ಪೆಟ್ರೋಲ್ ಬೆಲೆ ಇಳಿಯೋ ಸಾಧ್ಯತೆ, ಆದ್ರೂ ಖುಷಿ ಪಡೋಕಾಗಲ್ಲ… ಜಾಗ್ರತೆ!

ರಂಗಸ್ವಾಮಿ ಮೂಕನಹಳ್ಳಿ, ಹಣಕಾಸು ಪರಿಣತ

ಅಪ್ ಡೇಟ್ ಟಿಪ್ಪಣಿ: ಪೆಟ್ರೋಲ್ ಬೆಲೆ ಇಳಿಯುವ ಸಾಧ್ಯತೆ ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟಿಸುವಾಗ ಬೆಲೆ ಇಳಿಕೆ ಸುದ್ದಿ ಬ್ರೇಕ್ ಆಗಿರಲಿಲ್ಲ. ಇದೀಗ ಪೆಟ್ರೋಲ್ ಬೆಲೆ ಲೀಟರ್ ಗೆ 50 ಪೈಸೆ ಹಾಗೂ ಡಿಸೇಲ್ ಲೀಟರ್ ಗೆ 46 ಪೈಸೆ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಾದ ಇಳಿಕೆಗೆ ಹೋಲಿಸಿದರೆ ಇದೇನೂ ಅಲ್ಲವಾದರೂ, ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಇಳಿಕೆ ಆಗಬಹುದೆಂದು ಆಶಿಸಬಹುದು. ಇದರ ನಿಜವಾದ ಒಳಸುಳಿ ಅರ್ಥವಾಗಬೇಕಾದರೆ ಈ ಲೇಖನ ಓದಲೇಬೇಕು…

ಪೆಟ್ರೋಲ್ ಬೆಲೆ ಕುಸಿಯುವ ಸಾಧ್ಯತೆ ಇದೆ. ಕಚ್ಚಾ ತೈಲದ ಬೆಲೆ ಇಂದು 36 ಡಾಲರ್ ಪ್ರತಿ ಬ್ಯಾರೆಲ್ಗೆ ಅಂದರೆ ಸರಿಸುಮಾರು 2400 ರುಪಾಯಿಗಳು. ಕಚ್ಚಾ ತೈಲದ ಬೆಲೆ ಏಕೆ ಕುಸಿಯಲಿದೆ ಎನ್ನುವುದು ಅರ್ಥ ಮಾಡಿಕೊಳ್ಳಲು ಅಮೆರಿಕದ ಆರ್ಥಿಕತೆ ಸ್ವಲ್ಪ ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಮೆರಿಕ ತನ್ನ ಫೆಡರಲ್ ಇಂಟರೆಸ್ಟ್ ರೇಟ್ ಅನ್ನು ಇದೇ ಡಿಸೆಂಬರ್ 16 ರಂದು 0.25 ರಷ್ಟು ಪ್ರತಿಶತ ಹೆಚ್ಚಿಸುವ ಸಾಧ್ಯತೆ ಅಧಿಕವಾಗಿದೆ. ಬಡ್ಡಿ ದರ ಹೆಚ್ಚಾದರೆ ಉತ್ಪನ್ನಗಳ ಬೆಲೆ ತಾನಾಗೆ ಹೆಚ್ಚುತ್ತೆ. ಅದು ನೇರವಾಗಿ ಗ್ರಾಹಕನ ಖರ್ಚು ಮಾಡುವ ಸಾಮರ್ಥ್ಯಕ್ಕೆ ಕೊಡುವ ಪೆಟ್ಟು. ನೆನಪಿರಲಿ, ಜಗತ್ತಿನ ಕಚ್ಚಾತೈಲದಲ್ಲಿ 25 ಭಾಗದ ಬಳಕೆದಾರ ಅಮೆರಿಕ. ಅಲ್ಲಾಗುವ ಬೆಲೆ ಏರಿಕೆ ಹೊಡೆತ ನೀಡುವುದು ಮೋಜಿನ ಖರ್ಚಿಗೆ, ಸುಖಾಸುಮ್ಮನೆ ವಾರಾಂತ್ಯದಲ್ಲಿ ಲಾಂಗ್ ರೈಡ್, ಜಾಲಿ ರೈಡ್ ಹೋಗುವ ಪರಿಪಾಟಕ್ಕೆ ಇದು ನೇರವಾಗಿ ಕಚ್ಚಾ ತೈಲದ ಬೆಲೆ ಇನ್ನಷ್ಟು ಇಳಿಯಲು ಕಾರಣವಾಗಬಹುದು. ಎರಡನೇ ಮುಖ್ಯ ಕಾರಣ ಅಮೆರಿಕದಲ್ಲಿ ಹೆಚ್ಚಾದ ಬಡ್ಡಿ ದರ, ಭಾರತದಲ್ಲಿ ಕಡಿಮೆಯಾದ ಬಡ್ಡಿ ದರ ಹಾಗು ಡಾಲರ್ ಎದುರು ಕುಸಿಯುತ್ತಿರುವ ರುಪಾಯಿ. ಇವೆಲ್ಲದರ ಪರಿಣಾಮ ಏನೆಂದರೆ, ಹೂಡಿಕೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಹಾಗೂ ತೈಲ ಮಾರುಕಟ್ಟೆಯನ್ನು ನೆಚ್ಚಿಕೊಂಡಿದ್ದ ಜಾಗತಿಕ ಹೊಡಿಕೆದಾರರ ಚಿತ್ತ ಬೇರೆಡೆ ತಿರುಗಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಹೆಚ್ಚು ಹೂಡಿಕೆದಾರರು ಅಮೆರಿಕದ ಡೆಟ್ ಬಾಂಡ್ (ಸಾಲದ ಪತ್ರ) ಗಳಲ್ಲಿ ಹಣ ತೊಡಗಿಸುತ್ತಾರೆ.
ಡಿಸೆಂಬರ್ 16 , 2008ರ ನಂತರ ಅಮೆರಿಕ ಏಕೆ ತನ್ನ ಫೆಡರಲ್ ರೇಟ್ ಬದಲಾಯಿಸಲಿಲ್ಲ? ಇಡೀ ಅಮೆರಿಕ ಅರ್ಥಿಕ ಮುಗಟ್ಟಿನಿಂದ ನಲುಗಿದ್ದು ಅಲ್ಲಿನ ಹಲವು ಬ್ಯಾಂಕ್ ಗಳು ಮಕಾಡೆ ಮಲಗಿದ್ದು ತಿಳಿದ ವಿಷಯ. ಅಂದು ರೇಟ್ ಹೆಚ್ಚಿಸಿದ್ದರೆ ಹಣದುಬ್ಬರ ಮತ್ತಷ್ಟು ಹೆಚ್ಚಾಗಿ ಮಾರುಕಟ್ಟೆ ಕುಸಿಯುವ ಸಾಧ್ಯತೆ  ಇತ್ತು. ಹಾಗೆಂದೇ ಅಮೆರಿಕ ಪ್ರತಿ ಹೆಜ್ಜೆಯನ್ನು ಅಳೆದು ತೂಗಿ ಇಡುತ್ತಿದೆ. ಸರಿ ಮತ್ತೇಕೆ ಈಗ ರೇಟ್ ಹೆಚ್ಚಿಸುವ ಸಾಹಸ? ರೇಟ್ ಹೆಚ್ಚಿಸುವುದರಿಂದ ಉಳಿತಾಯ ಮಾಡುವರಿಗೆ, ಬಂಡವಾಳಗಾರರಿಗೆ ಅನುಕೂಲವಾಗುತ್ತೆ. ಉಳಿದಂತೆ ಹಣದುಬ್ಬರ ಹೆಚ್ಚುತ್ತೆ. ಅಮೆರಿಕದಂತಹ ಮುಂದುವರಿದ ದೇಶಕ್ಕೆ ರೇಟ್ ಹೆಚ್ಚುವಿಕೆ ಹೆಗ್ಗಳಿಕೆಯಲ್ಲ ಗೊತ್ತಿರಲಿ.
ಹಿಂದೆ ಯುದ್ಧ ಅಂದರೆ ಮದ್ದು ಗುಂಡು ಹಾರಿಸಿ ಮಾಡುವಂಥದ್ದಾಗಿತ್ತು. ಇಂದು ಯುದ್ಧ ಅಂದರೆ  ಅದಕ್ಕೆ ಹಲವು ವ್ಯಾಖ್ಯಾನ ನೀಡಬಹುದು. ಅದರಲ್ಲಿ ಒಂದು ‘ಕರೆನ್ಸಿ ವಾರ್’.  ಚೀನಾ ದಶಕಗಳ ನಂತರ ತನ್ನ ಹಣವನ್ನು ಡಾಲರ್ ಎದುರು ಅಪಮೌಲ್ಯಗೊಳಿಸಿ ಕರೆನ್ಸಿ ಸಮರ ಶುರು ಮಾಡಿ ಇಂದಿಗೆ ಹಲವು ತಿಂಗಳು. ಇವತ್ತಿಗೆ ಇದು ಹಳೆಯ ವಿಷಯ. ಗಮನಿಸಿ ಒಂದು ಡಾಲರ್ ಗೆ ಹಿಂದಿನಿಗಿಂತ ಹೆಚ್ಚು ಚೀನಿ ಹಣ ವಿನಿಮಯದಲ್ಲಿ ಸಿಗುವ ಹಾಗೆ ಆಯಿತು. ಹೂಡಿಕೆದಾರನಿಗೆ ಲಾಭ ಬೇಕು  ಅಷ್ಟೇ. ಅದು ಚೀನಾ, ಇಂಡಿಯಾ, ಬ್ರೆಜಿಲ್ ಯಾವುದಾದರೂ ಸರಿ. ಹೀಗೆ ಹಾರಿ ಹೋದ ಹೂಡಿಕೆದಾರರ ಮತ್ತೆ ತನ್ನತ್ತ ಸೆಳೆಯಲು ಅಮೆರಿಕಕ್ಕೆ ತನ್ನ ಫೆಡರಲ್ ಇಂಟರೆಸ್ಟ್ ರೇಟ್ ಹೆಚ್ಚಿಸದೇ ಬೇರೆ ದಾರಿ ಇಲ್ಲ. ಚೂರು ಹೆಚ್ಚು ಕಮ್ಮಿ ಆದರೂ ಅಮೆರಿಕ ತಲೆ ಮೇಲೆ ಕೈ ಹೊತ್ತು ಕೂರುವುದರಲ್ಲಿ ಸಂಶಯವಿಲ್ಲ.
ಮುಂಬರುವ ದಿನಗಳಲ್ಲಿ ಹೂಡಿಕೆದಾರ ಹೆಚ್ಚು ವಿಶ್ವಾಸಾರ್ಹವೆನಿಸುವ ಅಮೆರಿಕದ ಡೆಟ್ ಬಾಂಡ್ ಖರೀದಿಗೆ ಮುಗಿಬಿಳಲಿದ್ದಾನೆ ಎಂದು ಮೇಲಿನ ಸಾಲುಗಳಲ್ಲಿ ಉಲ್ಲೇಖಿಸಿದೆನಷ್ಟೇ… ಏನಿದು ಡೆಟ್ ? ಏನಿದು ಡೆಟ್ ಬಾಂಡ್ ? ಎನ್ನೋದು ತಿಳಿದರೆ ನಿಖರ ನೋಟ ಸಿಗುತ್ತದೆ.
ಡೆಟ್ ಅಂದರೆ ‘ಸಾಲ’. ಡೆಟ್ ಬಾಂಡ್ ಎಂದರೆ ‘ಸಾಲ ಪತ್ರ’.
ಹಣ ವಿನಿಮಯ  ಮಾಧ್ಯಮವಾಗಿ ಚಾಲ್ತಿಗೆ  ಬರುವುದಕ್ಕೆ ಮುಂಚೆಯೇ ಡೆಟ್ ಅರ್ಥಾತ್ ಸಾಲ ಚಲಾವಣೆಯಲಿತ್ತು. ಉದಾಹರಣೆ ನೋಡಿ. ‘ಸೇರು ರಾಗಿ ಕೊಟ್ಟಿರಕ್ಕ, ಮುಂದಿನವಾರ ಕೊಡ್ತೀನಿ’ ಎನ್ನುವ ಮಹಿಳೆಗೆ ಅದು ಸಾಲ ಅನ್ನುವ ಅರಿವಿಲ್ಲ. ಇದೆಲ್ಲಾ ನಾಗರೀಕ ಸಮಾಜ ನಂತರದ ದಿನಗಳಲ್ಲಿ ಅನುಕೂಲಕ್ಕೆ ಹುಟ್ಟಿಹಾಕಿದ ಪದಗಳಷ್ಟೇ.
ಡೆಟ್ ಬಾಂಡ್ ಅಂದರೆ ಸಾಲ ಪತ್ರ. ಈ ಪತ್ರ ಹೊಂದಿರುವನು ನಮಗೆ ಇಷ್ಟು ಹಣ ಸಾಲ ಕೊಟ್ಟಿದ್ದಾನೆ, ಇಷ್ಟು ವರ್ಷದ ನಂತರ ಇಷ್ಟು ಹಣ ವಾಪಸ್ಸು ಮಾಡಲಾಗುವುದು ಎಂದು ಬರೆದು ಕೊಟ್ಟ ಮುಚ್ಚಳಿಕೆ. ವಿಪರ್ಯಾಸ ನೋಡಿ, ಅಮೆರಿಕ ಸರಕಾರ ನೀಡುವ ಸಾಲಪತ್ರ ಖರೀದಿಸಲು ಸಂತೆ ಶುರುವಾಗುತ್ತೆ.
ಇದೆಲ್ಲಾ ಸರಿ, ಭಾರತಕ್ಕೆ ಇದರಿಂದ ಏನಾಗುತ್ತೆ?
ಡಾಲರ್ ಎದುರು ಅಪಮೌಲ್ಯಗೊಳ್ಳುತ್ತಿರುವ ರುಪಾಯಿ ಮೌಲ್ಯ ಕುಸಿತ ತಡೆಗೆ ರಿಸರ್ವ್ ಬ್ಯಾಂಕ್ ಮಧ್ಯ ಪ್ರವೇಶಿಸಬೇಕಾಗಬಹುದು. ಸರಿಸುಮಾರು 1 ಡಾಲರ್ ಗೆ 65 ರುಪಾಯಿ ವಹಿವಾಟು ನಡೆಸುತ್ತಿದೆ. ಇದು 70 ಗಡಿ ದಾಟುವ ಎಲ್ಲಾ ಸಾಧ್ಯತೆ ಇದೆ. ಇದಾದರೆ ಮೊದಲ ಮೊದಲ ಸಾಲಿನಲ್ಲಿ ಹೇಳಿದಂತೆ ಕುಸಿದ ಪೆಟ್ರೋಲ್ ಬೆಲೆ ಮತ್ತೆ ಹೆಚ್ಚಲಿದೆ! ನೆನಪಿಡಿ, ತೈಲ ಬೆಲೆ ನಿರ್ಧಾರವಾಗುವುದು ಡಾಲರ್ ನಲ್ಲಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿದರೂ ರುಪಾಯಿ ಅಪಮೌಲ್ಯದ ಕಾರಣ ಕುಸಿದ ತೈಲ ಬೆಲೆ ನಮಗೆ ದಕ್ಕದೆ ಹೋಗಬಹುದು.
ಫೆಡರಲ್ ರೇಟ್ ಹೆಚ್ಚಾಗುತ್ತೆ ಎನ್ನುವ ಸೂಚನೆ ಸಿಗುವುದು ಫ್ಯೂಚರ್ ಟ್ರೇಡಿಂಗ್ನಲ್ಲಿ. ಕಳೆದ ಎರಡು ತಿಂಗಳಲ್ಲಿ ಇದೇ ಕಾರಣದ  ಜಾಡು ಹಿಡಿದು ನಮ್ಮ ಕ್ಯಾಪಿಟಲ್ ಮಾರ್ಕೆಟ್ ನಿಂದ ಹೊರತೆಗೆದ ಹಣ ಬರೋಬ್ಬರಿ 23 ಸಾವಿರ ಕೋಟಿ ರುಪಾಯಿಗಳು! ಅಷ್ಟು ಮೊತ್ತದ ಹೂಡಿಕೆ ತರಲು ಮೋದಿ ಎಷ್ಟು ದೇಶ ಸುತ್ತ ಬೇಕು ಗೊತ್ತಾ?

1 COMMENT

Leave a Reply