ಕನ್ನಡ ಶಾಸ್ತ್ರೀಯ ಭಾಷೆ ಸ್ಥಾನಮಾನದ ಅನುದಾನ 220 ಕೋಟಿ ರು. ತರುವುದಾಗಿ ಅನಂತ್ ಸಂಕಲ್ಪ

 

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬರಬೇಕಿರುವ 220 ಕೋಟಿ ರುಪಾಯಿಗಳನ್ನು ತರುವುದಾಗಿ ಕೇಂದ್ರ ಸಚಿವ ಅನಂತಕುಮಾರ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ ‘ಡಿಜಿಟಲ್ ಕನ್ನಡ’ ಅಂತರ್ಜಾಲ ಪತ್ರಿಕೆ ಲೋಕಾರ್ಪಣೆ ಮಾಡಿದರು. ಪತ್ರಿಕೆಯ ಮೊದಲ ದಿನದ ಅಗ್ರ ಶೀರ್ಷಿಕೆ ಕನ್ನಡಕ್ಕಾಗಿದೆ ಬರೋಬ್ಬರಿ 220 ಕೋಟಿ ನಷ್ಟ, ಕೇಳುವವರಿಲ್ಲ ಶಾಸ್ತ್ರೀಯ ಭಾಷೆ ಸಂಕಷ್ಟ”. ಇದು ಉದ್ಘಾಟನೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನಷ್ಟೇ ಅಲ್ಲದೇ ಇದೇ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನಂತ ಕುಮಾರ್, ಮಾಜಿ ಸಚಿವ ನಾಣಯ್ಯ ಹಾಗೂ ಅಧ್ಯಕ್ಷತೆ ವಹಿಸಿದ್ದ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಹಾಗೂ ಸಭಿಕರ ಗಮನ ಸೆಳೆಯಿತು.

ಕೇಂದ್ರ ಸರಕಾರವು 2008 ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿದೆ. ಅದರೆ ಕೇಂದ್ರದ ಈ ಕ್ರಮ ಖಂಡಿಸಿ ತಮಿಳುನಾಡಿನ ಗಾಂಧಿ ಎಂಬುವವರು ಅಲ್ಲಿನ ಹೈಕೋರ್ಟ್ ನಲ್ಲಿ ಆಕ್ಷೇಪ ಆರ್ಜಿ ಸಲ್ಲಿಸಿದ್ದಾರೆ. ಅಲ್ಲಿಂದೀಚೆಗೆ ಕರ್ನಾಟಕದಲ್ಲಿ ಆಳ್ವಿಕೆ ನಡೆಸಿರುವ ನಾನಾ ಸರಕಾರಗಳು ಈ ಅರ್ಜಿ ತೆರವಿಗೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಡಿಜಿಟಲ್ ಕನ್ನಡ ವಿಶೇಷ ವರದಿ ಮಾಡಿದೆ.

ನಂತರ ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅನಂತಕುಮಾರ್ ಅವರು ಸಿದ್ದರಾಮಯ್ಯನವರತ್ತ ತಿರುಗಿ, ‘ಡಿಜಿಟಲ್ ಕನ್ನಡ ಸಂಪಾದಕರಾದ ಪಿ. ತ್ಯಾಗರಾಜ್ ಅವರಿಂದ ಈಗಷ್ಟೇ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದೇನೆ. ನಾನು ಹಾಗೂ ಮುಖ್ಯಮಂತ್ರಿಗಳಿಬ್ಬರೂ ಸೇರಿಕೊಂಡು ರಾಜ್ಯಕ್ಕೆ ಬರಬೇಕಾದ ಆ 220 ಕೋಟಿ ರುಪಾಯಿಗಳನ್ನು ತಂದೇ ತರುತ್ತೇವೆ’ ಎಂದು ವೇದಿಕೆಯಲ್ಲೇ ಘೋಷಿಸಿದರು. ‘ಅದಲ್ಲದೇ ನಾವು ಈ ವಿಷಯದಲ್ಲಿ ಒಟ್ಟಾಗಿ ಪ್ರಯತ್ನಿಸದೇ ಹೋದರೆ ಡಿಜಿಟಲ್ ಕನ್ನಡ ಪ್ರಶ್ನಿಸದೇ ಬಿಡುತ್ತಾ? ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರು ಪ್ರಶ್ನಿಸದೇ ಬಿಡುತ್ತಾರಾ’ ಅಂತ ಸಭಾಸದರ ಸಾಲಿನಲ್ಲಿ ಕುಳಿತಿದ್ದ ಕರವೇ ಅಧ್ಯಕ್ಷರನ್ನು ಉದ್ದೇಶಿಸಿ ಮಾತಿನ ಲಹರಿ ಬಿಚ್ಚಿಟ್ಟರು.

‘ಇದು ಡಿಜಿಟಲ್ ಯುಗ. ಕತ್ತಲೆಯಲ್ಲಿರುವ ಪ್ರದೇಶಗಳನ್ನು ಮಾಹಿತಿ ತಂತ್ರಜ್ಞಾನದ ಮೂಲಕ ಬೆಸೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಕೂಡ ಡಿಜಿಟಲ್ ಇಂಡಿಯ ಎಂಬ ಮಹತ್ವಾಕಾಂಕ್ಷೆ ಯೋಜನೆ ಹಮ್ಮಿಕೊಂಡಿದೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ಡಿಜಿಟಲ್ ಕನ್ನಡದಂತಹ ಅಂತರ್ಜಾಲ ಮಾಧ್ಯಮಗಳು ಅಭಿವೃದ್ಧಿ ಗಾಥೆ ಹಾಗೂ ಯಶಸ್ಸಿನ ಕತೆಗಳನ್ನು ಬಿಂಬಿಸುವ ಮೂಲಕ ಇಂಥ ಪ್ರಗತಿಪರ ಯೋಜನೆಗಳನ್ನೂ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

3 COMMENTS

  1. ಮುಖವೀಣೆ ಚೆನ್ನಾಗಿದೆ.ವಿಶ್ಲೇಷಣೆಗಳು ಅರ್ಥಪೂರ್ಣವಾಗಿವೆ. ಮುಂದುವರಿಯಲಿ…

  2. ಶುಭಾಶಯಗಳು ತ್ಯಾಗರಾಜ್ ಅವರಿಗೆ…
    ಗುರಿಯ ಎತ್ತರಕ್ಕೆ ಏರಿದಿರಿ
    ಖುಷಿ ಆಯಿತು. ಡಿಜಿಟಲ್ ಕನ್ನಡ ನಿಮ್ಮ ಪ್ರತಿಬಿಂಬ

Leave a Reply