ಜನಸಂಖ್ಯೆಗೆ ತಕ್ಕಂತೆ ವೈನ್ ಸ್ಟೋರ್, ಆದ್ರೆ ಶೌಚಾಲಯ, ಆಸ್ಪತ್ರೆಗೆ ಇಲ್ಲ ಈ ಸೂತ್ರ!

 

ಡಿಜಿಟಲ್ ಕನ್ನಡ ಟೀಮ್

ಜನಸಂಖ್ಯೆಗೆ ಅನುಗುಣವಾಗಿ ಮದ್ಯದಂಗಡಿಗಳಿಗೆ ಅನುಮತಿ ನೀಡಲು ರಾಜ್ಯ ಸರಕಾರ ಚಿಂತಿಸುತ್ತಿದೆಯಂತೆ. ಸರಕಾರದ ಈ ಚಿಂತನೆಯಿಂದ 1750ಕ್ಕೂ ಹೆಚ್ಚು ಚಿಲ್ಲರೆ ಮದ್ಯ ಮಾರಾಟದ ಅಂಗಡಿಗಳು ತಲೆ ಎತ್ತಲಿದ್ದು ಸುರಾಪ್ರಿಯರ ನಶಾತೃಷೆ ತಣಿಸಲಿದೆ.

ಅಬಕಾರಿ ಸಚಿವ ಮನೋಹರ ತಹಶಿಲ್ದಾರ್ ಅವರ ಸಮರ್ಥನೆ ಪ್ರಕಾರ ಬರೋಬ್ಬರಿ 23 ವರ್ಷಗಳ ಭಾರಿ ಅಂತರದ ನಂತರ ಕರ್ನಾಟಕದಲ್ಲಿ ಹೊಸ ಚಿಲ್ಲರೆ ಮದ್ಯದಂಗಡಿಗಳು ಬರುತ್ತಿವೆ. ಸಂತೋಷ. ಜನಸಂಖ್ಯೆಗೆ ಅನುಗುಣವಾಗಿ ಮದ್ಯದಂಗಡಿ ಕೊಡಬೇಕೆನ್ನುವವರು ಇದೇ ನೀತಿಯನ್ನು ಶೌಚಾಲಯ, ಆಸ್ಪತ್ರೆಗಳ ನಿರ್ಮಾಣಕ್ಕೆ ವಿಸ್ತರಿಸಿದ್ದರೆ, ಮೂಲ ಸೌಕರ್ಯ ಅಭಿವೃದ್ಧಿಗೆ ಅನ್ವಯಿಸಿದ್ದರೆ ಉತ್ತಮ ನಡೆ ಎನ್ನಬಹುದಿತ್ತು.

ಜನರು ಮೂಲಭೂತ ಸೌಕರ್ಯಗಳಿಲ್ಲದೆ ಸಾಕಷ್ಟು ಪರಿಪಾಟಲು ಪಡುತ್ತಿದ್ದಾರೆ. ಉತ್ತಮ ಶಾಲೆ-ಕಾಲೇಜುಗಳಿಲ್ಲದೆ, ಮಕ್ಕಳಿಗೆ ದುಬಾರಿ ಶಿಕ್ಷಣ ಒದಗಿಸಲಾಗದೆ ಪೋಷಕರು ಬವಣೆ ಪಡುತ್ತಿದ್ದಾರೆ. ಇಂತಹ ಸಮಸ್ಯೆಗಳ ಬಗ್ಗೆ ಸರಕಾರ ಗಮನ ಹರಿಸುವುದು ಬಿಟ್ಟು, ಜನ ಸಂಖ್ಯೆಯ ಆಧಾರದ ಮೇಲೆ ಮದ್ಯದಂಗಡಿಗಳನ್ನು ತೆರೆಯಲು ಉತ್ಸುಕತೆ ತೋರುತ್ತಿರುವುದಕ್ಕೆ ಏನೆನ್ನಬೇಕು? ಅಬಕಾರಿ ಸಚಿವ ಎಂಬ ಲೇಬಲ್ ಇದ್ದ ಮಾತ್ರಕ್ಕೆ ಮದ್ಯ ಮಾರಾಟ ಪ್ರಮಾಣ ಹೆಚ್ಚಿಸುವ ಮೂಲಕ ಸಾಧನೆ ಮಾಡಬೇಕು ಎಂಬ ನಿಯಮವೇನಾದರೂ ಇದೆಯೇ?

ತಹಸೀಲ್ದಾರರ ತರ್ಕ ಹೀಗಿದೆ- ”1992 ರಿಂದಲೂ ಚಿಲ್ಲರೆ (ಸಿಎಲ್-2 ಸಗಟು ಸಿಎಲ್-9) ಪರವಾನಗಿ ನೀಡಿಲ್ಲ, ಬಾರ್ ಅಂಡ್ ರೆಸ್ಟೋರೆಂಟ್ (ಸಿಎಲ್-7) ಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. 1991ರ ಜನಗಣತಿ ಆಧಾರದ ಮೇಲೆ ಚಿಲ್ಲರೆ ಮದ್ಯ ಮಾರಾಟ ಪರವಾನಗಿಯನ್ನು ನೀಡಲಾಗಿತ್ತು, ಈಗ 2011 ರ ಜನಗಣತಿ ಆಧಾರದಲ್ಲಿ ಪರವಾನಗಿ ನೀಡಬೇಕಾಗಿದೆ. ಇದೇ ಆಧಾರದಲ್ಲಿ 1750 ಹೊಸ ಪರವಾನಗಿಗಳನ್ನು ನೀಡುವುದಕ್ಕೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ.”

ಸಚಿವರೇ ಹೇಳಿರುವಂತೆ ಅಬಕಾರಿಯಿಂದ ಬರುತ್ತಿರುವ ತೆರಿಗೆಯಲ್ಲೇನೂ ಕೊರತೆ ಆಗಿಲ್ಲವಂತೆ. ಆದರೆ, ಕಳೆದ ವರ್ಷ 15 ಸಾವಿರ ಕೋಟಿ ರುಪಾಯಿಗಳಿಷ್ಟಿದ್ದ ತೆರಿಗೆ ಆದಾಯವನ್ನು ಈ ಬಾರಿ ಹದಿನೇಳುವರೆ ಸಾವಿರ ಕೋಟಿಗೆ ಹೆಚ್ಚಿಸುವ ಉಮೇದು ಅವರಿಗಿದೆಯಂತೆ. ಸರ್ಕಾರವು ಹೆಚ್ಚುವರಿ ಮದ್ಯ ಮಾರಾಟ ಮಳಿಗೆಗಳನ್ನು ಸ್ಥಾಪಿಸುವುದರಿಂದ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ ಹಾಗೂ ಪರಿಶಿಷ್ಟ ಸಮುದಾಯಗಳಿಗೆ ಅನುಕೂಲವಾಗುತ್ತದಂತೆ. ಅದೆಲ್ಲ ಸರಿ, ಮದ್ಯದ ಪಿಡುಗಿನಿಂದ ಇದೇ ಸಮುದಾಯಕ್ಕೆ ಆಗಿರುವ ನಷ್ಟದ ಅಂಕಿ-ಅಂಶದ ಬಗ್ಗೆ ಅವರಿಗೆ ಆಸಕ್ತಿ ಇಲ್ಲವೇಕೋ, ಅರ್ಥವಾಗುತ್ತಿಲ್ಲ!

Leave a Reply