ಮಲೇಷ್ಯಾ ಸುತ್ತಿ ಬಂದಾಗ ಕಾಡಿದ ವಿಷಯ        

 

ರಂಗಸ್ವಾಮಿ ಮೂಕನಹಳ್ಳಿ

ಜಗತ್ತಿನಲ್ಲಿ ವಿಶ್ವಸಂಸ್ಥೆ ಮಾನ್ಯತೆ ಪಡೆದ 196 ದೇಶಗಳಿವೆ. ಅವುಗಳಲ್ಲಿ ಜನ ಸಾಮಾನ್ಯರು ಹೋಗಲು ಹೆದರುವ ದೇಶಗಳು ಒಂದೈವತ್ತು ಅಂತ ವಿಂಗಡಿಸಿದರೂ ನೂರಾರು ದೇಶಗಳಿವೆ ಸುತ್ತಲು! ಹೀಗಿರುವಾಗ ಒಮ್ಮೆ ನೋಡಿದ ದೇಶವನ್ನು ಮತ್ತೊಮ್ಮೆ ನೋಡಲು ಹೋಗುವುದೇ? ಒಮ್ಮೆ ಭೇಟಿ ಇತ್ತ ದೇಶ ಮತ್ತೊಮ್ಮೆ ಹೋಗಿಲ್ಲ ಎಂದಲ್ಲ, ಬಹಳ ದೇಶಗಳು ಪುನರಾವರ್ತನೆ ಆಗಿವೆ. ಆದರೆ ಮಲೇಷ್ಯಾಕ್ಕೆ ಮತ್ತೊಮ್ಮೆ ಭೇಟಿ ನೀಡಲು ಪ್ರಮುಖ ಕಾರಣ, 2005 ರಲ್ಲಿ ಭೇಟಿ ಇತ್ತಾಗ ಎಲ್ಲೆಡೆ ಕಾಣುತಿದ್ದ ಫಲಕಗಳು ‘ವವಿಸನ್ 2020’, ಅಂದರೆ ವಿಷನ್ 2020 ಎಂದರ್ಥ. ರಸ್ತೆಯಲ್ಲಿ ವಾಹನಗಳ ಸಂಚಾರ ಹೇಳಿಕೊಳ್ಳುವಂತೆ ಇರಲಿಲ್ಲ. ಮಲೇಷ್ಯಾದ ರಾಜಧಾನಿ ಕೌಲಲಂಪುರ ಸಮೀಪಿಸುತ್ತಿದ್ದಂತೆ ಹೆಚ್ಚಾಗುತ್ತಿದ್ದ ವಾಹನ ದಟ್ಟಣೆ ಬಿಟ್ಟರೆ ಉಳಿದಂತೆ ದೇಶದ ಉದ್ದಗಲಕ್ಕೂ ಟ್ರಾಫಿಕ್ ಕಿರಿ ಕಿರಿ ಇರಲಿಲ್ಲ. ಆದರೂ ವವಸನ್ 2020 ಎನ್ನುವ ಘೋಷವಾಕ್ಯದೊಂದಿಗೆ ದೇಶದ ಉದ್ದಗಲಕ್ಕೂ ರಸ್ತೆ , ಫ್ಲೈಓವರ್ , ಬ್ರಿಜ್ , ಹೈವೇ ನಲ್ಲಿ ಪ್ರಯಾಣಿಸುವ ಜನರಿಗಾಗಿ  ಆರ್ ಅಂಡ್ ಆರ್ ಕಟ್ಟಡ ನಿರ್ಮಾಣಗಳು ( ರೆಸ್ಟ್ ಅಂಡ್ ರಿಕ್ರಿಯೆಶನ್ ) ಒಂದೇ ಎರಡೇ ಸರಕಾರ ಹಮ್ಮಿ ಕೊಂಡಿದ್ದ ಕಾರ್ಯಕ್ರಮಗಳು? ಮನೆ ಮುಂದಿನ ಮೋರಿ ಕಟ್ಟಿಕೊಂಡರೆ ಸರಿ ಮಾಡಿ ಅಂತ ಕಾರ್ಪೋರೇಶನ್ಗೆ ದಂಬಾಲು ಬಿದ್ದರೂ ಸರಿಯಾಗದ ಸ್ಥಿತಿ ನೋಡಿದ್ದ ನನಗೆ ಮಲೇಷ್ಯಾ ಸರಕಾರದ ಘೋಷವಾಕ್ಯ ವವಸನ್ 2020 ಎಲ್ಲಿ ತನಕ ಬಂದಿದೆ ಎನ್ನುವ ಕೂತೂಹಲ. ಹೀಗಾಗಿ ಮಲೇಷ್ಯಾ ಹೋಗುವುದೆಂದು ತಿಂಗಳು ಮುಂಚೆಯೇ ನಿರ್ಧರಿಸಿ ಆಗಿತ್ತು.

ಅನ್ನಿಗೆ ವಾರದ ಮುಂಚೆ ಮಲೇಷ್ಯಾ ಪ್ರಯಾಣದ ಬಗ್ಗೆ ಹೇಳಿದ್ದೆವು. ಇನ್ನೂ ಕೇವಲ ಬಾಯಿಪಾಠಕ್ಕೆ ವಾರ ತಿಂಗಳು ಹೇಳಲು ಕಲಿತಿರುವ ಅನ್ನಿ ನಿತ್ಯವೂ ಎದ್ದು ‘ಪಪ್ಪಾ, ಇವತ್ತಾ ನಾವು ಮಲೇಷ್ಯಾಗೆ ಹೋಗುವುದು ?’ ಎಂದು ಮುಗ್ದವಾಗಿ ಪ್ರಶಿನಿಸಿದಾಗೆಲ್ಲ ‘ಇಲ್ಲ ಕಂದ , ನಾಳೆ’ ಎಂದಷ್ಟೇ ಹೇಳುತ್ತಿದ್ದೆ.

ಅನ್ನಿ ಕೇಳುತಿದ್ದ ನಾಳೆ ಬಂದಿತು, ಪ್ರಯಾಣ ಸುಖಕರವಾಗಿ ನಾವು ಮಲೇಷ್ಯಾ ತಲುಪಿದೆವು.

ಮಲೇಷ್ಯಾ – ಭಾರತ ಹಳೆಯ ನಂಟು

ಮಲೇಷ್ಯಾ ದಲ್ಲಿ ನೋಡಲು ಬಹಳವಿದೆ. ಕೌಲಲಂಪುರ ಎರಡು ಅಥವಾ ಮೂರು ದಿನದಲ್ಲಿ ನೋಡಿ ಮುಗಿಸಬಹುದು. ಮಕ್ಕಳಿಗೆ ಕುಣಿದು ಕುಪ್ಪಳಿಸಲು ಗೆನ್ಟಿಂಗ್ ಹೈಲ್ಯಾಂಡ್ ಎನ್ನುವ ತಾಣವಿದೆ. ಸಾಕೆನಿಸುವಷ್ಟು ಆಟ, ಬೇಕೆನಿಸುವ ತಿನಿಸುಗಳು ಎಲ್ಲಾ  ಇವೆ. ಸಾಕಷ್ಟು ಸಂಖ್ಯೆಯಲ್ಲಿ ತಮಿಳರು ಇರುವುದರಿಂದ ಸಸ್ಯಹಾರಿಗಳಿಗೆ ಅಷ್ಟು ತೊಂದರೆ ಇಲ್ಲ .

ಭಾರತದಲ್ಲಿ, ಬೆಂಗಳೂರಿನಲ್ಲಿ ನಿಮ್ಮ ಹಣ, ಅನುಕೂಲಕ್ಕೆ ತಕ್ಕಂತೆ ಮಲೇಷ್ಯಾ ಪ್ರಯಾಣ ಹೊಂದಿಸಿಕೊಡುವ ಮಂದಿಯ ದಂಡೆ ಇದೆ. ಹೇಗೆ ಹೋಗಬೇಕು, ಏನು ನೋಡಬೇಕು ಎಂದು ಇಲ್ಲಿ ಬರೆಯುವ ಗೋಜಿಗೆ ನಾನಿಲ್ಲಿ ಹೋಗುವುದಿಲ್ಲ, ನನ್ನದೇನಿದ್ದರೂ ಅವರು ನಮ್ಮಂತೆ ಹೌದೋ ಅಲ್ಲವೋ? ಹೌದಾದರೆ ಹೇಗೆ ? ಇಲ್ಲವಾದರೆ ಹೇಗಿಲ್ಲ ? ಎಂದು ನೋಡುವುದಷ್ಟೇ.

ಮಲೇಷ್ಯಾದ ಮೂಲ ಜನರನ್ನು ಭೂಮಿಪುತ್ರ ಎನ್ನತ್ತಾರೆ. ಸಂಸ್ಕ್ರತ ಪದ ಭೂಮಿ ಯಥಾವತ್ತಾಗಿ ಇಂದಿಗೂ ಇಲ್ಲಿ ಉಪಯೋಗಿಸುತ್ತಾರೆ. ಭಯ, ದಂಡ, ಅಂತರ, ಭಾಷೆ, ಬಾಹು, ಬಲ ಹೀಗೆ ನೂರಾರು ಪದಗಳು ನಮಗೆ ಪರಿಚಿತವೇ. ವಾಯು ಇಲ್ಲಿ ಬಾಯೂ, ಕೆಲಿಂಗ್ ಅಂದರೆ ಇಂಡಿಯನ್, ಕೆಲಿಂಗ್ ನ ಮೂಲ ಕಳಿಂಗ. ಕೆಪಾಲ ಅಂದರೆ ತಲೆ ಇದು ಕಪಾಲದಿಂದ ಬಂದದ್ದು. ಕರ್ಮ ಇಲ್ಲೂ ಕರ್ಮದ ಅರ್ಥವನ್ನೇ ನೀಡುತ್ತೆ.

ಒಂದು ನಗರದಿಂದ ಇನ್ನೊಂದು ನಗರಕ್ಕೆ ಸಂಚಾರ ಮಾಡಲು ನೀವು ಬಸ್ ಅಥವಾ ಟ್ರೈನ್ ಸಹಾಯ ಪಡೆದರೆ ‘ಅಂತರ ನಗರಿ’  ಎಂದರೆ ಅವರಿಗೆ ಬಹು ಸುಲಭವಾಗಿ ಅರ್ಥ ಆಗುತ್ತೆ. ನಿಮಗೂ ಕಷ್ಟ ಇರುವುದಿಲ್ಲ.

ಶ್ರೀ ಎನ್ನುವುದು ಹೈಯೆಸ್ಟ್ ಸ್ಟೇಟ್ ಟೈಟಲ್, ಎಲ್ಲರೂ ಹಾಕಿ ಕೊಳ್ಳುವಂತಿಲ್ಲ. ಮಲೇಷ್ಯಾದ ರಾಜ ಅಥವಾ ರಾಜ್ಯದ ರಾಜ್ಯಪಾಲ, ದೇಶ ಅಥವಾ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ ವ್ಯಕ್ತಿಗೆ ಗೌರವ ಸಲ್ಲಿಸಿ ನೀಡುವ ಬಿರುದು ‘ಶ್ರೀ’.

ಮಲೇಷ್ಯಾ ದ ಇಂದಿನ ಪ್ರಧಾನಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಶ್ರೀ ನಜಿಬ್ ತುನ್ ರಜಾಕ್ (Sri Najib Tun Razak) 2009 ರಿಂದ ಮಲೇಷ್ಯಾ ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿದ್ಯುತ್ ಹರಿವು ಇದೆ, ಹುಷಾರು ಎನ್ನುವ ಕಡೆ ಭಯ ಎಂದು ನಂತರ ಇಂಗ್ಲಿಷ್ನಲ್ಲಿ ಡೇಂಜರ್ ಎಂದು ಬರೆದು ಹಾಕಿದ್ದರು. ಪಾರ್ಕಿಂಗ್ ಸರಿಯಾಗಿ ಮಾಡಿಲ್ಲದಿದ್ದರೆ ‘ದೆಂಡ’ ಇಷ್ಟು ಎಂದು ಫಲಕ ಹಾಕಿದ್ದರು. ಹೀಗೆ ಮಲೇಷ್ಯಾದಲ್ಲಿ ಹೆಜ್ಜೆ ಹೆಜ್ಜೆಗೂ ಕಾಲಘಟ್ಟದ ಯಾವುದೊ ಒಂದು ವೇಳೆಯಲ್ಲಿ ಇದು ನಮ್ಮದೇ ನೆಲವಾಗಿತ್ತೇನೋ ಎಂದು ಅನಿಸದೆ ಇರುವುದಿಲ್ಲ. ಸಹಜವಾಗೇ ಕುತೂಹಲ ಹುಟ್ಟಿ ಒಂದಷ್ಟು ಸಂಶೋಧನೆ ನಡೆಸಿದಾಗ ತಿಳಿದದ್ದು ಇಷ್ಟು.

photo 1

ಶ್ರೀವಿಜಯ ನಾಗರಿಕತೆ 7 ಶತಮಾನದಿಂದ ಇಂಡೋನೇಷ್ಯಾದ ಸುಮಾತ್ರಾದಲ್ಲಿ ನೆಲೆ ಊರಿತ್ತು. ಮುಖ್ಯವಾಗಿ ಹಿಂದೂ ಹಾಗೂ ಬೌದ್ದ ಧರ್ಮ 5ನೆ ಶತಮಾನದಿಂದ 14ನೆ ಶತಮಾನದವರೆಗೆ ಇಲ್ಲಿ ಪ್ರಮುಖ ಪಾತ್ರವಹಿಸಿತ್ತು. 10ನೆ ಶತಮಾನದ ಹೊತ್ತಿಗೆ ಮುಸ್ಲಿಂ ರಾಜರ ಆಕ್ರಮಣ ಶುರುವಾದರೂ 14ನೆ ಶತಮಾನದವರೆಗೆ ಇಲ್ಲಿ ಹಿಂದೂ ಸಂಸ್ಕೃತಿ ನೆಲೆ ನಿಂತಿತ್ತು. 15ನೆ ಶತಮಾನದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಾಗಿ ಇಡಿ ದೇಶವೇ ಮುಸ್ಲಿಂ ಆಡಳಿತಕ್ಕೆ ಒಳಪಟ್ಟಿತು .

ನೀವು ಒಂದು ಜನಾಂಗವನ್ನು ಪೂರ್ಣವಾಗಿ ಮತಾಂತರಿಸಬಹುದು, ಅವರೂ ಯಾವುದೊ ಭಯ ಅಥವಾ ಇನ್ನ್ಯಾವುದೋ ಕಾರಣಕ್ಕೆ ಮತಾಂತರ ಆಗಲೂಬಹುದು. ಹೆಸರು ಬದಲಾಗಬಹುದು, ಅವರ ಸಂಸ್ಕಾರ ಬದಲಾದೀತೇ? ಇಂದಿಗೂ ಹಲವು ರಸ್ತೆ, ಸಂಸ್ಥೆ, ಕಟ್ಟಡಗಳು ಅಳಿದು ಹೋದ ದಿನಗಳ ಪಳೆಯುಳಿಕೆಗಳಂತೆ ಇಂದಿಗೂ ಹಳೆಯ ಹೆಸರು ಹೊತ್ತು  ಜೀವಂತವಾಗಿವೆ.

ಇಂದಿನ ಮಲೇಷ್ಯಾ ಹೇಗಿದೆ ?

ಆಗಸ್ಟ್ ೩೧ , ೧೯೫೭ ರಂದು ಬ್ರಿಟಿಷರಿಂದ ಸ್ವತಂತ್ರವಾದ ಮಲೇಷ್ಯಾ, ೧೯೭೦ ರವರೆಗೆ ಅಂತರ ರಾಷ್ಟೀಯ ಮಟ್ಟದಲ್ಲಿ ಛಾಪು ಮೂಡಿಸುವಲ್ಲಿ ವಿಫಲವಾಗಿತ್ತು. 80 ಪ್ರತಿಶತ ಮಲಯ್ ಗಳು ಬಡತನದಲ್ಲಿ ಬದುಕುತ್ತಿದ್ದರು. ಸಿಂಗಾಪುರ, ಚೀನಾ ದೇಶದ ಜನರ ಕೈಯಲ್ಲಿ ಮುಕ್ಕಾಲು ಪಾಲು ವಹಿವಾಟು ಇತ್ತು. ಮೂಲ ಮಲೇಶಿಯನ್ನರು ಕೂಲಿಗಳಾಗಿ ದುಡಿಯುತ್ತಿದ್ದರು. ನಗರ ಪ್ರದೇಶದಲ್ಲಿ ಹಾಗೂ ಹೀಗೂ ಜೀವನ ಸವೆಸಬಹುದಿತ್ತು. ಗ್ರಾಮೀಣ ಪ್ರದೇಶದಲ್ಲಿ ಬದುಕು ಬಹಳವೇ ದುಸ್ತರವಾಗಿತ್ತು.

ನಗರವೆಂದರೆ ಅದೇನೂ ವ್ಯವಸ್ಥಿತವಾಗಿರಲಿಲ್ಲ. ಕೊಚ್ಚೆ, ರೋಗಗಳ ಆಗರವಾಗಿತ್ತು. ರಸ್ತೆಯ ಬದಿಗಳಲ್ಲಿ, ನಗರದ ಕೋಣೆ ಕೋಣೆಗಳಲ್ಲಿ ಗಲೀಜು.., ಹೊಟ್ಟೆ ಪಾಡಿಗಾಗಿ ನಗರ ಸೇರುವ ಜನರಿಗೆ ಮೂಲ ಸೌಕರ್ಯದ ಕೊರತೆ. ಗ್ರಾಮೀಣ ಜನತೆ ನಗರಕ್ಕೆ ಗುಳೆ ಹೊರಟು, ನಗರದಲ್ಲಿ ಹೊಸ ಬಡತನ ಸೃಷ್ಟಿಸಿದ್ದರು.

ಮಹಾತಿರ್ ಮೊಹಮ್ಮದ್ ಮಲೇಷ್ಯಾದ ಹೆಚ್ಚು ವರ್ಷ ಪ್ರೈಮ್ ಮಿನಿಸ್ಟರ್ ಹುದ್ದೆಯಲಿದ್ದ ವ್ಯಕ್ತಿ, 1981 ರಿಂದ 2003 ರವರೆಗೆ ಈತನ ನಾಯಕತ್ವದಲ್ಲಿ ವ್ಯವಸಾಯ ಪ್ರಧಾನ ಮಲೇಷ್ಯಾ, ಕೈಗಾರಿಕೆ ಪ್ರಧಾನ ದೇಶವಾಗಿ ಮಾರ್ಪಾಡಾಗುತ್ತೆ. ಚೀನಾ ಮೂಲದ ಜನರ ಕೈಲಿದ್ದ ವ್ಯಾಪಾರ, ವ್ಯವಹಾರ ಮೂಲ ಮಲೇಷಿಯನ್ನರ ಕೈ ಸೇರುತ್ತೆ. ಕ್ರಮೇಣ ಬಡತನ ಮಾಯವಾಗಿ, ಮಲೇಷ್ಯಾದ ರೂಪುರೇಷೆ ಬದಲಾಗುತ್ತೆ. ಟ್ವಿನ್ ಟವರ್ ತಲೆ ಎತ್ತುತ್ತೆ, ಜಗತ್ತು ಮಲೇಷ್ಯಾ ಕಡೆ ತಿರುಗಿ ನೋಡುತ್ತೆ. ಇಷ್ಟೆಲ್ಲಾ ಬದಲಾವಣೆಗಳ ಹರಿಕಾರ ಮಹಾತಿರ್ – ‘ವಿಭಿನ್ನ ಧರ್ಮದ ಜನ ನೆಲೆಸುವುದರಿಂದ ಮಾತ್ರ ಒಂದು ಬಲಿಷ್ಠ ಮಲೇಷ್ಯಾ ನಿರ್ಮಾಣ ಸಾಧ್ಯ, ಮತ್ತು ನಿಗ್ರಹಿಸಲ್ಪಟ್ಟ ಪ್ರಜಾಪ್ರಭುತ್ವ (controled democracy ) ದಿಂದ ಮಾತ್ರ ಇದು ಸಾಧ್ಯ’ ಎಂದು ನಂಬಿದ್ದರು. ಹೆಚ್ಚು ಹೆಚ್ಚು ಖಾಸಗೀಕರಣ ಮಲೇಷ್ಯಾದ ಪ್ರಗತಿಗೆ ಮೂಲ ಕಾರಣ.

ಆಗಸಕ್ಕೆ ಚಾಚಿ ನಿಂತ ಕಟ್ಟಡಗಳು, ಅತ್ಯಂತ ದುಬಾರಿ ಕಾರುಗಳು, ಜಗಮಗಿಸುವ ಮಾಲ್ ಗಳು, ಕೆಲಸ ನೀಡಿ ಎಂದು ದೈನೇಸಿಯಂತೆ ಬೇಡುವ ಇಂಡೋನೇಷ್ಯಾ, ಬಾಂಗ್ಲಾದೇಶ, ಪಾಕಿಸ್ತಾನ ದೇಶಗಳು, ಗೆಲುವು , ಯಶಸ್ಸು ಏನು ಎಂದು ನಿರ್ಧರಿಸಲು ಏನು ಬೇಕೋ ಅದೆಲ್ಲವೋ ಇಂದು ಮಲೇಷ್ಯಾದಲ್ಲಿದೆ. ಹಾಗಾದರೆ ಮಲೇಷ್ಯಾ ನಿಜಕ್ಕೂ ಗೆದ್ದಿತೆ?

ನಿಧಾನವಾಗಿ ಮಹಾತಿರ್ ತೆಕ್ಕೆಯಿಂದ ಹೊರಬಂದ ಮಲೇಷ್ಯಾ ಇಂದು ಮಹಾತಿರ್ ನಂಬಿಕೆಯನ್ನು ಮರೆತಿದೆ. ಇಂದು ಅಲ್ಲಿ ವವಸನ್ 2020 ಅಥವಾ ಇನ್ನ್ಯಾವುದೇ ಫಲಕ ಇಲ್ಲ. ಅಲ್ಲಿ ರಾಜಾರೋಷವಾಗಿ ರಾರಾಜಿಸುವುದು portecting investors interest ಎನ್ನುವ ಹೇಳಿಕೆಗಳು.

ಇಂಡೋನೇಷ್ಯಾದಲ್ಲಿ ಪಾಮ್ ಮರಗಳ ಸುಡುವುದು ದಶಕಗಳಿಂದ ನೆಡೆದು ಬರುತ್ತಿರುವ ಕ್ರಿಯೆ. ಜೊತೆಗೆ ಸಮುದ್ರದ ನೀರಿನ ಬಿಸಿ, ನಗರದಲ್ಲಿ ಹೆಚ್ಚಾದ ವಾಹನ ದಟ್ಟಣೆ ಎಲ್ಲಾ ಸೇರಿ ಕೌಲಲಂಪುರ ನರಕ ಸದೃಶವಾಗಿಸಿವೆ. ನಿತ್ಯವೂ ಜನ ಮೂಗಿಗೆ ಬಟ್ಟೆ (ಮಾಸ್ಕ್) ಕಟ್ಟಿಯೇ ನಡೆದಾಡಬೇಕು, ಒಮ್ಮೊಮ್ಮೆ  ನಾಲ್ಕು ಅಡಿ ಮುಂದಿರುವ ಮನುಷ್ಯನ ಮುಖ ಕೂಡ ಕಾಣಿಸದಷ್ಟು ಹೊಗೆ (haze) ತುಂಬಿರುತ್ತದೆ ಎಂದರೆ ಅದು ಉತ್ಪ್ರೇಕ್ಷೆ ಅಲ್ಲವೇ ಅಲ್ಲ.

ಮಲೇಷ್ಯಾ ಜನಸಂಖ್ಯೆ ಸರಿ ಸುಮಾರು 3 ಕೋಟಿ. ಇದರಲ್ಲಿ 22 ಭಾಗ ಚೀನಿಯರು. ಸಾರಿ… ಮಲಯ್ ಚೀನಿಯರು. ಏಕೆಂದರೆ ಇವರಲ್ಲಿ ಬಹುತೇಕ ಜನ ಚೀನಾವನ್ನು ಜೀವನದಲ್ಲಿ ಒಮ್ಮೆಯೂ ನೋಡಿಲ್ಲ.  ಅವರಿಗೆ ಮಲೇಷ್ಯಾವೆ ಎಲ್ಲಾ. 7 ಪ್ರತಿಶತ ಭಾರತೀಯ ಮಲಯ್ ಗಳು, ಬಹುತೇಕ ಭಾರತೀಯರು ತಮಿಳರು, ಇವರು ಮಲೇಷ್ಯಾ ಹೇಗೆ ತಲುಪಿದರು ಎನ್ನುವದು ಇನ್ನೊಂದು ರೋಚಕ ಕತೆ. ಕಾಫಿ ಹಾಗೂ ಟೀ ತೋಟದಲ್ಲಿ ಕೆಲಸ ಮಾಡಲು ಬ್ರಿಟಿಷರು ಇವರನ್ನು ಕರೆತಂದಿದ್ದರು. ಇವರು ಚೀನಿ ಮಲಯ್ ಗಳಿಗಿಂತ ಭಿನ್ನರೇನಲ್ಲ. ಮುಕ್ಕಾಲು ಪಾಲು ಜನ ಭಾರತ, ತಮಿಳುನಾಡು ಒಮ್ಮೆಯೂ ನೋಡಿಲ್ಲ. ಆದರೆ ಸಂಸ್ಕಾರ ಬಿಟ್ಟಿಲ್ಲ. ದೇವಸ್ಥಾನ, ಆಚಾರ ವಿಚಾರ ಎಲ್ಲಾ ಇಲ್ಲಿನಂತೆಯೇ ನಡೆಸಿಕೊಂಡು ಹೋಗುತ್ತಿದ್ದಾರೆ.

ಬಲಿಷ್ಠ ಮಲೇಷ್ಯಾಕ್ಕೆ  ವಿವಿಧ ಧರ್ಮಗಳ ಜನತೆ ಬೇಕು ಎಂದು ಬಯಸಿದ್ದ ಮಹಾತಿರ್ ಮಲೇಷ್ಯಾ ಹಿಂದೆ ಸಾಗಿದೆ. ಇಂದು ಮಲಯ್ ಚೀನಿಯರಲ್ಲಿ, ಮಲಯ್ ಇಂಡಿಯನ್ ರಲ್ಲಿ  ನಾವು ಎರಡನೇ ದರ್ಜೆ ಪ್ರಜೆಗಳು ಎನ್ನುವ ಭಾವನೆ ಅತಿಯಾಗಿ ಕಾಡುತ್ತಿದೆ. ನೂರಾರು ವರ್ಷದಿಂದ ಮಲೇಷ್ಯಾ ತಮ್ಮ ಮನೆ ಎಂದು ನಂಬಿರುವ ಇವರನ್ನು ಇಂದಿಗೂ ಹೊರಗಿನಿಂದ ಬಂದವರು ಎಂದೇ ಪರಿಗಣಿಸಲಾಗುತ್ತದೆ. ಭೊಮಿಪುತ್ರ ಎಂದರೆ ಮುಸಲ್ಮಾನ ಮಾತ್ರ!  ಅವರಿಗೆ ಸಿಕ್ಕುವ ಸವಲತ್ತು ಮತ್ಯಾರಿಗೂ ಇಲ್ಲ. ಹೆಚ್ಚು ಸವಲತ್ತು ಕಡಿಮೆ ಕೆಲಸ ಭೊಮಿಪುತ್ರನ ಸೋಮಾರಿಯಾಗಿಸಿದೆ. ಚೀನಿಯರು, ಭಾರತೀಯರಲ್ಲಿ ನಾವು ದುಡಿತಕ್ಕೆ ಮಾತ್ರ ಇರುವವರು ಎನ್ನುವ ಅತೃಪ್ತಿ ಉಂಟಾಗಿ ಕಂದಕ ಸೃಷ್ಟಿಸಿದೆ.

ಎಲ್ಲಕ್ಕೂ ಹೆಚ್ಚು ಆತಂಕದ ವಿಷಯವೆಂದರೆ ಮಲೇಷ್ಯಾದಲ್ಲಿ ಹೆಚ್ಚುತ್ತಿರುವ ಮೂಲಭೂತವಾದ. ಟಾಯ್ಲೆಟ್ ನಿಂದ ಹಿಡಿದು ಹಲವು ಕಡೆ ಮುಸ್ಲಿಮರಿಗೆ ಮಾತ್ರ ಎನ್ನುವ ಫಲಕಗಳು ಯಾವುದೇ ಮುಲಾಜಿಲ್ಲದೆ ರಾರಾಜಿಸುತ್ತವೆ. ದೇಶ ನೋಡಲು ಬಂದ ಪ್ರವಾಸಿಗಳು ಏನೆಂದುಕೊಂಡಾರು ಎನ್ನುವ ಚಿಂತೆ ಕೂಡ ಇವರಿಗಿಲ್ಲ. ಬಾಂಗ್ಲಾದೇಶ, ಪಾಕಿಸ್ತಾನಿ ನಾಗರಿಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮಲೇಷ್ಯಾ ಸೇರುತ್ತಿದ್ದಾರೆ. ಹಿಂದೆ ಇಂಡೋನೇಷ್ಯಾ , ಫಿಲಿಪೈನ್ಸ್ ದೇಶಗಳ ಜನತೆ ಇಲ್ಲಿ ಕೆಲಸಕ್ಕೆ ಬರುತಿತ್ತು. ಇದೀಗ ಮುಸ್ಲಿಮರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಕಳೆದ ತಿಂಗಳಷ್ಟೇ ಐಸಿಸ್ ಸಂಘಟನೆಗೆ ಸೇರಿದ ಇಬ್ಬರನ್ನು ಬಂಧಿಸಲಾಗಿದೆ. ಮೂಲಭೂತವಾದ ದೇಶವನ್ನು ಸಂಪೂರ್ಣವಾಗಿ ಅಪೋಷಣೆ ತೆಗೆದುಕೊಳ್ಳುವ ಮುನ್ನ ಮಲೇಷ್ಯಾ ಮೊದಲಿನಂತಾಗಲಿ. ಅಂದಹಾಗೆ, ‘ಸಂಪೂರ್ಣ’, ಮಲಯ್ ನಲ್ಲೂ ಸಂಪೂರ್ಣ.

(ಹಣಕಾಸು ಪರಿಣತರಾಗಿರುವ ಲೇಖಕರು, ಜಗವನ್ನು ಸುತ್ತುವ ಹವ್ಯಾಸವನ್ನೂ ಹೊಂದಿದ್ದಾರೆ. ಲೇಖನಕ್ಕೆ ಬಳಸಿದ ಅವಳಿ ಕಟ್ಟಡದ ಚಿತ್ರ ಇಂಟರ್ನೆಟ್ ನದ್ದು. ಉಳಿದಿದ್ದು ಲೇಖಕರದ್ದು.)

2 COMMENTS

Leave a Reply