ಸಿಬಿಐ ಮೇಲೆ ದೋಷಾರೋಪಣೆ, ಮೋದಿ- ಕೇಜ್ರಿವಾಲ್ ಇಬ್ರೂ ಒಂದೇನೇ!

ಡಿಜಿಟಲ್ ಕನ್ನಡ ಟೀಮ್

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆಪ್ ಬಳಗವು ‘ರಾಜಕೀಯ ದ್ವೇಷ’ದ ರಾಗ ಹಾಡಿಕೊಂಡಿರುವಾಗಲೇ, ಬುಧವಾರ ಸಿಬಿಐ, ಕೇಜ್ರಿವಾಲರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಭ್ರಷ್ಟಾಚಾರ ಸಂಬಂಧವಾಗಿ ವಿವಿಧ ಕಲಮುಗಳ ಅಡಿಯಲ್ಲಿ ರಾಜೇಂದ್ರ ಕುಮಾರ್ ವಿರುದ್ಧ ಪ್ರಕರಣವನ್ನೂ ದಾಖಲಿಸಿರುವುದಾಗಿ ತನಿಖಾ ಸಂಸ್ಥೆ ಹೇಳಿದೆ.

ಈಗ ಬಹಳ ಆಸಕ್ತಿಕರವಾಗಿ ಕಾಣುತ್ತಿರುವುದು ಕೇಜ್ರಿವಾಲರು ಸಿಬಿಐ ವಿರುದ್ಧ ಮಾಡುತ್ತಿರುವ ದೋಷಾರೋಪಣೆ. ಆಗೀಗ ಬೀದಿಯಲ್ಲಿ ಕಾಣಬಹುದಾದ ರೋಷಾವೇಶದ ಹೊಡೆದಾಟದಂತೆಯೇ ಕಾಣುತ್ತಿದೆ. ‘ಏನ್ ಬೇಕಾದ್ರೂ ಮಾಡ್ಕೋಳೋ, ನಾನ್ ಕೇರ್ ಮಾಡಲ್ಲ’ ಅಂತ ಅವಾಜ್ ಹಾಕಿ ನಂತ್ರ ‘ಯಾಕೋ ಹಿಂಗೆಲ್ಲ ಮಾಡ್ತೀಯ’ ಅಂತ ದೂರ್ತಾರಲ್ಲ, ಹಂಗಿದೆ ಈ ಪ್ರಹಸನ.

ನರೇಂದ್ರ ಮೋದಿಯವರಿಗೆ ತಮ್ಮನ್ನು ರಾಜಕೀಯವಾಗಿ ಎದುರಿಸುವುದಕ್ಕೆ ಆಗದೇ ಸಿಬಿಐ ಛೂ ಬಿಟ್ಟಿದ್ದಾರೆ ಎಂಬುದು ಕೇಜ್ರಿವಾಲರ ಆರೋಪ. ತಮಾಷೆ ಎಂದರೆ, ಯಾವ ನೇತಾರನ ಮೇಲೆ ಸಿಬಿಐ ಕ್ರಮಕ್ಕೆ ಮುಂದಾದರೂ ದಾಳಿಗಾದವರು ಇದೇ ರೀತಿಯ ಆರೋಪವನ್ನೇ ಮಾಡುತ್ತಾರೆ.

ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಕೊನೆಯಲ್ಲಿ ಅಬ್ಬರಿಸಿದ್ದು ಹೀಗಿತ್ತು- ‘ಮೋದಿಯವರೇ… ಹೇಳ್ತೀನಿ ಕೇಳಿ.. ಸಿಬಿಐ ಇಟ್ಟುಕೊಂಡು ಉಳಿದವರನ್ನು ಹೆದರಿಸಿದಂತೆ ನನ್ನನ್ನು ಬೆದರಿಸುವುದಕ್ಕೆ ಆಗುವುದಿಲ್ಲ. ನಾನು ಯಾವ ಮಣ್ಣಿನಿಂದ ತಯಾರಾಗಿದ್ದು ಅಂತ ನಿಮಗೆ ಗೊತ್ತಿಲ್ಲ. ನಾನು ಕೊನೆಯ ಉಸಿರಿರುವವರೆಗೂ ಹೆದರಲಾರೆ.. ದೇಶಕ್ಕಾಗಿ ಸಾಯುತ್ತೇನೆ’ ಎಂದೆಲ್ಲ ಭಾವಾವೇಶ ತೋರಿದರು.

ಇದಕ್ಕೆ ಪ್ರತಿಯಾಗಿ ಬಿಜೆಪಿಯ ವೆಂಕಯ್ಯನಾಯ್ಡು ಅವರು, ‘ಎಲ್ಲವಕ್ಕೂ ಮೋದಿಯವರನ್ನು ನಿಂದಿಸುವುದು ಫ್ಯಾಷನ್ ಆಗಿಬಿಟ್ಟಿದೆ. ಆದರೆ ಸಿಬಿಐ ಎಂಬುದು ಸ್ವಾಯತ್ತ ಸಂಸ್ಥೆ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ’ ಅಂದರು.

ಆದರೆ…

ಇದೇ ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೂ ಮುಂಚೆ 2013ರಲ್ಲಿ ಥೇಟು ಕೇಜ್ರಿವಾಲರಂತೆಯೇ ಸಿಬಿಐ ಅನ್ನು ದೂರುತ್ತ, ಅಂದಿನ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದರು. ಮೋದಿ ಸ್ಟೈಲು ಮೋದಿಗೆ, ಕೇಜ್ರಿವಾಲ್ ಸ್ಟೈಲು ಕೇಜ್ರಿವಾಲ್ ಗೆ ಅನ್ನೋದು ಬಿಟ್ಟರೆ ಇಬ್ಬರಿಂದಲೂ ಉದುರಿದ ಡೈಲಾಗುಗಳಲ್ಲಿ ಅಂಥ ವ್ಯತ್ಯಾಸವೇನೂ ಇಲ್ಲ.

ಎದುರಿಗಿದ್ದ ಜನರನ್ನು ಉದ್ದೇಶಿಸಿ ಮೋದಿ ಹೇಳಿದ್ದರು, ‘ಈ ಸಿಬಿಐ ಇದೆಯಲ್ಲ, ಇದು ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್.. ದೆಹಲಿಯವರೇ ಕೇಳಿ, ನನಗೆ ಸಿಬಿಐ ತೋರಿಸಿ ಹೆದರಿಸಬೇಡಿ!’ ಅಂತೆಲ್ಲ ಮಾತನಾಡಿದ್ದ ನರೇಂದ್ರ ಮೋದಿಯವರು, ಥೇಟ್ ಕೇಜ್ರಿವಾಲರಂತೆಯೇ ರಾಜ್ಯ ಸರ್ಕಾರಗಳನ್ನು ನಿಯಂತ್ರಿಸುವುದಕ್ಕೆಂದೇ ಕೇಂದ್ರವು ಸಿಬಿಐ ಅನ್ನು ಬಳಸಿಕೊಳ್ಳುತ್ತಿದೆ ಅಂತ ಪ್ರತಿಪಾದಿಸಿದ್ದರು. ಗುಜರಾತಿನ ಅಧಿಕಾರಿಗಳಿಗೆ, ಗುಜರಾತಿನ ನೇತಾಗಳಿಗೆ ಸಿಬಿಐ ದೊಡ್ಡಮಟ್ಟದಲ್ಲಿ ತೊಂದರೆ ಕೊಡುತ್ತಿದೆ ಅಂತಲೂ ಆರೋಪಿಸಿದ್ದರು.

ಇವರಿಬ್ಬರ ಮಾತು ಕೇಳಿದರೆ ಸಿಬಿಐ ಮತ್ತು ರಾಜಕಾರಣಿಗಳು ಇಬ್ಬರ ಜಾಯಮಾನವೂ ಅರ್ಥವಾಗುತ್ತದೆ.

2 COMMENTS

  1. ಈ ವಿಷಯವನ್ನು ಈ ದಿಕ್ಕಿನಲ್ಲಿ ಯೋಚಿಸಿರಲಿಲ್ಲ. ಆದರೆ ಒಂದಂತೂ ತಿಳಿದಿತ್ತು. ಹಿಂದೆಲ್ಲ, CBI ಅನ್ನು ಹೀಯಾಳಿಸುತ್ತಾ ಬಂದ BJP ಮುಂದೊಂದು ದಿನ ಗೆದ್ದು ಗದ್ದುಗೆ ಏರಿದಾಗ CBI ಮಾಡುವ ದಾಳಿಯನ್ನು ಹೇಗೆ ಸಮರ್ಥಿಸುತ್ತಾರೆಂದು? ಅದಕ್ಕೆ ಉತ್ತರ ತಕ್ಷಣಕ್ಕೆ ಸಿಗಲಿಕ್ಕಿಲ್ಲ.
    ಆದರೆ CBI ಅಸ್ತ್ರವನ್ನು ಕಾಂಗ್ರೆಸ್ ನವರು ಬಲುವಾಗಿಯೇ ಉಪಯೋಗಿಸಿದ್ದಾರೆಂಬುದು ಸುಳ್ಳಲ್ಲ.

    ನೀವೂ ಗಮನಿಸಿರುವ ಹಾಗೆ ಮೋದಿಯ ಸ್ಟೈಲ್ ಅನ್ನು ಕೇಜ್ರಿವಾಲರ ಸ್ಟೈಲ್ ಗೆ ಹೋಲಿಸಿದರೆ ಕೇಜ್ರಿವಾಲರದು ಕೊಂಚ ಅತಿಯಾಯ್ತು ಅಂತಲೇ ಹೇಳಬೇಕಲ್ಲವೇ?

  2. ಮೋದಿ ಹಾಗೂ ಕ್ರೇಜಿವಾಲ್ ಇವರಿಬ್ಬರನ್ನು ಹೋಲಿಸಿ ನೋಡುವುದು ಸರಿಯಲ್ಲ, ಹಾಗೆ ಹೋಲಿಸಿದರೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಭಿನ್ನವಿಲ್ಲ ಎಂದೇ ಭಾವಿಸಿದಂತಾಗುತ್ತದೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಸಾಕಷ್ಟು ದುರುಪಯೋಗ ಆಗಿದೆ. ಆದರೆ ಮೋದಿಜೀಯೂ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಜತೆಗೆ ಹಾಗೆ ಅನ್ನಿಸುವುದೂ ಇಲ್ಲ. ಹೀಗಾಗಿ ಪೂರ್ವಗ್ರಹ ಬಿಡಿ, ವಸ್ತುಸ್ಥಿತಿ ಅವಲೋಕಿಸಿ ಏನಂತೀರಿ?

Leave a Reply