ನೂರು ದಿನ ಓಡಿದ ಕನ್ನಡ ಚಿತ್ರ ಹೆಸರಿಸೋದು ಕಷ್ಟ, ಆದ್ರೆ ಮಂಗಳೂರಲ್ಲೀಗ ತುಳು ಸಿನಿಮಾಗಳ ಸೆಂಚುರಿ ಪರ್ವ

ಪ್ರಸಾದ್ ಶೆಣೈ ಆರ್.ಕೆ

(ಫೋಟೊ- ವಿಕಿಪೀಡಿಯ)

ತುಳು ಚಿತ್ರರಂಗದಲ್ಲೀಗ ಈಗ ಭರವಸೆಯ ಮಳೆ. ಇಲ್ಲಿನ ಕಡಲ ತೀರದಲ್ಲಿ ಅರೆಕ್ಷಣ ಸುತ್ತಿದರೆ ಮೀನಿನ ಘಮಲು ಹೇಗೆ ಮೂಗನ್ನಾವರಿಸಿಕೊಳ್ಳುತ್ತದೋ ಹಾಗೇ ಕೋಸ್ಟಲ್ ವುಡ್ ಸಿನಿಮಾ ಚಿತ್ರರಸಿಕರ ಕಣ್ಣ ಕಡಲಲ್ಲಿ ಮೀನಿನ ಘಮಲಂತೆ ಚಿಮ್ಮುತ್ತಿದೆ. ತುಳುನಾಡು ಅಥವಾ ಕರಾವಳಿ ಎಂದರೆ ಬಹುತೇಕ ಮಂದಿಗೆ ಮತ್ಸ್ಯೋದ್ಯಮ, ಯಕ್ಷಗಾನ, ಭೂತ ಕೋಲ, ಕಂಬಳ, ಸಮೃದ್ದ ಹಸಿರ ಸಿರಿ, ಇವೆಲ್ಲಾ ಕಾಡಲು ಶುರುವಾಗುತ್ತದೆ ಎನ್ನುವುದೇನು ಸುಳ್ಳಲ್ಲ. ಆದರೆ ಈಗ ಕರಾವಳಿ ಕಾಡಲು ಮತ್ತೊಂದು ಕಾರಣ ಅಂದರೆ ತುಳು ಸಿನಿಮಾ. ‘ಪಡುವಣ ಕಡಲಿನ..ತೆಂಗಿನ ಮಡಲಿನ ಮರೆಯಲಿ ಮರೆದಿಹ ಈ ತುಳು ನಾಡಲ್ಲಿ..’ ಈಗ ಚಿತ್ರರಂಗವೂ ರಂಗೇರುತ್ತಿದೆ.

ಸುಳ್ಳಲ್ಲ, ದಿನೇ ದಿನೇ ಬೆಳೆಯುತ್ತಾ, ಪ್ರೇಕ್ಷಕನನ್ನು ಮೋಡಿ ಮಾಡುತ್ತಿರುವ ತುಳು ಚಿತ್ರಗಳು ಸ್ಯಾಂಡಲ್‍ವುಡ್‍ನ ಅತಿರಥ ಮಹಾರಥರ ಕಣ್ಣನ್ನೂ, ಕೋಸ್ಟಲ್‍ವುಡ್‍ನತ್ತ ಹೊರಳುವಂತೆ ಮಾಡಿದೆ. ಪ್ರಾದೇಶಿಕತೆಯ ಬೆಂಬಿಡದೇ, ಆಡಂಬರದ ಪ್ರಪಂಚದಲ್ಲಿ ಕಳೆದೂ ಹೋಗದೇ ಎಲ್ಲವನ್ನೂ ಸಹಜವಾಗಿಯೇ ಪ್ರೇಕ್ಷಕನಿಗೆ ಕೊಡುತ್ತಿರುವ ತುಳು ಚಿತ್ರಗಳು ಈಗ ಯಶಸ್ಸಿನ ರಾಜ ಹೆದ್ದಾರಿಯಲ್ಲಿ ಮುನ್ನುಗ್ಗುತ್ತಿದೆ.

ಹೇಗಿತ್ತು ಹೇಗಾಯ್ತು ಗೊತ್ತಾ?

ಒಂದು ಕಾಲದಲ್ಲಿ ತುಳು ಚಿತ್ರಗಳಿಗೆ ಅಂತಹ ಆಕರ್ಷಣೆ ಏನೂ ಇರಲಿಲ್ಲ. ಒಂದಷ್ಟು ಪೌರಾಣಿಕ ಚಿತ್ರಗಳು ಸೆಟ್ಟೇರಿದವು ಅಂತಾದರೆ ತುಳು ಪ್ರೇಕ್ಷಕರು ಅದನ್ನು ಭಯ ಭಕ್ತಿಯಿಂದ , ತಮ್ಮ ಭಾಷೆಯ ಮೇಲಿನ ಪ್ರೀತಿಯಿಂದ ನೋಡಿ ಇಷ್ಟ ಪಡುತ್ತಿದ್ದರು. ಹಾಗಂತ ಬೇರೆ ಭಾಷೆಯ ಸಿನಿಮಾಗಳನ್ನು ಹುಬ್ಬೇರಿ ನೋಡುವಂತೆ ನೋಡುವ ಕಣ್ಣು ತುಳು ಸಿನಿಮಾ ನೋಡೋವಾಗ ಅವರಿಗಿರುತ್ತಿರಲಿಲ್ಲ. ಅಲ್ಲದೇ ತುಳು ಸಿನಿಮಾ ಆ ತರಹ ಬರುತ್ತಲೂ ಇರಲಿಲ್ಲ. ಮೊನ್ನೆ ಮೊನ್ನೆವರೆಗೂ ತುಳು ಸಿನಿಮಾ ಅಂದರೆ ಅತ್ತ ರುಚಿಯೂ ಇಲ್ಲದ, ಇತ್ತ ಬಿಸಿಯೂ ಇಲ್ಲದ ಸಪ್ಪೆ ದೋಸೆಯಂತಿತ್ತು. ಮೊದಲೇ ಇಲ್ಲಿ ತುಳು ನಾಟಕಗಳ ಕ್ರೇಜ್ ಜಾಸ್ತಿ. ಅದರಲ್ಲೂ ಹಾಸ್ಯ ಪ್ರಧಾನ ನಾಟಕಗಳಿಗೇ ಸೇರೋವಷ್ಟು ಜನ ಮದುವೆಗೂ ಸೇರುತ್ತಿರಲಿಲ್ಲ. ತುಳು ಹಾಸ್ಯಮಯ ನಾಟಕವೆಂದರೆ ಅಷ್ಟು ಪ್ರೀತಿ ಇಲ್ಲಿನ ಪ್ರೇಕ್ಷಕರಿಗೆ. ಹಗುರನೇ ಕಾಲ ಸರಿದಾಗ ಒಂದೊಂದೇ ತುಳು ಸಿನಿಮಾಗಳು ಸೆಟ್ಟೇರಿದವು. ನಾಟಕ ಕಲಾವಿದರೇ ಸಿನಿಮಾ ಮಾಡಿದರು. ಅದನ್ನೂ ಒಂದು ನಾಟಕದಂತೆಯೇ ನೋಡಿ ಚಪ್ಪರಿಸಿ, ತುಳು ಪ್ರೇಕ್ಷಕರು ಅರೆಕ್ಷಣ ಹಿಗ್ಗಿದರು. ಅದು ತುಳು ಚಿತ್ರವೆಂದು ಕರೆಯಲ್ಪಟ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತೇನೋ ಹೌದು, ಆದರೆ ನೋಡುವವನಿಗೆ ಅದು ನಾಟಕದಂತ ಸಿನಿಮಾ ಅನ್ನಿಸಿ -“ಅದೂ ಒಂದು ಸಿನಿಮಾವಾ ಮಾರಾಯಾ”ಅಂತ ಸಿನಿಮಾ ಮಂದಿರದತ್ತ ಕೆಲ ಪ್ರಬುದ್ಧ ಪ್ರೇಕ್ಷಕರು ಮುಸುಂಟು ತಿರುಗಿಸಿ ಹೋದರು. ಆದರೆ ಈಗ ಅದೇ ಪ್ರಬುದ್ಧ ಪ್ರೇಕ್ಷಕನೂ ತುಳು ಸಿನಿಮಾ ಬಂದರೆ ಬಾಲ್ಕನಿ ಟಿಕೇಟು ತಗೊಂಡು ಕಣ್ಣರಳಿಸಿ ನೋಡುತ್ತಿದ್ದಾನೆ. ತುಳು ಚಿತ್ರಗಳು ಕೂಡ ಮಗ್ಗಲು ಬದಲಿಸಿ ಮಲಗಿ ಹೊಚ್ಚ ಹೊಸ ಕನಸು ಕಾಣುವ ಅಪ್ಪಟ ಸುಂದರಿಯಂತೆ ಕಾಣುತ್ತಿದೆ. ಆ ಹುಡುಗಿಯನ್ನು ಅಪ್ಪಿ ಹಿಡಿಯಲು ಹಂಬಲಿಸುವ ಪ್ರೇಕ್ಷಕರು ಹೆಚ್ಚುತ್ತಲೇ ಇದ್ದಾರೆ.

ಹಾಸ್ಯವೇ ಜೀವಾಳ

ತುಳು ಚಿತ್ರಗಳಲ್ಲಿ ಹೆಚ್ಚಾಗಿ ಹಾಸ್ಯಕ್ಕೆ ಮಹತ್ವ ಹೆಚ್ಚು.ಇವತ್ತಿಗೂ ತೆರೆ ಕಾಣುತ್ತಿರುವ ಹೆಚ್ಚಿನ ಸಿನಿಮಾಗಳಲೆಲ್ಲಾ ಹಾಸ್ಯವೇ ಕ್ಲಿಕ್. ಇಲ್ಲಿ ಹಾಸ್ಯ ಕಲಾವಿಧರ ದಂಡೇ ಇದೆ. ಅವರಿಗೋಸ್ಕರವೇ ಸಿನಿಮಾ ನೋಡಲು ಹಾತೊರೆಯೋ ಪ್ರೇಕ್ಷಕರಿಗೇನೂ ಕಮ್ಮಿ ಇಲ್ಲ. ನಗುವಿನ ಬೆಳ್ಳಿ ಅಂತಲೇ ಖ್ಯಾತರಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಮುಂತಾದ ಕಲಾವಿದರುಗಳಿಗೆ ಅವರದ್ದೇ ಆದ ಫಾಲೋವರ್ಸ್ ಇದ್ದಾರೆ. ಇವರೆಲ್ಲಾ ರಂಗಭೂಮಿಯಲ್ಲಿ ಮಿಂಚಿದ ಕಲಾವಿದರು. ಹೆಚ್ಚಿನ ತುಳು ಚಿತ್ರಗಳು ಕಾಮಿಡಿಯಾಗಿ ನಗಿಸಿಕೊಂಡು ಹೋದರೂ, ಸ್ಯಾಂಡಲ್ ಪುಡ್‍ನ ಹಳಸಿದ ಕಾಮಿಡಿಯೂ ಇಲ್ಲ ಮಚ್ಚಿನ ಹುಚ್ಚೂ ಇಲ್ಲ. ಇಲ್ಲಿ ಸಹಜವೆನ್ನಿಸುವ ಹಾಸ್ಯ ಸನ್ನಿವೇಶಗಳನ್ನು ಅಷ್ಟೇ ಸಹಜವಾಗಿ ತೋರಿಸಲಾಗುತ್ತದೆ. ಹಾಗಾಗಿ ತುಳುನಾಡಿನ ಭರ್ಜರಿ ಕಾಮಿಡಿ ಎದುರು ಸ್ಯಾಂಡಲ್‍ವುಡ್‍ನ ಹಾಸ್ಯಗಳು ತುಳುನಾಡಿನ ಪ್ರೇಕ್ಷಕನಿಗೆ ನಗೆ ತರಿಸೋದಿಲ್ಲ. ನಿಜ ಹೇಳಬೇಕೆಂದರೆ ಈಗಿನ ತುಳು ಸಿನಿಮಾಗಳು ಪ್ರೇಕ್ಷಕನನ್ನು ಸೆಳೆಯುತ್ತಿರುವುದದೇ ಹಾಸ್ಯದಿಂದ. ಆದರೂ ಭಾವನಾತ್ಮಕ, ಹಿರೋ ಓರಿಯಂಟೆಡ್, ಪ್ರೇಮ ಚಿತ್ರಗಳು ಈಗೀಗ ಸೆಟ್ಟೇರಿ ಪ್ರೇಕ್ಷಕನನ್ನು ಕರೆಯುತ್ತಿವೆ. ಸಂಸ್ಕೃತಿ, ಪ್ರಾದೇಶಿಕತೆ, ಸಾಂಸ್ಕೃತಿಕ ಸಿರಿ ಇವೆಲ್ಲದರ ತೆಳ್ಳಗಿನ ಲೇಪವಿರುವ ಚಿತ್ರಗಳನ್ನು ನೋಡುತ್ತಾ ವಿದೇಶದಲ್ಲಿ ಕೂತ ತುಳುನಾಡಿನ ಜನ ಕೂಡ ‘ಹೋ ಇದು ನಮ್ಮದೇ ಸಿನಿಮಾ’ ಅಂತ ಒಳಗೊಳಗೇ ಬೀಗುತ್ತಿದ್ದಾರೆ.

ಸಿನಿ ಮಾರ್ಕೆಟ್ ಹೇಗಿದೆ?

ತುಳು ಸಿನಿಮಾದ ವ್ಯಾಪ್ತಿ ಅತ್ಯಂತ ಕಿರಿದು. ಮಂಗಳೂರು ಮತ್ತು ಉಡುಪಿ ತುಳು ಸಿನಿಮಾ ಪ್ರದರ್ಶನದ ಕೇಂದ್ರ ಬಿಂದುಗಳಾದರೂ, ಕರಾವಳಿಯ ಎಲ್ಲಾ ಚಿತ್ರಮಂದಿರಗಳಲ್ಲೂ ತುಳು ಸಿನಿಮಾಗಳು ಸತತವಾಗಿ ಪ್ರದರ್ಶನ ಕಾಣುತ್ತಿದೆ. ಮೊನ್ನೆ ಮೊನ್ನೆ ಬಿಡುಗಡೆಗೊಂಡ “ಏರೆಗ್ಲಾ ಪನೊಡ್ಚಿ” ‘ಚಂಡಿಕೋರಿ” ಲೆಫ್ಟ್ ರೈಟ್, ಐಸ್ ಕ್ರೀಮ್, ಮುಂತಾದ ಚಿತ್ರಗಳು ಈಗಲೂ ಕರಾವಳಿಯ  ಬಹುತೇಕ ಸಿನಿಮಾ ಮಂದಿರಗಳಲ್ಲಿ ಮುನ್ನುಗ್ಗುತ್ತಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳಿಗಿಂತಲೂ ಜಾಸ್ತಿ ತುಳು ಸಿನಿಮಾಗಳೇ ಓಡುತ್ತಿದೆ. ಹಾಗಾಗಿ ತುಳು ಸಿನಿಮಾಗಳಿಗೆ ಮಾರುಕಟ್ಟೆ ಚೆನ್ನಾಗಿಯೇ ಇದೆ. ಆದರೆ ಇಲ್ಲೂ ಹೊಸ ಬಗೆಯ ಪ್ರಯೋಗಾತ್ಮಕ ಚಿತ್ರಗಳು ಸೆಟ್ಟೇರಬೇಕಾದರೆ ಅಷ್ಟು ಬಂಡವಾಳ ಹೂಡಲು ಧೈರ್ಯ ಮಾಡುವ ನಿರ್ಮಾಪಕರು ಬೇಕು ಎನ್ನುವುದು ಒಪ್ಪತಕ್ಕ ಸಂಗತಿ.

ತುಳು ಸಿನಿಮಾಗಳನ್ನು ದುಬೈ, ಶಾರ್ಜಾ ಮಸ್ಕತ್, ಮುಂತಾದ ಕಡೆ ಪ್ರದರ್ಶಿಸುವ ಕುರಿತು ಕೆಲ ನಿರ್ಮಾಪಕರು ಗಮನ ಹರಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ತುಳು ಭಾಷಿಕರೇ ಜಾಸ್ತಿ ಇರುವುದರಿಂದ ಅವರಿಗೂ ತಮ್ಮ ಭಾಷೆಯ ಸೊಗಡು ತಲುಪಬೇಕೆನ್ನುವ ನಿರ್ಮಾಪಕರ ಪ್ಲಾನು ಕೈಗೂಡಲಿ.

ಕತೆಗಳಿಗೇನೂ ಬರವಿಲ್ಲ

ತುಳುನಾಡಿನ ಪೌರಾಣಿಕ ಪಾತ್ರಗಳ ಹಿನ್ನೆಲೆಯ ಸಿನಿಮಾಗಳು ಸಾಕಷ್ಟು ಬಂದಿವೆ. ಕೋಟಿಚೆನ್ನಯ, ಗಗ್ಗರ, ಬ್ರಹ್ಮಶ್ರೀ ನಾರಾಯಣ ಸ್ವಾಮಿ, ತುಳು ನಾಡಸಿರಿ ಇವೆಲ್ಲಾ ಪೌರಾಣಿಕ ಚಿತ್ರಗಳು, ಉಳಿದದ್ದು ಹಾಸ್ಯ, ಕೌಂಟುಂಬಿಕ ಚಿತ್ರಗಳು. ಹಾಸ್ಯ ನೋಡಿ ಇಷ್ಟಪಟ್ಟಷ್ಟು ಕೌಂಟುಂಬಿಕ ಸಿನಿಮಾ ನೋಡಿ ಇಷ್ಟ ಪಟ್ಟವರು ಕಮ್ಮಿಯೇ ಎನ್ನಬೇಕು. ಆದರೂ ಈಗೀಗ ಹೊಸ ಕಾಲಮಾನಕ್ಕೆ ತಕ್ಕ ಐಸ್ ಕ್ರೀಮ್ ನಂತಹ ಸಿನಿಮಾಗಳನ್ನು ಈಗಿನ ಆಂಡ್ರ್ಯಾಯ್ಡ್ ಹುಡುಗರೂ ಆಸೆ ಪಟ್ಟು ನೋಡುತ್ತಿದ್ದಾರೆಂದ ಮೇಲೆ ಕಾಲಕ್ಕೆ ತಕ್ಕಂತೆ ತುಳು ಸಿನಿಮಾ ಬದಲಾಗಲು ಹಂಬಲಿಸುತ್ತಿದೆ ಎನ್ನುವುದಕ್ಕೆ ಬೇರೆ ಪುರಾವೆ ಬೇಕಿಲ್ಲವೇನೋ?!. ತುಳುನಾಡಿನ ಕತೆಯನ್ನೇ ಆಧಾರವಾಗಿಟ್ಟುಕೊಂಡು ತೆರೆಕಂಡ ಕನ್ನಡ ಚಿತ್ರ ರಂಗಿತರಂಗ ಇಡೀ ನಾಡಿಗೆ ಇಷ್ಟವಾಗುವುದಕ್ಕೆ ಕಾರಣ ಆ ತುಳುನಾಡಿನ ಕತೆಯೇ.  ಒಟ್ಟಾರೆ ತುಳು ನಾಡು ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವುದರಿಂದ ಇಲ್ಲಿ ಧಾರಾಳ ಕತೆಗಳು ಸಿಗುತ್ತದೆ. ಅವೆಲ್ಲವನ್ನೂ ಸಿನಿಮಾ ಮಾಡುವ ಹಂಬಲ, ಪ್ರೀತಿ, ಆಸ್ಥೆ, ನಿರ್ಮಾಪಕರಿಗಿದ್ದರೆ ತುಳು ಚಿತ್ರರಂಗ ಮತ್ತೂ ಹೊಸತೇನನ್ನೋ ಸಾಧಿಸುತ್ತದೆ ಎನ್ನುವುದನ್ನು ಒಪ್ಪಲೇಬೇಕು.

ಕೊನೆಯಲ್ಲಿ, ಇತ್ತೀಚೆಗೆ ಸದ್ದು ಮಾಡಿದ ಚಾಲಿ ಪೋಲಿಲು ತುಳು ಸಿನಿಮಾದ ಟ್ರೈಲರ್ಗೆ ಕೊಂಡಿ ಬೆಸುಗೆ.

Leave a Reply