ಕನ್ನಡಕ್ಕಾಗಿದೆ ಬರೋಬ್ಬರಿ ೨೨೦ ಕೋಟಿ ನಷ್ಟ ಕೇಳುವವರಿಲ್ಲ ಶಾಸ್ತ್ರೀಯ ಭಾಷೆಯ ಸಂಕಷ್ಟ!

(ಇಂಟರ್ನೆಟ್ ಚಿತ್ರ)

ವಿಶೇಷ ವರದಿ

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಾಗ ನಾಡೇ ಸಂಭ್ರಮಿಸಿದ್ದು ನೆನಪಿದೆಯಲ್ಲ? ಆದರೆ, ಅವತ್ತು ಶಾಸ್ತ್ರೀಯ ಸ್ಥಾನಮಾನಕ್ಕೆ ಹೋರಾಡಿ ಮಿಂಚಿದ್ದ ನಾಯಕರು, ವೀರಾವೇಶದ ಹೇಳಿಕೆ ಕೊಟ್ಟಿದ್ದ ರಾಜಕೀಯ ನೇತಾರರೆಲ್ಲ, ಶಾಸ್ತ್ರೀಯ ಸ್ಥಾನಮಾನ ಎಂಬ ಫಲಕ ಸಿಕ್ಕಿದ್ದೇ ಕನ್ನಡದ ವಿಜಯ ಎಂಬಂತೆ ಸುಮ್ಮನಾಗಿದ್ದಾರೆ. ಪರಿಣಾಮ ಕನ್ನಡಕ್ಕೆ ಆಗಿರುವ ನಷ್ಟ 220 ಕೋಟಿ ರುಪಾಯಿಗಳು!

ಹೌದು! 2008ರಲ್ಲಿ ಕನ್ನಡಕ್ಕೆ ಇಂಥದೊಂದು ಸ್ಥಾನಮಾನ ಸಿಗುವಾಗಲೇ ತಮಿಳಿಗೆ ಸಿಕ್ಕಿತ್ತು. ಅಲ್ಲಿಂದ ಈವರೆಗೆ ಅಧ್ಯಯನದ ಅನುದಾನ ಅಂತ ತಮಿಳಿಗೆ 220 ಕೋಟಿ ರುಪಾಯಿಗಳು ಸಿಕ್ಕಿವೆ. ಕನ್ನಡಕ್ಕೆ ‘ನಾಮ’ ಭಾಗ್ಯ ಮಾತ್ರ.

ಬೇರೆ ಯಾವುದೇ ಇಲಾಖೆಗೆ ಕೇಂದ್ರ ಸಕಾ೯ರದಿಂದ ಬರಬೇಕಿದ್ದ ಇಷ್ಟೊಂದು ದೊಡ್ಡ ಮೊತ್ತದ ಹಣ ಬಾಕಿಯಾಗಿದ್ದರೆ ಸಚಿವರು, ಅಧಿಕಾರಿಗಳು ಬೊಬ್ಬೆ ಹೊಡೆಯುತ್ತಿದ್ದರು. ಪ್ರತಿಪಕ್ಷಗಳು ಹೂಂಕರಿಸುತ್ತಿದ್ದವು. ಕೇಂದ್ರ ಸರ್ಕಾರದ ಮಧ್ಯ ಪ್ರವೇಶವಾಗಲಿ ಅಂತ ದೆಹಲಿಗೆ ನಿಯೋಗವೂ ಹೋಗುತ್ತಿತ್ತು. ಆದರೆ ನಷ್ಟವುಂಟಾಗಿದ್ದು ಕನ್ನಡಕ್ಕೆ ನೋಡಿ! ಹೀಗಾಗಿ ಯಾರಿಗೂ ಮಾತನಾಡುವ ದರ್ದು ಉಳಿದಿಲ್ಲ.

ಹಾಗಾದರೆ ಆಗಿರುವುದೇನು?
ಆದರೆ ತಮಿಳುನಾಡಿನ ಗಾಂಧಿ ಎಂಬ ಕುಚೋದ್ಯದ ಹೆಸರಿನ ಹೋರಾಟಗಾರನ್ನೊಬ್ಬ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೊಟ್ಟ ಕೇಂದ್ರದ ಕ್ರಮ ಖಂಡಿಸಿ ತಮಿಳುನಾಡು ಹೈಕೋಟ್೯ನಲ್ಲಿ ಆಕ್ಷೇಪ ಅಜಿ೯ ದಾಖಲಿಸಿದ್ದಾನೆ. ಈ ಅಜಿ೯ ತೆರವು ಮಾಡಿಸುವುದಕ್ಕೆ 2008 ರಿಂದಲೂ ಕರ್ನಾಟಕದ ಯಾವುದೇ ಮುಖ್ಯಮಂತ್ರಿಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ ಈ ಅವಧಿಯಲ್ಲಿ ಕನ್ನಡಕ್ಕೆ ನ್ಯಾಯಯುತವಾಗಿ ಸಲ್ಲಬೇಕಿದ್ದ ಅಧ್ಯಯನ ಅನುದಾನ 220 ಕೋಟಿ ನಷ್ಟವಾಗಿದೆ.

ಅನುದಾನ ಸಿಕ್ಕಬೇಕಿದ್ದರೆ ಅಜಿ೯ ವಜಾ ಆಗಬೇಕು. ಅಜಿ೯ ವಜಾ ಆಗಬೇಕಿದ್ದರೆ ರಾಜ್ಯ ಸಕಾ೯ರಕ್ಕೆ ಕಾನೂನು ಹೋರಾಟ ಮಾಡುವ ಛಾತಿ ಬೇಕು. ಕನ್ನಡದ ದುದೈ೯ವವೆಂದರೆ ನಮ್ಮ ಸಕಾ೯ರ ಇದುವರೆಗೆ ಅಡ್ವೋಕೇಟ್  ಜನರಲ್ ಅವರಿಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಸೂಚನೆ ನೀಡಿಲ್ಲ.
ಇನ್ನು ಮೈಸೂರಿನಲ್ಲಿರುವ ಭಾರತೀಯ ಭಾಷಾ ಪ್ರಾಧಿಕಾರದ ಮೂಲಕ ಹಣ ಪಡೆಯೋಣವೆಂದರೆ ಕನ್ನಡ ಶಾಸ್ತ್ರೀಯ ಭಾಷೆ ಯೋಜನಾ ಅಧಿಕಾರಿಯ ನೇಮಕವಾಗಿಲ್ಲ. ಈ ವಿಚಾರವೂ ನ್ಯಾಯಾಲಯದ ಮೆಟ್ಟಿಲೇರಿದ್ದು ಡಿಸೆಂಬರ್ 14 ರೊಳಗೆ ವಿವಾದ ಬಗೆಹರಿಸಬೇಕಿದೆ.

ಒಟ್ಟಾರೆಯಾಗಿ, ಶಾಸ್ತ್ರೀಯ ಭಾಷೆ ಎಂಬ ಸ್ಥಾನಮಾನಕ್ಕೆ ಮಾತ್ರ ಭಾವಾವೇಶ ಪ್ರದರ್ಶಿಸಿದ ನಮ್ಮ ಸರ್ಕಾರಗಳು ಮತ್ತು ಆಡಳಿತಾಂಗ, ಆ ಪಟ್ಟ ಸಿಕ್ಕಿದ ನಂತರ, ಮುಂದಿನ ಹಂತಗಳಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವುದನ್ನೇ ಮರೆತವು. ತಮಿಳುನಾಡಿನವರು ಶಾಸ್ತ್ರೀಯ ಭಾಷೆಯನ್ನು ‘ಚಮ್ಮೊಲಿ’ ಎಂಬ ಹೆಸರಿನಲ್ಲಿ ಸೂಚಿಸಿ, ತಾಂತ್ರಿಕ ವಿಧಿ ನಿಯಮಗಳನ್ನೆಲ್ಲ ಅಚ್ಚುಕಟ್ಟಾಗಿ ಪಾಲಿಸಿ ತಮಗೆ ಬರಬೇಕಾದ್ದನ್ನು ಪಡೆದುಕೊಂಡರು. ನಂತರ, ಆರ್. ಗಾಂಧಿ ಎಂಬುವವರು ಕನ್ನಡಕ್ಕಷ್ಟೇ ಅಲ್ಲದೇ ತೆಲುಗು, ಮಲಯಾಳಂ, ಒಡಿಯಾ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನ ಕೊಟ್ಟಿರುವುದನ್ನು ಪ್ರಶ್ನಿಸಿಯೂ ಹೈಕೋರ್ಟ್ ಗೆ ಹೋಗಿದ್ದಾರೆ. ಇಂಥ ಕ್ಯಾತೆಗಳನ್ನು ಪ್ರಾರಂಭದಿಂದಲೇ ಚಾಣಾಕ್ಷ್ಯತನದಿಂದ, ತೀವ್ರತೆಯಿಂದ ಎದುರಿಸುವಲ್ಲಿ ಕರ್ನಾಟಕದ ಈವರೆಗಿನ ಆಡಳಿತ ವ್ಯವಸ್ಥೆ ಆಲಸ್ಯ ಮೆರೆದಿರುವುದು ಸ್ಪಷ್ಟ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ.. ತಾವಾದರೂ ಕನ್ನಡದ ಈ ಕೆಲಸವನ್ನು ಆದ್ಯತೆಯಲ್ಲಿಟ್ಟು ಮಾಡುವಿರಾ?

Leave a Reply