ಮೋದಿ ಸರ್ಕಾರಕ್ಕೆ ಜಿಎಸ್ಟಿ ಏಕೆ ನಿರ್ಣಾಯಕ ಗೊತ್ತಾ?

ranga (2)

ರಂಗಸ್ವಾಮಿ ಮೂಕನಹಳ್ಳಿ, ಹಣಕಾಸು ಪರಿಣತ

ಮೋದಿ , ಸೋನಿಯಾ ಮತ್ತು ಮನಮೋಹನ್ ಜೊತೆಗಿನ ತಮ್ಮ ತಣ್ಣಗಿನ ಸಂಬಂಧ ಮುರಿದು GST ವಿಧೇಯಕವು ರಾಜ್ಯಸಭೆಯಲ್ಲಿ ಪಾಸು ಆಗುವಂತೆ ನೋಡಿಕೊಳ್ಳಲು ಶ್ರಮಿಸಿದರು. ‘GST ಪಾಸ್ ಮಾಡಿಸಲು ಮನಮೋಹನರ ಮಧ್ಯಸ್ಥಿಕೆ ಕೋರಿಕೆ!’ ಎಂಬ ಮಾದರಿಯಲ್ಲಿ ಹಲವು ಹತ್ತು ತಲೆಬರಹಗಳೂ ಬಂದವು. ನಾವು ಎಂಥವರೆಂದರೆ ನಾವು ಕಟ್ಟುತ್ತಿರುವ ಟ್ಯಾಕ್ಸ್ ಎಷ್ಟು ಎಂದು ತಿಳುವಳಿಕೆ ಇಲ್ಲದವರು, ನಮ್ಮ ದೇಶದಲ್ಲಿ ಇನ್ಕಮ್ ಟ್ಯಾಕ್ಸ್ ಕಟ್ಟುವ ಜನರ ಸಂಖ್ಯೆ ಬಹಳ ಕಡಿಮೆ, ಸರ್ಕಾರ ಇದನ್ನು ಅರಿತೇ ಅನೇಕ ಅಪರೋಕ್ಷ ತೆರಿಗೆ ವಿಧಿಸುತ್ತೆ. ನಮಗೆ ಅದನ್ನು ಕಟ್ಟುವುದು ತಿಳಿಯುವುದು ಇಲ್ಲ, ಆ ಬಗ್ಗೆ ನಾವು ಯೋಚಿಸುವುದೂ ಇಲ್ಲ. ನಾವು ಕೊಳ್ಳುವ ಪದಾರ್ಥದ ಮೇಲೆ ಹಲವು ರೀತಿಯ ತೆರಿಗೆ ಬಿದ್ದಿರುತ್ತೆ. ಅದು ಸಾಧುವೆ? ನಾವು ಕೊಂಡ ಪದಾರ್ಥದ ನಿಜವಾದ ಬೆಲೆ ಏನು? ತೆರಿಗೆ ಅಂಶ ಎಷ್ಟು? ಇವೆಲ್ಲದರ ತಿಳಿವಳಿಕೆ ರೂಢಿಸಿಕೊಳ್ಳುವುದು ನಮಗೆ ಕಿರಿಕಿರಿ. ನಮಗೇಕೆ ಇಲ್ಲದ ಉಸಾಬರಿ ಎನ್ನುವ ಜನರೇ ಹೆಚ್ಚು.

GST  ಹಾಗೆಂದರೇನು?

GST  ಎಂದರೆ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಎಂದರ್ಥ. ಸರಿ, ಪದಾರ್ಥದ ಮೇಲೆ ಮತ್ತು ನಾವು ಪಡೆಯುವ ಸೇವೆಯ ಮೇಲೆ ವಿಧಿಸುವ ತೆರಿಗೆ ಅಥವಾ ಶುಲ್ಕ. ಓಕೆ, ನಮ್ಮಲ್ಲಿ ಆಗಲೇ ವ್ಯಾಟ್ ತೆರಿಗೆ ಇದೆ, ಅದು ಕೂಡ ಪದಾರ್ಥದ ಮೇಲೆ ಮತ್ತು ಸೇವೆಯ ಮೇಲೆ ಶುಲ್ಕ ವಿಧಿಸುತ್ತಾ ಇದೆ. ಮತ್ತೇಕೆ GST? ಎನ್ನುವುದು ಸಹಜವಾಗಿ ಉದ್ಭವವಾಗುವ ಪ್ರಶ್ನೆ.

ಗಮನಿಸಿ, ವ್ಯಾಟ್ ಪ್ರತಿ ರಾಜ್ಯವೂ ತಮ್ಮ ಇಚ್ಛೆಗೆ ಅನುಗುಣವಾಗಿ ವಿಧಿಸುವ ಶುಲ್ಕ. ರಾಜ್ಯದಿಂದ ರಾಜ್ಯಕ್ಕೆ ವ್ಯಾಟ್ ಬದಲಾಗುತ್ತೆ. GST  ಕೇಂದ್ರ ಸರಕಾರದ ಹಿಡಿತದಲ್ಲಿ ಇರುತ್ತದೆ ಹಾಗೂ ದೇಶ ಪೂರ್ತಿ ಒಂದೇ ಶುಲ್ಕ. ಇದರಿಂದ ಇನ್ನೊಂದು ಉಪಯೋಗವಿದೆ, ಕೇಂದ್ರ ಸರಕಾರಕ್ಕೆ ತೆರಿಗೆ ಸಂಗ್ರಹ ಬಹಳ ಸುಲಭವಾಗುತ್ತೆ, ರಾಜ್ಯದ ಬಳಿ  ಒಟ್ಟು ವ್ಯಾಟ್ ಸಂಗ್ರಹದ ಮಾಹಿತಿ ನಂತರ ಕೇಂದ್ರಕ್ಕೆ ಕಳಿಸಬೇಕಾದ ಮೊತ್ತ ಇವೆಲ್ಲದರ ಕಿರಿಕಿರಿ ಇರುವುದಿಲ್ಲ. ಇದು ರಾಜ್ಯಗಳಿಗೆ ಇಲ್ಲಿಯ ತನಕ ಇರುವ ಸ್ವಾತಂತ್ರ್ಯ ಕಸಿದು ಕೊಳ್ಳುತ್ತದೆ. ಹೀಗಾಗಿ ರಾಜ್ಯ ಸರಕಾರಗಳು ಈ ವಿಧೇಯಕವನ್ನು ಅಷ್ಟು ಬೇಗ ಒಪ್ಪುವ ಸಾಧ್ಯತೆ ಕಮ್ಮಿ.

GST ಚಾಲನೆಗೆ ತರುವುದರಿಂದ ವಸ್ತುವಿನ ಮೇಲಿನ ಬೆಲೆ ಕಡಿಮೆ ಆಗುತ್ತೆ. ಆದರೆ ಅದು ಜನ ಸಾಮಾನ್ಯನಿಗೆ ತಲುಪುವುದೇ ಎನ್ನುವುದು ಇಂದಿನ ಚರ್ಚೆಯ ವಿಷಯ. ಒಂದಂತೂ ಸತ್ಯ. ಇದರ ಚಾಲನೆ ಇಂದ ಮೊದಲ ಎರಡು ಅಥವಾ ಮೂರು ವರ್ಷ ಹಣದುಬ್ಬರ ಸಮಾಜದಲ್ಲಿ ಹೆಚ್ಚುತ್ತದೆ! ನಂತರದ ದಿನಗಳಲ್ಲಿ ಇದು ಇಳಿಕೆಯಾಗುತ್ತದೆ ಹಾಗು ಜಿಡಿಪಿ ವೃದ್ಧಿ ಆಗುತ್ತದೆ. ಇದು ನೇರವಾಗಿ ಹೆಚ್ಚು ಉದ್ಯೋಗ, ಸಮಾಜದಲ್ಲಿ ಇನ್ನಷ್ಟು ಹಣಕಾಸು ಹರಿದಾಟ ಹೆಚ್ಚಿಸುತ್ತದೆ.

ಕಾಂಗ್ರೆಸ್ ಈ ವಿಧೇಯಕ ತಕ್ಷಣ ಪಾಸ್ ಆಗದಂತೆ ನೋಡಿಕೊಂಡರೆ ಆಶ್ಚರ್ಯವಿಲ್ಲ. 2017 ರಲ್ಲಿ ಇದು ಪಾಸ್ ಆದರೆ 2019ರ ಚುನಾವಣೆ ವೇಳೆಗೆ ಪದಾರ್ಥಗಳ ಬೆಲೆ ಏರಿದ್ದು ಇದನ್ನು ದೊಡ್ಡ ವಿಷಯವನ್ನಾಗಿ ಮಾಡಿ ಚುನಾವಣೆ ಗೆಲ್ಲುವ ಹುನ್ನಾರ ಆ ಪಕ್ಷದ್ದು. ನಮ್ಮ ದೇಶದಲ್ಲಿ ವಿದ್ಯಾವಂತರಿಗೆ ಟ್ಯಾಕ್ಸ್ ಬಗ್ಗೆ ಸರಿಯಾದ ಅರಿವಿಲ್ಲ. ಇನ್ನು ಈಡಿ ದೇಶಕ್ಕೆ ‘ಈ ಬೆಲೆ ಏರಿಕೆ ಆಡಳಿತ ಲೋಪದೋಷ ದಿಂದ ಸಂಭವಿಸಿದಲ್ಲ, ಅದು GST ಪ್ರಭಾವ ೨೦೨೦ ರ ವರೆಗೆ ಕಾಯಿರಿ’ ಎಂದು ಮೋದಿ ಸರಕಾರ ತಿಳಿಸಿ ಹೇಳುವುದು ಹೇಗೆ? ಇದೇನಾದರೂ ಸಂಭವಿಸಿದರೆ ಮೋದಿ ಗೆಲ್ಲುವುದು ಸುಲಭವಲ್ಲ. ಹಾಗೇನಾದರೂ ಆಗಿ ಆಕಸ್ಮಾತ್ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರು ಹೆಚ್ಚೇನೂ ಮಾಡದೆ ಬೆಲೆ ಇಳಿಯುತ್ತದೆ. ಉದ್ಯೋಗ, ಸಂಪತ್ತು ವೃದ್ಧಿ ಆಗುತ್ತದೆ!

ಹಾಗೆ ನೋಡ ಹೋದರೆ ಇದು ಮೋದಿ ಸರಕಾರದ ಕಲ್ಪನೆಯ ಕೂಸೇನಲ್ಲ. ವಾಜಪೇಯಿ ಸರಕಾರವಿದ್ದಾಗ ಇದನ್ನು ಮಂಡಿಸಬೇಕೆನ್ನುವ ಆಶಯ, ಆಶಯವಾಗೆ ಉಳಿಯಿತು. ನಂತರ ಬಂದ ಯುಪಿಎ1 ಹಾಗೂ ಯುಪಿಎ2 ಈ ವಿಧೇಯಕ ಮಂಡಿಸಲು ಉತ್ಸುಕತೆ ತೋರಿದ್ದವು, ರಾಜಕೀಯದಲ್ಲಿ ಒಂದಲ್ಲ ಹತ್ತು ವಿಷಯಗಳು ಪರ ವಿರೋಧ ಕೆಲಸ ಮಾಡುತ್ತವೆ, ಅದು ಏಕೆ ಆಗಲಿಲ್ಲ ಎನ್ನುವುದು ಸೋನಿಯಾ ಮತ್ತು ಮನಮೋಹನರಿಗೆ ಗೊತ್ತು.

GST ಪಾಸ್ ಆದರೆ ಅದರ ಪೂರ್ಣ ಶ್ರೇಯ ಮೋದಿ ಸರಕಾರಕ್ಕೆ ತಲುಪುತ್ತದೆ ಎನ್ನುವುದು ಚಿಕ್ಕ ಮಕ್ಕಳಿಗೂ ತಿಳಿದಿರುವ ವಿಷಯ. ವಿರೋಧ ಪಕ್ಷಗಳು ಮೋದಿ ಸರಕಾರಕ್ಕೆ ಸುಲಭವಾಗಿ ಆ ಶ್ರೇಯ ಸಿಗಲು ಬಿಡುವವೇ? ಇದು ಸದ್ಯದ ಪ್ರಶ್ನೆ.

gst ಇಂದ ಉತ್ಪಾದನ ಕಂಪನಿಗಳಿಗೆ ಹೇಗೆ ಹಣ ಉಳಿತಾಯ ಆಗುತ್ತೆ? ಅವರು ಹೇಗೆ ಉತ್ಪಾದನೆ ಹೆಚ್ಚಿಸ ಬಹುದು? ಉದಾಹರಣೆ ಸಹಿತ ನೋಡೋಣ.

ಕಚ್ಚಾವಸ್ತು ಖರೀದಿ  –  1000 ರುಪಾಯಿ. ತೆರಿಗೆ 10% – 100 ರುಪಾಯಿ.

ಉತ್ಪಾದನ  ಖರ್ಚು  –  100 ರುಪಾಯಿ

ಲಾಭಾಂಶ – 100 ರುಪಾಯಿ

ಮಾರಾಟ ಬೆಲೆ –  1000+100+100+100 = 1300 ರುಪಾಯಿ

ತೆರಿಗೆ –  1300 ರ ಮೇಲೆ 10% = 130 ರುಪಾಯಿ. ಇದು ಔಟ್ ಪುಟ್ ಟ್ಯಾಕ್ಸ್.

ಒಟ್ಟು ತೆರಿಗೆ- 100+13೦ = 23೦ ರುಪಾಯಿ. ಇದು ಈಗ ಇರುವ ತೆರಿಗೆ ನೀತಿಯಿಂದ ಕಟ್ಟಲ್ಪಟ್ಟ ತೆರಿಗೆ ಮೊತ್ತ. .

GST ಇಂದ ಏನಾಗುತ್ತೆ ನೋಡೋಣ.

ಕಚ್ಚಾವಸ್ತು ಖರೀದಿ –  1000 ರುಪಾಯಿ. ತೆರಿಗೆ 10% , 100 ರುಪಾಯಿ.

ಉತ್ಪಾದನ  ಖರ್ಚು-    100 ರುಪಾಯಿ

ಲಾಭಾಂಶ –   100 ರುಪಾಯಿ

ಮಾರಾಟ ಬೆಲೆ –  1000+100+100+100 = 1300 ರುಪಾಯಿ

ತೆರಿಗೆ –  1300 ರ ಮೇಲೆ 10 % = 130. ಆದರೆ ಇಲ್ಲಿ ನಾವು 130 ಕಟ್ಟಬೇಕಿಲ್ಲ. ಮೊದಲೇ 100 ರುಪಾಯಿ ಕಟ್ಟಿರುವುದರಿಂದ ಅದನ್ನು ಕಳೆದು 30 ರುಪಾಯಿ ಕಟ್ಟಿದರೆ ಸಾಕು.

ಒಟ್ಟು ತೆರಿಗೆ- 130. ಉಳಿತಾಯ 100 ರುಪಾಯಿ.

 

ಈಗ ನೀವು ಪ್ರಶ್ನಿಸಬಹುದು, ಸರಕಾರಕ್ಕೇನು ಹುಚ್ಚೆ? ತನಗೆ ಬರುವ ಆದಾಯ ಕಡಿಮೆ ಮಾಡಿಕೊಳ್ಳಲು? ಇದರಿಂದ ಗ್ರಾಹಕನಿಗೇನು ಪ್ರಯೋಜನ? ನಿಮ್ಮ ಪ್ರಶ್ನೆ ಸಾಧು ಹಾಗು ಸಹಜ.

ಸರಕಾರ ನಡೆಯುವುದು ನುರಿತ ಹಣಕಾಸು ಪರಿಣತರಿಂದ. ಮೇಲ್ನೋಟಕ್ಕೆ ನಷ್ಟ ಅನಿಸಬಹುದು ಆದರೆ ಸರಕಾರಕ್ಕೆ ನಷ್ಟವಿಲ್ಲ. ಉತ್ಪಾದಕ ಕಂಪನಿಗಳಿಗೂ ಲಾಭ, ಹೇಗೆ? ಉತ್ತರ ಸುಲಭ. ಗಮನಿಸಿ ನಮ್ಮಲಿ  ಸೆಂಟ್ರೆಲ್ ಎಕ್ಷ್ಚಿಸ್, ಸರ್ವಿಸ್ ಟ್ಯಾಕ್ಸ್, ಕಸ್ಟಮ್ಸ್, ಕೌಂಟರ್ವೈಲಿಂಗ್ ಡ್ಯೂಟಿ (CVD ), ಸ್ಪೆಷಲ್ ಅಡಿಶನಲ್ ಡ್ಯೂಟಿ (SAD ), CST , VAT  ಗಳಿವೆ. ಪ್ರತಿಯೊಂದು ಒಂದು ಸಂಸ್ಥೆಯ ಹಿಡಿತದಲ್ಲಿವೆ. ಕೆಲವು ರಾಜ್ಯ ಸರಕಾರದ ಹಿಡಿತದಲ್ಲಿದೆ, ಈ ಎಲ್ಲಾ ಸಂಸ್ಥೆಗಳ ನಡುವೆ ಮಾತುಕತೆ ಇಲ್ಲವೇ ಇಲ್ಲ. ಎಲ್ಲರೂ ತಮ್ಮಿಚ್ಚೆ ಯಂತೆ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಇಲ್ಲಿ ತೆರಿಗೆ ಸೋರಿಕೆ ಪ್ರಮಾಣ ಅತಿ ಹೆಚ್ಚು, ಈ ತೆರಿಗೆ ಸಂಗ್ರಹ ಸಂಸ್ಥೆಗಳ ನಡುವಿನ ಸಹಕಾರದ ಕೊರತೆಯಿಂದ ಕಂಪನಿಗಳಿಗೆ ತೆರಿಗೆ ವಂಚಿಸುವುದು ಸುಲಭ.

GST ಇಂದ ಜವಾಬ್ದಾರಿ ಒಂದು ಸಂಸ್ಥೆಯ ಮೇಲೆ ಬರುತ್ತದೆ, ನಿಧಾನವಾದರೂ ತೆರಿಗೆ ವಂಚನೆ ನಿರ್ಮೂಲನವಾಗುತ್ತದೆ. ಇದಾದರೆ ಕಪ್ಪು ಹಣದ ವಹಿವಾಟು ತಾನೇ ತಾನಾಗಿ ಕಡಿಮೆ ಆಗುತ್ತದೆ. ಕಸ್ಟಮ್ಸ್ ಒಂದು ಬಿಟ್ಟು ಉಳಿದ ಎಲ್ಲಾ ತೆರಿಗೆಗಳನ್ನು ತೆಗೆದು ಹಾಕಲಾಗುತ್ತೆ.

GST ವಿಧೇಯಕ ರಾಜ್ಯಸಭೆಯಲ್ಲಿ ಅನುಮತಿ ಪಡೆಯಬೇಕಾದ ಅವಶ್ಯಕತೆ ಇದೆ. ರಾಜ್ಯಸಭೆಯಲ್ಲಿ ಮೋದಿ ಸರಕಾರಕ್ಕೆ ಬಹುಮತ ಇಲ್ಲದ ಕಾರಣ, ಈ ಸುದ್ದಿ ಸದ್ದು ಮಾಡುತ್ತಿದೆ. ಕಾಂಗ್ರೆಸ್- GST ಟ್ಯಾಕ್ಸ್ ರೇಟ್ ಎಷ್ಟು? ತೆರಿಗೆ ಉಳಿಸಿದ ಕಂಪನಿಗಳು ಅದನ್ನು ಗ್ರಾಹಕನಿಗೆ ವರ್ಗಾಯಿಸಲಿವೆಯೇ? ಎನ್ನುವ ಪ್ರಶ್ನೆ ಎತ್ತಿದೆ. ಅಲ್ಲದೆ ತನ್ನೆಲ್ಲಾ ಸ್ವಾತಂತ್ರ್ಯ ಕಳೆದು ಕೊಳ್ಳುವ ರಾಜ್ಯಸರಕಾರಗಳು ಇದನ್ನು ಒಪ್ಪಿಕೊಳ್ಳಬೇಕಿದೆ.

ಪಕ್ಷದ ಹಿತಾಸಕ್ತಿ, ಲಾಭ, ಅಧಿಕಾರ ಎಲ್ಲಾ ಮರೆತು GST ಪಾರ್ಲಿಮೆಂಟ್ ನಲ್ಲಿ ಪಾಸ್ ಆದರೆ ಮುಂಬರುವ ದಿನಗಳಲ್ಲಿ ಭಾರತ ವಿಶ್ವದ ಎದುರು ಮತ್ತಷ್ಟು ಬಲಿಷ್ಠವಾಗುವುದರಲ್ಲಿ ಸಂಶಯವಿಲ್ಲ.

4 COMMENTS

  1. Kindly create a Twitter Handle for Digital Kannada,so that it will be easy to follow all pieces of web edition through your handle..
    Pls ensure to send out links of every article published here through your official Twitter handle.
    Will get more clicks on your website if more people follow your tweets & handle..
    A humble suggestion..

  2. All articles are informative and interesting to read. Since the financial year end is approaching, publish few articles on how to save Income tax.

Leave a Reply