ಸಿಎಂಗೆ ಮೊಬೈಲ್, ನಾಣಯ್ಯಗೆ ಟ್ವಿಟ್ಟರ್ ಹೆದರಿಕೆ ಅನಂತಕುಮಾರ್ ಗೆ ಹೆಂಡತಿ, ಮಾಧ್ಯಮದ ಭೀತಿ

 

ಸಿಎಂ ಸಿದ್ದರಾಮಯ್ಯ ಅವರಿಗೆ ಮೊಬೈಲ್ ಬಗ್ಗೆ ಹೆದರಿಕೆಯಾದರೆ, ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರಿಗೆ ಟ್ವಿಟ್ಟರ್ ಬಗ್ಗೆ ನಡುಕ. ಇನ್ನೊಂದೆಡೆ ಕೇಂದ್ರ ಸಚಿವ ಅನಂತಕುಮಾರ್ ಅವರು ಧರ್ಮಪತ್ನಿ ಹಾಗೂ ಮಾಧ್ಯಮಕ್ಕೆ ಭಯಪಡುತ್ತಾರಂತೆ.

ಈ ಸ್ವಾರಸ್ಯಕರ ವಿಷಯಗಳನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದು ಡಿಜಿಟಲ್ ಕನ್ನಡ ಅಂತರ್ಜಾಲ ಪತ್ರಿಕೆ ಲೋಕಾರ್ಪಣೆ ಸಮಾರಂಭದಲ್ಲಿ. ಸಿದ್ದರಾಮಯ್ಯ ಅವರಿಗೆ ಮೊಬೈಲ್ ಅಂದರೆ ಇರಿಟೇಷನ್ ಅಂತೆ. ಮಧ್ಯರಾತ್ರಿ ಒಂದು ಗಂಟೆ, ಎರಡು ಗಂಟೆಯಲ್ಲಲ್ಲೆಲ್ಲ ಮೊಬೈಲ್ ರಿಂಗ್ ಆಗ್ತದೆ. ಹಿಂಗಾಗಿ ನಾನು ಮೊಬೈಲ್ ಇಟ್ಕೊಳ್ಳೋಕೆ ಹೋಗಿಲ್ಲ. ಅದನ್ನ ನಮ್ಮ ಸಿಬ್ಬಂದಿಯವರಿಗೆ ಕೊಟ್ಟಿದ್ದೇನೆ. ಅವರಿಂದಲೇ ಮಾಹಿತಿ ಪಡೆಯುತ್ತೇನೆ ಎಂದಾಗ ಸಭಿಕರು ಗೊಳ್ ಅಂದರು.

ಇನ್ನು ನಾಣಯ್ಯ ಅವರು ಟ್ವಿಟ್ಟರ್ ಗೆ ಹೆದರುತ್ತಾರಂತೆ, ಯಾಕೆ ಗೊತ್ತೇ? ರಾಷ್ಟ್ರ ಮಟ್ಟದ ರಾಜಕಾರಣಿಯೊಬ್ಬರು ಅದ್ಯಾವುದೋ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದರಂತೆ. ಅದಕ್ಕೆ ಪ್ರತಿಯಾಗಿ ಸಾವಿರಾರು ಮಂದಿ ಟ್ವೀಟ್ ಮಾಡಿ ಬಾಯಿಗೆ ಬಂದಂತೆ ಉಗಿದರಂತೆ. ಅದರಲ್ಲಿ ಅವಾಚ್ಯ ಶಬ್ದಗಳೂ ಇದ್ದವಂತೆ. ಹಿಂಗಾಗಿ ಅವರು ಟ್ವಿಟ್ಟರ್ ಮುಟ್ಟಕ್ಕೇ ಹೋಗಿಲ್ವಂತೆ.

ಅನಂತಕುಮಾರ್ ಅವರು ಹೆದರೋದು, ಒಂದು ಹೆಂಡತಿ ಮತ್ತೊಂದು ಮಾಧ್ಯಮಕ್ಕಂತೆ. ಈ ಮಾಧ್ಯಮದವರು ನಾವೆಲ್ಲೊ ದೂರದಲ್ಲಿದ್ದರೆ, ಅಲ್ಲಿಂದಲೇ ಟೆಲಿಸ್ಕೋಪ್ ಹಾಕುತ್ತಾರೆ, ಹತ್ತಿರ ಇದ್ದರೆ ಮೈಕ್ರೋಸ್ಕೋಪ್ ನಿಂದ ನೋಡುತ್ತಾರೆ. ಇವರ ಸಹವಾಸನೇ ಬೇಡ ಅಂತ ಬಿಲ ಹೊಕ್ಕಿಕೊಂಡ್ರೆ ಎಕ್ಸರೇ ಕಣ್ಣು ಬಿಡುತ್ತಾರೆ. ಎಲ್ಲಿ ಹೋದರೂ ಇವರಿಂದ ತಪ್ಪಿಸಿಕೊಳ್ಳಲು ಆಗಲ್ಲ. ಹಂಗಾಗಿ ಮಾಧ್ಯಮದ ಬಗ್ಗೆ ನಂಗೊಂದು ರೀತಿ ಭಯ ಎಂದಾಗ ಸಭಿಕರು ನಗು ಮೊರೆ ಹೋದರು.

Leave a Reply