್ಲುತ್ತದೆ ಹಾಗೂ ಇದರಲ್ಲೂ 1,59,150 ಪ್ರಕರಣಗಳೊಂದಿಗೆ ಗುಜರಾತ್ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.
  4. ಮುಂದಿನ 5 ವರ್ಷಗಳಲ್ಲಿ ಭಾರತದ ಕ್ಯಾನ್ಸರ್ ರೋಗಿಗಳ ಪ್ರಮಾಣ ಶೇ. 20ರಷ್ಟು ಹೆಚ್ಚಲಿದೆ ಹಾಗೂ ಮಹಿಳೆಯರೇ ಇದಕ್ಕೆ ಹೆಚ್ಚಿನದಾಗಿ ಬಲಿಯಾಗಲಿದ್ದಾರೆ ಎನ್ನುತ್ತದೆ ಅಂದಾಜು ವರದಿ. ಪುರುಷರ ವಿಷಯದಲ್ಲಿ ಬಾಯಿ ಕ್ಯಾನ್ಸರ್ ಉಲ್ಬಣವಾಗುವ ಸೂಚನೆ ಇದ್ದರೆ ಮಹಿಳೆಯರಲ್ಲಿ ಪುಪ್ಪುಸದ ಕ್ಯಾನ್ಸರ್ ಹೆಚ್ಚಾಗುವ ಅಂದಾಜಿದೆ.

Leave a Reply