ಮೇಲ್ಮನೆ ದೊಡ್ಡವರ ಸಮಾಚಾರ, ವೋಟಿಗೆ 25 ರಿಂದ 40 ಸಾವಿರ!

ಚಿತ್ರದಲ್ಲಿ- ಕೃಷ್ಣಪ್ಪ, ದಯಾನಂದ ರೆಡ್ಡಿ

ಡಿಜಿಟಲ್ ಕನ್ನಡ ಟೀಮ್

ವಿಧಾನ ಪರಿಷತ್ತಿಗೆ ಸಿಕ್ಕಾಪಟ್ಟೆ ಬೆಲೆ ಬಂದುಬಿಟ್ಟಿದೆ!

ಏನು ಹಂಗಾದ್ರೆ ಹಿಂದೆ ಬೆಲೆ ಇರಲಿಲ್ಲವಾ.? ಈಗಷ್ಟೇ ಬೆಲೆ ಬಂದದ್ದಾ..? ಅಂತ ಕೇಳಬೇಡಿ. ಹಿಂದೆನೂ ಇತ್ತು. ಈಗಲೂ ಇದೆ. ಅದರೆ ಸ್ವರೂಪ ಮಾತ್ರ ಬೇರೆ ಅಷ್ಟೇ!

ಹಿಂದೆ ಬುದ್ದೀಜೀವಿಗಳು, ವಿಚಾರವಾದಿಗಳಿಂದ ಮೇಲ್ಮನೆ ತುಂಬಿ ತುಳುಕುತ್ತಿತ್ತು. ಅದರಿಂದ ಒಂದು ಘನತೆ, ಗೌರವ ಇತ್ತು. ಆದರೆ ಈಗ ರಿಯಲ್ ಎಸ್ಟೇಟ್ ಕುಳಗಳು, ಶ್ರೀಮಂತ ಉದ್ಯಮಿಗಳು ದಾಂಗುಡಿ ಇಡುತ್ತಿದ್ದಾರೆ. ಹಿಂಗಾಗಿ ಆ ಗೌರವ, ಘನತೆ ಜಾಗವನ್ನು ಗತ್ತು, ಗೈರತ್ತು ಆಕ್ರಮಿಸಿಕೊಂಡಿದ್ದು, ಪರಿಷತ್ತಿಗಿದ್ದ ‘ಬೆಲೆ’ಯ ಖದರೇ ಬದಲಾಗಿದೆ.

ಸುಖಾ ಸುಮ್ಮನೆ ಈ ಮಾತು ಹೇಳ್ತಿಲ್ಲ. ಇದೀಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಮೆರವಣಿಗೆ ಹೊರಟಿರುವವರನ್ನು ನೋಡಿ. ”ನಾನು ಬೈ ಬರ್ತ್ ಸಾವಿರಾರೂ ಕೋಟಿ ರುಪಾಯಿ ಒಡೆಯ” ಅಂತ ಹೇಳಿಕೊಳ್ಳುವ ಬೆಂಗಳೂರಿನ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ದಯಾನಂದರೆಡ್ಡಿ, ನಾವು ಬೆಂಗಳೂರ್ ರೂರಲ್ ಆದ್ರು ದುಡ್ಡಲ್ಲಿ ‘ಮುಂಗಾರು ಮಳೆ’ಯನ್ನೇ ಹರಿಸ್ತೀವಿ ಅನ್ನುವ ಫಿಲಂ ಪ್ರಡ್ಯೂಸರ್ ಜೆಡಿಎಸ್ ನ ಕೃಷ್ಣಪ್ಪ, “ನಾವೂ ಅಷ್ಟೇಯಾ, ನಿಮಗಿಂತ ಏನೂ ಕಡಿಮೆ ಇಲ್ಲ” ಅನ್ನುತ್ತಿರುವ ಡಿ.ಕೆ. ಶಿವಕುಮಾರ ಸೋದರ ಸಂಬಂಧಿ ರವಿ, ಕಳೆದ ಬಾರಿ ಮೈಸೂರಿಂದ ಚಿತ್ರದುರ್ಗಕ್ಕೆ ಹೋಗಿ ‘ಝಣಝಣ’ ಅಂತ ಚುನಾವಣೆ ಗೆದ್ದು, ಈಗಲೂ ಅದರ ಪುನರಾವರ್ತನೆ ತಾಲೀಮಿನಲ್ಲಿರುವ ರಘು ಆಚಾರ್, ಕೋಲಾರದಲ್ಲಿ ಮತ್ತೊಬ್ಬ ಫಿಲಂ ಪ್ರಡ್ಯೂಸರ್ ಮನೋಹರ್, ಮಂಡ್ಯದಲ್ಲಿ ‘ನಂಗಾನಾಚ್’ ಖ್ಯಾತಿಯ ಎಲ್.ಆರ್. ಶಿವರಾಮೇಗೌಡ, ಮೈಸೂರಲ್ಲಿ ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್, ಬಳ್ಳಾರಿಯಲ್ಲಿ ಕೊಂಡಯ್ಯ, ಹಾಸನದಲ್ಲಿ ಪಟೇಲ್ ಶಿವರಾಮ್ ಅವರಂಥ ಪ್ರಭಾವಿ ಧನಿಕರಿಂದಾಗಿ ಚುನಾವಣೆ ಬೆಲೆ ಸಿಕ್ಕಾಪಟ್ಟೆ ಏರಿದೆ.

ಕಳೆದ ಬಾರಿ ಒಂದು ವೋಟು 20 ರಿಂದ 25 ಸಾವಿರ ರುಪಾಯಿವರೆಗೂ ಬಿಕರಿ ಆಗಿತ್ತು. ಈಗ ಕಾಲ ಸಾಕಷ್ಟು ಮುಂದಕ್ಕೆ ಬಂದಿದೆ. ಹೀಗಾಗಿ ಬೆಲೆಯೂ ಅಷ್ಟೇ ಮೇಲಕ್ಕೆ ಹೋಗಿದೆ. ಕೊಡುವ ಕೈಗಳು ಮತ್ತು ಬೇಡುವ ಕೈಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಪಾಪ, ವೋಟ್ ಮಾಡುವವರು ಯಾರು? ಅವರ ಕಷ್ಟ ಏನು ಅನ್ನೋದನ್ನೂ ಅರ್ಥ ಮಾಡ್ಕೊಬೇಕು. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪುರಸಭೆ, ಪಟ್ಟಣಸಭೆ, ನಗರಸಭೆ, ಪಾಲಿಕೆ ಸದಸ್ಯರು ಈಗ ವೋಟ್ ಮಾಡುತ್ತಿದ್ದಾರೆ. ಇವರು ಕೂಡ ತಮ್ಮ ಶಕ್ತಿಗೆ ಅನುಗುಣವಾಗಿ ಚುನಾವಣೆಯಲ್ಲಿ ಖರ್ಚು ಮಾಡಿಯೇ ಗೆದ್ದು ಬಂದಿರುವವರು. ಇವರಲ್ಲಿ ತೆಗೆದುಕೊಳ್ಳುವವರೂ ಇದ್ದಾರೆ, ತೆಗೆದುಕೊಳ್ಳದವರೂ ಇದ್ದಾರೆ. ಆದರೆ ತೆಗೆದುಕೊಳ್ಳುವವರ ಸಂಖ್ಯೆಯೇ ಹೆಚ್ಚು ಇರುವುದರಿಂದ ‘ವೋಟ್ ರೇಟ್’ ಮೀಟರ್ ಏರುತ್ತಿದೆ. ಸದ್ಯದ ಮಾರುಕಟ್ಟೆ ದರ 25 ರಿಂದ 40 ಸಾವಿರ ರುಪಾಯಿ. ಚುನಾವಣೆ ದಿನ ಸಮೀಪಿಸಿದಂತೆಲ್ಲ ಹರಾಜು ದರ ಹೆಚ್ಚುವ ನಿರೀಕ್ಷೆ ಇದ್ದು, ಇದರ ಜತೆ ದೊಡ್ಮನೆ ಘನತೆ ತಳಕು ಹಾಕಿಕೊಂಡಿದೆ!

Leave a Reply