ಹೊಳೆದಿದ್ದೆಲ್ಲ ತಾರೆ, ಚಂದ್ರ, ರವಿಯಾಗದು

 

ನಿಜಗುಣ

ದೊಡ್ಡವರ ಸಣ್ಣತನಗಳು ಹೆಂಗೆಲ್ಲ ಇರ್ತವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ…

ಸಿನಿಮಾ ಎಂಬುದು ಯಾವತ್ತೂ ಹೊಸಬರನ್ನು ತನ್ನತ್ತ ಸೆಳೆದುಕೊಂಡಿರುವ ರಂಗ. ಇಲ್ಲಿ ನಿರ್ದೇಶಕರಾಗಿಯೋ, ನಟನಾಗಿಯೋ, ತಂತ್ರಜ್ಞನಾಗಿಯೋ ಗುರುತಿಸಿಕೊಳ್ಳಬೇಕು ಎಂದು ಆಸೆ ಹೊತ್ತವರು ಸಹಜವಾಗಿ ಅನುಸರಿಸುವ ಮಾರ್ಗ ಎಂದರೆ ಚಿತ್ರರಂಗದ ಹಿರಿಯರನ್ನು ಎಡತಾಕುವುದು. ಅವರಿಂದ ಕಲಿಯಬಹುದು ಎಂಬುದರ ಜತೆಯಲ್ಲೇ ಅವಕಾಶ ಕೊಡುತ್ತಾರೆ, ಎಲ್ಲ ರೀತಿಯಲ್ಲಿ ಪ್ರೋತ್ಸಾಹಿಸುತ್ತಾರೆ ಎಂಬೆಲ್ಲ ಭಾವನೆಗಳಿರುತ್ತವೆ. ಎಷ್ಟೆಂದರೂ ಈ ಹಿರಿಯರನ್ನು ತೆರೆಯ ಮೇಲೆ ಆದರ್ಶದಂತೆ ನೋಡಿಕೊಂಡು ಬರಲಾಗುತ್ತೆ ಅಲ್ವೇ? ಆದರೆ ವಾಸ್ತವದ ಬಣ್ಣ ಮತ್ತೇನೋ ಇದ್ದಿರಬಹುದಲ್ಲ? ಹೀಗೆಲ್ಲ ದೊಡ್ಡವರ ಬಳಿ ಸಾರುವವರಿಗೆ ಆ ಎತ್ತರದ ವ್ಯಕ್ತಿಗಳಿಗೂ ಸಣ್ಣ ಯೋಚನೆಗಳು ಸುಳಿಯಬಹುದು ಅನ್ನೋದು ಗೊತ್ತಿರುವುದಿಲ್ಲ. ಹೀಗೆ ತಿಳಿಯದೇ ಯಾಮಾರುವವರು ಗಾಂಧಿನಗರದಲ್ಲಿ ಲೆಕ್ಕಕ್ಕೆ ಸಿಗದಂತಾಗಿದ್ದಾರೆ.

ಗಾಂಧಿ ನಗರದ ಹತಾಶ ನರಳಿಕೆಯಿಂದ ಹೆಕ್ಕಿದ ಅಂಥದೇ ಒಂದು ಎಪಿಸೋಡು ಇದು.

ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಎಲ್ಲರಿಗೂ ಗೊತ್ತು. ಅವರ ಸಿನಿಮಾಗಳೆಂದರೆ ಜನ ಮುಗಿಬಿದ್ದು, ಪಲ್ಟಿ ಹೊಡೆದು ಚಿತ್ರಮಂದಿರಕ್ಕೆ ಬರುತ್ತಿದ್ದರು ಎನ್ನುವ ವಿಷಯವಂತೂ ಜಗತ್ತಿಗೇ ಗೊತ್ತು. ಸಿನಿಮಾಗೇ ಕ್ರೇಜ್ ತಂದುಕೊಟ್ಟ ಕನ್ನಡದ ಕನಸುಗಾರ ಅವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಮೂರನೇ ಮಾತಂತೂ ಇಲ್ಲವೇ ಇಲ್ಲ. ಆದರೆ ಇತ್ತೀಚೆಗೆ ಯಾಕೋ ರವಿಚಂದ್ರನ್ ಕುದುರೆ ಓಡುವುದನ್ನೇ ನಿಲ್ಲಿಸಿಬಿಟ್ಟಿದೆ. ಮಾಡಿದ ಚಿತ್ರಗಳೆಲ್ಲವೂ ಅಡ್ಡಡ್ಡ ಮಲಗುತ್ತಿವೆ. ಬರಬೇಕಿರುವ ಅಪೂರ್ವ ಚಿತ್ರ ಇನ್ನೂ ಡಬ್ಬಾದಲ್ಲೇ ಕೂತು ಕುಚಿಪುಡಿ ಆಡುತ್ತಿದೆ. ಇದ್ಯಾರ ಶಾಪ? ಬೊಂಬೆಗಳದ್ದಾ…? ಶಾಪ- ಗೀಪ ಅಂತೆಲ್ಲ ಮೌಢ್ಯದ ಮಾತು ಬೇಡ ಎಂದಾದ್ರೆ ಖಚಿತ ಮೂಲಗಳ ಮಾಹಿತಿಗೆ ಹೋಗೋಣ. ಅಲ್ಲಿ ಗೊತ್ತಾಗಿದ್ದಿಷ್ಟು..

ಇದು ಎರಡೂವರೆ ವರ್ಷದ ಹಿಂದಿನ ಮಾತು. ಅಂದು ‘ಬೊಂಬೆಗಳ ಲವ್’ ಎಂಬ ಚಿತ್ರ ಬಿಡುಗಡೆಯಾಗಿತ್ತು. ಆ ಚಿತ್ರ ರಿಲೀಸ್ ಆದ ಫಸ್ಟ್ ಶೋನಲ್ಲೇ ಜನರನ್ನು ಆಕರ್ಷಿಸಿತ್ತು. ಆ ಸಿನಿಮಾ ಮೇಕಿಂಗ್ ಬಗ್ಗೆ ಇಡೀ ಇಂಡಸ್ಟ್ರಿ ಮಾತನಾಡಲು ಶುರುಮಾಡಿತ್ತು. ಅದೇ ಬೊಂಬೆಗಳ ಲವ್ ಚಿತ್ರತಂಡ ಅದೊಂದು ದಿನ  ಚಿತ್ರವನ್ನು ರವಿಚಂದ್ರನ್ ಅವರಿಗೆ ತೋರಿಸುವ ಏರ್ಪಾಡು ಮಾಡಿತ್ತು.

ಸರಿ, ರವಿಚಂದ್ರನ್ ‘ಬೊಂಬೆಗಳ ಲವ್’ ಸಿನಿಮಾ ನೋಡಿದರು. ಮೆಚ್ಚಿದರು. ಹಾಡಿ ಹೊಗಳಿದರು. ನಿರ್ದೇಶಕ ಸಂತುವನ್ನು ಕರೆದು ಬಾಚಿ ತಬ್ಬಿಕೊಂಡರು. ‘ಹೋಗ್ರಯ್ಯಾ…ನೆಕ್ಸ್ಟ್ ನಾನು ನಿಮಗೇ ಸಿನಿಮಾ ಮಾಡೋದು. ಯಾವುದಾದರೂ ಪ್ರೊಡ್ಯೂಸರ್ ಕರ್ಕೊಂಡ್ ಬನ್ನಿ. ಡೇಟ್ಸ್ ಕೊಡ್ತೀನಿ’ ಎಂದುಬಿಟ್ಟರು ಕ್ರೇಜಿ ಸ್ಟಾರ್.

ಆ ಹೊಸಬರ ತಂಡಕ್ಕೆ ಆದ ಖುಷಿ ಅಷ್ಟಿಷ್ಟಲ್ಲ. ಹಿರಿಹಿರಿ ಹಿಗ್ಗುತ್ತಾ ಅವತ್ತಿನಿಂದಲೇ ನಿರ್ಮಾಪಕರನ್ನು ಹುಡುಕಲು ಮುಂದಾದರು. ‘ರಾಮಾನುಜ’ ಎಂಬ ಸ್ಕ್ರಿಪ್ಟ್ ಮಾಡಿದರು. ತಮ್ಮ ಖರ್ಚಲ್ಲೇ ಸಿನಿಮಾದ ಪೋಸ್ಟರ್ ಕೂಡ ಡಿಸೈನ್ ಮಾಡಿದರು. ಒಂದೇ ವಾರದಲ್ಲಿ ಶಂಕರ್ ಎಂಬ ನಿರ್ಮಾಪಕರನ್ನು ಹುಡುಕಿತಂದು ರವಿಚಂದ್ರನ್ ಮುಂದೆ ನಿಲ್ಲಿಸಿದರು. ರವಿ ಸರ್ ಅವರ ಉತ್ಸಾಹಕ್ಕೆ ಮಣಿದು ‘ಎರಡೇ ತಿಂಗಳಲ್ಲಿ ಶೂಟಿಂಗ್ ಸ್ಟಾರ್ಟ್ ಮಾಡಿ. ಅಷ್ಟರೊಳಗೆ ‘ದೃಶ್ಯ’ ಸಿನಿಮಾ ಮುಗಿಸಿಕೊಳ್ಳುತ್ತೇನೆ’ ಎಂದುಬಿಟ್ಟರು.

ಇದಾಗಿ ಎರಡು ತಿಂಗಳು ಕಳೆಯಿತು. ಹುಡುಗರು ಹಗಲು ರಾತ್ರಿ ಗುದ್ದಾಡಿ ಸ್ಕ್ರಿಪ್ಟ್ ಇಂದ ಹಿಡಿದು ಎಲ್ಲವನ್ನೂ ಪಕ್ಕಾ ಮಾಡಿಕೊಂಡರು. ಮರುದಿನದಿಂದಲೇ ರವಿ ಸರ್ ನಂಬರ್‍ಗೆ ಫೋನ್ ಮಾಡತೊಡಗಿದರು. ಎಷ್ಟೇ ಪ್ರಯತ್ನಿಸಿದರೂ ಆ ಕಡೆಯಿಂದ ಬಂದ ಉತ್ತರ-ನೀವು ಕರೆಮಾಡಿರುವ ಚಂದಾದಾರರು ಬಿಜಿಯಾಗಿದ್ದಾರೆ. ಬಿಜಿಯಾಗಿದ್ದಾರೆ. ಬಿಜಿಯಾಗಿದ್ದಾರೆ!

‘ಬೊಂಬೆಗಳ ಲವ್’ ತಂಡದ ಹುಡುಗರಿಗೆ ಅನುಮಾನದ ಜೊತೆ ಆಘಾತವೂ ಆಗದೇ ಇರುತ್ತಾ? ಹಾಗಾದರೆ ರವಿಚಂದ್ರನ್ ಯಾಕೆ ಫೋನ್ ಎತ್ತುತ್ತಿಲ್ಲ? ಏನಾಗಿದೆ ಅವರಿಗೆ? ಎಲ್ಲವನ್ನೂ ಮಾಡಿ, ಶೂಟಿಂಗ್ ಶುರುಮಾಡಬೇಕು ಎನ್ನುವ ಹೊತ್ತಿಗೆ ಯಾಕೆ ಹೀಗೆ ಮಾಡುತ್ತಿದ್ದಾರೆ? ಏನೂ ಗೊತ್ತಾಗುತ್ತಿಲ್ಲ ಅಲ್ಲವಾ? ಇಲ್ಲಿಂದ ನಿಜವಾದ ಕ್ಲೈಮ್ಯಾಕ್ಸ್…

ರವಿಚಂದ್ರನ್ ಅದೊಂದು ಮುಂಜಾನೆ ನಿರ್ಮಾಪಕ ಶಂಕರ್‍ಗೆ ಫೋನ್ ಮಾಡುತ್ತಾರೆ. ಅರ್ಜೆಂಟ್ ಬಂದು ಕಾಣುವಂತೆ ಹೇಳುತ್ತಾರೆ. ಅವರ ಮಾತಿನಂತೇ ಶಂಕರ್ ಕೂಡ ಬರುತ್ತಾರೆ. ಬಂದವರೇ ರವಿ ಸರ್ ಮುಂದೆ ಕೈ ಕಟ್ಟಿ ಕೂರುತ್ತಾರೆ. ಆಗ ರವಿಚಂದ್ರನ್ ಆ ನಿರ್ಮಾಪಕರಿಗೆ ತನ್ನ ಕೂತಿದ್ದ ವ್ಯಕ್ತಿಯೊಬ್ಬರನ್ನು ಪರಿಚಯಿಸಿ, ‘ನೋಡಿ, ಆ ಹುಡುಗರಿಗೆ ನೀವಲ್ಲದಿದ್ದರೆ ಇನ್ನೊಬ್ಬರು ಸಿಗುತ್ತಾರೆ. ನನ್ನ ಮಾತು ಕೇಳಿ. ಆ ಪಿಕ್ಚರ್ ಪಕ್ಕಕ್ಕಿಟ್ಟು ಈ ವ್ಯಕ್ತಿಗೆ ಸಿನಿಮಾ ಮಾಡಿ’ ಎಂದುಬಿಡುತ್ತಾರೆ!

ಆ ನಿರ್ಮಾಪಕ ಆಲ್‍ರೆಡಿ ಅಡ್ವಾನ್ಸ್ ಕೊಟ್ಟಾಗಿದೆ. ಬೇರೇನೂ ಮಾಡಲು ಗೊತ್ತಾಗದೇ ಓಕೆ ಎಂದು ತಲೆ ಅಲ್ಲಾಡಿಸಿಬಿಡುತ್ತಾರೆ. ಅದಾಗಿ ಎರಡೇ ವಾರದಲ್ಲಿ ಶೃಂಗಾರ ಎಂಬ ಸಿನಿಮಾ ಮುಹೂರ್ತವೂ ಆಗುತ್ತದೆ. ಅದಕ್ಕೆ ರಾಗಿಣಿ ಹಾಗೂ ಲಕ್ಷ್ಮಿ ರೈ ಹೀರೋಯಿನ್ ಎಂದೂ ಅನೌನ್ಸ್ ಮಾಡಲಾಗುತ್ತದೆ. ಹಾಗೆ ರವಿಚಂದ್ರನ್ ಪಕ್ಕದಲ್ಲಿ ಕೂತಿದ್ದ ಆ ವ್ಯಕ್ತಿ ಅಲಿಯಾಸ್ ಡಾ. ನಾಗೇಂದ್ರ ಪ್ರಸಾದ್ ಅವರೇ ಆ ಚಿತ್ರಕ್ಕೆ ನಿರ್ದೇಶಕರು ಎಂಬ ಸುದ್ದಿ ಇಡೀ ಲೋಕಕ್ಕೆ ಗೊತ್ತಾಗುತ್ತದೆ!

ಬಹುಶಃ ಈಗ ನಿಮಗೆ ರವಿಚಂದ್ರನ್ ಅವರು ಯಾಕೆ ಈ ಬೊಂಬೆಗಳ ಲವ್ ಚಿತ್ರತಂಡದ ಹುಡುಗರ ಫೋನ್ ಎತ್ತುತ್ತಿಲ್ಲ ಎಂಬ ವಿಷಯ ಗೊತ್ತಾಗಿರಬೇಕು ಅಲ್ಲವೇ?! ಇತ್ತ ಈ ಹುಡುಗರ ಕಣ್ಣು ತುಂಬಿಕೊಳ್ಳುತ್ತದೆ. ಆಕಾಶವೇ ತಲೆಕೆಳಗೆ ಬಿದ್ದಷ್ಟು ದೊಡ್ಡ ಮಟ್ಟದ ಆಘಾತ, ನೋವಾಗುತ್ತದೆ. ಆದರೆ ಆ ಹುಡುಗರು ರವಿಚಂದ್ರನ್ ಮೇಲೆ ಇರುವ ರೆಸ್ಟೆಕ್ಟ್ ಇಂದಲೋ, ಭಯದಿಂದಲೋ ಆ ವಿಷಯವನ್ನು ಎಲ್ಲಿಯೂ ಹೇಳಿಕೊಳ್ಳುವುದೇ ಇಲ್ಲ.

ಕೊನೆಗೂ ಗಮನಿಸಬೇಕಾದ ಸಂಗತಿ ಎಂದರೆ…. ದೊಡ್ಡವರೆಲ್ಲ ನೇರವಂತರಲ್ಲ. ಇದು ಸಿನಿಮಾ ಸೇರಿದಂತೆ ಎಲ್ಲ ಕ್ಷೇತ್ರಕ್ಕೂ ಅನ್ವಯಿಸಬಹುದೇನೋ.. ಹೊಸ ಹುರುಪಿನ ಹುಡುಗರು ಯಾವುದಕ್ಕೂ ಹುಷಾರಾಗಿರೋದು ಒಳ್ಳೇದು.

1 COMMENT

  1. ಸರ್, ಆದ್ರೆ, ಆ ಶೃಂಗಾರ ಚಿತ್ರ ಒಂದೇ ದಿನ ಅಷ್ಟೇ ಅಮೇಕೆ ಏನ್ ಆಯಿತು ಅಂತಾನೆ ಗೊತ್ತಿಲ್ಲ

Leave a Reply