ಹುಬ್ಬಳ್ಯಾಗ ತೆಲುಗು ಸಿನ್ಮಾನೂ ಜೋರ್ ಓಡಾಕ್ ಹತ್ತೈತ್ರೀ!

ನಿತ್ಯಾಸಿರಿ

‘ವೇಲಾ ತಿರುಗುಬಾತು ಥೊ ಮಹಿಷ್ಮತಿ ಕಿ ಮಕಿಲಿ ಪಟ್ಟಿಂಡಿ ರಕ್ತಂ ತೊ ಕಾಡಿಗೇ’…ಎಂದು ಚೀರುಧ್ವನಿಯಲ್ಲಿ ಯುವಕನೋರ್ವ ಹುಬ್ಬಳ್ಳಿಯ ಕೊಪ್ಪೀಕರ್ ರಸ್ತೆಯಲ್ಲಿ ಹೇಳುತ್ತಾ ಹೊರಟಿದ್ದ. ಇದನ್ನು ಕೇಳುತ್ತಿದ್ದಂತೆಯೇ ನನಗೆ ನಾನೆಲ್ಲಿ ಹೈದರಾಬಾದ್‍ನಲ್ಲಿ ಹೊರಟಿದ್ದೇನೋ ಹೇಗೆ ಎನ್ನುವ ಗೊಂದಲ ಮೂಡಿತು. ಆ ಯುವಕ ಮಾತ್ರ ಅದೇ ಡೈಲಾಗ್‍ನ್ನು ಪದೇ ಪದೆ ಹೇಳುತ್ತ ತನ್ನ ಸ್ನೇಹಿತರೊಡನೆ ಚರ್ಚಿಸುತ್ತ ಹೊರಟಿದ್ದ. ಕುತೂಹಲ ತಡೆಯಲಾಗದೇ ಆತನನ್ನು ‘ಏನ್ರಿ ಈಗ ನೀವು ಹೇಳಿದ ಡೈಲಾಗ್ ಯಾವುದು?’ ಅಂತ ಕೇಳಿಯೇ ಬಿಟ್ಟೆ. ಅದಕ್ಕೆ ಆ ಯುವಕ ‘ಏನ್ ಸಾರ್ ಬಾಹುಬಲಿ ಸಿನಿಮಾ ನೋಡಲಿಲ್ವಾ? ಸೂಪರ್ ಸರ್ ! ಏನ್ ಡೈಲಾಗ್? ಏನು ಶೂಟಿಂಗ್ ಸಾರ್, ಭರ್ಜರಿ ಬಿಡಿ. ನೋಡಿದ್ರೆ ತೆಲುಗು ಸಿನಿಮಾ ನೋಡಬೇಕು ಸಾರ್’ ಎಂದ.

ಇದು ಕೇವಲ ಒಬ್ಬ ಯುವಕನ ಡೈಲಾಗ್ ಅಲ್ಲ. ಇತ್ತೀಚೆಗೆ ಹುಬ್ಬಳ್ಳಿಯ ಹಲವು ಯುವಕರ ಮೇಲೆ ತೆಲುಗು ಚಿತ್ರಗಳ ಮೋಡಿ ಸದ್ದಿಲ್ಲದೇ ಸಾಗಿದೆ. ಬರೀ ಡೈಲಾಗ್ ಗಳಷ್ಟೇ ಅಲ್ಲ, ತೆಲುಗು ಹಾಡುಗಳು ಕೂಡ ಹಲವೆಡೆ ಹೆಚ್ಚಿನ ಸಂಖ್ಯೆಯಲ್ಲಿ ಕೇಳಿ ಬರುತ್ತಿವೆ. ಕಾಲಕ್ರಮೇಣ ಜನರ ಅಭಿರುಚಿ ಭಾಷೆಯ ಗಡಿ ದಾಟಿದೆ. ಅದರಲ್ಲೂ ಯುವಪಡೆ ತೆಲುಗು ಚಿತ್ರಗಳತ್ತ ಹೆಚ್ಚೆಚ್ಚು ಹೆಜ್ಜೆ ಹಾಕುತ್ತಿದ್ದಾರೆ. ಬರೀ ಚಿತ್ರ ನೋಡಲಷ್ಟೇ ಅಲ್ಲ. ಅವರ ವೇಷಭೂಷ ಕೂಡ ಬದಲಾಗುತ್ತಿದೆ. ಟಾಲಿವುಡ್ ನಾಯಕನಟರ ಅನುಕರಣೆ ನಡೀತಾ ಇದೆ.

ಆಧುನಿಕ ತಂತ್ರಜ್ಞಾನ, ಅದ್ಧೂರಿ ಸೆಟ್ ಮತ್ತು ಅತ್ಯುತ್ತಮ ಸಿನಿಮಾಟೋಗ್ರಾಫಿ ಹೀಗೆ ಎಲ್ಲ ಆಯಾಮಗಳಲ್ಲಿ ಜನ ಬದಲಾವಣೆ, ಹೊಸತನ ಬಯಸುತ್ತಿದ್ದಾರೆ. ಈ ತರಹ ಹೊಸತನ ತೆಲುಗು ಚಿತ್ರಗಳಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನ ತೆಲುಗು ಚಿತ್ರಗಳ ವೀಕ್ಷಣೆಗೆ ಮುಗಿ ಬೀಳುತ್ತಿದ್ದಾರೆ. ಹಾಗಂತ ಆಂಧ್ರದಲ್ಲಿರುವಷ್ಟರ ತೀವ್ರತೆಯ ನಾಯಕನಟರ ಆರಾಧನೆ ಇಲ್ಲ.

‘ಮುಂಬೈ ಕರ್ನಾಟಕದ ಕೇಂದ್ರ ಹುಬ್ಬಳ್ಳಿಯಲ್ಲಿ ಜನ ಎಲ್ಲ ಭಾಷೆ ಚಿತ್ರಗಳನ್ನು ನೋಡುತ್ತಾರೆ. ಸ್ಕೋಪ್ ಕೊಡ್ತಾರೆ. ಈಗಿನ ಪೀಳಿಗೆಯ ಪ್ರೇಕ್ಷಕರಿಗೆ ತೆಲುಗು, ತಮಿಳು ಚಿತ್ರ ಹೆಚ್ಚು ನೋಡ್ತಾರೆ. ಯಾಕೆಂದರೆ ಅದ್ಧೂರಿ ಸೆಟ್, ವಿದೇಶದಲ್ಲಿ ಚಿತ್ರೀಕರಣ ಮತ್ತು ಒಳ್ಳೆಯ ಗ್ಲಾಮರಸ್ ನಾಯಕಿಯರು ಇರ್ತಾರೆ ಎನ್ನುವ ಕಾರಣ. ಜ್ಯೂನಿಯರ್ ಎನ್‍ಟಿಆರ್ ಚಿತ್ರಗಳಿಗೆ ಜನ ಕಡಿಮೆ. ಪ್ರಭಾಸ್, ಅಲ್ಲು ಅರ್ಜುನ್ ಚಿತ್ರಗಳೆಂದರೆ ಮುಗಿ ಬೀಳ್ತಾರೆ. ಬೆಳಗಿನ ಶೋಗಳಿಗೆ ಮಾತ್ರ ರಶ್ ಇರುತ್ತದೆ.’

– ರವಿ ನಾಯ್ಡು, ರಾಘವೇಂದ್ರ ಎಂಟರಪ್ರೈಸಿಸ್, ವಿತರಕರು, ಹುಬ್ಬಳ್ಳಿ

ಹಿಂದಿ ಮೋಹದ ಹಳೆಕತೆ

ಅದೊಂದು ಕಾಲವಿತ್ತು. ಹುಬ್ಬಳ್ಳಿ-ಧಾರವಾಡವೆಂದರೆ ಮುಂಬೈ ಕರ್ನಾಟಕದ ಕೇಂದ್ರ ಸ್ಥಾನ. ಗಡಿ ಜಿಲ್ಲೆ ಬೆಳಗಾವಿ ಹಾಗೂ ನೆರೆ ರಾಜ್ಯ ಮಹರಾಷ್ಟ್ರದ ರಾಜಧಾನಿ ನಂಟಿನಿಂದ ಹಿಂದಿ ಅಬ್ಬರ ಇಲ್ಲಿ ಮನೆ ಮಾಡಿತ್ತು. ಭೌಗೋಳಿಕವಾಗಿ ಕರ್ನಾಟಕದಲ್ಲಿದೆ ಎನ್ನುವ ಕಾರಣಕ್ಕೋ ಏನೋ ಕೆಲ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳು ಬರುತ್ತಿದ್ದವು. ಈ ಚಿತ್ರಮಂದಿರಗಳಲ್ಲಿ ಗ್ರಾಮೀಣ ವಲಯದಿಂದ ಹುಬ್ಬಳ್ಳಿಗೆ ಬರುವ ಜನ ಕನ್ನಡ ಚಿತ್ರಗಳನ್ನು ನೋಡುತ್ತಾ ಬಂದಿದ್ದಾರೆ, ಇಂದಿಗೂ ನೋಡುತ್ತಾರೆ. ಈ ಜನರಿಗೆ ಭಾಷೆ ಅರ್ಥವಾಗುವುದಿಲ್ಲ ಎನ್ನುವ ಕಾರಣಕ್ಕೆ ತೆಲುಗು ಚಿತ್ರಗಳ ಗೋಜಿಗೆ ಹೋಗುವುದಿಲ್ಲ. ಆದರೆ ಬಹುತೇಕ ಚಿತ್ರಮಂದಿರಗಳಲ್ಲಿ ಹಿಂದಿ ಚಿತ್ರಗಳಿಗೆ ಸಿಂಹಪಾಲು. ಇಲ್ಲಿನ ಜನರ ಬಾಯಲ್ಲೂ ಅಷ್ಟೇ ಹಿಂದಿ ಸಲೀಸಾಗಿ ನಲಿದಾಡುತ್ತದೆ. ಬಲುಬೇಗನೆ ಅರ್ಥವಾಗುತ್ತದೆ. ವ್ಯಾಪಾರು ವಹಿವಾಟಿಗಾಗಿ ಮುಂಬೈ ಸಂಪರ್ಕ ಸತತವಾಗಿರುವುದರಿಂದ ಹಿಂದಿ ಭಾಷೆ ಇಲ್ಲಿನವರಿಗೆ ಅನಿವಾರ್ಯವೂ ಹೌದು.

 90ರ ದಶಕದಲ್ಲೇ ಅಲೆ

1992ರಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ಘರಾನಾ ಮೊಗಡು ಚಿತ್ರ ತೆರೆ ಕಂಡಿತ್ತು. ಎಲ್ಲೆಡೆ ಈ ಚಿತ್ರದ ಬಂಗಾರ ಕೋಡಿ ಪೆಟ್ಟಾ ಹಾಡು ಹಾಗೂ ಈ ಹಾಡಿಗೆ ಚಿರಂಜೀವಿ ಹಾಕಿದ ಸ್ಟೆಪ್ ಮುಂಬೈ ಕರ್ನಾಟಕದಲ್ಲಿ ಭರ್ಜರಿ ಬಿರುಗಾಳಿ ಎಬ್ಬಿಸಿತ್ತು. ಈ ಚಿತ್ರದಿಂದಲೇ ತೆಲುಗು ಚಿತ್ರಗಳು ಸದ್ದಿಲ್ಲದೇ ಈ ಭಾಗದಲ್ಲಿ ಛಾಪು ಒತ್ತಲು ಆರಂಭಿಸಿದ್ದು. ಕರ್ನಾಟಕದಲ್ಲೂ ಭರ್ಜರಿ ಓಪನಿಂಗ್ ಕಂಡ ಈ ಚಿತ್ರ ಹುಬ್ಬಳ್ಳಿಯ ಸಂಗೀತ ಥೇಟರ್‍ನಲ್ಲಿ 38 ವಾರ ಯಶಸ್ವಿ ಪ್ರದರ್ಶನ ಕಂಡಿತು ಎಂದರೆ ಇದರ ಪ್ರಭಾವದ ಪ್ರಮಾಣ ಸ್ಪಷ್ಟ. ಇದು ಆರಂಭವಷ್ಟೇ. ನಂತರ ತೆರೆಕಂಡ ಶಿವಾ, ಕ್ಷಣಕ್ಷಣಂ, ಬೊಬ್ಬಿಲುರಾಜಾ, ಮಠಾಮೇಸ್ತ್ರಿ, ಜಯಮ್ಮ, ಆರ್ಯ, ದ್ರೋಹಿ, ಹೀಗೆ ಸಾಲು ಸಾಲು ತೆಲುಗು ಚಿತ್ರಗಳು ಈ ಭಾಗದಲ್ಲಿ ಒಳ್ಳೆಯ ಪ್ರದರ್ಶನ ಕಾಣಲಾರಂಭಿಸಿದವು. ತೀರಾ ಇತ್ತೀಚಿನದ್ದು ಎಂದರೆ ಬಾಹುಬಲಿ ಚಿತ್ರ. ಬಿಡುಗಡೆಯ ಮುನ್ನವೇ ಸಾಕಷ್ಟು ಕ್ರೇಜ್ ಹುಟ್ಟುಹಾಕಿದ್ದ ಈ ಚಿತ್ರದ ಸೆಟ್‍ಗೆ  ಪ್ರೇಕ್ಷಕ ಮನಸೋತಿದ್ದಂತೂ ಸತ್ಯ.

ವಲಸೆಯ ಕೊಡುಗೆಯೂ ಇದೆ

ಹುಬ್ಬಳ್ಳಿ ಮುಂಬೈ ಕರ್ನಾಟಕದ ಕೇಂದ್ರ ಸ್ಥಾನ. ಸುತ್ತ 10 ಜಿಲ್ಲೆಗಳ ಜನರು ವ್ಯಾಪಾರ ವಹಿವಾಟಿಗಾಗಿ ಅವಲಂಬಿಸಿರುವ ವಾಣಿಜ್ಯನಗರಿ. ನಿತ್ಯ ಏನಿಲ್ಲವೆಂದರೂ ಸರಿಸುಮಾರು 2 ಸಾವಿರ ಜನ ಹೊರಗಿನಿಂದ ಇಲ್ಲಿ ವ್ಯವಹಾರ ನಿಮಿತ್ತ ಬರುತ್ತಾರೆ. ಮದುವೆ ವೇಳೆ ಬಟ್ಟೆ ಖರೀದಿ ಇರಬಹುದು. ವ್ಯಾಪಾರಿಗಳು ಸಗಟು ಮಾರುಕಟ್ಟೆಗೆಂದು ಇಲ್ಲಿಗೆ ಬರುವುದು ಮಾಮೂಲಿ. ಬಂದಾಗ ಕೆಲಸದ ನಂತರ ತಮ್ಮ ಇಷ್ಟದ ಚಿತ್ರ ನೋಡುವುದು ವಾಡಿಕೆ. ಇದರಲ್ಲಿ ತೆಲುಗು ಚಿತ್ರಪ್ರಿಯರೂ ಇದ್ದು ಅವರಿಗೆ ಈ ಚಿತ್ರ ನೋಡಲು ಅವಕಾಶ ಇಲ್ಲಿ ಲಭ್ಯ. ಹುಬ್ಬಳ್ಳಿ-ಧಾರವಾಡಕ್ಕೆ ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬರುವವರೂ ಇದ್ದಾರೆ. ಕೋರ್ಸ್ ಮುಗಿವವರೆಗೆ ಇಲ್ಲಿಯೇ ಹಾಸ್ಟೆಲ್ ಅಥವಾ ಖಾಸಗಿ ರೂಮ್ ಮಾಡಿಕೊಂಡು ಇರುವವರ ಸಂಖ್ಯೆ ಸಾಕಷ್ಟಿದೆ. ಇವರಲ್ಲಿ ಆಂಧ್ರ ಮೂಲದವರ ಸಂಖ್ಯೆ ಹೆಚ್ಚು. ಇವರು ವಾರಕ್ಕೊಮ್ಮೆ ತೆಲುಗು ಚಿತ್ರಗಳನ್ನು ನೋಡೋದು ಖಚಿತ.

ಕೊನೆಯಲ್ಲಿ… ಇದು ಹುಬ್ಬಳ್ಳಿಯಲ್ಲಿ ಕುಡಿಯೊಡೆದುಕೊಂಡಿರುವ ಟ್ರೆಂಡ್ ಒಂದರ ಪರಿಚಯ ಮಾತ್ರ. ಕನ್ನಡ ವರ್ಸಸ್ ತೆಲುಗು ಚರ್ಚೆ ಅಲ್ಲ. ಕನ್ನಡ ಚಿತ್ರಗಳೂ ಇಂಥದೊಂದು ಪ್ರಭಾವ ಸೃಷ್ಟಿಸುವ ದಿನಗಳು ಬರಲೆಂದು ತುಡಿಯುವುದಕ್ಕೆ ಇದು ಸ್ಫೂರ್ತಿಯಾದರೆ ಸಾಕು.

Leave a Reply