
ಚೈತನ್ಯ ಹೆಗಡೆ
ಈವರೆಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣ, ರೈಲ್ವೆಯಿಂದ ಕೊಳಗೇರಿಗಳ ತೆರವು ವಿದ್ಯಮಾನ ಉಪಯೋಗಿಸಿಕೊಂಡು ಪ್ರತಿಪಕ್ಷಗಳು ಸಂಸತ್ತಿನ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ್ದಾಯ್ತು. ಈಗ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ‘ದ್ವೇಷದ ರಾಜಕೀಯ’ ಎಂಬ ಬೊಬ್ಬೆ ಶುರುವಾಗಿದೆ. ಯಥಾಪ್ರಕಾರ ಸಂಸತ್ತಿನ ಕಲಾಪ ಆಪೋಶನವಾಗುತ್ತಿದೆ.
ಆದರೆ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಐಎಎಸ್ ಅಧಿಕಾರಿ ಕಚೇರಿ ಮೇಲೆ ಮಾಡಿರುವ ಸಿಬಿಐ ದಾಳಿಯನ್ನು ಮುಖ್ಯಮಂತ್ರಿ ಕಚೇರಿ ಮೇಲಾದ ದಾಳಿ ಎಂದು ವ್ಯಾಖ್ಯಾನಿಸಿ ಆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಿಎಂ ಅರವಿಂದ ಕೇಜ್ರಿವಾಲ್ ಕ್ರಮ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಅವುಗಳಲ್ಲಿ ತರ್ಕವೂ ಇದೆ.
ಇಷ್ಟಕ್ಕೂ, ಸಿಬಿಐ ಸ್ಪಷ್ಟಪಡಿಸಿರುವಂತೆ ದಾಳಿ ನಡೆದಿರುವುದು ಸಿಎಂ ಕಚೇರಿ ಮೇಲಲ್ಲ. ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಆಗಿರುವ ರಾಜೇಂದ್ರ ಕುಮಾರ್ ಕಚೇರಿ ಮೇಲೆ. 1989ರ ಬ್ಯಾಚ್ ನ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ವಿರುದ್ಧ ಇರುವ ಆರೋಪ ಎಂದರೆ- ಇವರು ತಮ್ಮ ಅಧಿಕಾರವಧಿಯಲ್ಲಿ ಖಾಸಗಿ ಕಂಪನಿಗಳನ್ನು ಸ್ಥಾಪಿಸಿ, ಸರ್ಕಾರದ ಕೆಲಸಗಳು ಅವಕ್ಕೇ ಸಿಗುವಂತೆ ಮಾಡುತ್ತಿದ್ದರು ಅನ್ನೋದು. ರಾಜೇಂದ್ರ ಕುಮಾರ್ ಅವರು ಶಿಕ್ಷಣ, ಐಟಿ ಮತ್ತು ಆರೋಗ್ಯ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಹೀಗೆ ತಮ್ಮ ವೈಯಕ್ತಿಕ ಹಿತಾಸಕ್ತಿ ನೆರವೇರಿಸಿಕೊಂಡು ಸರ್ಕಾರದ ಖಜಾನೆಗೆ ನಷ್ಟ ಉಂಟುಮಾಡಿದ್ದರು ಅಂತ ದೆಹಲಿ ಸರ್ಕಾರದ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಿರುವ ಹಿರಿಯ ಅಧಿಕಾರಿ ಅಶೀಶ್ ಜೋಶಿ ಬಹಳ ಹಿಂದೆಯೇ ಭ್ರಷ್ಟಾಚಾರ ವಿರೋಧಿ ಬ್ಯೂರೋಕ್ಕೆ ದೂರು ಸಲ್ಲಿಸಿದ್ದರು.
ಇದರದ್ದೇ ಮುಂದುವರಿದ ಭಾಗವಾಗಿ ಸಿಬಿಐ ದೂರು ದಾಖಲಿಸಿಕೊಂಡು ರಾಜೇಂದ್ರ ಕುಮಾರ್ ಅವರ ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಜೋಶಿ ಅವರ ಆರೋಪವನ್ನು ವಿಸ್ತಾರದಲ್ಲಿ ನೋಡುವುದಾದರೆ- 2002 ಹಾಗೂ 2005ರ ಅವಧಿಯಲ್ಲಿ ರಾಜೇಂದ್ರ ಕುಮಾರ್ ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲೇ ಕಾಲ್ಟೂನ್ಜ್ ಮತ್ತು ಎಡ್ಯುಡೆಲ್ ಮಿಸ್ ಎಂಬ ಎರಡು ಕಂಪನಿಗಳನ್ನು ಸ್ಥಾಪಿಸುತ್ತಾರೆ. ಆಗ ಕಚೇರಿಯ ಸೂಪರಿಂಟೆಂಡೆಂಟ್ ಆಗಿದ್ದ ಅಶೋಕ್ ಕುಮಾರ್ ಎಂಬುವವರನ್ನು ಕಾಲ್ಟೂನ್ಜ್ ಉಸ್ತುವಾರಿಗೆ ನೇಮಿಸಲಾಗುತ್ತದೆ. ನಂತರ ರಾಜೇಂದ್ರ ಕುಮಾರ್ ಅವರು ಶಿಕ್ಷಣ ಇಲಾಖೆಗೆ ಸ್ಟೇಷನರಿ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ದಿನೇಶ್ ಕುಮಾರ್ ಗುಪ್ತ ಅವರೊಂದಿಗೆ ಸೇರಿಕೊಂಡು ಎಂಡೀವರ್ ಸಿಸ್ಟಮ್ ಎಂಬ ಇನ್ನೊಂದು ಕಂಪನಿಯನ್ನೂ ಸ್ಥಾಪಿಸುತ್ತಾರೆ.
ಇವಿಷ್ಟೂ ಅಶೀಶ್ ಜೋಶಿ ಆರೋಪದಲ್ಲಿರುವ ಅಂಶಗಳು.
ಈಗ ಹೇಳಿ. ಹೀಗೆಲ್ಲ ಭ್ರಷ್ಟಾಚಾರ ಆರೋಪ ಕೇಳಿಬಂದಾಗ ಸಿಬಿಐ ದಾಳಿ ನಡೆಸುವುದು ಹೇಗೆ ತಪ್ಪಾಗುತ್ತದೆ? ಅರವಿಂದ ಕೇಜ್ರಿವಾಲರು ತಮ್ಮ ಹೋರಾಟದ ಉದ್ದಕ್ಕೂ ‘ತನಿಖೆ ಆಗ್ಬೇಕು, ತನಿಖೆ ಆಗ್ಬೇಕು’ ಅಂತ್ಲೇ ಕೂಗಾಡಿಕೊಂಡು ಬಂದವರು. ಭ್ರಷ್ಟಾಚಾರ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವವರು ಅಂತ ಇವತ್ತಿಗೂ ಬಿಂಬಿಸಿಕೊಳ್ಳುತ್ತಿರುವವರು. ಹಾಗಾದರೆ ತಮ್ಮ ಸರ್ಕಾರದ ಬುಡಕ್ಕೆ ಬಂದ ಆರೋಪದ ಬಗ್ಗೆ ಮಾತ್ರ ತನಿಖಾ ಸಂಸ್ಥೆಗಳು ಸುಮ್ಮನಿರಬೇಕು, ಉಳಿದವರ ವಿಚಾರದಲ್ಲಿ ಕಠಿಣವಾಗಿ ವರ್ತಿಸಬೇಕು ಎಂಬಂತೆ ಕೇಜ್ರಿವಾಲ್ ಮತ್ತು ಅವರ ಆಪ್ ನಡೆದುಕೊಳ್ಳುತ್ತಿರುವುದು ಹಾಸ್ಯಾಸ್ಪದವಲ್ಲವೇ? ಇಷ್ಟಕ್ಕೂ ಸಿಬಿಐ ದಾಳಿ ಆದ ಮಾತ್ರಕ್ಕೆ ಯಾರೂ ತಪ್ಪಿತಸ್ಥರೆಂದಾಗುವುದಿಲ್ಲ. ಅದರ ನಿಷ್ಕರ್ಷೆಗೆ ನ್ಯಾಯ ವ್ಯವಸ್ಥೆ ಇದ್ದೇ ಇದೆ.
ಪ್ರತಿಯೊಂದನ್ನೂ ‘ರಾಜಕೀಯ ದ್ವೇಷ’, ‘ಕೇಂದ್ರದ ಕೈವಾಡ’ ಎಂಬಂತೆ ಕೂಗುಮಾರಿ ಎಬ್ಬಿಸುವಲ್ಲಿ ಅರವಿಂದ ಕೇಜ್ರಿವಾಲರು ರಾಹುಲ್ ಗಾಂಧಿ ಅವರಿಗೆ ಪೈಪೋಟಿ ಕೊಡುತ್ತಿದ್ದಾರೆಯೇ?
ರಾಜೇಂದ್ರ ಕುಮಾರ್ ನೆಪದಲ್ಲಿ ತಮ್ಮದೇ ಕಡತಗಳನ್ನು ಪರಿಶೀಲಿಸಲಾಗಿದೆ, ದಾಳಿ ಮಾಡುವಾಗ ಮುಖ್ಯಮಂತ್ರಿ ಕಚೇರಿಗೆ ತಿಳಿಸಬೇಕಿತ್ತು ಎಂದೆಲ್ಲ ಆಪ್ ವಾದಿಸುತ್ತಿದೆ. ‘ಸಿಬಿಐ ಕಚೇರಿಯೊಂದನ್ನು ರೇಡ್ ಮಾಡುವಾಗ ಅದಕ್ಕೆ ಸೂಚನೆ ಕೊಟ್ಟು ಬರಬೇಕು’ ಅಂತ ಭ್ರಷ್ಟಾಚಾರ ವಿರೋಧಿ ಆಂದೋಲನದ ನೇತಾರ ಕೇಜ್ರಿವಾಲರೇ ವಾದಿಸುತ್ತಿರೋದು ಎಂಥ ವಿಪರ್ಯಾಸ?
ಒಬ್ಬ ಸಾಮಾನ್ಯನಿಗೆ ಹುಟ್ಟಿಕೊಳ್ಳುವ ಪ್ರಶ್ನೆ ಅಂತಂದ್ರೆ- ಅದೇನೇ ರಾಜಕೀಯ ಗುರಿಯೇ ಆಗಿದ್ದರೂ ಅರವಿಂದ ಕೇಜ್ರಿವಾಲರ ಬಳಿ ಮುಚ್ಚಿಟ್ಟುಕೊಳ್ಳುವುದಕ್ಕೆ ಏನೂ ಇಲ್ಲ ಅಂತಾದರೆ ಅವರೇಕೆ ಹೆದರಬೇಕು?
ರಾಜೇಂದ್ರ ಕುಮಾರ್ ಅವರು ಮುಖ್ಯಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿ ಆಗಿದ್ದು ಫೆಬ್ರವರಿಯಲ್ಲಿ. ಕೇಜ್ರಿವಾಲ್ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೂ ರಾಜೇಂದ್ರರು ಕಾರ್ಯದರ್ಶಿ ಆಗಿದ್ದರು. ಕೇಜ್ರಿವಾಲ್ ಅವರಂತೆ ಐಐಟಿ ದೆಹಲಿಯ ಹಳೆ ವಿದ್ಯಾರ್ಥಿ ರಾಜೇಂದ್ರ ಕುಮಾರ್. ಇವರು ಕೇಜ್ರಿವಾಲರಿಗೆ ಬಹಳ ಆಪ್ತರು ಎಂಬುದು ಅಧಿಕಾರಿಗಳ ವಲಯದಲ್ಲಿ ಓಪನ್ ಸಿಕ್ರೆಟ್. ಹೀಗಿರುವಾಗ ರಾಜೇಂದ್ರ ಕುಮಾರ್ ಮೇಲಿನ ದಾಳಿಗೆ ಕೇಜ್ರಿವಾಲರು ಕೊಡುತ್ತಿರುವ ಅತಿ ಪ್ರತಿಕ್ರಿಯೆ ಯಾವ ಸಂದೇಶ ನೀಡುತ್ತಿದೆ? ‘ಅದೇನು ಶೋಧಿಸಿತ್ತೀರೋ ಶೋಧಿಸಿ. ನನ್ನಲ್ಲಾಗಲಿ, ಪ್ರಧಾನ ಕಾರ್ಯದರ್ಶಿಯಲ್ಲಾಗಲೀ ತಪ್ಪುಗಳಿಲ್ಲದಿರುವಾಗ ನೀವೇನು ಮಾಡುವಿರಿ’ ಅಂತ ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸಬೇಕಿದ್ದ ಕೇಜ್ರಿವಾಲರು ಥೇಟು ಕಾಂಗ್ರೆಸ್ ಶೈಲಿಯಲ್ಲೇ ‘ಅಯ್ಯಯ್ಯೋ ನಾವು ಬಲಿಪಶು’ ಎಂದು ಕೂಗೆಬ್ಬಿಸುತ್ತಿರುವುದು ಭ್ರಷ್ಟಾಚಾರ ವಿರೋಧಿಗಳ ಶೈಲಿಯಂತೂ ಅಲ್ಲ!
ಅಷ್ಟೂ ಸಾಕಾಗದೆಂಬಂತೆ ‘ನರೇಂದ್ರ ಮೋದಿ ಸೈಕೋಪಾತ್’ ಎಂದೆಲ್ಲ ನಿಂದಿಸುತ್ತಿರುವುದು ನೈಜ ಸತ್ವದ ರಾಜಕಾರಣಿಯ ನಡೆಯೇ?
Good article