ಗೃಹ ಸಚಿವ ಪರಮೇಶ್ವರ್ ಗೆ ರೋಪು ಹಾಕಿ ಸ್ಕೋಪು ತೆಗೆದುಕೊಂಡ ಮಾರುತಿ ಮಾನ್ಪಡೆ

ಡಿಜಿಟಲ್ ಕನ್ನಡ ಟೀಮ್

ಕರ್ತವ್ಯ ಹಾಗೂ ಸಮಯಪ್ರಜ್ಞೆಗಿಂತ ಪ್ರತಿಷ್ಠೆಯೇ ಮೇಲಾದರೇ ಮರ್ಯಾದೆ ಹೇಗೆ ಮಣ್ಣುಪಾಲಾಗುತ್ತದೆ ಎಂಬುದಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ರೈತ ಮುಖಂಡ ಮಾರುತಿ ಮಾನ್ಪಡೆ ನಡುವೆ ಬುಧವಾರ ನಡೆದಿರುವ ಬೀದಿಜಗಳವೇ ಸಾಕ್ಷಿ.

ಬೆಂಗಳೂರಿನ ವಿಕಾಸಸೌಧದಲ್ಲಿ ಈ ಇಬ್ಬರು ಮುಖಂಡರು ಬಹಿರಂಗವಾಗಿ ಕಿತ್ತಾಡಿಕೊಂಡಾಗ ಅವರು ಅಲಂಕರಿಸಿರುವ ಹುದ್ದೆಯ ಘನತೆಯಾಗಲಿ, ಗೌರವವಾಗಲಿ ಅಡ್ಡ ಬಾರದೇ ಹೋದದ್ದು ಕೂಡ ಸಾರ್ವಜನಿಕ ಜೀವನದ ದುರಂತ.

ಐದು ತಿಂಗಳ ಹಿಂದೆ ಬೆಂಗಳೂರಿನ ಹೆಬ್ಬಗೋಡಿಯ ಸಾಫ್ಟ್ ವೇರ್ ಎಂಜಿನಿಯರ್ ಶರಣಕುಮಾರ್ ಕಾರಂಜೆ ಎಂಬುವವರನ್ನು ವಿವಾಹವಾಗಿದ್ದ ಬೀದರ್ ನ ಹೊಡಲ್ ಗ್ರಾಮದ ಯುವತಿ ವಿದ್ಯಾವತಿ ತಿಂಗಳ ಹಿಂದೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ವರದಕ್ಷಿಣೆಗಾಗಿ ಆಕೆ ಕೊಲೆ ಮಾಡಲಾಗಿದೆ ಎಂಬುದು ಪೋಷಕರ ದೂರು. ಆದರೆ ಇದು ಕೊಲೆಯಲ್ಲ, ಆತ್ಮಹತ್ಯೆ ಅಂತ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಹಿಂಗಾಗಿ ಪೊಲೀಸರು ಕೇಸ್ ಮುಚ್ಚಿ ಹಾಕುತ್ತಿದಾರೆ ಅಂತ ಗೃಹ ಸಚಿವರಿಗೆ ದೂರು ನೀಡಲು ಅವರ ಕಚೇರಿ ಮುಂದೆ ಮಾನ್ಪಡೆ ಬೆಳಗ್ಗೆಯಿಂದ ಕಾದು ಕುಳಿತಿದ್ದರು. ಆದರೆ ಎರಡು ತಾಸು ಕಳೆದರೂ ಸಚಿವರ ಸಂದರ್ಶನ ಸಿಕ್ಕಿಲ್ಲ. ಬಹು ಹೊತ್ತಿನ ನಂತರ ಕಚೇರಿಯಿಂದ ಹೊರಬಂದ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಕಾಂಗ್ರೆಸ್ ಕಚೇರಿಯತ್ತ ಹೊರಟಿದ್ದಾರೆ. ಒಂದೈದು ನಿಮಿಷ ಮಾತಾಡಬೇಕಿತ್ತು ಅಂದರೆ ತಾವು ಬ್ಯೂಸಿ, ಬೇಕಿದ್ದರೆ ಕಾಂಗ್ರೆಸ್ ಕಚೇರಿಗೆ ಬನ್ನಿ ಮಾತಾಡೋಣ ಅಂದಿದ್ದಾರೆ.

ನಾನ್ಯಾಕ್ರೀ ಕಾಂಗ್ರೆಸ್ ಕಚೇರಿಗೆ ಬರ್ಲಿ. ನಾನು ಕಮ್ಯುನಿಸ್ಟ್ ಲೀಡರ್. ಅಲ್ಲಿಗೆ ಬರಾಕೆ ಆಗಲ್ಲ. ನೀವು ಮೊದಲು ಸರಕಾರ. ನಂತರ ಪಕ್ಷ. ಹೀಗಾಗಿ ಮೊದಲು ನೀವು ನನ್ನ ಆಹವಾಲು ಕೇಳಲೇಬೇಕು ಅಂತ ಹಠ ಹಿಡಿದಿದ್ದಾರೆ. ಈ ಹಂತದಲ್ಲಿ ಇಬ್ಬರ ನಡುವೆ ಜೋರು ಧ್ವನಿಯಲ್ಲಿ ದೊಡ್ಡ ಗಲಾಟೆ ನಡೆದಿದೆ. ವಿಕಾಸಸೌಧದ ಸಿಬ್ಬಂದಿ ಹಾಗೂ ಪಬ್ಲಿಕ್ ಎದುರಿಗೇ. ಎಲ್ಲ ಮುಗಿದ ಮೇಲೆ ಪರಮೇಶ್ವರ್ ಅವರನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ.

ಪರಮೇಶ್ವರ್ ಅವರು ಮೊದಲೇ ಈ ಕೆಲಸ ಮಾಡಿದಿದ್ದರೆ ಸಾರ್ವಜನಿಕರ ಎದಿರು ರೋಪು ಹಾಕಿಸಿಕೊಳ್ಳುವುದು ಹಾಗೂ ಮಾನ್ಪಡೆ ಸ್ಕೋಪು ತೆಗೆದುಕೊಳ್ಳುವುದು ತಪ್ತಿತ್ತು. ಆದರೆ ಸಮಯ ಮತ್ತು ಕರ್ತವ್ಯಪ್ರಜ್ಞೆ ಕೆಲಸ ಮಾಡಬೇಕಲ್ಲಾ..!

Leave a Reply