ಬಿಜೆಪಿ- ಶಿವಸೇನೆ: ಆಗೀಗ ಸೆಣಸಲೇಬೇಕಿರುವ ಅನಿವಾರ್ಯ ಬೇನೆ!

 

ಚೈತನ್ಯ ಹೆಗಡೆ

 

ಕೇಂದ್ರದಲ್ಲಿ ಎನ್ ಡಿ ಎ ಕೂಟದಲ್ಲೇ ಶಿವಸೇನೆ ಗುರುತಿಸಿಕೊಂಡಿರುವುದು ಹೌದಾದರೂ ಇತ್ತೀಚೆಗೆ ಅದು ಬಿಜೆಪಿ ವಿರುದ್ಧ ನಿರಂತರವಾಗಿ ಹರಿಹಾಯುತ್ತಿದೆ. ಪಾಕಿಸ್ತಾನದ ನಿವೃತ್ತ ರಾಯಭಾರಿ ಕಸೂರಿ, ಭಾರತದಲ್ಲಿ ಪುಸ್ತಕ ಬಿಡುಗಡೆ ಮಾಡುವುದನ್ನು ವಿರೋಧಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿ ಬಳಿದಿದ್ದನ್ನು ಶಿವಸೇನೆ ಸಮರ್ಥಿಸಿಕೊಂಡಿತು. ಬಿಜೆಪಿ ಇಕ್ಕಟ್ಟಿಗೆ ಸಿಲುಕಿತೆಂದು ಮಾಧ್ಯಮ ವರದಿಗಳು ಬಣ್ಣಿಸಿದವು. ಪಾಕಿಸ್ತಾನದೊಂದಿಗೆ ಭಾರತದ ಕ್ರಿಕೆಟ್ ಆಟ ಸಹಿಸೆವು ಎಂಬುದು ಶಿವಸೇನೆ ಲಾಗಾಯ್ತಿನಿಂದ ಪ್ರತಿಪಾದಿಸಿಕೊಂಡುಬಂದ ಧೋರಣೆ. ಅದಕ್ಕಾಗಿ ಅದು ಈ ಹಿಂದಿನ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯದಂತೆ ಪಿಚ್ಚನ್ನೇ ಅಗೆದ ಉದಾಹರಣೆಗಳು ಇವೆ. ಈಗ ಮೋದಿ ಸರ್ಕಾರದೊಂದಿಗೆ ಮೈತ್ರಿ ಇರುವಾಗಲೂ ಅದೇ ಪ್ರತಿಪಾದನೆ ಮುಂದುವರಿದಿದೆಯಲ್ಲ ಎಂಬುದರಲ್ಲಿ ತುಂಬ ಅಚ್ಚರಿ ಪಡಬೇಕಾದ ವಿಚಾರವೇನಿಲ್ಲ.

ಜೈನರ ಆಚರಣೆಗಳು ಜಾರಿಯಿರುವ ಎರಡು ದಿನ ಮಹಾರಾಷ್ಟ್ರದಲ್ಲಿ ಮಾಂಸ ಮಾರಾಟದ ಮೇಲಿನ ನಿಷೇಧವು ಲಾಗಾಯ್ತಿನಿಂದ ಜಾರಿಯಲ್ಲಿದ್ದ ಸಂಗತಿ. ಈ ಬಾರಿ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಮುನ್ಸಿಪಲ್ ಮಟ್ಟದ ವ್ಯವಹಾರವೊಂದು ಚೌಕಟ್ಟು ಮೀರಿ ಚರ್ಚೆಯಾಯಿತು. ಇಲ್ಲಿ ಶಿವಸೇನೆ ಇಟ್ಟ ಹೆಜ್ಜೆ ಮಾತ್ರವೇ ತುಸು ಅಚ್ಚರಿಯದ್ದು. ಅದು ಮಾಂಸ ಮಾರಾಟ ನಿಷೇಧವನ್ನು ಕಟುವಾಗಿ ವಿರೋಧಿಸಿದ್ದಲ್ಲದೇ, ನಿಷೇಧ ವಿರೋಧಿಸಿ ತಾನೇ ಮಾರಾಟ ಮಾಡುವುದಾಗಿ ಹೇಳಿತು! ಇದರ ಸರಿ-ತಪ್ಪುಗಳನ್ನು ಪಕ್ಕಕ್ಕಿಡೋಣ. ಆದರೆ, ಯಾವತ್ತೂ ಜಾರಿಯಲ್ಲಿದ್ದ, ಬಿಜೆಪಿಯೇನೂ ಪ್ರಾರಂಭಿಸದಿದ್ದ ಸಂಗತಿಗೆ ಸೇನೆಯ ಆ ಪರಿ ಆಕ್ರೋಶ ಉದ್ದೇಶ ಶುದ್ಧಿಯಿಂದ ಹುಟ್ಟಿದ್ದೇ? 1995ರಲ್ಲಿ ತಾನು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಯಾರಾದರೂ ನಿಷೇಧಕ್ಕೆ ಈ ರೀತಿಯ ಪ್ರತಿರೋಧ ತೋರಿದ್ದರೆ ಅದು ಬಡಿಯದೇ ಬಿಡುತ್ತಿತ್ತೇ?

ವಾಸ್ತವ ಇಷ್ಟೆ. ಇದು ಸಿದ್ಧಾಂತದ ಪ್ರಶ್ನೆ ಅಲ್ಲವೇ ಅಲ್ಲ. ಅವರವರ ಐಡೆಂಟಿಟಿ ಮತ್ತು ಆ ಮೂಲಕ ರೂಪುಗೊಳ್ಳುವ ರಾಜಕೀಯ ಬಂಡವಾಳದ ಪ್ರಶ್ನೆಯಿದು. ಯಾವ ಸೆಕ್ಯುಲರ್ ಪಕ್ಷಗಳೂ ಸರ್ವಕಾಲದ ಸ್ನೇಹಿತರಲ್ಲ. ಅಸ್ತಿತ್ವವೇ ಅಲ್ಲಾಡಿದಾಗ, ಇಲ್ಲವೇ ಅಸ್ತಿತ್ವ ಗಟ್ಟಿಗೊಳಿಸಿಕೊಳ್ಳಬೇಕಾದಾಗ ಹಾಗೊಂದು ಶಬ್ದದಲ್ಲಿ ಒಂದಾಗುತ್ತವೆ. ಬಿಹಾರದಲ್ಲಿ ನಿತೀಶ್- ಲಾಲೂ ಒಂದಾಗಿರುವಂತೆ! ಎಲೆಕ್ಷನ್ ಎದುರಿಗಿದ್ದಾಗ ದೇವೇಗೌಡರು ತೃತೀಯ ರಂಗ ಎಂದು ಮಾತನಾಡಿದಂತೆ.

ಬಲಪಂಥೀಯ ರಾಜಕಾರಣವಾದರೂ ಅಷ್ಟೇ. ಸಿದ್ಧಾಂತ ಬದ್ಧತೆ ಎಂಬುದಕ್ಕಿಂತ ಅವರವರ ಅಸ್ತಿತ್ವ ಗಟ್ಟಿಗೊಳಿಸಿಕೊಳ್ಳುವುದು, ವಿಸ್ತರಿಸಿಕೊಳ್ಳುವುದು ಆದ್ಯತೆಯಾಗಿರುತ್ತದೆ. ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆ ಎದ್ದ ಸಂದರ್ಭದಲ್ಲೂ ಬಿಜೆಪಿಯೊಂದಕ್ಕೇ ಸಂಪೂರ್ಣ ಬಹುಮತ ಬರುತ್ತದೆಂಬ ಕಲ್ಪನೆ ಇದ್ದಿರಲಿಲ್ಲ. ಆದರೆ ಬಿಜೆಪಿ ಮುಂಚೂಣಿಯಲ್ಲಿರುತ್ತದೆ ಎಂಬುದಂತೂ ಬಹುತೇಕರಿಗೆ ಖಚಿತವಾಗಿತ್ತು. ಆಗ ಶಿವಸೇನೆ ಎನ್ ಡಿ ಎದಲ್ಲಿದ್ದುಕೊಂಡು ಅಚ್ಛೆ ದಿನಗಳಿಗಾಗಿ ಆಸೆಪಟ್ಟಿತು. ಅತ್ತ ರಾಜ್ ಠಾಕ್ರೆಯ ಎಂಎನ್ ಎಸ್ ಸಹ ಬೇಡವೆಂದರೂ ತಾವು ಮೋದಿಗೇ ಸಪೋರ್ಟು, ನಮ್ಮವರು ಬಿಜೆಪಿ ವಿರುದ್ಧ ಗೆದ್ದರೂ ಕೊನೆಯಲ್ಲಿ ಮೋದಿಗೇ ಬೆಂಬಲಿಸ್ತೇವೆ ಅಂತೆಲ್ಲ ಸಾರಿಕೊಂಡಿತ್ತು. ಇವುಗಳಲ್ಲಿ ಬಲಪಂಥ ಸಿದ್ಧಾಂತದ ಪ್ರೀತಿ ಅಂತೇನೂ ಅಲ್ಲದೇ, ಮನುಷ್ಯ ಸಹಜವಾದ, ಚಾನ್ಸ್ ಇರೋ ಕಡೆ ನಾವಿರೋಣ ಎಂಬಂಥ ನೀತಿಯನ್ನು ಕಾಣಬಹುದು. ಇದು ಮಾನವ ಸಹಜ ಗುಣವೇ ಆಗಿರುವುದರಿಂದ ಸೆಕ್ಯುಲರ್- ರೈಟಿಸ್ಟ್ ಎಲ್ಲ ಬಗೆಯ ರಾಜಕಾರಣಕ್ಕೂ ಈ ಧೋರಣೆ ಅನ್ವಯಿಸುತ್ತದೆ.

ಯಾವಾಗ ಕೇಂದ್ರದಲ್ಲಿ ಬಿಜೆಪಿ ತನ್ನದೇ ಬಹುಮತ ಸಾಧಿಸಿತೋ ಅಲ್ಲಿಯೇ ಶಿವಸೇನೆ ಪ್ರಾಬಲ್ಯ ಕುಸಿದುಹೋಯಿತು. ಮೋದಿ ಸರ್ಕಾರದಲ್ಲಿ ತನ್ನ ಆಟ ಸೀಮಿತ ಅಂತ ಗೊತ್ತಾಗಿಹೋಯಿತು. ನಂತರದಲ್ಲಿ ಎದುರಾಗಿದ್ದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ. ಅಲ್ಲಿ ಶಿವಸೇನೆಗೆ ಇನ್ನಿಲ್ಲದ ಅಸ್ತಿತ್ವದ ಇಗೋ ಕಾಡಿತು. ಕೇಂದ್ರದಲ್ಲಂತೂ ತಾನು ಪಕ್ಕಕ್ಕೆ. ಹೀಗಾಗಿ ಮಹಾರಾಷ್ಟ್ರ ರಾಜಕಾರಣದಲ್ಲಾದರೂ ಬಿಜೆಪಿಯನ್ನು ತನ್ನ ಅಧೀನದಲ್ಲಿರಿಸಿಕೊಂಡರೆ ಪ್ರಸ್ತುತತೆ ಕಾಪಾಡಿಕೊಳ್ಳಬಹುದು ಅಂತ ಅದು ಪ್ರಯತ್ನಿಸಿತು. ಹೀಗಾಗಿಯೇ, 151 ವಿಧಾನಸಭೆ ಕ್ಷೇತ್ರಗಳಿಗೆ ತಾನು ಸ್ಪರ್ಧಿಸುತ್ತೇನೆ, ಬಿಜೆಪಿ 119 ಸ್ಥಾನಗಳನ್ನು ಇಟ್ಟುಕೊಳ್ಳಲಿ, ಮೈತ್ರಿಯಲ್ಲಿರುವ ಉಳಿದ ಪಕ್ಷಗಳಿಗೆ 18 ಸ್ಥಾನ ಹಂಚೋಣ ಅಂದಿತ್ತು ಶಿವಸೇನೆ. ಇದಕ್ಕೆ ಸಹಮತ ಮೂಡದಿದ್ದರಿಂದಲೇ 25 ವರ್ಷಗಳ ಬಿಜೆಪಿ-ಶಿವಸೇನೆ ಮೈತ್ರಿ ಮುರಿದಿದ್ದು. ಅಲ್ಲಾದರೂ ಬಹುಮತಕ್ಕೆ ಬಿಜೆಪಿ ಭಾರೀ ಖೋತಾ ಅನುಭವಿಸಲಿ ಎಂಬ ಶಿವಸೇನೆ ಆಸೆ ಮಣ್ಣುಗೂಡಿಬಿಟ್ಟಿತು. 122 ಸ್ಥಾನಗಳನ್ನು ಗಳಿಸಿದ ಬಿಜೆಪಿಗೆ ಮೈತ್ರಿ ಬೇಕಾಯಿತಾದರೂ, ಶಿವಸೇನೆ ಅಲ್ಲದಿದ್ದರೆ ಎನ್ ಸಿಪಿಯಾದರೂ ಆದೀತು ಎಂಬ ವಾತಾವರಣ ಏರ್ಪಟ್ಟಿತು. ಆಗ ಧಡಕ್ಕನೇ ಮೃದುವಾದ ಶಿವಸೇನೆ ಸರ್ಕಾರವನ್ನು ಸೇರಿಕೊಂಡಿತಾದರೂ, ಸಮಯ ಸಿಕ್ಕಾಗಲೆಲ್ಲ, ‘ಹುಷಾರ್.. ನಾನು ಮೈತ್ರಿಯಿಂದ ಹೊರಬಂದುಬಿಡುತ್ತೇನೆ’ ಎನ್ನುತ್ತಿದೆ.

ಮುಖ್ಯಮಂತ್ರಿಯಾಗಿ ಒಂದು ವರ್ಷದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಆಡಳಿತ ನಡೆಸಿದ ಶೈಲಿಯನ್ನು ಹತ್ತು ಜನ ಹತ್ತು ಬಗೆಯಲ್ಲಿ ವಿಶ್ಲೇಷಿಸಬಹುದಾದರೂ, ಪ್ರಮುಖಾಂಶ ಏನೆಂದರೆ, ಬಲಪಂಥ ರಾಜಕಾರಣದ ಅತಿಮುಖ್ಯ ಮತದಾರ ಸಮೂಹಕ್ಕೆ ಫಡ್ನವೀಸ್ ನಿಖರ ನಿಷ್ಠೆ ತೋರಿದರು. ಗೋಹತ್ಯೆ ನಿಷೇಧ ಕಾನೂನಿನ ವಿರುದ್ಧ ಯಾರೇನೇ ಬೊಬ್ಬೆ ಇಟ್ಟರೂ ಅನುಷ್ಠಾನಕ್ಕೆ ತರುವಲ್ಲಿ ಫಡ್ನವೀಸ್ ಹಿಂತೆಗೆಯಲಿಲ್ಲ. ಮಲ್ಟಿಫ್ಲೆಕ್ಸ್ ಗಳು ಮರಾಠಿ ಸಿನಿಮಾಕ್ಕೆ ಆದ್ಯತೆ ನೀಡಬೇಕಾದ ವಿಷಯದಲ್ಲೂ ಚುರುಕಿನ ಆದೇಶ ಹೊರಟಿತು.

ಇಲ್ಲಿ ಫಡ್ನವೀಸ್ ಎರಡು ಐಡೆಂಟಿಟಿಗಳನ್ನು ಗಟ್ಟಿ ಮಾಡಿಕೊಂಡರು. ಗೋಹತ್ಯೆ ನಿಷೇಧ ಕಾನೂನಿನ ಮುಖಾಂತರ ಹಿಂದು ಹಿತಾಸಕ್ತಿಯ ಐಡೆಂಟಿಟಿ ಮತ್ತು ಸ್ಥಳೀಯ ನುಡಿ- ಸಂಸ್ಕೃತಿಗೆ ಪ್ರಾಮುಖ್ಯವಿರಬೇಕೆಂಬ ನಿಟ್ಟಿನಲ್ಲಿ ಮರಾಠಿ ಸಿನಿಮಾಗಳ ಪರ ತೆಗೆದುಕೊಂಡ ನಿಲುವು ಎರಡು ಪ್ರಮುಖ ಮತ ಸಮೂಹಗಳನ್ನು ಸಂಪ್ರೀತಗೊಳಿಸಿದವು. ಮರಾಠಿ ಅಸ್ಮಿತೆಯ ಜತೆಯಲ್ಲೇ ಹಿಂದೂ ಐಡೆಂಟಿಟಿಯನ್ನು ಬೆರೆಸಿಕೊಂಡು ರಾಜಕೀಯ ಪಾಕ ತಯಾರಿಸಿಕೊಂಡಿದ್ದ ಶಿವಸೇನೆ- ಎಂ ಎನ್ ಎಸ್ ಗಳು ಆಘಾತ ಅನುಭವಿಸದೇ ಇನ್ನೇನು ಆದಾವು?

ಎಡಪಂಥೀಯ ವಾಲುವಿಕೆಯ ರಾಜಕಾರಣ ಭಾರತದಲ್ಲಿ ಪ್ರಮುಖವಾಗಿದ್ದ ಸಂದರ್ಭದಲ್ಲೂ ಇಂಥದೇ ರಾಜಕೀಯ ಪಾಕವೇ ನಮ್ಮೆದುರಿನಲ್ಲಿ ಇದ್ದದ್ದು. ಕಾಂಗ್ರೆಸ್ ಮತ್ತು ಸಿಪಿಎಂ ಮಿತ್ರರಾ? ಮುಲಾಯಂ- ಮಾಯಾವತಿ ಇವರೆಲ್ಲ ಕಾಂಗ್ರೆಸ್ ಮಿತ್ರರೋ- ಶತ್ರುಗಳೋ?- ಇಂಥೆಲ್ಲ ಪ್ರಶ್ನೆಗಳಿಗೂ ನಿಖರ ಉತ್ತರ ಸಿಗುವುದಿಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ಅವು ಬದಲಾಗುತ್ತಿರುತ್ತವೆ ಅಷ್ಟೆ. ಮೌಲ್ಯಾಧಾರಿತ ಬೆಂಬಲ- ಮಣ್ಣಂಗಟ್ಟಿ ಅಂತೇನೇ ಹೇಳಿದ್ರೂ ಕೊನೆಗೂ ಎಲ್ಲರದ್ದೂ ಅವರವರ ಅಸ್ತಿತ್ವಕ್ಕೆ ಹೋರಾಟವಷ್ಟೆ. ಇದು ರಾಜಕಾರಣಕ್ಕೂ, ಮತ್ತೆಲ್ಲ ಕ್ಷೇತ್ರಗಳಿಗೂ, ಒಟ್ಟಾರೆ ಬದುಕಿಗೂ ಅನ್ವಯಿಸುವಂಥ ಸೂತ್ರ.

ಈಗ ಹೇಳಿ. ಶಿವಸೇನೆ ವರ್ಸಸ್ ಬಿಜೆಪಿ ಎಂಬ ಸುದ್ದಿ ನಿಮ್ಮಲ್ಲಿ ಕಂಪನ- ಕುತೂಹಲ ಹುಟ್ಟುಹಾಕುತ್ತಾ?

Leave a Reply