ನಿಮಗೆ ತಿಳಿಯದೇ ಹೋಗಿರಬಹುದಾದ ಜೋಗದ ಮುಖಗಳು

ಡಿಜಿಟಲ್ ಕನ್ನಡ ಟೀಮ್

ಅರೇ… ವಿಶ್ವಪ್ರಸಿದ್ಧ ಜೋಗ ಯಾರಿಗೆ ತಾನೇ ಗೊತ್ತಿಲ್ಲ? ಆ ಬಗ್ಗೆ ಇನ್ನೂ ತಿಳಿದುಕೊಳ್ಳೋದಕ್ಕೇನಿದೆ ಅಂದಿರಾ? ನಿಜವೇ. ನೀವು ಜೋಗ ಜಲಪಾತಕ್ಕೆ ಭೇಟಿ ನೀಡಿದ್ದವರಾಗಿರಬಹುದು. ಅದರ ಬಗ್ಗೆ ತಿಳಿದುಕೊಂಡವರೂ ಇರಬಹುದು. ನಾನಾ ಮಾಧ್ಯಮಗಳಲ್ಲಿ ಸಾಕಷ್ಟು ಫೋಟೊ, ದೃಶ್ಯಗಳನ್ನೆಲ್ಲ ಕಣ್ತುಂಬಿಸಿಕೊಂಡಿದ್ದಿರಬಹುದು. ಆದರೆ, ಎಲ್ಲ ಸಿರಿ- ಸಮೃದ್ಧ ಸಂಗತಿಗಳೂ ಹಲವು ಆಯಾಮಗಳನ್ನು ಹೊಂದಿರುತ್ತವೆ. ಬೈಚಾನ್ಸ್, ನೀವು ಗಮನಿಸಿರದ ಆಯಾಮ ಇಲ್ಲಿ ಸಿಗಬಹುದಾ ನೋಡಿ.

ಜೋಗಕ್ಕೆ ಭೇಟಿ ನೀಡಬೇಕು ಎಂದಾಕ್ಷಣ ಹೆಚ್ಚಿನವರು ಆಯ್ದುಕೊಳ್ಳುವುದು ಮಳೆಗಾಲವನ್ನು. ಖಂಡಿತ, ಮಳೆಗಾಲದಲ್ಲಿ ಭೋರ್ಗರೆದು ಹರಿಯುವ ಜೋಗದ ಸಿರಿಯನ್ನು ಕಣ್ತುಂಬಿಸಿಕೊಳ್ಳಲೇಬೇಕು. ಆದರೆ ಮಳೆ ಕಡಿಮೆಯಾಗುವ ಅಕ್ಟೋಬರ್ ತಿಂಗಳಿನಲ್ಲೂ ಒಮ್ಮೆ ಜೋಗಕ್ಕೆ ಭೇಟಿ ನೀಡಿ. ರಾಜ- ರಾಣಿ, ರಾಕೆಟ್ ಗಳ ಹರಿವೆಲ್ಲ ಬಡವಾಗಿರುತ್ತೆ ನಿಜ. ಆದರೆ ಅಲ್ಲೂ ಬೇರೊಂದು ಸೊಬಗಿದೆ. ಮಳೆಗಾಲದಲ್ಲಿ ನೀರೇ ನೀರು ಆವರಿಸಿದ್ದರೆ, ಅಕ್ಟೋಬರ್ ತಿಂಗಳಲ್ಲಿ ನೀರಿನೊಂದಿಗೆ ಭವ್ಯ ಇಳಿಜಾರು ಬಂಡೆಗಳ ಚೆಲುವೂ ಸೇರಿಕೊಂಡು ನೂತನ ದೃಶ್ಯವೊಂದನ್ನು ನಿಮ್ಮದಾಗಿಸುತ್ತದೆ.

j2

ಮಳೆಗಾಲದ ಅಬ್ಬರ ಮುಗಿದ ಬೆನ್ನಲ್ಲಿ ಜೋಗಕ್ಕೆ ಭೇಟಿ ಕೊಡುವುದರಲ್ಲಿರುವ ಮುಖ್ಯ ಲಾಭ ಎಂದರೆ, ಜಲಪಾತವು ತಳವನ್ನು ಮುತ್ತಿಕ್ಕುವ ಸ್ಥಳದವರೆಗೂ ಇಳಿದು ಹೋಗುವ ಅವಕಾಶ ಸಿಗುತ್ತದೆ. ಕೆಳವರೆಗೂ ಮೆಟ್ಟಿಲುಗಳು ಸುಸ್ಥಿತಿಯಲ್ಲಿವೆ. ಕಾಲಿನಲ್ಲಿ ಕಸುವಿರಬೇಕಾದದ್ದು ಅಗತ್ಯ. ಸಾವಧಾನವಾಗಿ ಕೆಳಗಿಳಿಯುತ್ತ ನಡೆದರೆ ದೊಡ್ಡ ಬಾವಿಯೊಂದರಲ್ಲಿ ಇಳಿದುಹೋದರೆ ಹೇಗಿರುವುದೋ ಅಂಥದೊಂದು ಅನುಭವ ಅದು ಅಂತ ನಿಮಗನಿಸೀತು.

j5

ಜೋಗವೆಂದರೆ ಶಿವಮೊಗ್ಗದಲ್ಲಿದೆ ಎಂಬ ಉತ್ತರ ಸಹಜ. ಆ ಭಾಗ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿರುವುದೂ ನಿಜ. ಆದರೆ ಅಲ್ಲಿಂದ ಎರಡೂವರೆ ಕಿಲೋಮೀಟರ್ ಗಳಷ್ಟು ಮುಂದೆ ಬಂದರೆ, ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುವ ಸಿದ್ದಾಪುರ ತಾಲೂಕು ಕಡೆಯಲ್ಲೂ ಪ್ರವಾಸಿ ಬಂಗಲೆಯೊಂದಿದೆ. ಇಲ್ಲಿಯೂ ಪ್ರವಾಸಿಗರ ಹರಿವಿದೆಯಾದರೂ, ಬಹುತೇಕರು ಈ ಭಾಗವನ್ನು ಮಿಸ್ ಮಾಡಿಕೊಳ್ಳುತ್ತಾರೆ. ಈ ಭಾಗದಿಂದ ಕಾಣುವ ದೃಶ್ಯಾವಳಿಗಳು ಭಿನ್ನ. ಮೆಟ್ಟಿಲು- ಸಾಗುದಾರಿಗಳೆಲ್ಲ ಶಿವಮೊಗ್ಗದ ಕಡೆಗೆ ಹೋಲಿಸಿದಾಗ ಇಲ್ಲಿ ಸುಸ್ಥಿತಿಯಲ್ಲೇನೂ ಇಲ್ಲ. ಆದರೆ ಮಳೆಗಾಲ ಬಿರುಸು ಕಳೆದುಕೊಂಡ ದಿನಗಳಲ್ಲಿ ಈ ಭಾಗಕ್ಕೆ ಬಂದರೆ ಎದೆ ಬಡಿತ ಏರುಪೇರು ಮಾಡುವ ಪ್ರಪಾತ, ನೀರು ಬೀಳುವ ಭಿನ್ನ ವೈಯ್ಯಾರಗಳನ್ನು ಸವಿಯಬಹುದು.

j3

ವೈಯ್ಯಾರವನ್ನು ಶಬ್ದಗಳಲ್ಲಿ ವರ್ಣಿಸುವುದಕ್ಕಿಂತ  ಫೋಟೊಗಳೇ ಕತೆ ಹೇಳುತ್ತವೆ.

2 COMMENTS

  1. ಜೋಗ್ ಜಲಪಾತದ ಇನ್ನಷ್ಟು ಮುಖಗಳು:

    ಜೋಗ್ ಜಲಪಾತದ ನಾಲ್ಕು ಕವಲುಗಳ ಹೆಸರೇನೆಂದು ಕೇಳಿದರೆ ಬಹುಶಃ ಶಾಲಾಮಕ್ಕಳು ಏಕಕಂಠಸ್ತರಾಗಿ `ರಾಜ, ರೋರರ್, ರಾಕೆಟ್, ರಾಣಿ’ ಎಂದು ಗಟ್ಟಿಯಾಗಿ ಕೂಗಿಯಾರು. ರೋರರ್-ಸರಿ, ಮೊರೆಯುತ್ತದೆ, ರಾಕೆಟ್-ಬಿಡಿ, ಅದರ ಧಿಮಾಕೇ ಹೇಳುತ್ತದೆ. ಆದರೆ ಈ ರಾಜ ಯಾರು? ಉತ್ತರ ಕನ್ನಡ ಜಿಲ್ಲೆಯ ಸೋಂದೆ ಮಹಾರಾಜನ ಸ್ಮರಣಾರ್ಥವಂತೆ. ಅದು ಸರಿ, ರಾಣಿ? ಇಲ್ಲೇ ನಾವು ತಡಬಡಾಯಿಸುವುದು. ಅದು ರಾಣಿ ಎಲಿಜೆಬತ್ ಹೆಸರಲ್ಲ. ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿಯದೂ ಅಲ್ಲ, ಝಾನ್ಸಿ ರಾಣಿ, ಕಿತ್ತೂರು ರಾಣಿ ಅಲ್ಲವೇ ಅಲ್ಲ. ಈ ರಾಣಿ ಲೇಡಿ ಬ್ಲಾಂಚೆ. ಯಾರಿವಳು ಎಂದು ನೇರವಾಗಿ ಹೇಳುವುದೇ ವಾಸಿ. ಅವಳ ಪೂರ್ಣ ಹೆಸರು ಹೆನ್ರಿಯೆಟ್ಟಾ ಬ್ಲಾಂಚೆ ಒಗಿಲ್ವಿ(1852-1925). ಗಂಡ ಕರ್ನಲ್ ಸರ್ ಹೆನ್ರಿ ಮಾಂಟೇನ್ ಹೋಜಿಯರ್. ಇವರ ಮಗಳು ಕ್ಲೆಮೆಂಟಿಯನ್ನು ಇಂಗ್ಲೆಂಡಿನ ಪ್ರಧಾನಿ-ಬೇಕಾದರೆ ಭೂಪತಿ ಎನ್ನಿ, ವಿನ್ ಸ್ಟನ್ ಚರ್ಚಿಲ್ ಮದುವೆಯಾಗಿದ್ದ. ಜೋಗ್ ಜಲಪಾತದ ಒಂದು ಶಾಖೆಗೆ ಈ `ಅಮ್ಮಣ್ಣಿ’ ಏಕೆ ಬಂದಳೋ ನೀವೆ ರಿಸರ್ಚ್ ಮಾಡಬೇಕು. ಇನ್ನು ಎರಡನೇ ವಿಚಾರ, ಜೋಗ್ ಫಾಲ್ಸ್ ನ ಆಳ, ಅಗಲ ಅಳೆದೋರು ಯಾರು? ಆ ಕೀರ್ತಿ ಕೂಡ ಬ್ರಿಟಿಷರದ್ದೇ. 1856ರಲ್ಲಿ ಇಬ್ಬರು ಬ್ರಿಟಿಷ್ ನೌಕಾಧಿಕಾರಿಗಳು ಈ ಸಾಹಸ ಕೈಗೊಂಡರು. ಪ್ರಪಾತ 839 ಅಡಿ ಆಳವಿದೆ ಎಂದು ದಾಖಲಿಸಿದರು. ಮುಂದೆ ಅದು 830 ಅಡಿ ಎಂದು ಯಾವ ಪುಣ್ಯಾತ್ಮ ಅಳೆದನೋ ಗೊತ್ತಿಲ್ಲ. ಈಗಂತೂ ಇದೇ ಸ್ಟಾಂಡರ್ಡ್ ಬಳಕೆಯಲ್ಲಿದೆ. ಅಸಲಿ ಅದ್ಭುತ ಇನ್ನೊಂದಿದೆ. ಜಲಪಾತದಲ್ಲಿ ನೀರು ಬಿದ್ದೂ ಬಿದ್ದೂ ತಳ ಗುಂಡಿಯಾಗಿದೆ ಗೊತ್ತೇ. ಅದರ ಆಳ ಎಷ್ಟು? ಅದೇ ಟೀಂ ಅದನ್ನೂ ಅಳೆಯಿತು. ಗುಂಡಿಯ ಆಳವೇ 130 ಅಡಿ ( 40 ಮೀಟರ್). ಇನ್ನೊಂದು ಅದ್ಭುತ ರಾಧಾಕೃಷ್ಣ ಎಂದೊಡನೆ ನೀವು ಸರ್ವೇಪಲ್ಲಿ ರಾಧಕೃಷ್ಣ ಅವರನ್ನು ಸ್ಮರಿಸುತ್ತೀರಾ ಅಲ್ಲವೇ. ಇಲ್ಲಿ ಹೇಳೋದಿಕ್ಕೆ ಹೊರಟಿರೋದು ಅಂತಾರಾಷ್ಟ್ರೀಯ ಖ್ಯಾತಿಯ ಕನ್ನಡಿಗ, ಭೂವಿಜ್ಞಾನಿ ಬಿ.ಪಿ. ರಾಧಾಕೃಷ್ಣ ಅವರ ಬಗ್ಗೆ. ಅವರು ಹೇಳಿದ್ದೇನು ಗೊತ್ತಾ? ನೋಡ್ರಾಯ್ಯ, ಈ ಜಲಪಾತ ಮೂಲದಿಂದ 28 ಕಿಲೋ ಮೀಟರ್ ಹಿಂದಕ್ಕೆ ಬಂದಿದೆ. ಅದ್ಹೆಂಗೆ ಸಾರ್ ಅಂತ ನೀವು ಕೇಳಬಹುದು. ಅವರು ತೋರಿಸಿದ್ದು 28 ಕಿಲೋ ಮೀಟರ್ ಉದ್ದದ ಎರಡೂ ಕಡೆ ಗೋಡೆ ಇರೋ ಕಣಿವೆಯನ್ನ. ಇದನ್ನೆ ನದಿಯ ತಲೆಸವೆತ ಅಂಥ ಅವರು ಹೇಳುತ್ತಾರೆ. ಅಂದರೆ ಕಲ್ಲು ನೀರಿನ ಕೊರೆತದಿಂದ ಸವೆತಾ ಸವೆತಾ ಹಿಂದಕ್ಕೆ ಬರುತ್ತೆ. ಇದನ್ನೇ ಕಣ್ರಯ್ಯಾ ವಂಡರ್ ಅನ್ನೋದು ಎಂದು ಹೇಳುತ್ತಿದ್ದರು. ಅಷ್ಟೇ ಅಲ್ಲ, ಶರಾವತಿ ಹಿಂದಕ್ಕೆ ಹಿಂದಕ್ಕೆ ಸವೆತ ಮಾಡಿಕೊಂಡು ಕೊನೆಗೆ ಪೂರ್ವ ದಿಕ್ಕಿಗೆ ಹರಿಯುತ್ತಿದ್ದ ನದೀನಾ ತನ್ನ ಕಡೆ ಎಳಕೊಂಡಿತಂತೆ. ಇದನ್ನ ನದಿಚೌರ್ಯ ಅಂಥ ಕರಿಯೋದುಂಟು. ಅಂತೂ, ಬುದ್ಧಿಜೀವಿಗಳು ಮಾತ್ರ ಕೃತಿಚೌರ್ಯ ಮಾಡೋದು ಗೊತ್ತಿದ್ದ ನಮಗೆ ಪರವಾಗಿಲ್ವೇ ಈ ನದೀನೂ ಮಾಡ್ತಾವಲ್ಲಾ ಅನ್ನಿಸುತ್ತೆ. ಜೋಗ್ ಜಲಪಾತದ ಬಗ್ಗೆ ಕಾದಂಬರಿಕಾರ ನಾ. ಡಿಸೋಜ ಇನ್ನೊಂದು ಹೊಸ ಅಂಶ ಕೊಟ್ಟಿದ್ದಾರೆ. ಜೋಗ್ ಜಲಪಾತ ಬೀಳುವಾಗ ಅದನ್ನು ನೋಡಿ ಸರ್ ಎಂ.ವಿ. `ವಾಟ್ ಎ ವೇಸ್ಟ್ ‘ ಅಂಥ ಉದ್ಗಾರ ತೆಗೆದಿದ್ದರಂತೆ. ಅದಕ್ಕೆ ದಾಖಲೆ ಎಲ್ಲಿ? ಡಿಸೋಜಾ ಬರೀತಾರೆ. ಸರ್ ಸಿ.ವಿ. ರಾಮನ್ 12.12.1943ರಲ್ಲಿ ಜೋಗ್ ನೋಡಿ A hasty glimpse! But what a glimpse ಎಂದಿದ್ದರಂತೆ. ಯಾರ್ ಮಾತನ್ನೋ ತಿರುಚಿ ಯಾರ್ದೋ ತಲೆಗೆ ಕಟ್ಟೋದು ನಮ್ಮವರ ಪ್ರತಿಭೆ. ಇಂಥದನ್ನೇ ಅಲ್ವೇ ನಮ್ಮ ಖ್ಯಾತ ಪತ್ರಕರ್ತ ವೈ.ಎನ್.ಕೆ. `ವಂಡರ್ ಗಣ್ಣು’ ಎಂದಿದ್ದು.

    ಟಿ.ಆರ್. ಅನಂತರಾಮು

Leave a Reply