ಗೌಡರ ರಾಜಕೀಯ ರಕ್ತ ಇನ್ನೂ ಹೆಪ್ಪುಗಟ್ಟಿಲ್ಲ ಚಲುವರಾಯಸ್ವಾಮಿ ಅವರನ್ನು ಕೇಳಿ ನೋಡಿ!

 

ಡಿಜಿಟಲ್ ಕನ್ನಡ ಟೀಮ್

ತಮ್ಮ ರಕ್ತದಲ್ಲಿ ಹರಿಯುತ್ತಿರುವ ರಾಜಕೀಯ ಇನ್ನೂ ಹೆಪ್ಪುಗಟ್ಟಿಲ್ಲ ಎಂಬುದನ್ನು ಮಾಜಿ ಪ್ರಧಾನಿ ದೇವೇಗೌಡರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮಂಡ್ಯದಿಂದ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಿದ್ದ ಮಾಜಿ ಸಚಿವ ಚಲುವರಾಯಸ್ವಾಮಿ ಹೆಡೆಮುರಿಗೆ ಕಟ್ಟುವ ಮೂಲಕ ಪಕ್ಷದಲ್ಲಿದ್ದುಕೊಂಡೇ ಬಾಲ ಬಿಚ್ಚುತ್ತಿರುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಮೇಲ್ಮನೆ ಚುನಾವಣೆಯಲ್ಲಿ ಮೂರು ಪ್ರಮುಖ ಪಕ್ಷಗಳಲ್ಲೂ ಬಂಡಾಯ ಅಭ್ಯರ್ಥಿಗಳು ಕಾಣಿಸಿಕೊಂಡಿದ್ದರು. ಆದರೆ ದೇವೇಗೌಡರ ಕುಟುಂಬಕ್ಕೆ ಸೆಡ್ಡುಹೊಡೆದು ತಮ್ಮ ಬಲಗೈ ಬಂಟ, ಮೇಲ್ಮನೆ ಹಾಲಿ ಸದಸ್ಯ ಬಿ. ರಾಮಕೃಷ್ಣ ಅವರನ್ನು ಕಣಕ್ಕಿಳಿಸಿದ್ದ ಕಾರಣಕ್ಕೆ ಚಲುವರಾಯಸ್ವಾಮಿ ರಾಜಕೀಯ ರಂಗದ ಹುಬ್ಬೇರಿಸಿದ್ದರು. ಆದರೆ ಎಂದಿನಂತೆ ತಮ್ಮ ರಾಜಕೀಯ ದಾಳ ಉರುಳಿಸಿ ರಾಮಕೃಷ್ಣ ಕಣದಿಂದ ಔಟಾಗುವಂತೆ ಮಾಡುವ ಮೂಲಕ ಗೌಡರು ಚಲುವರಾಯಸ್ವಾಮಿ ಅವರನ್ನು ಚಿತ್ ಮಾಡಿ, ಮಲಗಿಸಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯ ಆಪ್ತಮಿತ್ರನೆನಿಸಿದ್ದ ಚಲುವರಾಯಸ್ವಾಮಿ ಕಳೆದೊಂದು ದಶಕದಿಂದ ಮಂಡ್ಯ ಜೆಡಿಎಸ್‌ನ ಪ್ರಶ್ನಾತೀತ ನಾಯಕರಾಗಿ ಮೆರೆದಿದ್ದರು, ಈಗಲೂ ಮೆರೆಯುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಗೌಡರ ಕುಟುಂಬದ ವಿರುದ್ಧ ಮುನಿಸಿಕೊಂಡಿದ್ದರು. ಪಕ್ಷದ ”ಸಮಾನ ಮುನಿಸ್ಕ”ರನ್ನು ಒಂದುಗೂಡಿಸಿ ಆ ಗುಂಪಿನ ನಾಯಕರೂ ಆಗಿದ್ದರು. ಪ್ರಮುಖ ತೀರ್ಮಾನ ಸಂದರ್ಭಗಳಲ್ಲಿ ಗೌಡರ ಕುಟುಂಬ ಈ ಗುಂಪನ್ನು ಪಕ್ಕಕ್ಕಿಡುವುದು, ಈ ಗುಂಪು ಗೌಡರ ಕುಟುಂಬದ ವಿರುದ್ಧ ತೆರೆಮರೆಯಲ್ಲಿ ಗುಟುರು ಹಾಕುವುದು ನಡೆದೇ ಇತ್ತು. ಅಷ್ಟೇ ಅಲ್ಲದೇ ರಾಜಕೀಯ ವಿರೋಧಿಗಳ ಪಾಳೆಯದಲ್ಲಿ ಆಗಾಗ್ಗೆ ಠಳಾಯಿಸುವ ಮೂಲಕ ಗೌಡರಿಗೆ ರೇಜಿಗೆ ಹುಟ್ಟಿಸುತ್ತಿತ್ತು.

ಇಂಥ ಸಂದರ್ಭದಲ್ಲಿಯೇ ಬಂದ ಮೇಲ್ಮನೆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಬಂಟ ರಾಮಕೃಷ್ಣ ಅವರಿಗೆ ಕೊಕ್ ಕೊಟ್ಟ ದೇವೇಗೌಡರು, ನಾಗಮಂಗಲ ಮೂಲದವರೇ ಆದ ಅಪ್ಪಾಜಿಗೌಡ ಅವರಿಗೆ ಟಿಕೆಟ್ ನೀಡಿದ್ದರು. ರಾಮಕೃಷ್ಣಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆಯೇ ಚಲುವರಾಯಸ್ವಾಮಿ ಪಿತ್ತ ನೆತ್ತಿಗೇರಿತ್ತು. ಅಪ್ಪಾಜಿಗೌಡರಿಂದ ನಾಮಪತ್ರ ವಾಪಸ್ಸು ತೆಗೆಸದಿದ್ದರೆ ತಾವು ಫಲಿತಾಂಶದ ಜವಾಬ್ದಾರಿ ಹೊರುವುದಿಲ್ಲ. ಮುಂದಾಗುವ ರಾಜಕೀಯ ಪರಿಣಾಮಗಳಿಗೆ ತಾವು ಹೊಣೆಯಲ್ಲ, ತಮ್ಮನ್ನು ರಾಜಕೀಯವಾಗಿ ಮುಗಿಸಲು ಗೌಡರ ಕುಟುಂಬದಿಂದಲೇ ಪಿತೂರಿ ನಡೆದಿದೆ ಎಂದೆಲ್ಲ ಬಹಿರಂಗವಾಗಿ ಗುಡುಗಿದ್ದರು.

ನಿಜ, ಚಲುವರಾಯಸ್ವಾಮಿ ಹಾಗೆ ಕೋಪಿಸಿಕೊಳ್ಳಲು ಕಾರಣವೂ ಇತ್ತು. ಗೌಡರು ಟಿಕೆಟ್ ಕೊಟ್ಟಿದ್ದ ಅಪ್ಪಾಜಿಗೌಡ ನಾಗಮಂಗಲದವರು. ಒಂದೊಮ್ಮೆ ಅಪ್ಪಾಜಿಗೌಡ ಸೋತರೆ ಅದರ ಹೊಣೆಯನ್ನು ಚಲುವರಾಯಸ್ವಾಮಿ ತಲೆಗೆ ಕಟ್ಟಿ, ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್ಟನ್ನು ಅಪ್ಪಾಜಿಗೌಡರಿಗೆ ಪರಿಹಾರಾರ್ಥವಾಗಿ ನೀಡುವುದು, ಚಲುವರಾಯಸ್ವಾಮಿಗೆ ಟಿಕೆಟ್ ತಪ್ಪಿಸುವುದು ದೇವೇಗೌಡರ ದೂರಾಲೋಚನೆಯಾಗಿತ್ತು. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಶಿವರಾಮೇಗೌಡರು ಚಲುವರಾಯಸ್ವಾಮಿಯವರ ರಾಜಕೀಯ ಕಡುವೈರಿ. ಹಣ, ತೋಳ್ಬಲ, ಹೆಂಡ ಪ್ರಧಾನ ರಾಜಕೀಯದಲ್ಲಿ ಶಿವರಾಮೇಗೌಡರ ಹೆಡೆಮುರಿ ಕಟ್ಟಿಯೇ ಚಲುವರಾಯಸ್ವಾಮಿ ಶಾಸಕರಾದವರು. ಚಲುವರಾಯಸ್ವಾಮಿ ಏಟಿಗೆ ಎಚ್ಚೆತ್ತುಕೊಳ್ಳಲಾಗದೆ ಶಿವರಾಮೇಗಡೌರು ಒಂದೂವರೆ ದಶಕದಿಂದ ರಾಜಕೀಯ ವನವಾಸ ಅನುಭವಿಸಿದವರು.

ಶಿವರಾಮೇಗೌಡ-ಅಪ್ಪಾಜಿಗೌಡ ಈರ್ವರಲ್ಲಿ ಯಾರೇ ಗೆದ್ದರೂ ಚಲುವರಾಯಸ್ವಾಮಿ ಪಾಲಿಗೆ ಅದು ವಿಷಮುಳ್ಳು ಎಂದು ಎಣಿಸಿಯೇ ಗೌಡರು ಮೇಲ್ಮನೆ ಟಿಕೆಟ್ ತಂತ್ರ ರೂಪಿಸಿದ್ದರು. ಏಕೆಂದರೆ ಬಂಡಾಯ ಅಭ್ಯರ್ಥಿ ರಾಮಕೃಷ್ಣ ಅವರನ್ನು ಗೆಲ್ಲಿಸಿಕೊಳ್ಳುವುದು ಸುಲಭವಲ್ಲ ಎಂಬುದು ಬೇರೆಯವರಿಗಿರಲಿ, ಸ್ವತಃ ಚಲುವರಾಯಸ್ವಾಮಿಯವರಿಗೇ ಚೆನ್ನಾಗಿ ಗೊತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಶುಕ್ರವಾರ ದಿಲ್ಲಿಗೆ ತೆರಳಿದ್ದ ಗೌಡರು, ಅಲ್ಲಿಂದ ಹಾಕಿದ ಟೆಲಿಫೋನ್ ಆವಾಜ್ ಗೆ ಥರಗುಟ್ಟಿಹೋದ ರಾಮಕೃಷ್ಣ ಶನಿವಾರ ಸೈಲೆಂಟಾಗಿ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಇಲ್ಲಿ ವಾಪಾಸ್ಸಾಗಿರುವುದು ಬರೀ ನಾಮಪತ್ರ ಅಲ್ಲ. ಚಲುವರಾಯಸ್ವಾಮಿ ಟೀಮಿನ ಆತ್ಮವಿಶ್ವಾಸ. ಗೌಡರ ದಾಳದ ಮುಂದಿನ ಗುರಿ ಯಾರಿರಬಹುದು ಎಂಬ ಕುತೂಹಲಭರಿತ ಪ್ರಶ್ನೆ ಈಗ ಜೆಡಿಎಸ್ ಹಾಗೂ ರಾಜಕೀಯ ಅಂಗಳದೊಳಗಿನ ಕಾಲ್ಚೆಂಡಾಗಿದೆ.

1 COMMENT

Leave a Reply