ಅಕ್ಷರಗಳು ಹೊಸೆವ ಅನುಬಂಧ, ಬೆಲೆಕಟ್ಟಲಾಗದ ಆನಂದ

(ಚಿತ್ರ- ಮಹಾಂತೇಶ)

RAMA

ರಮಾ ಎಂ ಎನ್

ಸಾಹಿತ್ಯದೊಂದಿಗೆ ಸಂಗಾತ ಸಾಧಿಸುವ ಆನಂದವನ್ನು, ಅದರ ಉತ್ಪಾದಕತೆಯನ್ನು ಯಾವುದೇ ಮಾಪಕಗಳಲ್ಲಿ ಅಳೆಯಲಾಗುವುದಿಲ್ಲ. ಆದರೆ ಬದುಕಿನ ಮೂಲದ್ರವ್ಯವಾದ ಆನಂದವನ್ನು ತುಂಬುವಲ್ಲಿ ಸಾಹಿತ್ಯದ ಪಾತ್ರ ಪ್ರಮುಖ. ಈ ನಿಟ್ಟಿನಲ್ಲಿ ಸಾಹಿತ್ಯಾಸಕ್ತೆಯೊಬ್ಬರು ತಮ್ಮ ಅನುಭವವನ್ನಿಲ್ಲಿ ಅಕ್ಷರವಾಗಿಸಿದ್ದಾರೆ.

——

ಕತ್ತಲೆಯ ಕೋಣೆಯಲಿ ಕಣ್ಮುಚ್ಚಿ ಕುಳಿತರೂ ಕಾಡದೆ ಇರುತಾವ ನೆನಪುಗಳು;

ಬೆಚ್ಚನೆಯ ಹೊದಿಕೆಯಲಿ ಮೈಮುಚ್ಚಿ ಮಲಗಿದರು ಬೆತ್ತಲಿಸಿ ನೋಡದೆ ಇರುತಾವ ನೆನಪುಗಳು.

ಬಿಸಿ ಉಸಿರ ಬಿಗಿ ಹಿಡಿದು ಧ್ಯಾನಕ್ಕೆ ಕುಳಿತರು ಎದೆಯ ಬಡಿತವ ಕೊರೆಯದೆ ಇರುತಾವ ನೆನಪುಗಳು;

ಮನಸೆಳೆವ ಭಜನೆಯಲಿ ಮೈಮರೆತು ಕುಳಿತರು ಮುಟ್ಟಿ ತಟ್ಟದೆ ಇರುತಾವ ನೆನಪುಗಳು

ಯಾರೋ ಕವಿ ಬರೆದ ಮೇಲಿನ ಕವನದ ಸಾಲುಗಳನ್ನು ಓದಿದಾಗ ಮನಸ್ಸು ನನ್ನ ಜೀವನದ ನೆನಪುಗಳ ಬಗ್ಗೆ ಮೆಲುಕು ಹಾಕತೊಡಗಿತು. ಐವತ್ತರ ಹೊಸ್ತಿಲಲ್ಲಿ ನಿಂತು ಹಿಂತಿರುಗಿ ನೋಡಿದಾಗ ಅನೇಕ ನೆನಪುಗಳು ನನ್ನನ್ನು ಮುತ್ತಿಕೊಂಡವು.  ಆ ನೆನಪುಗಳನ್ನು ಹೆಣೆಯುತ್ತಾ ಹೋದಾಗ ಅದು ಒಂದು ಸೇತುವೆಯಂತೆ ಬಾಲ್ಯದಿಂದ ಇಲ್ಲಿಯವರೆಗೂ ನನ್ನನ್ನು ತಂದು ನಿಲ್ಲಿಸಿತು. ಎಷ್ಟೊಂದು ಘಟನೆಗಳು ಘಟಿಸಿವೆ, ಎಷ್ಟೊಂದು ಮಂದಿ ನನ್ನ ಜೀವನದಲ್ಲಿ ಬಂದು ಹೋಗಿದ್ದಾರೆ. ಅವರಲ್ಲಿ ಕೆಲವರು ನನ್ನಲ್ಲಿ ಅಕ್ಷರ ಪ್ರೇಮವನ್ನು ಹುಟ್ಟುಹಾಕಿದರೆ, ಮತ್ತೆ ಕೆಲವರು ಅದಕ್ಕೆ ನೀರೆರೆದು ಪೋಷಿಸಿದ್ದಾರೆ.

ಎಲ್ಲ ಮಕ್ಕಳಂತೆ ನನಗೂ ನಮ್ಮಣ್ಣ (ಅಪ್ಪ) ಹೀರೋ ಆಗಿದ್ದರು. ನಮ್ಮಣ್ಣ ನಮ್ಮ ಬದುಕಿಗೆ ಬೇಕಾದ ಎಲ್ಲ ಅಗತ್ಯಗಳನ್ನು ಒದಗಿಸಬಲ್ಲ ಒಬ್ಬ ಸೂಪರ್ ಮ್ಯಾನ್!  ಆದರೆ ಅವರು ತಮ್ಮ ಆರೋಗ್ಯದ ಬಗ್ಗೆ ಕೂಡ ಕಾಳಜಿ ಮಾಡದೆ, ಔಷಧಿಗೆಂದು ಮೀಸಲಿಟ್ಟ ಹಣವನ್ನು ಕೂಡ ನಮ್ಮ ಸಲುವಾಗಿ ಖರ್ಚು ಮಾಡುತ್ತಿದ್ದರೆಂಬ ಸತ್ಯ ತಿಳಿದದ್ದು ಮಾತ್ರ ಅವರನ್ನು ತೀರ ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡ ನಂತರ.  ಬಾಲ್ಯದಲ್ಲಿ ಅವರನ್ನು ಗೋಳುಹೊಯ್ದುಕೊಂಡಿದ್ದೆ ಹೆಚ್ಚು. ನಮ್ಮಣ್ಣ ಅತ್ಯಂತ ಸ್ನೇಹಜೀವಿ. ಹೀಗಾಗಿ ನಮ್ಮ ಚೇಷ್ಟೇಗಳಿಗೇನು ಇತಿಮಿತಿ ಇತ್ತೇ?  ಪ್ರೌಢಶಾಲೆಗೆ ಬರುವ ಹೊತ್ತಿಗೆ ನಮ್ಮಣ್ಣ ಉತ್ತಮ ಸಾಹಿತಿ ಹಾಗು ಒಳ್ಳೆಯ ವಾಗ್ಮಿ ಎಂಬರಿವು ಮೂಡತೊಡಗಿತ್ತು. ಶಾಲೆಯಲ್ಲಿ ಚರ್ಚಾಸ್ಪರ್ಧೆ, ಪ್ರಬಂಧ ಬರಹದ ವಿಷಯ ಅಣ್ಣ ಆಫೀಸಿಗೆ ಹೋಗುವ ತರಾತುರಿಯಲ್ಲಿದ್ದಾಗ ತಿಳಿಸಿದರೂ ಎಷ್ಟೊಂದು ಸಾಮಗ್ರಿ ಒದಗಿಸುತ್ತಿದ್ದರೆಂದರೆ ನಾನು ಚರ್ಚೆಯಲ್ಲಿ ಪರ ಅಥವಾ ವಿರೋಧ ಮಾತಾಡಬೇಕೋ ಎಂಬ ಗೊಂದಲಕ್ಕೆ ಬೀಳುತಿದ್ದೆ. ನಮ್ಮ ಮನೆಯಲ್ಲಿ ದಿನಪತ್ರಿಕೆ ಎಲ್ಲರ ಕಿವಿಗೆ ಬೀಳುವ ಹಾಗೆ ಗಟ್ಟಿಯಾಗಿ ಓದುವ ಅಭ್ಯಾಸ ಇತ್ತು. ಹಬ್ಬ ಹರಿದಿನಗಳಲ್ಲಿ ‘ವ್ರತರತ್ನಮಾಲಾ’ ಹಿಡಿದು ಎಲ್ಲ ಮಕ್ಕಳು ಒಬ್ಬೊಬ್ಬರು ಒಂದೊಂದು ಅಧ್ಯಾಯ ವ್ರತಕಥೆ ಇತ್ಯಾದಿ ಓದಬೇಕು. ಹೀಗೆ ನಮ್ಮಣ್ಣ ನಮಗರಿವಿಲ್ಲದಂತೆ ನಮಗೆ ಅಕ್ಷರ ಬಾಂಧವ್ಯ ಒದಗಿಸಿದರು. ನಮ್ಮ ಪಾಠ ಪ್ರವಚನಗಳನ್ನು ಕೂಡ ಜೋರಾಗಿ ಓದಿ ಎಂದು ಅಣ್ಣ ಪ್ರೇರೇಪಿಸುತ್ತಿದ್ದರು. ‘When you teach you learn twice’ ಹಾಗೆ ಮಾಡಿದರೆ ನನಗೂ ಎಷ್ಟೋ ವಿಷಯ ಪುನರಾವರ್ತನೆ ಆಗುತ್ತೆ ಮತ್ತು ನೀವೇನಾದರೂ ತಪ್ಪು ಮಾಡಿದರೆ ತಿದ್ದಬಹುದು ಎಂಬುದು ಅವರ ನಿಲುವು. ಹೀಗಾಗಿ ಅಣ್ಣ  ನಮ್ಮನ್ನು ಅಗಲಿ ಹೋದನಂತರ ನಾನು, ನನ್ನ ತಮ್ಮನಿಗೆ, ಮಕ್ಕಳಿಗೆ ಟ್ಯೂಶನ್ ಹೇಳಿಕೊಡಲು ಎಳ್ಳಷ್ಟು ದಿಗಿಲಾಗಲಿಲ್ಲ. ಹಾಗೆ ಬಂದ  ಹಣದಲ್ಲಿ  ನಮ್ಮ ಫೀಸ್ ಪುಸ್ತಕ ಇತ್ಯಾದಿ ಖರ್ಚು ಕಳೆದು ಹೋಗುತಿತ್ತು.

ಬ್ಯಾಂಕ್ ಅಧಿಕಾರಿಯಾಗಿದ್ದ ಅಣ್ಣ ಆಂಧ್ರದಿಂದ ಬೆಂಗಳೂರಿಗೆ ವರ್ಗವಾಗಿ ಬಂದಾಗ ಐದನೆಯ ತರಗತಿಗೆ ತೆಲುಗು ಮಾಧ್ಯಮದಿಂದ ಕನ್ನಡ ಮಾಧ್ಯಮಕ್ಕೆ ಸೇರಿದ ನಾನು ಮೊದಮೊದಲು ಪರೀಕ್ಷೆಯಲ್ಲಿ ಉತ್ತರಗಳನ್ನು ತೆಲುಗು ಲಿಪಿಯಲ್ಲೇ ಬರೆದುಬಿಡ್ತಿದ್ದೆ. ಆಗ ಕಮಲಮ್ಮ ಎಂಬ ಹಿರಿಯ ಪ್ರಾಧ್ಯಾಪಕಿ ಊಟದ ವಿರಾಮದ ವೇಳೆಯಲ್ಲಿ ನನ್ನ ಕೈಹಿಡಿದು ಕನ್ನಡ ಅಕ್ಷರಮಾಲೆ ಮತ್ತು ಕಾಗುಣಿತ ತಿದ್ದಿಸಿದರು.

ನನ್ನ ಜೀವದ ಗೆಳತಿ  ‘ಶ್ರೀಮತಿ’ ಕಳೆದ ಮೂರು ದಶಕಕ್ಕೂ ಮೀರಿ ಒಂದಲ್ಲ ಒಂದು ರೀತಿ ನನ್ನನ್ನು ಕಾಯ್ದಿದ್ದಾಳೆ, ಪೋಷಿಸಿದ್ದಾಳೆ.  ಐದರಿಂದ ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಪ್ರೌಢಶಾಲೆಗೆ  ಆಂಗ್ಲ ಮಾಧ್ಯಮಕ್ಕೆ ಸೇರಿದಾಗ, arithmetic, algebra, biology ಹೀಗೆ ವಿಷಯಗಳ spelling ಕೂಡ ಬಾರದಷ್ಟು ಮರುಳಳಾಗಿದ್ದ ನಾನು ಇತರೆ ಕಾನ್ವೆಂಟ್ ಶಾಲೆಗಳಿಂದ ನಮ್ಮ ಶಾಲೆ ಸೇರಿ ನಿರರ್ಗಳವಾಗಿ ಇಂಗ್ಲಿಷ್ ಮಾತಾಡುತಿದ್ದ ವಿದ್ಯಾರ್ಥಿನಿಯರನ್ನು  ಕಂಡು ಕಂಗಾಲಾಗಿ ಹೋಗಿದ್ದೆ. ಆಗ ನನಗೆ ‘ಶ್ರೀಮತಿ’ ಒತ್ತಾಸೆಯಾಗಿ ನಿಲ್ಲದಿದ್ದರೆ ನಾನೇನಾಗಿ ಹೋಗ್ತಿದ್ದೇನೋ ಎಂದು ಈಗಲು ನೆನೆಸಿಕೊಂಡರೆ ದಿಗಿಲಾಗುತ್ತೆ.  ಇಬ್ಬರು ಸೇರಿ ಈ  ‘ಇಂಗ್ಲಿಷ್’ ಎಂಬ ಪೆಡಂಭೂತವನ್ನು ಸಾಕಷ್ಟು ಚೆನ್ನಾಗಿಯೇ ಎದುರಿಸಿದೆವು. ಮುಂದೆ ಕಾಲೇಜಿನಲ್ಲೂ ಒಟ್ಟಿಗೆ ಕಲಿತು ಅವಳು ಸರ್ಕಾರಿ ನೌಕರಿ ದೊರೆತು ಪರಊರಿಗೆ ಹೋದಾಗ ಚಾಲ್ತಿಯಾದ ನಮ್ಮಿಬ್ಬರ ಪತ್ರ ವ್ಯವಹಾರ ಇಂದಿಗೂ ನಿರಂತರವಾಗಿ ನಡೆದಿದೆ.  ಇಂದಿಗೂ ನಾವು ಓದಿದ ಪುಸ್ತಕ, ತಿಳಿದುಕೊಂಡ ವಿಚಾರದ ಬಗ್ಗೆ ನಮ್ಮಿಬ್ಬರ ಮಧ್ಯೆ ಪತ್ರ ಮುಖೇನ brain storming sessions ನಡೆಯುತ್ತಲೇ ಇರುತ್ತವೆ. ಎರಡು ದಶಕಗಳಿಗೂ ಮೀರಿ ನಾನವಳಿಗೆ ಬರೆದ ಪತ್ರಗಳನ್ನು ಅವಳು ಇಂದಿಗೂ ಜತನದಿಂದ ಕಾಪಿಟ್ಟುಕೊಂಡಿದ್ದಾಳೆ.  ಹಾಗೆ ನನಗೆ ‘ರಮಾ ನೀನು ನನಗೆ ಬರೆದ ಪತ್ರಗಳನ್ನೇ ಅಂಕಣ ರೂಪದಲ್ಲಿ ಮಾರ್ಪಡಿಸಬಹುದು. ನೀನು ಪತ್ರಿಕೆಗಳಿಗೆ ಬರಿ ‘ ಎಂದು ಒತ್ತಾಯಿಸುತ್ತಲೇ ಇದ್ದಳು. ಇಂದಿಗೂ ನಾನೇನು ಬರೆದರೂ ನನ್ನ ಮೊದಲ ಓದುಗಳು ಹಾಗು ವಿಮರ್ಶಕಳು ಅವಳೇ!

ಎಪ್ಪತ್ತದ ದಶಕದ ಅಂಚಿನಲ್ಲಿ ಅಣ್ಣ ಇದ್ದಾಗ ನಮ್ಮ ದೊಡ್ಡಪ್ಪ ಪ್ರತಿ ಭಾನುವಾರ ನಮ್ಮ ಮನೆಗೆ ಬರೋರು. ಅವರೂ ಪುಸ್ತಕ ಪ್ರೇಮಿ. ಅಮ್ಮನ ಬಿಸಿ ಬಿಸಿ ಕಾಫಿ ಹೀರುತ್ತಾ ಅಣ್ಣ-ತಮ್ಮಂದಿರಿಬ್ಬರೂ ತಾಸುಗಟ್ಟಲೆ ಸಾಹಿತ್ಯದ ಬಗ್ಗೆ ಚರ್ಚೆ ಮಾಡುತಿದ್ದರೆ, ನಾವು ಹುಡುಗರು ಅವರ ಕಾಲ ಬುಡದಲ್ಲಿ ಕುಳಿತು ಬಾಯಿ ಕಳೆದುಕೊಂಡು ಅವರ ಸಂವಾದ ಆಲಿಸುತಿದ್ದೆವು. ನನಗಾಗ ಅವರ ಉನ್ನತ ಮಟ್ಟದ ವ್ಯಾಖ್ಯಾನ ಸ್ಪಷ್ಟವಾಗಿ ಅರ್ಥವಾಗದಿದ್ದರೂ ಒಂದು ದಿನ ನಾನೂ  ಈ ಪುಸ್ತಕಗಳನ್ನೆಲ್ಲ ಓದಬೇಕು ಎಂಬ ಹಂಬಲ ಮೂಡುತ್ತಿತ್ತು.  ಆದರೂ ನಾನು ಮೊದಮೊದಲು ಓದಿದ್ದು ಇಂಗ್ಲಿಷ್ ಪುಸ್ತಕಗಳನ್ನೇ. ಆಂಗ್ಲ ಭಾಷೆಯಲ್ಲಿ ವ್ಯವಹಾರ ಮಾಡುವಷ್ಟು ಜ್ಞಾನವಿದ್ದರೂ ತೀರ ಆಂಗ್ಲ ಪುಸ್ತಕಗಳನ್ನು ಓದುವಷ್ಟು ನನಗೇನು ಇಂಗ್ಲಿಷ್ ಬರುತ್ಯೆ …  ಎಂಬ ಕೀಳಿರಿಮೆ ಇದ್ದ ನನ್ನ ಬೆನ್ನು ತಟ್ಟಿ ಯಾವ ಸಾಹಿತಿ, ಪುಸ್ತಕ ಓದಬೇಕೆಂದು ನನಗೆ ಮಾರ್ಗದರ್ಶನ ನೀಡಿದವಳು ನನ್ನ ಸಹೋದ್ಯೋಗಿ ರೇಖಾ.

ನಂತರ ನನ್ನ ಜೀವನದಲ್ಲಿ ಬಂದವರು ನನ್ನ ‘ಬುಕ್ಸ್ ಅಮ್ಮ’. ನನ್ನನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ ನನ್ನ ಮಾತೃ ಸಮಾನ ಜಯಮ್ಮನವರು. ಅವರ ಬಳಿ ಐದು ಸಾವಿರಕ್ಕೂ ಮೀರಿ ಪುಸ್ತಕಗಳಿವೆ. ಅದರಲ್ಲಿ ಒಂದೊಂದು ಅಣಿಮುತ್ತುಗಳಂತೆ ಇರುವ ಪುಸ್ತಕಗಳನ್ನು ಹೆಕ್ಕಿ ತೆಗೆದು, ಅದರ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿ, ಕುತೂಹಲ ಕೆರಳಿಸಿ ನಾನು ಆ ಪುಸ್ತಕ ಓದುವಂತೆ ಮಾಡಿದ್ದಲ್ಲದೆ, ಪುಸ್ತಕ ಹಿಂದಿರಿಗಿಸುವಾಗ ‘ಅರೆರೆ ನೀನು ಬಲು ಫಾಸ್ಟ್.  ಕೆಲಸಕ್ಕೂ ಹೋಗಿ ಇಷ್ಟು ಬೇಗ ಓದಿ ಮುಗಿಸಿದೆಯ? ತೊಗೊ ಈಗ ಇದನ್ನು ಓದು ಎಂದು ಬೇರೊಬ್ಬ ಸಾಹಿತಿಯ ಮತ್ತೊಂದು ಪುಸ್ತಕ ಕೊಡುತಿದ್ದರು. ವಾರಾಂತ್ಯದಲ್ಲಿ ನಮ್ಮಿಬ್ಬರ ಮಧ್ಯೆ ಸಾಹಿತ್ಯದ ಬಗ್ಗೆ ಸಂವಾದ ನಡೆಯುತ್ತೆ. ವಯಸ್ಸಿನ ಅಂತರವಿದ್ದರು ನನಗೆ ಅವರಿಂದ ಬೌದ್ಧಿಕ ಸಾಂಗತ್ಯ ದೊರಕಿದೆ.

ಹೀಗಿದ್ದೂ ಹಲವು ವರುಷಗಳಿಂದ ನನಗೆ ಒಂದು ಕೊರಗು ಕಾಡುತಿತ್ತು.ಭೈರಪ್ಪನಂತಹವರ ಒಡನಾಟ ಹೊಂದಿದ್ದ ನಮ್ಮಣ್ಣ ಕನ್ನಡ ಮಾಧ್ಯಮದಲ್ಲಿ ಓದಿದ್ದ ನನಗೆ, ಕೆಲವೊಮ್ಮೆ ಸಮಯದ ಅಭಾವದಿಂದಲೋ, ಅನಾರೋಗ್ಯದ ಕಾರಣದಿಂದಲೋ ‘ರಮೂ ನನಗೆ ಕೂತಲ್ಲಿ ನಿಂತಲ್ಲಿ ಅನೇಕ ವಿಚಾರಧಾರೆಗಳು ಬರುತ್ತವೆ.  ಅವನ್ನೆಲ್ಲ ತಕ್ಷಣ ಹೇಳುತ್ತಾ ಹೋಗ್ತೀನಿ. ನೀನು ಒಂದು ಕಡೆ ಬರೆದಿಡ್ತಾ ಬಾ. ಆಮೇಲೆ ನಾನು ಅವುಗಳನ್ನು ಒಟ್ಟುಗೂಡಿಸಿ ಒಂದು ಸಣ್ಣ ಕಥೆ ಅಥವಾ ಅಂಕಣ ಬರೆಯುತ್ತೇನೆ ‘ ಎನ್ನುತಿದ್ದರು. ಆದರೆ ಅದು ನನ್ನ ಶಾಲಾ ದಿನಗಳ ಕಾಲ. ಸುಡು ವಾಸ್ತವಗಳ ಅರಿವಿಲ್ಲದ ವಯಸ್ಸು. ಅಣ್ಣನ ಪ್ರತಿಭೆ, ವಿದ್ವತ್ತು ಅರ್ಥಮಾಡಿಕೊಂಡು ಅವರಿಗೆ ಒತ್ತಾಸೆಯಾಗಿ ನಿಲ್ಲಬೇಕೆಂಬ ಅರಿವಿಲ್ಲದ ಎಳಸು ಮನಸ್ಸು. ಹೀಗಾಗಿ ‘ಹೋಗಣ್ಣೀ’ ಎಂದು ಆಟವಾಡಲು ಓಡಿಬಿಡ್ತಿದ್ದೆ.

ಶಿವರಾಮ ಕಾರಂತರು ಅವರ ಒಂದು ಕಾದಂಬರಿಯ ಮೊದಲ ಮಾತಿನಲ್ಲಿ ‘ಕು. ಗಿರಿಜೆ ಈ ಊರನ್ನು ಬಿಟ್ಟು ಪರವೂರು ಸೇರಿದಮೇಲೆ ಈ ಎರಡು ವರ್ಷಗಳಲ್ಲಿ ನಾನು ತಿರುಗಿ ಲೇಖನಿ ಹಿಡಿಯಬೇಕಾಯಿತು. ಈ ವರ್ಷ ಕುಂದಾಪುರದ ಶ್ಯಾಮಲೆ ಪುತ್ತೂರಿಗೆ ಬಂದು ಈ ಕಾದಂಬರಿಯನ್ನು ಬರೆದುಕೊಂಡಿದ್ದರಿಂದ ಈ ಕಾದಂಬರಿಯ ಸರಾಗ ಲೇಖನ ಸಾಧ್ಯವಾಯಿತು’. ಎಂದು ಬರೆದಿದ್ದರು. ಅದನ್ನು ಓದಿದ ನನಗೆ ನಾನು ಗಿರಿಜೆಯೋ, ಶ್ಯಾಮಲೆಯೋ ಆಗಬಾರದೇ…. ನನಗೂ ಒಬ್ಬ ಗುರುಗಳು ಸಿಗಬಾರದೇ… ನನ್ನಣ್ಣನಿಗೆ ಮಾಡದ ಅಕ್ಷರ ಸೇವೆ ಬೇರೆ ಯಾರಾದರೂ ಬರಹಗಾರರಿಗೆ ಮಾಡಿ ನನ್ನ ಗಿಲ್ಟ್ ಅನ್ನು ಸ್ವಲ್ಪವಾದರೂ ಶಮನ ಮಾಡಿಕೊಳ್ಳಬಹುದು ಎಂದು ಮನಸ್ಸು ಹಪಹಪಿಸಿತು. ನನ್ನ ನಿರಂತರ ಹುಡುಕಾಟದಲ್ಲಿ ಕಡೆಗೂ ಗುರುಗಳು ಸಿಕ್ಕರು!  ಓರ್ವ ಹಿರಿಯ ಪತ್ರಕರ್ತರು ನನ್ನ ಆಶಯ ಗುರುತಿಸಿ ‘ನಿಮ್ಮ ಅಕ್ಷರದಾಹದ ಬಗ್ಗೆ  ನನಗೆ ಸಂತಸವಾಯಿತು. ಬನ್ನಿ ನಮ್ಮ ಪತ್ರಿಕೆಯೊಂದಿಗೆ ಕೈಜೋಡಿಸಿ. ಒಟ್ಟಿಗೆ ಸೇರಿ ಒಳ್ಳೆಯ ಕೆಲಸ ಮಾಡುವ’ ಎಂದಾಗ ನನಗೆ ಸ್ವರ್ಗಕ್ಕೆ ಮೂರೇ  ಗೇಣು!

ಇದೇ  ಅಕ್ಷರ ಸೇತುವೆಯಲ್ಲಿ ಇನ್ನು ಕೆಲವು ಉಪಸಂಪಾದಕರು, ಅಂಕಣಕಾರರು ಪರಿಚಯವಾದರು. ಅವರಿಗೂ ನನ್ನ ಅಳಿಲು ಸೇವೆ ಸಲ್ಲಿಸುವುದರಲ್ಲಿ ಕೃತಾರ್ಥತೆ ಹೊಂದಿದ್ದೇನೆ.

ಸಾಮಾನ್ಯವಾಗಿ ನನ್ನ ವಯಸ್ಸಿನವರು ‘ಸಾಕಪ್ಪ ಸಾಕು… ಆದಷ್ಟು ಬೇಗ ರಿಟೈರ್ ಆಗಿ ವಾಕಿಂಗ್, ಯೋಗ, ದೇವಷ್ಟಾನ ಅಂತ ಆರಾಮವಾಗಿರ್ತೀವಿ’ ಎಂದು ನಿಡುಸುಯ್ದರೆ ನನಗೆ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಬೇಕು, ನನ್ನನ್ನು ನಾನು ಸಂಪೂರ್ಣ ಅಕ್ಷರ ಸೇವೆಗೆ ಮುಡಿಪಾಗಿಡಬೇಕು, ನನಗೆ ಇನ್ನು ಹತ್ತು ಹಲವು ಗುರುಗಳು ಸಿಗಬೇಕು, ಮುಂದೊಂದು ದಿನ ನಾನು ಒಂದು ಪತ್ರಿಕೆಯಲ್ಲಿ ಕೆಲಸ ಮಾಡಬೇಕು …ಅಲ್ಲಿ  ಸದಾ ಓದುವುದೇ ನನ್ನ ಕೆಲಸವಾಗಬೇಕು …  ನನ್ನದೇ ಪತ್ರಿಕೆ ಎಂಬ ಭಾವದಿಂದ ಕೆಲಸ ಮಾಡಬೇಕು, ಊರಿನಿಂದ, ಮನೆಯಿಂದ ದೂರವಿರುವ ನನ್ನ ಭಾವಿ ಸಹೋಧ್ಯೋಗಿ ಮಿತ್ರರಿಗೆ ಮನೆಯಿಂದ ಊಟ ಕೊಂಡೊಯ್ದು ಕೊಡಬೇಕು…. ಅವರ ಕನಸುಗಳಿಗೆ ಒತ್ತಾಸೆಯಾಗಿ ನಿಲ್ಲಬೇಕು…. ಹೀಗೆ ಆಲೋಚನಾ ಲಹರಿ ಮೂಡುತ್ತದೆ.

We all mould one another’s dreams!

We all hold one another’s fragile hopes in our hands;

We all touch others’ hearts …..

ಎಲ್ಲೋ ಓದಿದ ಮೇಲಿನ ಸಾಲುಗಳು ನನ್ನ ಕನಸುಗಳನ್ನು ಗರಿಗೆದರಿಸುತ್ತವೆ!

1 COMMENT

 1. ನಿಮ್ಮ ಕಥೆ ಓದಿದಾಗ ಏನೋ ಒಂದು ಬಗೆಯ ಆನಂದ ನನ್ನಾವರಿಸಿತು. ಕಾರಣ? ಹಾಗೂ ಹೀಗೂ ನನ್ನ ಐವತ್ತರ ಪ್ರಾಯದಲ್ಲಿ ನನ್ನ ಮಾತೃಭಾಷೆವಿಚಾರ ಕಲಿತೆ. ಇದಕ್ಕೆ ಪ್ರೇರಣೆ ನಮ್ಮಮ್ಮ. ತಮ್ಮ ಅರವತ್ತರಲ್ಲಿ ಅವರು ಎಂಟುಮಕ್ಕಳ ವಿದ್ಯಾಭ್ಯಾಸ ಮುಗಿಸಿ ತಾವು ಕನ್ನಡ ಎಮ್ ಏ ಪದವಿಗೆ ಸೇರಿದ್ದರು. ನಾ ಕಲಿತದದ್ದು: ಸಾಹಿತ್ಯದ ಅನುಭವಕ್ಕೆ ಬೇಕಾದ ಸಲಕರಣೆಗಳು ಜನ್ಮದೊಂದಿಗೆ ಉಡುಗೊರೆಯಾಗಿ ಬಂದಿದೆ. ಆ ಸ್ವತ್ತನ್ನು ಆನಂದಕ್ಕಾಗಿ ಉಪಯೋಗಿಸಲು ಕಲಿಯುವುದೂ ಒಂದು ವಿದ್ಯೆ. ಅದರ ಮೂಲ..
  ನಾರಿ ನದಿ ಋಷಿಯ ಮೂಲವ |
  ಅರಸಿದಿರೆನುವ ಗಾದೆ ಹೇಳ |
  ತರನೆ ಸಾಹಿತ್ಯ ಮೂಲವು |
  ಬರಿಯ ಹಿತವಚನವಿದನೂ |
  ಮೀರಿದರೇನೆಂದು ಅರಸೆ |
  ದೊರೆವುದು ಪರವನರಿವ ಬೇನೆ ||

Leave a Reply