ತಾನು ಇಂದಿರೆಯ ಸೊಸೆ ಅಂತ ಸೋನಿಯಾ ಗಾಂಧಿ ನೆನಪಿಸ್ತಿರೋದೇಕೆ ಗೊತ್ತೇ?

Shreesha

ಶ್ರೀಶ ಪುಣಚ್ಚ

‘ಮೆ ಇಂದಿರಾಜೀಕೀ ಬಹು ಹೂಂ, ಔರ್ ಕಿಸೇ ಸೆ ನಹೀ ಡರ್ತೀ ಹೂಂ!’ ನಾನು ಇಂದಿರಾ ಸೊಸೆ, ಯಾರಿಗೂ ಹೆದರಲ್ಲ ಅಂತ ಸೋನಿಯಾಗಾಂಧಿ ಹೂಂಕರಿಸಿದ್ದಾರೆ.  ಅವತ್ತಿನಿಂದ ಈವರೆಗೂ ‘ರಾಜಕೀಯ ದ್ವೇಷ’ ಎಂಬ ಬೊಬ್ಬೆ ಎಬ್ಬಿಸಿ ಕಾಂಗ್ರೆಸ್, ಸಂಸತ್ತು ಕಾರ್ಯನಿರ್ವಹಿಸದಂತೆ ಮಾಡುತ್ತಿದೆ.

ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಕೋರ್ಟ್ ಸಮನ್ಸ್ ಜಾರಿಯಾದ ಬೆನ್ನಲ್ಲೇ ಸೋನಿಯಾರಿಗೆ ಅತ್ತೆ ಇಂದಿರೆಯ ನೆನಪಾಗಿದೆ. ಕೋರ್ಟ್‍ನ ಸಮನ್ಸ್ ನಿಂದ ತುಸು ಸಿಟ್ಟು, ಕೊಂಚ ಹತಾಶೆಯಿಂದಿದ್ದ ಸೋನಿಯಾ ವಿನಾಕಾರಣ ಇಂದಿರಾಗಾಂಧಿಯ ಹೆಸರೆತ್ತಿಲ್ಲ. ಇದು ಅಳೆದು ತೂಗಿ ಕೊಟ್ಟ ಹೇಳಿಕೆ. ಹೆಚ್ಚಾಗಿ ಯಾವ ಭಾವನೆಯನ್ನೂ ಸಾರ್ವಜನಿಕವಾಗಿ ತೋರಿಸದ ಸೋನಿಯಾ ಈಗ ಯಾಕೆ ಅವೇಶ ಭರಿತರಾಗಿ, ಭಾವನಾತ್ಮಕವಾಗಿ ಇಂದಿರಾಗಾಂಧಿ ಹೆಸರೆತ್ತುತ್ತಿದ್ದಾರೇಕೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಇತಿಹಾಸದ ಪುಟಗಳತ್ತ ಒಮ್ಮೆ ಕಣ್ಣಾಡಿಸಬೇಕು.

ಅದು 1977 ಮಾರ್ಚ್ 24. ಕರಾಳ ತುರ್ತು ಪರಿಸ್ಥಿತಿಯ ನಂತರ ಜನತಾ ಪಕ್ಷದ ಸರ್ಕಾರ ಬಹುಮತದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿತ್ತು. ಮೊರಾರ್ಜಿ ದೇಸಾಯಿ ಪ್ರಧಾನಮಂತ್ರಿಯಾಗಿದ್ದರು. ಆದರೆ ಜನತಾಪಕ್ಷದ ನಾಯಕರ ಶೀತಲ ಸಮರ ತಾರಕಕ್ಕೇರಿತ್ತು. ಅದರಲ್ಲೂ ಪ್ರಧಾನಿ ಮೊರಾರ್ಜಿ ದೇಸಾಯಿ ಹಾಗೂ ಗೃಹ ಮಂತ್ರಿ ಚರಣ್‍ಸಿಂಗ್ ಹಾವು ಮುಂಗುಸಿಯಂತಾಗಿದ್ದರು. ಅವರ ವೈಯಕ್ತಿಕ ಭಿನ್ನಾಭಿಪ್ರಾಯ ಆಡಳಿತ ನಿರ್ವಹಣೆಯಲ್ಲೂ ಪ್ರತಿಫಲನಗೊಳ್ಳುತ್ತಿತ್ತು. ‘ಇಂದಿರಾಗಾಂಧಿಯ ಸರ್ವಾಧಿಕಾರ, ಸಾಲು ಹಗರಣಗಳಿಂದ ರೋಸಿಹೋಗಿದ್ದ ಜನ ‘ಪರಿವರ್ತನೆ’ಗೆ ಮತಕೊಟ್ಟು ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಇಂದಿರಾಗಾಂಧಿಯವರ ಎಲ್ಲಾ ಅವ್ಯವಹಾರಗಳ ಬಗ್ಗೆ ತನಿಖೆ ನಡೆಯಬೇಕು, ಅದಕ್ಕಾಗಿ ಜಸ್ಟಿಸ್ ಜೆ.ಸಿ.ಶಾ ನೇತೃತ್ವದಲ್ಲಿ ‘ಶಾ ಕಮಿಷನ್’ ರಚಿಸಬೇಕು’ ಎಂಬುದು ಗೃಹ ಮಂತ್ರಿ ಚರಣ್ ಸಿಂಗ್‍ರ ಆಗ್ರಹವಾಗಿತ್ತು. ಆದರೆ ಪ್ರಧಾನಿ ಮೊರಾರ್ಜಿಗೆ ಇಂದಿರಾ ವಿರುದ್ಧ ತನಿಖೆ ಮಾಡುವುದು ಬೇಕಿರಲಿಲ್ಲ. ಜನತೆ ಚುನಾವಣೆಯಲ್ಲಿ ಸೋಲಿಸುವ ಮುಖಾಂತರ ಇಂದಿರಾ ಅವರಿಗೆ ತಕ್ಕ ಶಾಸ್ತಿ ಮಾಡಿದ್ದಾರೆ, ಆದ್ದರಿಂದ ಈ ಕಮಿಷನ್ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಜನತಾ ಸರ್ಕಾರದಲ್ಲಿ ಗೃಹ ಮಂತ್ರಿ ಚರಣ್‍ಸಿಂಗ್ ಕೂಡ ಪ್ರಧಾನ ಮಂತ್ರಿಯಷ್ಟೇ ಶಕ್ತಿಶಾಲಿಯಾಗಿದ್ದರು. 1977ರ ಮೇ 28ಕ್ಕೆ ‘ಶಾ ಕಮಿಷನ್’ಗೆ ಹಸಿರು ನಿಶಾನೆ ತೋರಿಸಿಯೇ ಬಿಟ್ಟರು. ಶಾ ಕಮಿಷನ್ ಇಂದಿರಾ ವಿರುದ್ಧ 48 ಸಾವಿರ ದೂರುಗಳನ್ನು ಸ್ವೀಕರಿಸಿತ್ತು. ಇವೆಲ್ಲದರ ತನಿಖೆ ನಡೆಯುತ್ತಲೇ ಇತ್ತು. ಮಾತ್ರವಲ್ಲ ಪ್ರತಿದಿನ ಶಾ ಕಮಿಷನ್‍ನ ತನಿಖೆಯ ಪ್ರಗತಿಯನ್ನು ರೇಡಿಯೋ ಮೂಲಕ ತಿಳಿಸಲಾಗುತ್ತಿತ್ತು.

ಇಷ್ಟಾದರೂ, ಶಾ ಕಮಿಷನ್ ಅಂತಿಮ ವರದಿ ಬರುವ ಮುನ್ನವೇ ಅಕ್ಟೋಬರ್ 3ರ 1977ರಂದು ಗೃಹ ಮಂತ್ರಿ ಚರಣ್‍ಸಿಂಗ್, ಚುನಾವಣೆಯ ಸಮಯದಲ್ಲಿ 107 ಜೀಪ್ ಖರೀದಿಸಿದ ವ್ಯವಹಾರದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಇಂದಿರಾಗಾಂಧಿ ಬಂಧನಕ್ಕೆ ಆದೇಶವಿತ್ತರು. ಅಸಲಿಗೆ ಈ ಆರೋಪ ಸಾಬೀತು ಮಾಡುವಷ್ಟು ದಾಖಲೆಗಳು ಜನತಾ ಸರ್ಕಾರದ ಬಳಿ ಇರಲಿಲ್ಲ. ಇಂದಿರಾ ಗಾಂಧಿ ಹೆದರಲಿಲ್ಲ. ಸರ್ಕಾರಕ್ಕೆ ಸಡ್ಡುಹೊಡೆದು ಕೋರ್ಟ್‍ನಲ್ಲಿ ಹೋರಾಡಿದರು. ಕೋರ್ಟ್ ಸೂಕ್ತ ಸಬೂತು ಇಲ್ಲದ ಕಾರಣ ಕೇಸನ್ನು ವಜಾಗೊಳಿಸಿತು. ಇಂದಿರಾ ಈ ಸಂದರ್ಭಕ್ಕೇ ಕಾಯುತ್ತಿದ್ದರು. ‘ತನ್ನನ್ನು ಜನತಾ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಶಾ ಕಮಿಷನ್‍ನಿಂದ ಅಂತಿಮ ವರದಿ ಬರುವ ಮುನ್ನವೇ ಬಂಧಿಸಿರುವುದು ರಾಜಕೀಯ ಷಡ್ಯಂತ್ರ’ ಎಂದು ಜನರ ಮುಂದೆ ಗೋಗರೆದರು. ಜನರಿಗೂ ಅದು ಹೌದೆನಿಸಿತು. ಇಂದಿರಾ ಗಾಂಧಿಯ ತುರ್ತುಪರಿಸ್ಥಿತಿಯ ತಪ್ಪಿಗೆ ಈಗಾಗಲೇ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗಿದೆ. ಅದಲ್ಲದೆ ಇಂದಿರಾ ಗಾಂಧಿ ಶಾ ಕಮಿಷನ್‍ನ ತನಿಖೆಯನ್ನೂ ಎಸುರಿಸುತ್ತಿದ್ದಾರೆ. ಅದರ ಪ್ರತಿ ಬೆಳವಣಿಗೆಯೂ ಜನರಿಗೆ ಗೊತ್ತಾಗುತ್ತಿದೆ. ಹಾಗಿದ್ದೂ ಕೂಡ ಇಂದಿರಾ ಗಾಂಧಿಯನ್ನು ಬಂಧಿಸಿರುವುದು ರಾಜಕೀಯ ಪ್ರತೀಕಾರ ಎಂದೇ ಜನ ಭಾವಿಸಿದರು.

ಈ ಭಾವನೆಯನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡ ಚಾಣಾಕ್ಷ್ಯೆ ಇಂದಿರಾಗಾಂಧಿ ‘ತನ್ನನ್ನು ರಾಜಕೀಯ ಬಲಿಪಶು ಮಾಡಲಾಗುತ್ತಿದೆ. ತಾನೋರ್ವ ಮಹಿಳೆ ಎಂದು ಶೋಷಣೆ ಮಾಡುತ್ತಿದ್ದಾರೆ’ ಎಂದು ಅಲವತ್ತುಕೊಂಡು ಅನುಕಂಪ ಸುಗ್ಗಿ ಮಾಡಿದರು. 1980ರ ಅಕಾಲಿಕ ಚುನಾವಣೆಯಲ್ಲಿ ಈ ಅನುಕಂಪ ಮತವಾಗಿ ಪರಿವರ್ತನೆಯಾಯಿತು. ಇಂದಿರಾಗಾಂಧಿ ಮತ್ತೆ ಪ್ರಧಾನಿಯಾದರು.

ಸೋನಿಯಾ ‘ನಾನು ಇಂದರಾಜೀಯ ಸೊಸೆ. ನನ್ನನ್ನು ಯಾರೂ ಹೆದರಿಸಲಾಗದು’ ಎಂದುದು ಈ ಹಿನ್ನೆಲೆಯಲ್ಲೇ. ಎರಡು ವರ್ಗದ ಜನರನ್ನು ಗುರಿಯಾಗಿಸಿಕೊಂಡು ಈ ಸಂದೇಶ ನೀಡಿದ್ದಾರೆ ಕಾಂಗ್ರೆಸ್ ಅಧ್ಯಕ್ಷೆ. ಒಂದು, ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೋತರೂ ಅದರ ನಡೆಗಳ ಕುರಿತು ಸದಾ ಕುತೂಹಲವನ್ನು ಇರಿಸಿಕೊಂಡೇ ಇರುವ ಸಾಮಾನ್ಯ ಜನರನ್ನುದ್ದೇಶಿಸಿ. ಇನ್ನೊಂದು, ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನುದ್ದೇಶಿಸಿ. ಕಾಂಗ್ರೆಸ್ ಸ್ವತಂತ್ರ ಭಾರತದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿರುವುದು ಕಳೆದ ಚುನಾವಣೆಯಲ್ಲಿ. ಸಾಮಾನ್ಯ ಜನ ಮಾತ್ರವಲ್ಲ, ಕಟ್ಟಾ ಕಾಂಗ್ರೆಸಿಗರಿಗೂ ಪಕ್ಷದ ಸ್ಥಿತಿ ಏನಾಗಬಹುದು ಎಂಬುದರ ಬಗ್ಗೆ ಇನ್ನೂ ಸಂದೇಹಗಳಿವೆ. ಬಿಹಾರ, ಗುಜರಾತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪುನರುತ್ಥಾನದ ಲಕ್ಷಣಗಳನ್ನು ತೋರುತ್ತಿರುವಾಗಲೇ ನ್ಯಾಷನಲ್ ಹೆರಾಲ್ಡ್ ಕೇಸು ಗರಬಡಿದಂತೆ ಕಾಂಗ್ರೆಸ್ ಮೇಲೆ ಬಂದೆರಗಿದೆ. ಇದು ಸದ್ಯದಲ್ಲೇ ನಡೆಯಲಿರುವ ಅಸ್ಸಾಂ ಹಾಗೂ ಕೇರಳಗಳ ಚುನಾವಣೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳಿವೆ. ಹಾಗಾಗಿ ‘ಇಂದಿರಾಗೆ 1977ರಲ್ಲಿ ಮಾಡಿದಂತೆ ಈಗ ನನ್ನ ಮೇಲೆ ರಾಜಕೀಯ ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ. ಅವರ ಸೊಸೆ ನಾನಾಗಿರುವಾಗ ಹೆದರಲಾರೆ. ಅಂದು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಂತೆ, ಈ ಎಲ್ಲ ಹಿನ್ನಡೆಗಳ ನಂತರವೂ ಅಧಿಕಾರಕ್ಕೆ ಬರಲಿದೆ, ಗಾಂಧಿ ಮನೆತನದ ಮೇಲೆ ನಂಬಿಕೆಯಿಡಿ’ ಎಂಬಂರ್ಥದಲ್ಲಿ ಈ ಮಾತು ಹೇಳಿದ್ದಾರೆ. ಇನ್ನು, ಸೋನಿಯಾರ ಮಾತು ಮೋದಿ ಸರ್ಕಾರಕ್ಕೆ ಒಂಥರಾ ಬೆದರಿಕೆ ಒಡ್ಡಿದಂತೆಯೇ ಇದೆ. ‘ಮೊರಾರ್ಜಿ ಸರ್ಕಾರದ ಅಡಿಯಲ್ಲಿ ಇಂದಿರಾ ಅಷ್ಟು ಕಷ್ಟ ಅನುಭವಿಸಿದರೂ ಏನೂ ಮಾಡಲಾಗಲಿಲ್ಲ. ಈಗ ಬಿಜೆಪಿಯ ಸುಬ್ರಹ್ಮಣ್ಯ ಸ್ವಾಮಿ ಈ ಕೇಸನ್ನು ಇನ್ನಷ್ಟು ದೂರ ತೆಗೆದುಕೊಂಡು ಹೋದರೆ, ಅದು ತನ್ನ ಪರ ಅನುಕಂಪವನ್ನೇ ಸೃಷ್ಟಿಸಬಹುದು. ಇದು ಮುಂದಿನ ಚುನಾವಣೆಯಲ್ಲಿ ಸರ್ಕಾರ ಬದಲಾವಣೆಗೆ ನಾಂದಿ ಹಾಡಲೂಬಹುದು. ಹಾಗಾಗಿ ನ್ಯಾಷನಲ್ ಹೆರಾಲ್ಡ್ ಕೇಸನ್ನು ಮುಂದುವರಿಸುವ ಮುನ್ನ ಎಚ್ಚರದಿಂದಿರಿ’ ಎಂಬುದು ಒಳಾರ್ಥ.

ಆದರೆ ಇಲ್ಲೇ ಸೋನಿಯಾ ಲೆಕ್ಕಾಚಾರ ಎಡವುತ್ತಿದೆಯಾ?

1977ರ ಭಾರತಕ್ಕೂ 2015ರ ಭಾರತಕ್ಕೂ ಅಪಾರ ವ್ಯತ್ಯಾಸವಿದೆ. ಶತಮಾನದ ಇತಿಹಾಸವಿರುವ ಪಕ್ಷಕ್ಕೆ ಬದಲಾಗುತ್ತಿರುವ ಸಾಮಾಜಿಕ-ರಾಜಕೀಯ ಚಿತ್ರಣ ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ. ಅವರು ‘ಇಂದಿರಾಕೀ ಬಹು’ ಹೇಳಿಕೆ ನೀಡುವ ಮುನ್ನ ನ್ಯಾಷನಲ್ ಹೆರಾಲ್ಡ್ ಕೇಸನ್ನು, ಇಂದಿರಾ-ಸೋನಿಯಾಗಿರುವ ವ್ಯತ್ಯಾಸವನ್ನು, ಬದಲಾದ ಭಾರತವನ್ನು ಹಾಗೂ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರದ ಬಗ್ಗೆ ಸೂಕ್ಷ್ಮವಾಗಿ ವಿಶ್ಲೇಷಿಸಬೇಕಿತ್ತು.

ಅಂದಿನ ಇಂದಿರಾರ ಜೀಪ್ ಹಗರಣಕ್ಕೂ, ನ್ಯಾಷನಲ್ ಹೆರಾಲ್ಡ್ ಕೇಸ್‍ಗೂ ಬಹಳ ವ್ಯತ್ಯಾಸವಿದೆ. ಅದರಲ್ಲೂ ಇಂದಿರಾಗಾಂಧಿ ‘ಶಾ ಕಮಿಷನ್’ನಿಂದ ತನಿಖೆ ಎದುರಿಸುತ್ತಿರುವಾಗಲೇ ಗೃಹ ಮಂತ್ರಿ ಚರಣ್‍ಸಿಂಗ್ ಇಂದಿರಾರ ಬಂಧನಕ್ಕೆ ಆದೇಶ ಇತ್ತುದು ರಾಜಕೀಯ ಪ್ರತೀಕಾರ ಎಂಬುದು ಯಾರಿಗೂ ಅರ್ಥವಾಗುವ ಸತ್ಯ. ಆದರೆ ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಸಮನ್ಸ್ ನೀಡಿರುವುದು ಸರ್ಕಾರವಲ್ಲ, ನ್ಯಾಯಾಲಯ. ಚರಣ್ ಸಿಂಗ್ ಇಂದಿರಾ ಬಂಧನಕ್ಕೆ ಆದೇಶವಿತ್ತಾಗ ಸರ್ಕಾರದ ಬಳಿ ಯಾವ ದಾಖಲೆಗಳೂ ಇರಲಿಲ್ಲ. ಇಲ್ಲಿ ಹಾಗಾಗಿಲ್ಲ. ಕಳೆದ ಮೂರುವರ್ಷಗಳಲ್ಲಿ ಕೋರ್ಟಿನಲ್ಲಿ ವಾದ-ಪ್ರತಿವಾದ ನಡೆದು ಗಾಂಧಿ ಮನೆತನದ ವ್ಯವಹಾರದಲ್ಲಿ ಸಂಶಯ ಬಂದಿದ್ದರಿಂದಲೇ ಈ ಸಮನ್ಸ್ ನೀಡಲಾಗಿದೆ. ನ್ಯಾಷನಲ್ ಹೆರಾಲ್ಡ್ ನ ಕೇಸಿನಲ್ಲಿ ಕೋರ್ಟ್ ಕೊಟ್ಟ ಸಮನ್ಸ್ ಒಂದು ಮಿನಿ ತೀರ್ಪಿನಂತೆಯೇ ಇದೆ. 27 ಪುಟಗಳ ಸುದೀರ್ಘ ವಿವರಣೆಯಲ್ಲಿ, ಮೋಲ್ನೋಟಕ್ಕೆ ಸೋನಿಯಾ ಹಾಗೂ ಅವರ ಸಹಚರರಿಗೆ ‘ಕ್ರಿಮಿನಲ್ ಉದ್ದೇಶ’ ಇತ್ತು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿದೆ. ಮಾತ್ರವಲ್ಲ ಇಂದಿರಾರ ಜೀಪ್ ಹಗರಣದಂತೆ, ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಸರ್ಕಾರದ ಅಡಿಯಲ್ಲಿರುವ ಯಾವುದೇ ಸಂಸ್ಥೆ ಮೂಗು ತೂರಿಸಿಲ್ಲ. 2012ರಲ್ಲಿ ಸುಬ್ರಹ್ಮಣ್ಯ ಸ್ವಾಮಿ ಈ ಕೇಸು ದಾಖಲಿಸಿದಾಗ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿರಲಿಲ್ಲ. ನಿಜಕ್ಕಾದರೆ ಅವರೇ ಬಿಜೆಪಿ ಪಕ್ಷದಲ್ಲಿರಲಿಲ್ಲ. ಸ್ವಾಮಿಯವರ ಜನತಾ ಪಕ್ಷ ಬಿಜೆಪಿ ಪಕ್ಷದ ಜತೆ ವಿಲೀನಗೊಂಡಿದ್ದು 2014ರ ಚುನಾವಣೆಗೆ ಮುನ್ನ. ಈ ಎಲ್ಲ ಮಾಹಿತಿಗಳು ಈಗ ಜನರೆದುರು ಸುಲಭವಾಗಿ ದೊರೆಯುವಾಗ ಸೋನಿಯಾಗಾಂಧಿ, ಇಂದಿರಾಗಾಂಧಿಯಂತೆ ‘ರಾಜಕೀಯ ಷಡ್ಯಂತ್ರ’ ಅಂತ ಕಣ್ಣೀರು ಸುರಿಸಿ ಜನರನ್ನು ನಂಬಿಸುವುದು ತುಸು ಕಷ್ಟವೇ.

1977ರಲ್ಲಿ ಬಿತ್ತರವಾಗುವ ಸುದ್ದಿಯನ್ನು ನಿಯಂತ್ರಿಸುವುದು ಬಹು ಸುಲಭವಿತ್ತು. ಮುದ್ರಣಕ್ಕೆ ಸೀಮಿತವಾಗಿದ್ದ ಸುದ್ದಿಮನೆಯ ಮುಖ್ಯಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸುದ್ದಿಯನ್ನು ಬೇಕಾದಂತೆ ಬಿತ್ತರಿಸಿ ಸಾರ್ವಜನಿಕಾಭಿಪ್ರಾಯ ಮೂಡಿಸುವ ಕಲೆ ಕಾಂಗ್ರೆಸ್‍ಗೆ ಸಿದ್ಧಿಸಿತ್ತು. ಆದರೆ ಈಗ ಜನರೂ ವಿದ್ಯಾವಂತರಾಗಿದ್ದಾರೆ. ತಮಗೆ ಸುದ್ದಿ ನೀಡುವ ಮಾಧ್ಯಮವನ್ನೇ ಸಂದೇಹದಿಂದ ನೋಡಲಾರಂಭಿಸಿದ್ದಾರೆ. ಅವರೇ ವರದಿಗಾರರಾಗಿದ್ದಾರೆ. ಮಾತ್ರವಲ್ಲ ನ್ಯಾಷನಲ್ ಹೆರಾಲ್ಡ್ ರೀತಿಯ ಹಗರಣಗಳಾದಾಗ ಬ್ಯಾಲೆನ್ಸ್ ಶೀಟ್ ನೋಡಬೇಕೆಂದರೆ ಇಂದು ಇಂಟರ್ನೆಟ್ ಯುಗದಲ್ಲಿ ಇವೆಲ್ಲವೂ ಬೆರಳಂಚಿನಲ್ಲಿ ಲಭ್ಯವಿದೆ. ಸಾಮಾಜಿಕ ಈ ತಾಣಗಳ ಯುಗದಲ್ಲಿ ಸತ್ಯವನ್ನು ಮುಚ್ಚಿಡುವುದು ಸುಲಭವಲ್ಲ. ಅದು ಮೋದಿಯಿರಲಿ, ಕೇಜ್ರಿವಾಲ್ ಇರಲಿ, ಸೋನಿಯಾ ಇರಲಿ ಏನೇ ತಪ್ಪು ಮಾಡಿದರೂ ಸುದ್ದಿಯಾಗುವುದನ್ನು, ಒಂದು ಸಾರ್ವಜನಿಕ ಅಭಿಪ್ರಾಯ ಮೂಡಿಸುವುದನ್ನು ತಪ್ಪಿಸಲಾಗದು. ಹಾಗಾಗಿ ಸೋನಿಯಾರಿಗೆ ಸಾರ್ವಜನಿಕ ಅಭಿಪ್ರಾಯವನ್ನು ಬದಲಿಸುವ ಅವಕಾಶ ಇಂದಿರಾರಷ್ಟಿಲ್ಲ. ಇಂದು ‘ರಾಜಕೀಯ ಪ್ರತೀಕಾರ’ ಅಂತ ಕಣ್ಣೀರು ಸುರಿಸಿ ಅನಕ್ಷರಸ್ಥ ಜನರನ್ನು ಮೋಸ ಮಾಡಬಹುದೇ ಹೊರತು, ಸುಶಿಕ್ಷಿತ ಜನರಲ್ಲ. ‘ಗಾಂಧಿಗಳ ವೈಯಕ್ತಿಕ ಹಿತಾಸಕ್ತಿಗೆ ಪಾರ್ಲಿಮೆಂಟ್ ಅಧಿವೇಶವನ್ನು ಏಕೆ ಬಲಿಕೊಡುತ್ತೀರಿ? ಕೋರ್ಟ್ ಕೇಸಿಗೆ ಕೋರ್ಟಿನಲ್ಲಿ  ಹೋರಾಡುವ ಬದಲು ಪಾರ್ಲಿಮೆಂಟ್‍ನಲ್ಲಿ ಏಕೆ ಹೋರಾಡುತ್ತೀರಿ?’ ಎಂಬ ಪ್ರಶ್ನೆಗಳನ್ನು ಜನ ಕೇಳುತ್ತಲೇ ಇರುತ್ತಾರೆ. ಸೋನಿಯಾ ಇವಕ್ಕೆ ತಾತ್ವಿಕ ಉತ್ತರ ಕೊಡದೇ ಹೋದರೆ ನಗರದ ಸುಶಿಕ್ಷಿತ ಜನರ, ನವ ಮಧ್ಯಮ ವರ್ಗದ ಬೆಂಬಲ ಗಳಿಸುವುದು ಕಷ್ಟ ಸಾಧ್ಯ. ಬದಲಾದ ಭಾರತದಲ್ಲಿ ಈ ವರ್ಗ ರಾಜಕೀಯದ ದೆಸೆ ಬದಲಿಸಬಲ್ಲ ವೋಟ್‍ಬ್ಯಾಂಕ್ ಆಗಿ ಹೊರಹೊಮ್ಮಿದೆ.

ಅಲ್ಲದೇ ಇಂದಿರಾ ಸೊಸೆಯಾದ ಮಾತ್ರಕ್ಕೆ ಸೋನಿಯಾರಿಗೆ ಅಂಥ ವರ್ಚಸ್ಸು ಬರಲು ಸಾಧ್ಯವೇ ಇಲ್ಲ. ಕಾಂಗ್ರೆಸ್‍ನ್ನು ವಿರೋಧಿಸುವ ಅನೇಕರಲ್ಲಿ ಇಂದಿಗೂ ಇಂದಿರಾಗಾಂಧಿ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ಜನ ಸಾಕಷ್ಟಿದ್ದಾರೆ. ತುರ್ತುಪರಿಸ್ಥಿತಿಯನ್ನು ಹೊರತು ನೋಡಿದರೆ ಇಂದಿರಾಗಾಂಧಿ ಇಂದಿಗೂ ನಾವು ನೆನಪಿಟ್ಟುಕೊಳ್ಳಬೇಕಾದ ದಿಟ್ಟ ಆಡಳಿತಗಾರ್ತಿ. ಆಕೆ ಪಾಕಿಸ್ತಾನದ ವಿರುದ್ಧ ಹೋರಾಡಿದ ರೀತಿ, ಬಡವರ ಪರ ತಂದ ಕಾನೂನುಗಳನ್ನು ಭಾರತದ ಇತಿಹಾಸ ಮರೆಯದು. ಸ್ವತಂತ್ರ ಭಾರತ ಜನಪ್ರಿಯ ಪ್ರಧಾನಿಗಳ ಬಗ್ಗೆ ಸಮೀಕ್ಷೆಯೊಂದನ್ನು ಮಾಡಿದರೆ, ಇಂದಿರಾಗಾಂದಿ ಮೊದಲ ಮೂರು ಅಗ್ರ ಪಂಕ್ತಿಯಲ್ಲೊಂದು ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ. ಆದರೆ ಈ ದೇಶಕ್ಕೆ ಸೋನಿಯಾ ಗಾಂಧಿ ಕೊಟ್ಟ ಕೊಡುಗೆಯಾದರೂ ಏನು? ಹತ್ತು ವರ್ಷಗಳ ಕಾಲ ಮನಮೋಹನ್ ಸಿಂಗ್‍ರನ್ನು ಎದುರಿಟ್ಟು ರಿಮೋಟ್ ಕಂಟ್ರೋಲ್ ಮೂಲಕ ದೇಶವನ್ನು ನಿಯಂತ್ರಿಸಿ, ಕೊನೆಗೆ ಸಾಲು ಸಾಲು ಹಗರಣ ಬಂದಾಗ ಕೈಯಿತ್ತಿ ತಾನು ಪರಿಶುದ್ಧೆ ಎಂದುದು ಬಿಟ್ಟರೆ ಮತ್ತೇನೂ ಇಲ್ಲ.

ಈಗಿರುವುದು 1977ರಂತೆ ಸಮ್ಮಿಶ್ರ ಸರ್ಕಾರವಲ್ಲ, ಮೂವತ್ತು ವರ್ಷಗಳ ನಂತರ ಏಕ ಪಕ್ಷದ ಬಹುಮತದ ಸರ್ಕಾರವಿದೆ. ಮೊರಾರ್ಜಿ ಸರ್ಕಾರದಷ್ಟು ಒಳಜಗಳಗಿಲ್ಲ. ಮೋದಿ ತನ್ನ ಅಧಿಕಾರದ ಐದು ವರ್ಷ ಪೂರೈಸದಿರುವುದಕ್ಕೆ ಯಾವ ಕಾರಣಗಳೂ ಇಲ್ಲ. ಕಾಂಗ್ರೆಸ್ ಮೊತ್ತಮೊದಲ ಬಾರಿಗೆ ಕ್ಷೀಣ ಸ್ಥಿತಿಯಲ್ಲಿದೆ, ಬಿಜೆಪಿ ಜನಪ್ರಿಯತೆಯ ತುತ್ತತುದಿಗೇರಿ ಸಂಪೂರ್ಣ ಬಹುಮತದಲ್ಲಿದೆ. ಈ ಸ್ಥಿತಿಯಲ್ಲಿ ಮೋದಿಯವರು ಸೋನಿಯಾರಿಗೆ ಅನುಕಂಪ ಸಿಕ್ಕೀತೆಂದು ಹೆದರುವುದಕ್ಕೆ ಯಾವ ಕಾರಣವೂ ಇಲ್ಲ. ಅಷ್ಟಕ್ಕೂ ನ್ಯಾಷನಲ್ ಹೆರಾಲ್ಡ್ ಗಾಂಧಿ ಮನೆತನದ ಸ್ವಯಂಕೃತಾಪರಾಧ. ಇದು ಗೊತ್ತಿದ್ದೂ ಸೋನಿಯಾ, ಇಂದಿರಾರ 1977ರ ಮಾದರಿಯನ್ನು ಅನುಸರಿಸ ಹೊರಟರೆ, ‘ರಾಜಕೀಯ ಪ್ರತೀಕಾರ’ ಎಂದು ಕೂಗಾಡಿ ಸಂಸತ್ತಿನ ಕಲಾಪವನ್ನು ನಿಷ್ಕ್ರಿಯಗೊಳಿಸಿದರೆ, ಗಾಂಧಿ ಮನೆತನದ ವೈಯಕ್ತಿಕ ಸಮಸ್ಯೆಯನ್ನು ದೇಶದ ಸಮಸ್ಯೆಯನ್ನು ಬಿಂಬಿಸಹೊರಟರೆ, ಇದು ಕಾಂಗ್ರೆಸ್‍ಗೇ ತಿರುಗುಬಾಣವಾಗುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ, ಇಂದಿರೆಯ ಭಾರತಕ್ಕೂ, ಇಂದಿನ ಭಾರತಕ್ಕೂ ಅಜ ಗಜದಷ್ಟು ಅಂತರವಿದೆ!

(ಲೇಖಕರು ಪ್ರಚಲಿತ ವಿದ್ಯಮಾನಗಳ ಕುರಿತು ಆಸಕ್ತರು. ಒಮಾನ್‍ನಲ್ಲಿ ಬಹು ಮಾಧ್ಯಮ ಪ್ರಾಧ್ಯಾಪಕರು.)

4 COMMENTS

Leave a Reply