‘ಜಾಗ್ವಾರ್’ ಗೆ ತಿಳಿದಿರಬೇಕಾದ ಏರಿಳಿತದ ಹಾದಿ ಯಾವುದು ಗೊತ್ತೇ..?!

ಡಿಜಿಟಲ್ ಕನ್ನಡ ಟೀಮ್

ಮತ್ತೊಬ್ಬ ರಾಜಕಾರಣಿ ಪುತ್ರ ಸಿನಿಮಾ ಅಭಿನಯಕ್ಕೆ ಇಳಿದಿದ್ದಾರೆ.

ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್’ ಸಿನಿಮಾ ಚಿತ್ರೀಕರಣ ಮುಹೂರ್ತ ಬೆಂಗಳೂರಿನಲ್ಲಿ ಬುಧವಾರ ಅದ್ದೂರಿಯಾಗಿ ನೆರವೇರುವುದರೊಂದಿಗೆ, ರಾಜಕಾರಣಿಗಳ ಮಕ್ಕಳ ಸಿನಿಮಾ ಯಾನ ಮುಂದುವರಿದಿದೆ.

ಐದು ತಿಂಗಳ ಹಿಂದಷ್ಟೇ ಇದೇ ಜೆಡಿಎಸ್ ನ ಮತ್ತೊಬ್ಬ ಮುಖಂಡ, ಮಾಜಿ ಸಚಿವ ಚಲುವರಾಯಸ್ವಾಮಿ ಪುತ್ರ ಸಚಿನ್ ನಟಿಸುತ್ತಿರುವ ‘ಹ್ಯಾಪಿ ಬರ್ತ್ ಡೇ’ ಸಿನಿಮಾ ಸೆಟ್ಟೇರಿತ್ತು. ಸರಿಸುಮಾರು ಇದೇ ಸಂದರ್ಭದಲ್ಲಿ ಮತ್ತೊಬ್ಬ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್.ಎಂ. ರೇವಣ್ಣ ಅವರ ಪುತ್ರ ಅನುಪ್ ನಟನೆಯ ಚಿತ್ರ ‘ಲಕ್ಷ್ಮಣ’ ಚಿತ್ರೀಕರಣ ಶುರುವಾಗಿದೆ. ಇದೀಗ ಕುಮಾರಸ್ವಾಮಿ ಪುತ್ರನ ಸರದಿ.

ಜಾಗ್ವಾರ್ ಅದ್ದೂರಿ ಮುಹೂರ್ತಕ್ಕೆ ರಾಜಕೀಯ ಹಾಗೂ ಸಿನಿಮಾರಂಗದ ಘಟಾನುಘಟಿಗಳ ದಂಡೇ ನೆರೆದಿತ್ತು. ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ವಂಶದ ಕುಡಿ ಅಂದಮೇಲೆ ಕೇಳಬೇಕೆ? ಎಲ್ಲ ಟಿವಿ ಚಾನೆಲ್ ಗಳಲ್ಲೂ ಇದರದ್ದೇ ನೇರಪ್ರಸಾರ. ಅವರು ಸಿನಿಮಾ ದೆಸೆಯಿಂದ ತಮ್ಮ ಹೆಸರನ್ನು ನಿಖಿಲ್ ಗೌಡ ಬದಲಿಗೆ ನಿಖಿಲ್ ಕುಮಾರ್ ಎಂದು ಬದಲಿಸಿಕೊಂಡಿರುವುದು ಒಂದು ವಿಶೇಷ.

ಇರಲಿ, ಆ ವಿಷಯ ಪಕ್ಕಕ್ಕೆ. ಇಂಥ ಎಲ್ಲ ಅಬ್ಬರಗಳ ನಡುವೆ ಕೇಳಿಕೊಳ್ಳಬೇಕಾದ ಪ್ರಶ್ನೆ, ಹೀಗೆ ಸಿನಿಮಾ ರಂಗಕ್ಕೆ ಬಂದ ರಾಜಕಾರಣಿಗಳ ಮಕ್ಕಳು ಅದೆಷ್ಟು ಕಾಲ ನಾಯಕ ನಟ-ನಟಿಯರಾಗಿಯೇ ಉಳಿದುಕೊಂಡ ಉದಾಹರಣಿಗಳು ಸಿಗುತ್ತವೆ ಎಂಬುದು. ಹಿಂದೆ ಮಾಜಿ ಮುಖ್ಯಮಂತ್ರಿ ಗುಂಡೂರಾಯರ ಪುತ್ರ ರಾಜೇಶ್ ಗುಂಡೂರಾವ್ ಹಾಗೂ ಮಾಜಿ ಸಚಿವ ಕೆ.ಎಚ್. ಶ್ರೀನಿವಾಸ್ ಅವರ ಪುತ್ರಿ ‘ಹೂವು ಹಣ್ಣು’ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿದ್ದರು. ಅದೊಂದೇ ಚಿತ್ರ. ಮುಂದೆ ಅವರ ಸುದ್ದಿಯೇ ಇಲ್ಲ.

ಇದ್ದಿದ್ದರಲ್ಲಿ ಒಂದೆರಡು ಸಿನಿಮಾಗಳಲ್ಲಿ ಹೆಸರು ಮಾಡಿದವರು ಎಂದರೆ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ ಕುಮಾರ್ ಬಂಗಾರಪ್ಪ.

ಇನ್ನು ರಾಷ್ಟ್ರದ ಮಟ್ಟಿಗೆ ನೋಡುವುದಾದರೆ ಬಿಹಾರದ ಜನಪ್ರಿಯ ರಾಜಕಾರಣಿ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಬಾಲಿವುಡ್ ನಲ್ಲಿ ಟ್ರೈ ಕೊಟ್ಟರು. ಆದರೆ ಯಶಸ್ಸು ಕಾಣಲು ಆಗಲಿಲ್ಲ.
ಯಶಸ್ಸಿನ ಮಾದರಿ ಗುರುತಿಸಬೇಕೆಂದರೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಮಗ ರಿತೇಶ್ ಮುಖ್ ಸಾಧನೆ ಗಮನಿಸಬಹುದು. ತಂದೆಯ ಐಡೆಂಟಿಟಿಯಿಂದ ಹೊರಗೆ ನಿಂತು ನಟರಾಗಿ ಅವರು ಹೆಸರು ಮಾಡಿದ್ದಾರೆ. ಇದೀಗ ಕುಮಾರಸ್ವಾಮಿ ಪುತ್ರ ನಿಖಿಲ್ ಕಣಕ್ಕೆ ಇಳಿದಿದ್ದಾರೆ. ಅವರು ಯಾವ ಗುಂಪಿಗೆ ಸೇರುತ್ತಾರೆ ಎಂಬುದನ್ನು ಕಾದು ನೋಡೋಣ.

Leave a Reply