ಮಾತಾ ಪಿತರ ವಾಟ್ಸಾಪ್ ವ್ಯಾಜ್ಯ

(ಚಿತ್ರ- ಮಹಾಂತೇಶ)

ಲಘು ಲಹರಿ

ಶಿವಪ್ರಸಾದ್ ಸುರ್ಯ ಉಜಿರೆ

‘ನೀವು ವಾಟ್ಸಾಪಲ್ಲಿದ್ದೀರಾ?’ ‘ಇನ್ನೂ ಅಪ್‍ಡೇಟ್ ಆಗಿಲ್ವಾ’ ‘ನಿಮ್ಮ ಬೆಂಗಳೂರಿನಲ್ಲಿರುವ ದೊಡ್ಡ ಮಗ ನೋಡಿ ಮರಾಯ್ರೆ ಕೂದಲನ್ನು ಜುಟ್ಟುಬಿಟ್ಟು ನಿಂತಿರುವುದು… ದಿನಾ ಒಂದೊಂದು ಸ್ಟೈಲಲ್ಲಿ ಫೋಟೋ ಹಾಕ್ತಾ ಇರ್ತಾನೆ’ ಪಕ್ಕದ ಮನೆಯ ಆಸಾಮಿ ದಿನಾ ಒಂದು ವರಾತ ಹಿಡಿದುಕೊಂಡು ನಮ್ಮ ಮನೆಯ ಬಾಗಿಲು ತಟ್ಟುತ್ತಿದ್ದ. ನಮ್ಮ ಅಪ್ಪ ಒಂದು ದಿನ ರಾತ್ರಿ ನನ್ನನ್ನು ಕೂಡ್ರಿಸಿಕೊಂಡು ಕೇಳಿದ್ದು ಹೀಗೆ ‘ನಮ್ಮ ಮನೆಯ ವಿಷ್ಯ ಅವ್ನಿಗೆ ಗೊತ್ತಾಗುವುದು ಹೇಗೆ ಮಾರಾಯ? ಅಣ್ಣನ ಫೋಟೋ ಅವನ ಮೊಬೈಲಲ್ಲಿ ಎಂತಕ್ಕೆ ಇರುವುದು? ನಿನ್ನ ಅಣ್ಣನಿಗೆ ನಮ್ಮತ್ರ ಮಾತಾಡ್ಲಿಕ್ಕೆ ಪುರುಸೊತ್ತಿಲ್ಲ! ಪಕ್ಕದ್ಮನೆಯವರಿಗೆಲ್ಲ ರಂಗುರಂಗಿನ ಫೋಟೋ  ಕಳಿಸ್ಲಿಕ್ಕೆ ಟೈಮುಂಟಾ? ‘ಊರಿಗೆ ಉಪಕಾರಿ ಮನೆಗೆ ಮಾರಿ’ ಅಂತ ಜನ ಸುಮ್ನೆ ನುಡಿಗಟ್ಟು ಕಟ್ಟಿದ್ದಾರಾ?..’ ಅಪ್ಪ ಒಂದೇ ಸಮನೆ ಪಿಟೀಲು ಕುಯ್ಯುತ್ತಿದ್ದ.

ವಾಟ್ಸಾಪು, ಆನ್‍ಲೈನು, ಇಂಟರ್‍ನೆಟ್ಟು ಅಂತಂದರೆ ಅವನಿಗೆ ದೀರ್ಘ ಪ್ರವಚನದ ನಂತರ ಅರ್ಥವಾಗುತ್ತದಾದರೂ ‘ನಮ್ಮಂತಹವರಿಗೆ ಅದೆಲ್ಲ ಯಾಕೆ? ನೆಟ್ಟಗೆ ದುಡಿದು ಮನೆಗೆ ತಂದು ಹಾಕಬೇಕಪ್ಪಾ ಈ ಶೋಕಿ ಎಲ್ಲ ಎಷ್ಟು ದಿನ’ ಅಂತ ಅಬ್ಬರಿಸುತ್ತಿದ್ದ.

ಪಕ್ಕದ್ಮನೆಯ ಗೋಳು ಅಮ್ಮನನ್ನು ಬಾಧಿಸಿದಷ್ಟು ಇಷ್ಟರವರೆಗೆ ಅಪ್ಪನನ್ನು ಎಡತಾಕಿರಲಿಲ್ಲ. ಪಕ್ಕದ್ಮನೆಯವರು ಹೊಸದಾದ ಮಂಚ, ತವ್ವ, ಕುಕ್ಕರ್ರು, ತಲೆಗೂದಲು ಕಟ್ಟುವ ಕ್ಲಿಪ್ಪು, ಜಾತ್ರೆಯಿಂದ ತಂದ ಸೀರೆ, ಬೋಗುಣಿ, ಶೇವಿಗೆಮಣೆ, ದೋಸೆ ಕಾವಲಿ ತೋಟಗಾರಿಕಾ ಇಲಾಖೆಯ ಗುಲಾಬಿ ಗಿಡ ತಂದ ಮರುಘಳಿಗೆಯಲ್ಲಿಯೇ ಅಮ್ಮ ಸಾಲಸೋಲ ಮಾಡಿಯಾದರೂ ಅವರ ಸಮ ಸಮ ನಡೆದಿರುತ್ತಿದ್ದಳು. ‘ಲೇಟಾಗಿ ಕೊಂಡರೂ ನಾನು ಚೌಕಾಸಿ ಮಾಡಿ ನಿಮಗಿಂತ ಹತ್ತು ರೂಪಾಯಿ ಕಡಿಮೆಗೇ ಕೊಂಡೆನಪ್ಪ ನಮ್ಮತ್ರ ಹಾ’ ಎಂದು ಗತ್ತಿನಿಂದ ಹೇಳುತ್ತಿದ್ದಳು. ಅದರ ನಿಖರ ಬೆಲೆ ಗೊತ್ತಾಗುತ್ತಿದ್ದುದು ಅಪ್ಪನಿಂದ ಕಾಸು ಸಂಜೆ ಇಸಗೊಂಡಾಗಲೇ ಬಿಡಿ. ಅಪ್ಪ ತಾನು ಯಾರ ಮರ್ಜಿಗೂ ಇಲ್ಲದ ಅತೀತ ವ್ಯಕ್ತಿ, ಈ ತರದ ಸಣ್ಣತನಗಳಿಂದೆಲ್ಲ ನಿರ್ಲಿಪ್ತನಾದ ವ್ಯಕ್ತಿತ್ವ ತನ್ನದು ಎಂದೇ ಬಿಂಬಿಸಿಕೊಳ್ಳುತ್ತಿದ್ದ. ಆದರೆ ಮೊನ್ನೆ ದೀಪಾವಳಿಗೆ ಹೊಸದೊಂದು ತಟ್ಟೆಗಾತ್ರದ ಮೊಬೈಲು ಖರೀದಿಸಿ ಅಚ್ಚರಿಯ ನವಜೀವನ ಶುರು ಮಾಡಿದ್ದಾನೆ. ಮೊಬೈಲು ಮನುಷ್ಯನನ್ನ ಆಟವಾಡಿಸುತ್ತದಾ ಇಲ್ಲ ಮನುಷ್ಯನೇ ಮೊಬೈಲನ್ನು ಕುಣಿಸುತ್ತಾನಾ ಎಂಬ ಪ್ರಶ್ನೆಗಳು ನನ್ನನ್ನು ದೀಪಾವಳಿಯ ತರುವಾಯ ಬಿಟ್ಟೂಬಿಡದೆ ಕಾಡುತ್ತಿದೆ.

ಆನ್‍ಲೈನಿಗೆ ಬಂದ ಎರಡೇ ದಿವಸದಲ್ಲಿ ಫ್ಯಾಮಿಲೀ ಪ್ಯಾಕೇಜಿನಡಿಯಲ್ಲಿ ಮೂರು ಗ್ರೂಪುಗಳು ಅಪ್ಪನ ಸದಸ್ಯತ್ವ ಪಡೆದಿವೆ. ಇನ್ನು ಶಾಲಾ ಮೇಲುಸ್ತುವಾರಿ ಸಮಿತಿ, ಗ್ರಾಮ ಪಂಚಾಯತು ಮೆಂಬರ್ಸು 2001, ಜೀರ್ಣೋಧ್ದಾರ ಗ್ರಾಮ ಸಮಿತಿ, ವಲಯ ಅರಣ್ಯ ಹಿತರಕ್ಷಣಾ ಪಡೆ, ಉಜಿರೆ ಚಡ್ಡಿದೋಸ್ತ್, ಬಾಟಲಿ ಗೆಳೆಯರು ಹೀಗೆ ತರಹೇವಾರಿ ಗ್ರೂಪುಗಳೆಲ್ಲ ಅಸ್ತಿತ್ವಕ್ಕೆ ಬಂದಿದೆ. ಸೋಜಿಗವೆಂದರೆ ಬಹುತೇಕ ಗ್ರೂಪುಗಳಲ್ಲಿ ಅದೇ ಚಿರಪರಿಚಿತ ಮುಖಗಳು ಎಲ್ಲರೂ ಒಂದೊಂದು ಗ್ರೂಪಿನ ಎಡ್ಮಿನ್ ಮಹಾಶಯರು!

ಬೆಳಗ್ಗೆ ಎದ್ದರೆ ಮೆಸೇಜುಗಳು ಗುಮ್ಮಲು ಶುರು ಮಾಡುತ್ತವೆ. ಡಯಾಬಿಟೀಸ್ ಹೇಗುಂಟು? ಬೀಪಿ ಕಂಟ್ರೋಲಲ್ಲಿದೆಯಾ? ಮಾತ್ರೆ ನುಂಗಿದೆಯಾ? ಸೋಮಶೇಖರನಿಗೆ ಇನ್ನೂ ಖಾಯಿಲೆ ಶುರುವಾಗಲಿಲ್ಲವಲ್ಲ!? ಇವತ್ತು ಎಲ್ಲಿ ಯಕ್ಷಗಾನ? ಏನು ಪ್ರಸಂಗ? ಮಗ ಮನೆಬಿಟ್ಟು ಹೋದವ ಬರದೆ ತಿಂಗಳಾಯಿತು, ಸೌತೆಕಾಯಿಯ ರೇಟು, ಅಡಕೆಧಾರಣೆ, ಸೈಟು ಡೀಲಿಂಗು ಹೀಗೆ ಮಾತಿಗೆ ಬ್ರೇಕು ಅಂತ ಇರುವುದಿಲ್ಲ. ಬೆಳಗ್ಗೆ ಎದ್ದರೆ ನನಗೆ ಈಗ ಹಸುಗಳಿಗೆ ಹುಲ್ಲು ಹಾಕುವುದು, ಅಮ್ಮ ಹಾಲು ಕರೆಯುವಾಗ ಕರು ಎಳೆದು ಕಟ್ಟುವುದು, ಪಾತ್ರೆ ತೊಳೆಯುವುದರ ಜೊತೆಗೆ ಅಪ್ಪನ ಚಾಟ್ ಕ್ಲಿಯರಿಂಗ್ ನಿತ್ಯ ಕರ್ಮವಾಗಿ ಮಾರ್ಪಟ್ಟಿದೆ. ನನ್ನ ಗ್ರಹಚಾರಕ್ಕೆ ವಾಟ್ಸಾಪು ಇಮೇಜುಗಳೆಲ್ಲ ನೇರಾನೇರ ಅಪ್ಪನ ಮೆಮೊರಿಗೆ ಬಂದು ಲಂಗರು ಹಾಕುತ್ತದೆ. ಸೆಲೆಕ್ಟು ಮಾಡಿ ಡಿಲೀಟ್ ಮಾಡುವಾಗ ಅಪ್ಪ ಏನೆನೋ ತಲೆತಿನ್ನುತ್ತ ಯಾವ್ಯಾವುದೋ ಹೊಸ ಜವಾಬ್ದಾರಿ ಹೊರಿಸಿರುತ್ತಾನೆ!

ಅಪ್ಪನ ಹುಚ್ಚಾಟ ನೋಡುತ್ತಿರುವ ಅಮ್ಮ ‘ಎಷ್ಟೊತ್ತಿಗೂ ಮಕ್ಕಳ ಹಾಗೆ ಮೊಬೈಲಿನಲ್ಲೇ ಬಿದ್ದಿರುತ್ತೀರಲ್ಲಾ.. ಅದನ್ನು ಎತ್ತಿ ತೋಡಿಗೆ ಬಿಸಾಡುತ್ತೇನೆ ನೋಡಿ’ ಎಂದು ಗೊಣಗಿ ಸಿಡುಕುತ್ತಿದ್ದಳು. ಈ ಹುಸಿಮುನಿಸಿನ ಮಾತುಗಳನ್ನು ಅಪ್ಪ ಕಿವಿಗೇ ಹಾಕಿಕೊಳ್ಳುವುದಿಲ್ಲ. ನಿರ್ಲಕ್ಷ್ಯವೇ ಮಾಡುತ್ತಾನೆ. ತತ್ಪರಿಣಾಮ ಮನೆಯಲ್ಲಿ ಹೊಸದೊಂದು ಅಸಹಿಷ್ಣುತೆ ಶುರುವಾಗಿಬಿಟ್ಟಿದೆ. ನಂಗೂ ಒಂದು ಮಕರ ಸಂಕ್ರಮಣಕ್ಕೆ ಮೊಬೈಲು ತೆಗೆದುಕೊಡಿ ಸ್ತ್ರೀಶಕ್ತಿ ಸಂಘದವರೆಲ್ಲಾ ವಾಟ್ಸಾಪ್ ನಂಬರ್ ಕೇಳುತ್ತಿದ್ದಾರೆ ಎಂದು ಅಮ್ಮ ಮೊನ್ನೆ ಒಂದು ಪಾಶುಪತಾಸ್ತ್ರ ಬಿಟ್ಟಿದ್ದಾಳೆ. ಮಕರ ಸಂಕ್ರಮಣದ ಹೊತ್ತಿಗೆ ಪ್ರತ್ಯೇಕತೆ, ಅಸಹಿಷ್ಣುತೆ ಕೂಗು ಹೆಚ್ಚುವ ಸಂಭವ ನಿಚ್ಚಳವಾಗಿದೆ. ಯಾರಿಗೆ ಬೇಕು ಈ ಮಾತಾಪಿತರ ವಾಟ್ಸಾಪು ವ್ಯಾಜ್ಯಗಳು?

2 COMMENTS

  1. ಶಿವ ಪ್ರಸಾದ್ ಅವರೇ ,

    ಮನೆ ಮನೆ ಕಥೆ ಚನ್ನಾಗಿ ಬರೆದಿದ್ದೀರಿ , ನಿಮ್ಮ ಈ ಸಾಲುಗಳು ಸಖತ್ ಕಿಕ್ಕ್ ಕೊಟ್ಟವು

    ನಂಗೂ ಒಂದು ಮಕರ ಸಂಕ್ರಮಣಕ್ಕೆ ಮೊಬೈಲು ತೆಗೆದುಕೊಡಿ ಸ್ತ್ರೀಶಕ್ತಿ ಸಂಘದವರೆಲ್ಲಾ ವಾಟ್ಸಾಪ್ ನಂಬರ್ ಕೇಳುತ್ತಿದ್ದಾರೆ ಎಂದು ಅಮ್ಮ ಮೊನ್ನೆ ಒಂದು ಪಾಶುಪತಾಸ್ತ್ರ ಬಿಟ್ಟಿದ್ದಾಳೆ. ಮಕರ ಸಂಕ್ರಮಣದ ಹೊತ್ತಿಗೆ ಪ್ರತ್ಯೇಕತೆ, ಅಸಹಿಷ್ಣುತೆ ಕೂಗು ಹೆಚ್ಚುವ ಸಂಭವ ನಿಚ್ಚಳವಾಗಿದೆ.

  2. ತುಂಬಾ ಚೆನ್ನಾಗಿದೆ ಲಹರಿ. ಅದರ ಒಂದು ಎಳೆಯನ್ನು ಅಸಹಿಷ್ಣುತೆಗೆ ಲಿಂಕ್ ಮಾಡಿದ್ದು ಇನ್ನೂ ಸೂಪರ್.. ಯಾವುದೇ ಭಾರವಿಲ್ಲದೇ ತುಂಬಾ ಸರಳವಾಗಿ ಓದಿಸಿಕೊಂಡು ಹೋಗುವಂತಿದೆ, ನಮ್ಮ ನಿಮ್ಮೊಳಗಿನ ನಿತ್ಯದ ಆಗುಹೋಗುಗಳನ್ನು ತುಂಬಾ ಅಚ್ಚುಕಟ್ಟಾಗಿಯೇ ಕಟ್ಟಿಕೊಟ್ಟಿದ್ದೀರಿ. ವಂದನೆಗಳು.

Leave a Reply