ಅಗ್ಗವಾಗಿದೆ ಐಫೋನ್ 5 ಎಸ್, ಖರೀದಿಗೂ ಮುನ್ನ ಗಮನದಲ್ಲಿರಬೇಕಿರೋದು ಏನು?

 

ಡಿಜಿಟಲ್ ಕನ್ನಡ ಟೀಮ್

ಐಫೋನ್ ಭಾರತದಲ್ಲಿ ತನ್ನ 5 ಎಸ್ ಶ್ರೇಣಿಯ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ ಮಾಡಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬೀಳಬೇಕಿದೆಯಾದರೂ ಆನ್ ಲೈನ್ ಮಾರುಕಟ್ಟೆಯಲ್ಲಿ 25 ಸಾವಿರ ರುಪಾಯಿಗಳ ಪ್ರಾರಂಭಿಕ ದರದಲ್ಲಿ ಐಫೋನ್ 5 ಎಸ್ ಸಿಗುತ್ತಿದೆ. ಸೆಪ್ಟೆಂಬರ್ ನಲ್ಲಿ ಇದರ ಬೆಲೆ 44, 500 ರುಪಾಯಿಗಳಾಗಿತ್ತು ಎಂಬುದಿಲ್ಲಿ ಗಮನಾರ್ಹ.

ಭಾರತದಲ್ಲಿ ಮಾರಾಟವಾಗುತ್ತಿರುವ ಐಫೋನ್ ಗಳ ಪೈಕಿ 5ಎಸ್ ಶ್ರೇಣಿಯೇ ಶೇಕಡ 50ರಷ್ಟು ಪಾಲನ್ನು ಹೊಂದಿದೆ. ಹೀಗಾಗಿ ಈ ಮಾರುಕಟ್ಟೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಉದ್ದೇಶದಿಂದ ಆ್ಯಪಲ್ ಕಂಪನಿ ಈ ಕ್ರಮಕ್ಕೆ ಮುಂದಾಗಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ ಮುಂದಿನ ವರ್ಷದ ಪ್ರಾರಂಭದಲ್ಲೇ ಹೊಸ ಐಫೋನ್ ಬಿಡುಗಡೆಯಾಗುವ ನಿರೀಕ್ಷೆ ಇರುವುದರಿಂದ, ಈಗ ಮಾರುಕಟ್ಟೆಯಲ್ಲಿರುವ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಗಳ ದರವೂ ಕಡಿತಗೊಳ್ಳಬಹುದು ಎಂಬ ಅಂದಾಜಿದೆ.

ನಾಲ್ಕಿಂಚುಗಳ ರೆಟಿನಾ ಡಿಸ್ ಪ್ಲೆ ಹೊಂದಿರುವ ಐಫೋನ್ 5ಎಸ್, ಎ7 ಎಂಬ ಚಿಪ್ ಸೆಟ್ ಹೊಂದಿದೆ. ಚಲನೆಯಲ್ಲಿರುವುದನ್ನೂ ಗ್ರಹಿಸಬಹುದಾದ ಎಮ್ 7 ಎಂಬ ಕೊ ಪ್ರೊಸೆಸರ್ ಹೊಂದಿದೆ.

ಐಫೋನ್ 5 ಎಸ್ ನ ದರ ಇಳಿದಿದೆ ಎಂದು ಖರೀದಿಗೆ ಉತ್ಸುಕರಾಗುವ ಮುಂಚೆ ಒಂದು ಸಾಧ್ಯತೆ ಪರಿಗಣಿಸಬೇಕಿದೆ. 2013ರಲ್ಲಿ ಬಂದ ಈ ಶ್ರೇಣಿಯು ಐಫೋನ್, ಐಒಎಸ್ 10ರ ಅಪ್ ಡೇಟ್ ಗಳಿಗೆ ಒಗ್ಗಿಕೊಳ್ಳದೇ ಇರಬಹುದೆಂಬ ಶಂಕೆ ಇದೆ. ಐಫೋನ್ ಭವಿಷ್ಯದಲ್ಲಿ ಅಭಿವೃದ್ಧಿಪಡಿಸಬಹುದಾದ ಕೆಲವು ವಿಶೇಷಗಳು ಐಫೋನ್ 6 ಮತ್ತು ನಂತರದ ಶ್ರೇಣಿಗಳಿಗಷ್ಟೇ ಒಗ್ಗಿಕೊಳ್ಳಬಹುದು. ಹೀಗಾಗಿ ದೀರ್ಘಾವಧಿಗೆ ಯೋಜಿಸಬೇಕಿರುವವರು ಈ ಬಗ್ಗೆ ಚಿಂತಿಸಬೇಕಿದೆ.

ಇನ್ನು, ಕೆಲವು ಆನ್ ಲೈನ್ ವ್ಯಾಪಾರತಾಣಗಳು ಐಫೋನ್ ಶ್ರೇಣಿಯ ಸ್ಮಾರ್ಟ್ ಫೋನ್ ಗಳನ್ನು ಒಂದು ನಿರ್ದಿಷ್ಟ ಅವಧಿಯೊಳಗೆ ಅರ್ಧ ದರ ಕೊಟ್ಟು ಮರು ಖರೀದಿಸುವ ಆಯ್ಕೆಗಳನ್ನು ಹೊಂದಿರುತ್ತವೆ. ಖರೀದಿಗೆ ಮುನ್ನ ಇಂಥ ಎಲ್ಲ ಆಯಾಮಗಳನ್ನು ಗಮನಿಸುವುದು ಒಳಿತು.

Leave a Reply