ಗ್ರಾಮೀಣ ಭಾಗದಲ್ಲಿ ಶೌಚೌಲಯ ನಿರ್ಮಿಸದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ

ಡಿಜಿಟಲ್ ಕನ್ನಡ ಟೀಮ್

ಗ್ರಾಮೀಣ ಭಾಗದ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಆದೇಶ ಅನುಷ್ಠಾನಕ್ಕೆ ತಾರದ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ  ಪ್ರಕರಣ ದಾಖಲಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಗೋಪಾಲಗೌಡರು ಸೂಚನೆ ನೀಡಿದ್ದಾರೆ.

ಸುಪ್ರೀಂಕೋರ್ಟ್ ಆದೇಶಗಳಿರುವುದು ಶೈತ್ಯಾಗಾರದಲ್ಲಿ ಇರಿಸಲು ಅಲ್ಲ. ಸಮರ್ಪಕ ಅನುಷ್ಠಾನಕ್ಕೆ.

ಇದನ್ನು ಪಾಲಿಸದಿದ್ದರೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಶಿಕ್ಷಣ ಸಚಿವರನ್ನು ನ್ಯಾಯಾಲಯಕ್ಕೆ ಕರೆಸಿ ನಿರ್ದೇಶನ ನೀಡಿ.  ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ದಾಖಲಿಸಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗೋಪಾಲಗೌಡ ಹೈಕೋರ್ಟ್‍ನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಏರ್ಪಡಿಸಿದ್ದ ಬೃಹತ್ ಅದಾಲತ್ ಕಾರ್ಯಕ್ರಮದಲ್ಲಿ ಹೇಳಿದರು.

ಒಟ್ಟಾರೆ ಅವರು ಹೇಳಿದ್ದು : ಒಟ್ಟು ಜನಸಂಖ್ಯೆಯಲ್ಲಿ ಶೇ.74 ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. ದೇಶದ ಉದ್ದಗಲಕ್ಕೂ ಲಕ್ಷಾಂತರ ಶಾಲೆಗಳಿವೆ. 40 ಕೋಟಿ ಮಕ್ಕಳು ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಆದರೆ ಮಕ್ಕಳಿಗೆ ಸಮರ್ಪಕ ಶೌಚಾಲಯಗಳಿಲ್ಲ. ಅದರ ನಿರ್ಮಾಣಕ್ಕೆ ಸುಪ್ರೀಂಕೋಟ್ ನೀಡಿರುವ ಆದೇಶ ಪಾಲನೆಯಾಗುತ್ತಿಲ್ಲ.

ಇದೇ ರೀತಿ ಸುಪ್ರೀಂ ಕೋರ್ಟ್ ಆದೇಶ  ಉಲ್ಲಂಘಿಸಿದ್ದರಿಂದ ಆಂಧ್ರ ಪ್ರದೇಶ ಮುಖ್ಯ ಕಾರ್ಯದರ್ಶಿಯವರನ್ನು ನ್ಯಾಯಾಲಯಕ್ಕೆ ಕರೆಸಿ ಎಚ್ಚರಿಕೆ ನೀಡಲಾಗಿತ್ತು. ರಾಜ್ಯದಲ್ಲೂ ಇದೇ ರೀತಿ ಮುಖ್ಯ ನ್ಯಾಯಾಧೀಶರು, ಸಂಬಂಧಿಸಿದ ಸಚಿವರಿಗೆ ನಿರ್ದೇಶನ ನೀಡಬೇಕು. ಅಡ್ವೊಕೇಟ್ ಜನರಲ್ ಅವರು ಶೌಚಾಲಯಗಳ ಕೊರತೆ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಲೋಕೋಪಯೋಗಿ ಸಚಿವರ ಗಮನಕ್ಕೆ ತರಬೇಕು ಎಂದು ಸಲಹೆ ಮಾಡಿದರು.

ಕೇವಲ ಲೋಕ ಅದಾಲತ್ ನಡೆಸುವುದು ಕಾನೂನು ಸೇವಾ ಪ್ರಾಧಿಕಾರದ ಕೆಲಸವಲ್ಲ. ಅದಕ್ಕೆ ಸಂವಿಧಾನದತ್ತ ಅಧಿಕಾರವಿದೆ. ಕೋರ್ಟ್ ಕಲಾಪಗಳ ನಂತರ ಸಭೆ ನಡೆಸಿ ಮಹಿಳೆಯರ ಹಕ್ಕುಗಳ ಸಂರಕ್ಷಣೆ ಬಗ್ಗೆ ಸಮಾಲೋಚನೆ ನಡೆಸಬೇಕು. ಸರ್ಕಾರಕ್ಕೆ ಆಗತ್ಯ ಸಲಹೆ, ಸೂಚನೆ ನೀಡಬೇಕು.

ನ್ಯಾಯಾಂಗದ ಕಾರ್ಯವ್ಯಾಪ್ತಿಯನ್ನು ಯಾರೂ ಅತಿಕ್ರಮಣ ಮಾಡಲು ಆಗುವುದಿಲ್ಲ.  ಕಾನೂನು ಸೇವಾ ಪ್ರಾಧಿಕಾರ ತನ್ನ ಹಕ್ಕು ಚಲಾಯಿಸಬೇಕು. ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಉತ್ತಮ ಕೆಲಸ ಮಾಡುತ್ತಿದೆ. ಕಾನೂನು ಸೌಲಭ್ಯಗಳ ಬಗ್ಗೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಜಾಗೃತಿ ಮೂಡಿಸುತ್ತಿದೆ. ಸರ್ಕಾರದ ಕೆಲಸವನ್ನು ಪ್ರಾಧಿಕಾರ ಮಾಡುತ್ತಿರುವುದು ಪ್ರಶಂಸನೀಯ.

Leave a Reply