ಸೆಲೆಬ್ರಿಟಿ ಟೇಸ್ಟುಗಳು ಹೆಂಗೆಲ್ಲ ಇರುತ್ತಪ್ಪಾ?

 

ಡಿಜಿಟಲ್ ಕನ್ನಡ ಟೀಮ್

ಮಸಾಬಾ ಗುಪ್ತ 26ರ ಹರೆಯದ ಫ್ಯಾಷನ್ ಡಿಸೈನರ್. ವೆಸ್ಟ್ ಇಂಡೀಸ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಹಾಗೂ ಭಾರತದ ನೀನಾ ಗುಪ್ತ ಜೋಡಿಯ ಕುಡಿ ಈಕೆ. ಮಸಾಬಾ ಎಂಬ ಬ್ರಾಂಡ್ ಹೆಸರಲ್ಲಿ ತನ್ನದೇ ವಸ್ತ್ರ ವಿನ್ಯಾಸ ಉತ್ಪನ್ನಗಳನ್ನು ಹೊಂದಿರುವ ಈಕೆ, ದೇಶದ ಯುವ ಫ್ಯಾಷನ್ ಡಿಸೈನರ್ ಗಳ ಸಾಲಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.

ಈ ಫ್ಯಾಷನ್ ಡಿಸೈನ್ ಎಂಬ ಕ್ಷೇತ್ರವೇ ಒಂಥರ ಸೆಲೆಬ್ರಿಟಿಗಳ ಲೋಕಕ್ಕೆ ಸಂಬಂಧಿಸಿದ್ದು, ನಾವು ಬಟ್ಟೆ ಬೇಕಾದ್ರೆ ಮಾಲ್ ಅಥವಾ ಅಂಗಡಿಗೆ ಹೋಗ್ತೀವಿ ಅಥ್ವಾ ಇನ್ನೂ ಹಳೆ ಪೀಳಿಗೆಯ ಕಂಪನ್ನೇ ಇಷ್ಟಪಡೋರು ಅಳತೆ ಕೊಡೋಕೆ ದರ್ಜಿ ಹತ್ರ ಹೋಗ್ತಾರೆ- ಅಂತ ನೀವು ತಲೆ ಕೊಡವ್ತೀರೇನೋ? ಆದ್ರೂ ಸ್ವಾರಸ್ಯ ಒಂದಿದೆ ಕೇಳಿ…

ಜೂನ್ ತಿಂಗಳಿನಲ್ಲಷ್ಟೇ ಮದುವೆಯಾಗಿದ್ದ ಮಸಾಬಾ ಗುಪ್ತ, ಈಗ ನವೆಂಬರ್ 22ರಂದು ಮತ್ತೆ ಮದ್ವೆ ಆಗಿದ್ದಾರೆ! ಮತ್ತೆ ಮದ್ವೆ ಅಂದ್ರೆ ಇನ್ನೊಬ್ರನ್ನಲ್ಲ, ಜೂನ್ 2ರಂದು ಮುಂಬಯಿಯಲ್ಲಿ ಫಿಲ್ಮ್ ಮೇಕರ್ ಮಧು ಮಂಟೆನಾ ಅವರನ್ನು ವರಿಸಿದ್ದರಲ್ಲ, ಅದನ್ನೇ ರಿಪೀಟ್ ಮಾಡಲಿದ್ದಾರೆ.

ಅರೆ ಇದೊಳ್ಳೆ ಖಯಾಲಿ ಆಯ್ತಲ್ಲ, ಅಂತೀರಾ? ಅದಕ್ಕೆ ಮಸಾಬಾ ಗುಪ್ತ ಕಾರಣವನ್ನೂ ಕೊಟ್ಟಿದ್ದಾರೆನ್ನಿ. ‘ಮಾರ್ಚ್ ನಲ್ಲಿ ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡು ಜೂನ್ ನಲ್ಲಿ ಮದುವೆಯಾದೆವು ನಿಜ. ಆದರೆ ಅದು ತುಂಬ ಅರ್ಜೆಂಟಾಗಿ ಮಾಡಿಕೊಂಡ ಮದುವೆಯಾಗಿತ್ತು. ಆರೇ ಜನರ ಸಮ್ಮುಖದಲ್ಲಿ ವಿವಾಹವಾದಾಗ ನಾನು ಜೀನ್ಸ್ ಹಾಕ್ಕೊಂಡಿದ್ದೆ. ಆಮೇಲೆ ನಂಗೆ ವಧುವಿನಂತೆ ಸಿಂಗಾರ ಮಾಡಿಕೊಂಡು ಮದುವೆ ಆಗ್ಬೇಕಿತ್ತು ಅನಿಸಿತು. ಹೀಗಾಗಿ ಶಾಪಿಂಗ್ ಎಲ್ಲ ಮಾಡಿ ತಯಾರಾಗಿ, ನನ್ನದೇ ಡಿಸೈನ್ ಬ್ರಾಂಡ್ ಹಾಗೂ ಬೇರೆ ವಿನ್ಯಾಸಗಾರರದ್ದೂ ಉತ್ಪನ್ನವನ್ನೆಲ್ಲ ಖರೀದಿಸಿ ಸಿಂಗಾರ- ಸಡಗರದಿಂದ ಮತ್ತೊಮ್ಮೆ ಮದುವೆ ಆಗ್ಬೇಕಾಯ್ತು’ ಅನ್ನೋದು ಮಸಾಬಾ ಗುಪ್ತ ಉವಾಚ!

ಸೆಲೆಬ್ರಿಟಿಗಳ ಆಟಗಳು ಹೆಂಗೆಲ್ಲ ಇರ್ತವೆ ನೋಡಿ. ಸಾಮಾನ್ಯರಿಗೆ ಒಂದು ಮದುವೆ ಆಗಿ ಅದರ ಸಾಲ ತೀರಿಸಿಕೊಳ್ಳುವುದೇ ಕಷ್ಟದ ಮಾತಾಗಿರುವಾಗ, ಇವ್ರಿದ್ದೇ ಒಂದ್ ನಮೂನಿ ಲೈಫು. ‘ತಾನೀಗ ಬಿಸಿನೆಸ್ ನ ನಂಬರ್ ಗಳ ಬಗ್ಗೆ ತಲೆ ಕೆಡಿಸಿಕೊಂಡಿರಬೇಕಿಲ್ಲ. ಅವನ್ನೆಲ್ಲ ಮಧು ನೋಡಿಕೊಳ್ತಿದಾರೆ. ಬದುಕಿಗೆ ಭಾರೀ ಉತ್ಸಾಹ ಬಂದಿದೆ’ ಅಂತೆಲ್ಲ ಸುಂದರಿ ಉಲಿದಿದ್ದಾಳೆ. ಮದುವೆ ಸಡಗರ ಒಂದಿರಲಿ, ನಾಲ್ಕಿರಲಿ ದಾಂಪತ್ಯದ ಸಮಾಧಾನ ಮಾತ್ರ ನಿರಂತರವಾಗಿರಲಿ ಅಂತ ನಾವಾದ್ರೂ ಹಾರೈಸಬಹುದಾಗಿದೆ.

Leave a Reply