ಇಂದು ಡಿಜಿಟಲ್ ಕನ್ನಡ ಲೋಕಾರ್ಪಣೆ, ಇರಲಿ ಪ್ರೀತಿ, ಹಾರೈಕೆ

‘ಡಿಜಿಟಲ್ ಕನ್ನಡ’ ಅಂತರ್ಜಾಲ ಪತ್ರಿಕೆ ಭಾನುವಾರ ಲೋಕಾರ್ಪಣೆ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10.30 ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ.  ಕೇಂದ್ರ ಸಚಿವರಾದ ಅನಂತ ಕುಮಾರ್, ಮಾಜಿ ಸಚಿವ ಎಂ. ಸಿ. ನಾಣಯ್ಯ, ಕನ್ನಡ ವಿದ್ವಾಂಸ ಜಿ. ವೆಂಕಟಸುಬ್ಬಯ್ಯ ಗಣ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಮೆರಗು ತರಲಿದ್ದಾರೆ.

ಮೂರು ದಶಕಗಳ ದೀರ್ಘ ಅನುಭವದ ಪತ್ರಕರ್ತ, ರಾಜಕೀಯ ವಿಶ್ಲೇಷಕ, ‘ಒಳಸುಳಿ’ ಖ್ಯಾತಿಯ ಪಿ. ತ್ಯಾಗರಾಜ್ ಸಂಪಾದಕತ್ವದಲ್ಲಿ ಬರುತ್ತಿರುವ ‘ಡಿಜಿಟಲ್ ಕನ್ನಡ’, ಇವತ್ತಿನ ಸಾಮಾಜಿಕ ಮಾಧ್ಯಮ ಯುಗದ, ನವಪೀಳಿಗೆಯ ಆಶೋತ್ತರಗಳನ್ನು ಈಡೇರಿಸುವ ಸಂಕಲ್ಪ ಹೊಂದಿದೆ.

ಮಾಹಿತಿ ಪರ್ವ ಈಗ ಮಗ್ಗಲು ಬದಲಿಸುತ್ತಿದೆ. ಎಲ್ಲವೂ ಅಂತರ್ಜಾಲದ ಡಿಜಿಟಲ್ ವೇದಿಕೆಗೆ ಬರುತ್ತಿವೆ. ಫೇಸ್ ಬುಕ್ ಮತ್ತು ಟ್ವಿಟ್ಟರ್ ನಂಥ ಸಾಮಾಜಿಕ ತಾಣಗಳು ಸುದ್ದಿ ಹಂಚುವಲ್ಲಿ, ಸುದ್ದಿ ಚರ್ಚೆ ಹುಟ್ಟುಹಾಕುವಲ್ಲಿ ಹೊಸ ಮುನ್ನುಡಿ ಬರೆದಿವೆ. ಅಂತರ್ಜಾಲದಲ್ಲಿ ಅಕ್ಷರದೊಂದಿಗೆ ದೃಶ್ಯ, ಆಡಿಯೋ ಸಾಧ್ಯತೆಗಳೂ ಇರುವುದರಿಂದ ಸುದ್ದಿ- ವಿಶ್ಲೇಷಣೆಗಳನ್ನು ಹೊಸ ನಿರೂಪಣೆಯೊಂದಿಗೆ ಸಾದರಪಡಿಸಬಹುದಾದ ಸಾಧ್ಯತೆ ತೆರೆದುಕೊಂಡಿದೆ. ಅಲ್ಲದೇ ಸ್ಮಾರ್ಟ್ ಫೋನ್ ಗಳ ಯುಗ ಶುರುವಾಗಿರುವುದರಿಂದ, ಅಂತರ್ಜಾಲವು ಸುಲಭವಾಗಿ ಸಾಮಾನ್ಯರನ್ನೂ ತಲುಪುವಂತಾಗಿದೆ.

ಅಂತರ್ಜಾಲ ಜಗತ್ತಿನ ಬೆಳವಣಿಗೆ ಹೇಗಿದೆ ಎಂದರೆ, ಸ್ಮಾರ್ಟ್ ಫೋನ್ ಗಳಲ್ಲಿ ಅಂತರ್ಜಾಲಕ್ಕೆ ಬೆಸೆದುಕೊಂಡಿರುವವರಿಗೆ ಅಂದಿನ ಸುದ್ದಿ ಅಂದಂದೇ ತಿಳಿಯುತ್ತದೆ. ಸ್ಮಾರ್ಟ್ ಫೋನ್ ಗಳು ಸದಾ ಬಳಕೆದಾರನ ಜತೆಯಲ್ಲಿದ್ದುಕೊಂಡೇ ಆತನ ಮಾಹಿತಿ ತೃಷೆಯನ್ನು ಆಯಾ ಕ್ಷಣದಲ್ಲೇ ತೀರಿಸುತ್ತಿವೆ.

ಅಲ್ಲದೇ, ಸುದ್ದಿಯಾಚೆಗಿನ ವಿಶ್ಲೇಷಣೆ- ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಾತರದಿಂದಿರುವ ನವ ಡಿಜಿಟಲ್ ಸಾಕ್ಷರ ಸಮೂಹ ನಮ್ಮ ಮುಂದಿದೆ. ಇವರನ್ನು ತಣಿಸುವುದಕ್ಕೆ ಹೊಸದೇ ಹೂರಣವೊಂದು ಬೇಕಿದೆ. ಇದನ್ನು ಅರ್ಥಮಾಡಿಕೊಂಡು ರಾಷ್ಟ್ರೀಯ ಮಟ್ಟದಲ್ಲಿ ನುರಿತ ಪತ್ರಕರ್ತರೆಲ್ಲ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆರ್. ಜಗನ್ನಾಥ್ ಸಂಪಾದಕತ್ವದಲ್ಲಿ ಪ್ರಾರಂಭಗೊಂಡ ‘ಫಸ್ಟ್ ಪೋಸ್ಟ್,’ ಇಂಡಿಯಾ ಟುಡೆ ಸಂಸ್ಥಾಪಕ ಸಂಪಾದಕಿ ಮಧು ತ್ರೆಹಾನ್ ನೇತೃತ್ವದ ‘ನ್ಯೂಸ್ ಲಾಂಡ್ರಿ’, ನೆಟ್ ವರ್ಕ್18 ಪ್ರಾರಂಭಿಸಿ ನಂತರ ರಿಲಾಯನ್ಸ್ ಸಮೂಹಕ್ಕೆ ಮಾರಿದ ರಾಘವ್ ಬಹ್ಲ್ ಈಗ ಹೊರತಂದಿರುವ ‘ಕ್ವಿಂಟ್’… ಹೀಗೆ ಹಲವು ಪ್ರಯತ್ನಗಳನ್ನು ಪಟ್ಟಿ ಮಾಡಬಹುದಾಗಿದೆ.

ಕನ್ನಡದಲ್ಲೂ ಬೇಡವೇ ನವಮಾಧ್ಯಮದ ಇಂಥ ಪ್ರಯತ್ನಗಳು? ಈ ಸಾಧ್ಯತೆ- ಸವಾಲಿಗೆ ಒಡ್ಡಿಕೊಳ್ಳಲೆಂದೇ ಪಿ. ತ್ಯಾಗರಾಜ್ ಮತ್ತು ಚೈತನ್ಯ ಹೆಗಡೆ ರೂಪಿಸಿದ ಪರಿಕಲ್ಪನೆ ‘ಡಿಜಿಟಲ್ ಕನ್ನಡ’. ಇದು ಕೇವಲ ಮಾಹಿತಿ ಪೂರೈಕೆ ತಾಣವಾಗಿರದೇ, ಕನ್ನಡಿಗರ ಚಿಂತನಾ ವೇದಿಕೆಯೂ ಹೌದು. ಹಾಗೆಂದೇ ನಿಮ್ಮೆಲ್ಲರ ಹಾರೈಕೆ- ಬೆಂಬಲಗಳನ್ನು ‘ಡಿಜಿಟಲ್ ಕನ್ನಡ’ ಬಯಸುತ್ತದೆ.

2 COMMENTS

  1. ಮಾನ್ಯರೆ,
    ಒಳಸುಳಿ ಮೂಲಕ ಖ್ಯಾತಿಯಾದ ತಾವು ಈ ತಾಣ ಪ್ರಾರಂಭ ಮಾಡಿ ಕನ್ನಡಿಗರಿಗೆ ಇದೀಗ ಬೆರಳ ತುದಿಯಲ್ಲಿಯೇ ಸುದ್ದಿ ಕೊಡುವ ನಿಮ್ಮ ನವೀನ ಪ್ರಯತ್ನಕ್ಕೆ ಅಭಿನಂದನೆಗಳು ನಿಮ್ಮೊಂದಿಗೆ ಸದಾ ಕನ್ನಡ ಓದುಗರು ಇದ್ದಾರೆ ಶುಭವಾಗಲಿ

Leave a Reply