ನಾಯಕರ ಮಾತಿಗೆ ಕಿಮ್ಮತ್ತಿಲ್ಲ, ಕಾಂಗ್ರೆಸ್-ಬಿಜೆಪಿಗೆ ಬಂಡಾಯದ ಕಾಟ ತಪ್ಪಲಿಲ್ಲ

ಡಿಜಿಟಲ್ ಕನ್ನಡ ಟೀಮ್

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಬಂಡಾಯದ ಸುಳಿಗೆ ಸಿಕ್ಕಿದ್ದು, ಜೆಡಿಎಸ್ ಅದರಿಂದ ಬಚಾವಾಗಿದೆ.

ನಾಮಪತ್ರ ವಾಪಸ್ಸು ಪಡೆಯಲು ಶನಿವಾರ ಕೊನೇ ದಿನ. ಆದರೆ ವರಿಷ್ಠರ ಮಾತು ಪಕ್ಕಕ್ಕಿಟ್ಟು ಬಿಜಾಪುರದಲ್ಲಿ ಕೇಂದ್ರದ ಮಾಜಿ ಸಚಿವ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ಉಡುಪಿ-ಮಂಗಳೂರಿನಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಮೇಲ್ಮನೆ ಹಾಲಿ ಸದಸ್ಯ ದಯಾನಂದರೆಡ್ಡಿ ಕಣದಲ್ಲಿ ಉಳಿದಿದ್ದಾರೆ. ಮೂರೂ ಕಡೆ ಆಯಾ ಪಕ್ಷಗಳು ಸೋಲಿನ ಭೀತಿಗೆ ಒಳಗಾಗಿವೆ. ಮಂಡ್ಯ, ಕೋಲಾರ ಹಾಗೂ ಮೈಸೂರು ಕ್ಷೇತ್ರಗಳಲ್ಲಿ ಜೆಡಿಎಸ್ ಬಂಡಾಯ ದೇವೇಗೌಡರು ಮತ್ತು ಕುಮಾರಸ್ವಾಮಿ ಸಂಧಾನದ ಫಲವಾಗಿ ಶಮನಗೊಂಡಿದೆ.

ರಾಜ್ಯ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಸೋದರ ಸಂಬಂಧಿ ರವಿ ಅವರಿಗೆ  ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಟಿಕೆಟ್ ನೀಡಿರುವುದು ಕಾಂಗ್ರೆಸ್ ನೊಳಗೆ ಅಸಮಾಧಾನ ಉಂಟು ಮಾಡಿದೆ. ಎಲ್ಲ ಸ್ಥಾನಗಳು ಒಂದೇ ಕುಟುಂಬದ ಪಾಲಾಗುತ್ತಿರುವುದು ಇದಕ್ಕೆ ಕಾರಣ. ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವದಿಂದ ಬಳ್ಳಾರಿಯಲ್ಲಿ ಕೊಂಡಯ್ಯ ಟಿಕೆಟ್ ಪಡೆದಿದ್ದಾರೆ. ಆದರೆ ಅಲ್ಲಿ ಕೊಂಡಯ್ಯ ವಿರೋಧಿಗಳಾದ ದಿವಾಕರ ಬಾಬು, ಸೂರ್ಯನಾರಾಯಣರೆಡ್ಡಿ ಹಾಗೂ ಅನಿಲ್ ಲಾಡ್ ಗುಂಪು ಆಂತರಿಕವಾಗಿ ಕೈಗೊಳ್ಳುವ ನಿರ್ಣಯ ಕಾಂಗ್ರೆಸ್ ಭಯಕ್ಕೆ ಕಾರಣವಾಗಿದೆ. ಈಗಾಗಲೇ

ಬಂಡಾಯ ಹಾಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಏಳು ಮಂದಿಯನ್ನು ಕಾಂಗ್ರೆಸ್ ನಿಂದ ಉಚ್ಚಾಟಿಸಲು ನಿರ್ಧರಿಸಲಾಗಿದೆ.

25 ಸ್ಥಾನಗಳ ಪೈಕಿ ಕಾಂಗ್ರಸ್ ಮತ್ತು ಬಿಜೆಪಿ ತಲಾ 20, ಜೆಡಿಎಸ್ 19 ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

Leave a Reply