![]() |
ಶಮ, ನಂದಿಬೆಟ್ಟ
ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಬದುಕಿನ ವ್ಯಾಖ್ಯೆ ಪರಿಭಾಷೆಗಳು ಹೊಸದೊಂದು ಸ್ವರೂಪವನ್ನೇ ಪಡೆದುಕೊಳ್ಳುತ್ತಿದೆ. ಬಣ್ಣದ ಬದುಕಿನ ಜತೆಗೇ ಪೈಪೋಟಿಗೆ ಬಿದ್ದಿರುವ ಈ ಕಾಲಘಟ್ಟದ ಯುವ ಜನಾಂಗವನ್ನು ನೋಡಿದರೆ ಒಂದೆಡೆ ಮೆಚ್ಚುಗೆ ಇನ್ನೊಂದೆಡೆ ಆತಂಕ ಸಹಜವಾಗಿ ಮೂಡುತ್ತಿದೆ. ವಾತಾವರಣ, ಶಿಕ್ಷಣಗಳ ಪ್ರಭಾವ ಎಂದು ಹಾರಿಕೆ ಮಾತಾಡುವುದು ಸುಲಭವೇ. ಅಷ್ಟೇ ಮಟ್ಟಿಗೆ ಗರ್ಭದೊಳಗಿನ ವಾತಾವರಣವೂ ಕಾರಣ ಎನ್ನುತ್ತದೆ ವಿಜ್ಞಾನ. ಮೊಳಕೆಯೊಡೆದು ಹೆಮ್ಮರವಾಗಬಲ್ಲ ಗಿಡದ ವಿವಿಧ ಆಯಾಮಗಳಿಗೆ ಬೀಜದ ಗುಣ ಎಷ್ಟು ಕಾರಣವೋ ಕ್ಷೇತ್ರದ ಗುಣಮಟ್ಟವೂ ಅಷ್ಟೇ ಮುಖ್ಯ. “ಸೌಮನಸ್ಯಂ ಗರ್ಭಧಾರಣಂ” ಸುಮ್ಮನೇ ಹೇಳಿಲ್ಲ. ಸುಮನಸ್ಸಿನಿಂದ ಹೊತ್ತ ಗರ್ಭ ಸಂಜಾತ ಮಾತ್ರ ಅಂತದ್ದೊಂದು ವ್ಯಕ್ತಿತ್ವ ಹೊಂದಲು ಸಾಧ್ಯ. ಅಭಿಮನ್ಯು ಕಥೆ ಕೇಳಿ ಬೆಳೆದ ಭಾರತೀಯರಿಗೆ ಗರ್ಭದ ಮಹತ್ವಕ್ಕೆ ಬೇರೆ ಸಾಕ್ಷಿ ಬೇಕಿಲ್ಲ.
ಸುಮಾರು ಇಪ್ಪತ್ತು ಮೂವತ್ತು ವರ್ಷ ಹಿಂತಿರುಗಿ ನೋಡಿದರೆ ಅಂಗೈ ಗೆರೆಯಷ್ಟು ಸ್ಪಷ್ಟವಾಗಿ ಕಾಣುವುದು ಬದಲಾವಣೆಯ ಹಲವು ಚಿತ್ರಗಳು. ಗಂಡು ಹೆಣ್ಣಿನ ಸೌಹಾರ್ದತೆ, ಸಮರಸಕ್ಕಿಂತ ಯಾರು ಹೆಚ್ಚು ಎಂಬ ಚರ್ಚೆ, ಜಿದ್ದಾಜಿದ್ದಿ ಶುರುವಾಗಿದ್ದೂ ಆಗಲೇ. ಹೆಣ್ಣು ಮಕ್ಕಳು ತಾವು ಮಾಡರ್ನ್ ಆಗುವ ಧಾವಂತಕ್ಕೆ ಬಿದ್ದರೆ ಗಂಡು ಮಕ್ಕಳು ಪುರುಷಾಹಂಕಾರವನ್ನು ಸಾಬೀತುಪಡಿಸುವ ಹಪಾಹಪಿಗೆ ಬಿದ್ದರು. ಗಂಡು ಹೆಣ್ಣಿನ ಒಲವಿನ ಬದಲು ಜಗಳದಲ್ಲಿ ಹುಟ್ಟಿದ ಕೂಸು ಬಡವಾಯಿತು!
ತಾಯಿ ಸೇವಿಸಿದ ಆಹಾರ, ಪೇಯಗಳು ಎಷ್ಟು ಸುಲಲಿತವಾಗಿ ಹೊಕ್ಕುಳಬಳ್ಳಿಯ ಮೂಲಕ ಶಿಶುವನ್ನು ಸೇರುತ್ತದೋ ಅಷ್ಟೇ ನೇರವಾಗಿ ಆಕೆ ಸೇದಿದ ಸಿಗರೇಟು, ಮಾಡುವ ಯೋಚನೆಗಳು, ತಾಳಿದ ಭಾವನೆಗಳೂ ವರ್ಗಾವಣೆಯಾಗುತ್ತವೆ ಎನ್ನುತ್ತಾವೆ ನೂರಾರು ಸಂಶೋಧನೆಗಳು. ದೈಹಿಕ, ಮಾನಸಿಕ ಒತ್ತಡಗಳೆರಡೂ ಗರ್ಭಿಣಿಯ ಜತೆ ಮಗುವನ್ನೂ ಹೈರಾಣಾಗಿಸುತ್ತವೆ. ತಾಯಿ ಖುಷಿಯಾಗಿ ಆರೋಗ್ಯವಾಗಿದ್ದಷ್ಟೂ ಮಗುವಿನ ಬೆಳವಣಿಗೆ ನಿರಾತಂಕ. ತಾಯಿಯಾಗುವ ಹೊತ್ತಿಗೆ ವೇದಗಳ ಕಾಲದಿಂದಲೂ ವಿಶೇಷವಾದ ಪ್ರಾಮುಖ್ಯತೆ ಕೊಟ್ಟಿರುವುದೇ ಈ ಕಾರಣಕ್ಕೆ.
ಗೆಳತಿಯೊಬ್ಬಳು ಬಸುರಿನ ಬಹುಪಾಲು ಸಮಯವನ್ನು ತನ್ನೂರ ಕೆರೆಯ ಮೀನುಗಳನ್ನು ನೋಡುವುದರಲ್ಲಿ, ಕೆರೆಯಲ್ಲಿ ಕಾಲಾಡಿಸುತ್ತ ಕನಸು ಕಟ್ಟುವುದರಲ್ಲಿ ಕಳೆಯುತ್ತಿದ್ದಳು. ಮತ್ತೆ ನಾನವಳನ್ನ ನೋಡಿದ್ದು ಮಗ ಹೈಸ್ಕೂಲ್ ಸೇರಿದಾಗಲೇ. ಮನೆಯಲ್ಲಿ ನಾಲ್ಕಕ್ಕೂ ಹೆಚ್ಚು ಅಕ್ವೇರಿಯಂಗಳು. ಒಂದನ್ನೇ ನಿಭಾಯಿಸಲಾಗದೆ ಒದ್ದಾಡುವ ನಂಗೆ ಅಚ್ಚರಿ ಜತೆಗೆ ಕುತೂಹಲ. ತಣ್ಣನೆ ಉತ್ತರಿಸಿದ್ದಳು “ಇದನ್ನೆಲ್ಲ ನೋಡ್ಕೋಳೋದು ಗಗನ್ ಕಣೇ, ಅವನಿಗೆ ಮೀನುಗಳು ತುಂಬಾ ಇಷ್ಟ” ಥಟ್ಟನೇ ನನ್ನಲ್ಲಿ ಇವಳು ಮೀನುಗಳ ಜತೆ ಆಟವಾಡ್ತಿದ್ದ ಚಿತ್ರ. ಮಾತಾಡುತ್ತಾ “ಬೆಂಗಳೂರು ಬೇಜಾರಾದಾಗ ಹೋಗೋಕೆ ಊರ ಕಡೆ ಎಲ್ಲಾದರೂ ಜಾಗ ತೊಗೋಬೇಕು” ಅವಳಂದಿದ್ದೇ ತಡ “ಅಮ್ಮಾ ಅಲ್ಲೊಂದು ಫಿಶ್ ಪಾಂಡ್ ಮಾಡೋಣ” ಪಟ್ಟನೇ ಹೇಳಿದ್ದ ಅಲ್ಲೇ ಪಕ್ಕದಲ್ಲಿ ಹೋಮ್ ವರ್ಕ್ ಮಾಡುತ್ತಿದ್ದ ಕುಮಾರ ಕಂಠೀರವ.
ಮಿನಸೋಟಾದ ವಿಶ್ವವಿದ್ಯಾಲಯದಲ್ಲಿ ಮನಃಶ್ಯಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿಯಾಗಿದ್ದು ಜೀವಿತಾವಧಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಗರ್ಭಾವಸ್ಥೆಯು ನಿರ್ಧರಿಸುವ ರೀತಿಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿರುವ ಎಲೀಸಿಯಾ ಡೇವಿಸ್ ಪ್ರಕಾರ “ಗರ್ಭಾಶಯದೊಳಗಿನ ಸಣ್ಣಪುಟ್ಟ ಬದಲಾವಣೆ, ಹಾರ್ಮೋನುಗಳ ಏರುಪೇರು, ಆಹಾರದ ವ್ಯತ್ಯಯಗಳು ಕೂಡ ಭ್ರೂಣದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಬಲ್ಲದು. ಹುಟ್ಟಿನ ನಂತರದ ಸ್ವಬಾವಗಳು, ವ್ಯಕ್ತಿತ್ವ ಮತ್ತು ಮೆದುಳು ಬೆಳವಣಿಗೆಯಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುವುದನ್ನು ಸಂಶೋಧನೆಗಳು ಹೆಚ್ಚು ಹೆಚ್ಚು ದೃಢ ಪಡಿಸುತ್ತಿವೆ” ಟೊರಾಂಟೋ ವಿಶ್ವ ವಿದ್ಯಾಲಯದಲ್ಲಿ ಗರ್ಭಿಣಿಯರ ಮೇಲೆ ನಡೆಸಿದ ಸಂಶೋಧನೆಗಳ ಫಲಿತಾಂಶಗಳ ಪ್ರಕಾರ ಹುಟ್ಟಿಗೂ ಮೊದಲು ಒತ್ತಡ ಅನುಭವಿಸಿದ ಮಕ್ಕಳ ಭಾಷಾ ಬೆಳವಣಿಗೆ ಮತ್ತು ಪ್ರೌಢಿಮೆ ಕೂಡ ಕಡಿಮೆ ಇರುತ್ತದೆ.
ಮಗಳು ಸ್ವಾತಿ ಹೊಟ್ಟೆಯೊಳಗಿದ್ದಾಗ ನಾನು ಎಮ್.ಎಸ್ಸಿ ಮಾಡ್ತಿದ್ದೆ. ಊಟ ತಿಂಡಿ, ನಿದ್ದೆಗಿಂತ ಹೆಚ್ಚು ಶ್ರದ್ಧೆಯಿಂದ ಓದು ಓದು. ನೂರಾರು ಆಟಿಕೆಗಳನ್ನ ಎದುರು ತಂದಿಟ್ಟರೂ ಎಲ್ಲವನ್ನು ಬಿಟ್ಟು ಪುಸ್ತಕಗಳ ಶೆಲ್ಫಿನ ಕಡೆಗೇ ಅಂಬೆಗಾಲಿಟ್ಟು ಎಲ್ಲ ಅರ್ಥವಾಗುವವಳಂತೆ ತಿರುವಿ ಹಾಕುತ್ತಿದ್ದಳು ಕೂಸು. ಆವತ್ತು ಎಡೆ ಬಿಡದೆ ನಾ ಓದಿದ್ದು ಇವಳಿಗೂ ಅಂಟಿಕೊಂಡಿತ್ತು. ಹಿರಿ ಮಗಳು ಪ್ರಣತಿ ಒಳಗಿದ್ದ ಒಂಭತ್ತೂ ತಿಂಗಳೂ ನಾನು ಸಂಗೀತ, ಕಥೆಗಳಲ್ಲಿ ಲೀನ. ಸುಮಾರು ಎರಡೂವರೆ ವರ್ಷವಿದ್ದಾಗ ಗೆಳತಿ ಭಾರತಿ ಮನೆಯ ಗೋಡೆಯ ಮೇಲಿನ ಚಿತ್ರ ನೋಡಿ ಸುಮಾರು ಐದು ನಿಮಿಷಕ್ಕೂ ಹೆಚ್ಚು ಹೊತ್ತು ಸ್ವಯಂ ಕಥೆ ಕಟ್ಟಿ ಹೇಳಿದ್ದಳು.
ಮಹಿಳೆಯರೂ ಮನೆಯಾಚೆಗೆ ನೌಕರಿ ಮಾಡುವ ಇಂದಿನ ದಿನಮಾನದಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಕಾಳಜಿ ಅಗತ್ಯವಿದೆ. ಕಚೇರಿಯ ಒತ್ತಡಗಳನ್ನು ಮನೆಗೆ ತರುವುದು, ಪ್ರಮೋಶನ್, ಇನ್^ಕ್ರಿಮೆಂಟ್ ಗಾಗಿ ಅತೀ ದುಡಿತ ಇಂಥವೆಲ್ಲ ಬಹಳಷ್ಟು ದುಷ್ಪರಿಣಾಮ ಬೀರಬಲ್ಲವು. ಅದರ ಬದಲಾಗಿ ಅನಿವಾರ್ಯತೆ ಇದ್ದರಷ್ಟೇ ದುಡಿತ, ಸಾಕಷ್ಟು ಬಿಡುವು, ಬೇಕಾದಷ್ಟು ನಗು, ನಲಿವು ಮಗುವಿನಲ್ಲೂ ನಿರಾಳತೆಯನ್ನ ತುಂಬುತ್ತವೆ. ಬಸಿರು ಒಂದು ಹೊರೆಯಂತಲ್ಲದೇ ಅದೃಷ್ಟವೆಂಬಂತೆ ಅನುಭವಿಸಿದರೆ ಮಗುವಿಗೆ ತಾನಿಲ್ಲಿ ಬಹು ಅಪೇಕ್ಷಿತ ಎಂಬ ಭಾವ ಮೂಡುತ್ತದೆ ಮತ್ತು ಹುಟ್ಟಿನ ನಂತರವೂ ಹೊರ ಜಗತ್ತಿನ ಜತೆ ಬೆಸೆದುಕೊಳ್ಳಲು ಸುಲಭವಾಗುತ್ತದೆ.
ಮಗುವೆಂದರೆ ಅದು ಒಂದು ಕುಟುಂಬಕ್ಕೆ ಮಾತ್ರ ಸೇರಬೇಕಾದ ಜೀವವಾಗಲೀ, ಆಸ್ತಿಗೆ ವಾರಸುದಾರ ಮಾತ್ರವಾಗಲೀ ಅಲ್ಲ. ಪ್ರತಿ ಕಂದನೂ ನಮ್ಮ ದೇಶದ ಭವಿಷ್ಯದ ಬೆಳಕಿನ ಬೀಜ. ಅಂಥ ದಿವ್ಯ ಪ್ರಭೆಯನ್ನು ಕುಡಿಯೊಡೆದ ಘಳಿಗೆಯಿಂದಲೇ ಸರಿಯಾಗಿ ಪೋಷಿಸಿ, ಪಾಲಿಸಿ, ಲಾಲಿಸುವುದು ಪ್ರತಿ ಕುಟುಂಬದ ಕರ್ತವ್ಯ ಕೂಡ ಹೌದು. ಭೂಮಿಯಾಚೆಗಿನ ಕಾಂಡದಷ್ಟೇ ಬೇರು ಕೂಡ ಮುಖ್ಯ. ಹಾಗಿದ್ದಾಗ ಸದೃಢ, ಸುಂದರ ತಳಹದಿ ಹಾಕಿ ಸಂಸ್ಕಾರದ ನೀರೆರೆದರೆ ಮಾತ್ರ ಚೆಂದದ ಹೂ ಅರಳೀತು. ಮನೆ ತುಂಬುವ ಮಗು ಮನ ತುಂಬಿ ದೀಪವಾಗಿ ಬೆಳಗೀತು. ಅದಕ್ಕೆ ಬೇಕಾದ ಜಾಣ್ಮೆ, ತಾಳ್ಮೆ ಮತ್ತು ಮನಸ್ಸು ನಮಗಿರಬೇಕು ಅಷ್ಟೇ.
(ಲೇಖಕಿಯ ಹಲವು ಬರಹಗಳು ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಾಲ್ಯಾವಧಿ ಶಿಕ್ಷಣ ಹಾಗೂ ನಿರ್ವಹಣೆಯಲ್ಲಿ ಎಮ್ ಎಸ್ ಸಿ ಪದವಿ. ಎರಡು ಮಕ್ಕಳ ತಾಯಿಯೂ ಆಗಿರುವ ಇವರು, ತಾಯ್ತನ- ಮಕ್ಕಳನ್ನು ಬೆಳೆಸುವುದು ಇತ್ಯಾದಿ ವಿಷಯಗಳ ಸುತ್ತ ಡಿಜಿಟಲ್ ಕನ್ನಡಕ್ಕೆ ಅಂಕಣ ಬರೆಯುತ್ತಾರೆ.)
[…] ಇವರ ಮೊದಲ ಅಂಕಣ ಓದಿ- ಬಸುರಿಗೆ ಬಲ ಕೊಡುವ ಆಹಾರವಷ್ಟೇ ಅಲ್ಲ, ಖುಷಿ … […]