ಹೊಸ ಜಮಾನಾದ ವಿಚ್ಛೇದನ, ಹೇಳ್ತಿರೋದು ಏನನ್ನ?

 

ಬೆಟ್ಟದಮನೆ ಸರಸ್ವತಿ

ತೀರ ಇತ್ತೀಚಿನವರೆಗೆ ವಿಚ್ಛೇದನ ಎಂಬ ಸಂಗತಿ ಬಹಳ ಗದ್ದಲದ ಪ್ರಕ್ರಿಯೆಯಾಗಿತ್ತು. ಸಮಾಜದಲ್ಲಿ ಸುದ್ದಿಯಾಗುವ ಹಂತದಲ್ಲಿರುವವರ ದಾಂಪತ್ಯದಲ್ಲಿ ಬಿರುಕಾದರಂತೂ ಬೀದಿ ಪ್ರಹಸನವೇ ಗ್ಯಾರಂಟಿ ಎಂಬ ದಿನಗಳಿದ್ದವು. ಅವಳದ್ದೇ ತಪ್ಪು ಅಂತ ಈತ, ಇವನೇನು ಕಡಿಮೆ ರಾಕ್ಷಸನಾ ಎಂಬ ಧ್ವನಿಯಲ್ಲಿ ಆಕೆ ಹೀಗೆಲ್ಲ ದೃಶ್ಯಾವಳಿ ತೆರೆದುಕೊಳ್ಳುತ್ತಿತ್ತು. ಅದರಲ್ಲೂ ಸುದ್ದಿವಾಹಿನಿಗಳ ಭರಾಟೆ ಶುರುವಾದಾಗಿನಿಂದ ದಾಂಪತ್ಯದ ಬಿರುಕೆಂಬುದು ವ್ಯಾಪಾರ ಪ್ರಪಂಚಕ್ಕೆ ‘ಇಂದೆನಗೆ ಆಹಾರ ಸಿಕ್ಕಿತು’ ಎಂಬ ಉಮೇದಾಗಿ ಬೆಳೆದುಬಿಟ್ಟಿತ್ತು.

ನಿಧಾನಕ್ಕೆ ಈ ಸ್ಥಿತಿ ಬದಲಾಗ್ತಿದೆಯಾ? ಇತ್ತೀಚಿನ ಕೆಲವು ವಿಚ್ಛೇದನ ಪ್ರಕರಣಗಳನ್ನು ಗಮನಿಸಿದರೆ ಹೌದೆನಿಸುತ್ತದೆ. ಚಿತ್ರನಟ ಸುದೀಪ್ ತಮ್ಮ ದಾಂಪತ್ಯ ಕೊನೆಗೊಳಿಸುವುದಕ್ಕೆ ನಿರ್ಧರಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದಾಗ, ಅದು ರಂಜನೆಯ ಸರಕಾಗದಂತೆ ಎಚ್ಚರಿಕೆ ವಹಿಸಿದರು. ತಮ್ಮ ಪತ್ನಿ ಪ್ರಿಯಾ ಹಾಗೂ ತಾವಿಬ್ಬರೂ ಸಹಮತದಿಂದ ಬೇರ್ಪಡುತ್ತಿರುವುದಾಗಿ ಹೇಳಿ, ಸರಿ- ತಪ್ಪುಗಳ ಬೀದಿಚರ್ಚೆಯಿಂದ ದೂರವುಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಿಂದ ಮದುವೆಯಾದ ರೋಹನ್ ಮೂರ್ತಿ- ಲಕ್ಷ್ಮೀ ವೇಣು ಬೇರೆಯಾಗುತ್ತಿದ್ದಾರೆ, ಕೌಟುಂಬಿಕ ನ್ಯಾಯಾಲಯದಲ್ಲಿದ್ದ ಅವರ ಪ್ರಕರಣ ಅಕ್ಟೋಬರ್ ನಲ್ಲಿ ಕೊನೆಗೊಳ್ಳಲಿದೆ ಅಂತ ಗೊತ್ತಾಗಿದ್ದೇ ಸೆಪ್ಟೆಂಬರ್ ಕೊನೆಯಲ್ಲಿ. ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಪುತ್ರ ರೋಹನ್ ಹಾಗೂ ಟಿವಿಎಸ್ ಮೋಟಾರ್ ನ ಚೇರ್ಮನ್ ವೇಣು ಶ್ರೀನಿವಾಸನ್ ಅವರ ಪುತ್ರಿ ಲಕ್ಷ್ಮೀ ವೇಣು 2011ರಲ್ಲಿ ವಿವಾಹವಾಗಿದ್ದರು. ತಮ್ಮಿಬ್ಬರ ನಡುವೆ ಹೊಂದಾಣಿಕೆ ಕೊರತೆ ಇರುವುದರಿಂದ ಸಹಮತದಿಂದ ಬೇರೆಯಾಗುವ ನಿರ್ಧಾರ ತೆಗೆದುಕೊಳ್ಳುವುದಾಗಿ ದಾವೆಯಲ್ಲಿ ಸೂಚಿಸಿದ್ದಾರೆ.

ಸಿನಿ ಜಗತ್ತಿನ ಜೋಡಿಯಾಗಿದ್ದ ಕೊಂಕಣಾ ಸೇನ್ ಶರ್ಮ ಮತ್ತು ರಣವೀರ್ ಶೌರಿ ಅವರ ದಾಂಪತ್ಯ ಹಳಸಿರುವ ಸುದ್ದಿ ವರ್ಷಗಳಿಂದ ಓಡಾಡುತ್ತಿತ್ತು. ಅದನ್ನು ಸರಿಪಡಿಸಿಕೊಳ್ಳಲು ದಂಪತಿ ಪ್ರಯತ್ನಿಸುತ್ತಿರುವುದೂ ಸುದ್ದಿಯಾಗಿತ್ತು. ಕೊನೆಗೆ ಈ ವರ್ಷದ ಸೆಪ್ಟೆಂಬರ್ ನಲ್ಲಿ ತಾವಿಬ್ಬರೂ ಬೇರೆಯಾಗುತ್ತಿರುವುದಾಗಿ ಇಬ್ಬರೂ ಟ್ವಿಟರ್ ನಲ್ಲಿ ಘೋಷಿಸಿದರು. ಮಗುವನ್ನು ಪೋಷಿಸುವ ಜವಾಬ್ದಾರಿಯನ್ನು ಇಬ್ಬರೂ ಹಂಚಿಕೊಳ್ಳುವುದಾಗಿಯೂ ಟ್ವೀಟಿಸಿಕೊಂಡರು.

ಈ ಎಲ್ಲ ಪ್ರಕರಣಗಳಲ್ಲೂ ಸಾಮಾನ್ಯ ಸಂಗತಿ ಎಂದರೆ, ಬೇಪ್ಡುವ ಸಂದರ್ಭದಲ್ಲಿ ನೀನಾ- ನಾನಾ ಎಂಬ ಸಾರ್ವಜನಿಕ ಸಂಘರ್ಷ ಆಗದಂತೆ ನೋಡಿಕೊಂಡ ರೀತಿ. ಹೇಗಂದರೂ ಬೇರೆ ಆಗುತ್ತೇವೆಂದಮೇಲೆ, ಬಹಿರಂಗವಾಗಿ ಕೊಳೆಬಟ್ಟೆ ಒಗೆದುಕೊಂಡು ಇಬ್ಬರೂ ಹಗುರಾಗುವುದೇಕೆ ಎಂಬ ಪ್ರೌಢ ತೀರ್ಮಾನ. ಹಾಗಂತ ಇಲ್ಲಿ ಕಹಿಭಾವ- ನೋವುಗಳೆಲ್ಲ ಇರುವುದೇ ಇಲ್ಲ ಅಂತಲ್ಲ. ಆದರೆ ಅದನ್ನು ನಿಭಾಯಿಸುವ ರೀತಿಯಲ್ಲಿ ಪ್ರೌಢಿಮೆ ರೂಪುಗೊಳ್ಳುತ್ತಿದೆ.

ಸಾಮಾನ್ಯರ ವಿಷಯದಲ್ಲೂ ವಿಚ್ಛೇದನ ಎಂದರೆ ಅವರಿರುವ ಪರಿಸರದ ಹಂತದಲ್ಲಿ ಬಹಳ ದೊಡ್ಡ ಬೊಬ್ಬೆಯ ವಿಷಯವೇ ಆಗಿತ್ತು. ಹೆಂಡತಿ ವರದಕ್ಷಿಣೆ- ಹಿಂಸೆಯ ಕೇಸು ಹಾಕಿದರೆ, ಇತ್ತ ಆಕೆಯ ನಡತೆ ಸರಿ ಇಲ್ಲ ಎಂಬ ಆಕ್ರೋಶ ಶುರುವಾಗುತ್ತಿತ್ತು. ಯಾರು ಸರಿ- ಯಾರು ತಪ್ಪು ಎಂಬ ವಾದ ಪ್ರತಿವಾದಗಳಲ್ಲೇ ವಿಘಟನೆ ಕಹಿ ಮೊಹರಿನೊಂದಿಗೆ ಅಂತ್ಯವಾಗುತ್ತಿತ್ತು. ಇದಕ್ಕೆ ಕಾನೂನಿನ ಕಾರಣವೂ ಇತ್ತೆನ್ನಿ. ವಿಚ್ಛೇದನದ ಕಾಯ್ದೆಗಳು ಸರಳಗೊಳ್ಳುವುದಕ್ಕೂ ಮೊದಲು ಬೇರೆಯಾಗಬೇಕೆಂದರೆ ವಿಶ್ವಾಸದ್ರೋಹ- ವರದಕ್ಷಿಣೆ- ಹಿಂಸೆಯಂಥ ಕಾರಣಗಳಿದ್ದರೆ ಮಾತ್ರ ಪ್ರಕ್ರಿಯೆ ಸುಲಭವಾಗುವಂಥ ದಿನಗಳಿದ್ದವು. ಈಗ ‘ನಮ್ಮ ನಡುವೆ ಹೊಂದಾಣಿಕೆ ಇಲ್ಲ’ ಎಂಬ ಕಾರಣವನ್ನೂ ವಿಚ್ಛೇದನಕ್ಕೆ ಪ್ರಮುಖ ಅಂಶವಾಗಿ ಪರಿಗಣಿಸಲಾಗುತ್ತಿದೆ.

ಸಾಂಪ್ರದಾಯಿಕ ಕಾಲಘಟ್ಟದವರು, ‘ಅಯ್ಯೋ, ಕಾಲ ಕೆಟ್ಟೇ ಹೋಯ್ತು. ವಿಚ್ಛೇದನಗಳು ಎಷ್ಟು ಸುಲಭವಾಗಿಹೋಗಿವೆ? ಭಿನ್ನಾಭಿಪ್ರಾಯ ಬಂದಕೂಡಲೆ ಬೇರೆಯಾಗಿಬಿಡೋದಾ?’ ಅಂತ ಪ್ರಶ್ನಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ಕಾಲ ಕೆಟ್ಟಿರುವ ಸಂಗತಿ ಅಲ್ಲವೇ ಅಲ್ಲ. ಮೊದಲು ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದಿದ್ದರೂ ಆರ್ಥಿಕ ಕಾರಣಗಳಿಂದ, ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೋ ಎಂಬ ಅಂಜಿಕೆಗಳು ಖುಷಿಯಿಲ್ಲದ, ಕಿರಿಕಿರಿ ಬಾಂಧವ್ಯವನ್ನು ತಳ್ಳಿಕೊಂಡು ಹೋಗುವಂತೆ ಮಾಡುತ್ತಿದ್ದವು. ಮುಖ್ಯವಾಗಿ, ಈಗ ಮಹಿಳೆಗೆ ಆರ್ಥಿಕ ಶಕ್ತಿ ಸುಧಾರಿಸಿರುವುದರಿಂದ ಆಕೆ ಹೊಂದಾಣಿಕೆ ಇಲ್ಲದ ಸಂಬಂಧದಲ್ಲಿ ಸೊರಗುವುದಕ್ಕೆ ಬದಲು, ಹೊರಹೋಗುವ ಆಯ್ಕೆ ತೆಗೆದುಕೊಳ್ಳುತ್ತಿದ್ದಾಳೆ ಎಂದೆಲ್ಲ ಸಕಾರಾತ್ಮಕವಾಗಿಯೂ ವಿಶ್ಲೇಷಿಸಬಹುದು.

ಹೈಸ್ಕೂಲಿನಲ್ಲಿ ಪ್ರಾಣದ ಗೆಳೆಯ ಅಂತಿದ್ದವನು ವೃತ್ತಿಜೀವನದ ಸಂದರ್ಭದಲ್ಲಿ ಯಾವತ್ತೋ ಸಿಗಬಹುದಾದ ವ್ಯಕ್ತಿಯಾಗುತ್ತಾನೆ, ನೀನು ಮದುವೆಗೆ ಬರದಿದ್ದರೆ ತಾಳೀನೆ ಕಟ್ಟಿಸಿಕೊಳ್ಳಲ್ಲ ಅಂತ ಕಾಲೇಜು ಬಿಡುವಾಗ ಗೆಳತಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಆ ಕ್ಷಣಕ್ಕೆ ಅಹುದೇ ಅಹುದು ಅಂತೆನಿಸಿದ್ದರೂ ಮದುವೆಗೆ ಕರೆಯುವ ಹೊತ್ತಿಗೆ ಆಕೆಯೇ ಮರೆತಿರುತ್ತಾಳೆ. ಹೀಗೆಲ್ಲ ಇರುವಾಗ ಎರಡೂವರೆ ದಶಕ ನೀನ್ಯಾರೋ- ನಾನ್ಯಾರೋ ಆಗಿದ್ದವರು ಮುಂದಿನ ನಾಲ್ಕೈದು ದಶಕ ಒಟ್ಟಿಗೇ ಇದ್ದೇ ಬಿಡಬೇಕು ಅಂತ ಬಯಸೋದು ಪ್ರಾಕ್ಟಿಕಲ್ಲಾ? ಹಾಗೊಂದು ಸಾಮರಸ್ಯ ಸಾಧ್ಯವಾದರೆ ಒಳ್ಳೆಯದೇ. ಎಂಥ ಹೊಂದಾಣಿಕೆ, ಎಷ್ಟು ಮೆಚೂರಿಟಿ ಅಂತೆಲ್ಲ ಹೊಗಳೋಣ. ಆದರೆ ಅದಾಗದೇ ಸಹಮತದ ವಿಚ್ಛೇದನಕ್ಕೆ ಬಂದರೂ ಅದು ಪ್ರೌಢರಾಗಿರುವ ಇನ್ನೊಂದು ಆಯಾಮವೇ ಅಲ್ಲವೇ?

1 COMMENT

Leave a Reply