ಆಡು ಒಂದಾಟ… ಇದು ತಂತ್ರಜ್ಞಾನದ ಓಟ

ಡಿಜಿಟಲ್ ಕನ್ನಡ ಟೀಮ್

ಮೊಬೈಲ್ ಫೋನ್ ತಂತ್ರಜ್ಞಾನ ಸುಧಾರಿಸುತ್ತಿದ್ದಂತೆ ಅದು ಉದ್ಯಮದ ಹಲವು ಸಾಧ್ಯತೆಗಳನ್ನು ತೆರೆದಿರಿಸುತ್ತಿದೆ. ಹದಿನೈದು ವರ್ಷಗಳ ಹಿಂದೆ ಬಾಲ್ಯವನ್ನು ದಾಟುತ್ತಿದ್ದವರು ವಿಡಿಯೋ ಗೇಮ್ ಪರಿಕರಗಳೆಂಬ ಎಲೆಕ್ಟ್ರಾನಿಕ್ ಸಲಕರಣೆ ಬಗ್ಗೆ ಬೆರಗುಗೊಂಡಿದ್ದರು. ಆ ಪರಿಕರಗಳ ಆಯುಷ್ಯ ಕೆಲವೇ ದಿನಗಳಲ್ಲಿ ಮುಗಿಯಿತು. ಕಾರಣ, ಸ್ಮಾರ್ಟ್ ಫೋನ್ ಗಳ ಯುಗ ಪ್ರಾರಂಭವಾಗುತ್ತಲೇ ಲೆಕ್ಕವಿಲ್ಲದಷ್ಟು ಬಗೆಯ ಗೇಮ್ ಗಳು ರಂಜಿಸತೊಡಗಿದವು.

ಇಂಥ ಗೇಮಿಂಗ್ ಉದ್ಯಮದ ಭವಿಷ್ಯವೂ ಏರುಗತಿಯಲ್ಲೇ ಇದೆ ಅಂತ ನಾಸ್ಕಾಮ್ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ. ಭಾರತದಲ್ಲಿ ಇತ್ತೀಚೆಗೆ ಮೊಬೈಲ್ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಗೇಮ್ ಆಡುವವರ ಸಂಖ್ಯೆಯು ಹೆಚ್ಚಾಗುತ್ತಿದ್ದು ಸದ್ಯದ ವರದಿ ಪ್ರಕಾರ ಭಾರತದ ಗೇಮಿಂಗ್ ವ್ಯವಹಾರ $ 150 ಮಿಲಿಯನ್ ( 1000 ಕೋಟಿ ರೂಪಾಯಿ ) ಗಿಂತಲೂ ಹೆಚ್ಚಿದೆ ಎಂದು ನಾಸ್ ಕಾಮ್ ಸಂಸ್ಥೆ ‘ಗೇಮಿಂಗ್ ಡೆವಲಪರ್ ಕಾನ್ಪರೆನ್ಸ್ 2015’ ರಲ್ಲಿ ‘ಇಂಡಿಯನ್ ಗೇಮಿಂಗ್ ಮಾರ್ಕೆಟ್ ರಿವ್ಯೂ’ದಲ್ಲಿ ಸಾರಿದೆ.

ಈ ವರದಿ ಪ್ರಕಾರ ಸ್ಮಾರ್ಟ್ ಪೋನ್ ಗಳಲ್ಲಿ ಗೇಮ್ ಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮೂಂಚೂಣಿಯಲ್ಲಿದ್ದು, 2015ರ ಅಂತ್ಯಕ್ಕೆ $ 200 ( 1350 ಕೋಟಿ ರೂಪಾಯಿ ) ರಷ್ಟು ವಹಿವಾಟು ಹಾಗೂ ನಂತರದ ಪ್ರತಿ ವರ್ಷ $ 100 ( 700 ಕೋಟಿ ರೂಪಾಯಿ ) ಯಷ್ಟು ವಹಿವಾಟು ನಡೆಯಲಿದೆ.

ಈ ವಹಿವಾಟು ಕೇವಲ ಮೊಬೈಲ್ ಗೇಮ್ ಗಳದಾಗಿದ್ದು, ಇದನ್ನು ಹೊರತುಪಡಿಸಿಯೂ ದೇಶದಲ್ಲಿ 3000 ಸೈಬರ್ ಕೆಫೆ ಚಾಲ್ತಿಯಲ್ಲಿವೆ. ಇದರಲ್ಲಿ 1500 ಕೆಫೆಗಳಲ್ಲಿ ಐದು ಕಂಪ್ಯೂಟರ್ ಗಳನ್ನು ಗೇಮ್ ಗಳಿಗಾಗಿಯೇ ಉಪಯೋಗಿಸಲಾಗುತ್ತದೆ. ಜೊತೆಗೆ ಸುಮಾರು 2.5 ಲಕ್ಷ ವೈಯಕ್ತಿಕ ಬಳಕೆಯ ಕಂಪ್ಯೂಟರ್ ಅಥವಾ ಎಂಎಂಒಗಳಲ್ಲಿ ಗೇಮ್ ಪ್ರಿಯರ ಆಟಗಳಾದ ಕೌಂಟರ್ ಸ್ಟೈಕ್, ಡೊಟಾ, ಲೀಗ್ ಆಫ್ ಲೇಜಂಡ್ಸ ಮತ್ತು ವರ್ಲ್ಡ್ ಆಫ್ ಟಾಂಕ್ಸ್ ಗೇಮ್ ಗಳು ಜಾಗ ಪಡೆದುಕೊಂಡಿವೆ.

ಸಂಸ್ಥೆಯ ವರದಿ ಭಾರತದಲ್ಲಿ ಇಂಟರ್ ನೆಟ್ ಗೆ ಸಂಬಂಧಿಸಿದ ಯೋಜನೆಗಳಾದ ಮೊಬೈಲ್ ಸ್ಮಾರ್ಟ್ ಪೋನ್ ಗಳು, ಟ್ಯಾಬ್ ಗಳು, ಡಿಜಿಟಲ್ ಮಾಧ್ಯಮ ಮತ್ತು ಮೊಬೈಲ್ ಜಾಹೀರಾತುಗಳಿಗೆ ಮಾರ್ಗದರ್ಶನವಾಗಲಿದೆ.

Leave a Reply