ಸ್ನ್ಯಾಪ್ ಡೀಲ್ ಮಾರ್ಗ ಎಲ್ಲರೂ ತುಳಿಯಲಿ ಅಂತರ್ಜಾಲ ಮಾರುಕಟ್ಟೆಯಲ್ಲಿ ಕನ್ನಡ ಬೆಳಗಲಿ

 

ಚೈತನ್ಯ ಹೆಗಡೆ

ಅಂತರ್ಜಾಲದ ವಾಣಿಜ್ಯ ಮಾರುಕಟ್ಟೆ ಸ್ನ್ಯಾಪ್ ಡೀಲ್, ಗ್ರಾಹಕರ ಸೇವೆಯಲ್ಲಿ ಒಂದು ಮಾದರಿ ಹೆಜ್ಜೆ ಇರಿಸಿದೆ. 2016ರ ಜನವರಿ 26ರ ಒಳಗಾಗಿ ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡವೂ ಸೇರಿದಂತೆ ಭಾರತದ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ತನ್ನ ಸೇವೆಯನ್ನು ಕೊಡಲಿದೆ. ಮೊದಲ ಹಂತವಾಗಿ ಅದು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ವಾಣಿಜ್ಯ ಸೇವೆ ಆರಂಭಿಸಿದೆ.

ಅರ್ಥಾತ್ ಮುಂದಿನ ವರ್ಷದ ಮಧ್ಯಭಾಗದಿಂದ ಕನ್ನಡಿಗನೊಬ್ಬ ಸ್ನ್ಯಾಪ್ ಡೀಲ್ ಆ್ಯಪ್ ಉಪಯೋಗಿಸಿ ಸ್ಮಾರ್ಟ್ ಫೋನ್ ಮೂಲಕ ಏನಾದರೂ ಖರೀದಿಸುವುದಿದ್ದರೆ ಕನ್ನಡದಲ್ಲೇ ವ್ಯವಹರಿಸಬಹುದು. ಹಾಗೆಯೇ ಗುಜರಾತಿ, ತಮಿಳು, ಮರಾಠಿ, ಬೆಂಗಾಳಿ, ಮಲಯಾಳಂ, ಓರಿಯಾ, ಅಸ್ಸಾಮಿ, ಪಂಜಾಬಿ ಈ ಎಲ್ಲ ಭಾಷೆಗಳ ಜನರೂ ಸ್ನ್ಯಾಪ್ ಡೀಲ್ ಕಿರು ತಂತ್ರಾಂಶದಲ್ಲಿ ತಮಗೆ ಬೇಕಿರುವ ವಸ್ತುಗಳ ವಿವರಗಳನ್ನು ಅವರದ್ದೇ ತಾಯ್ನುಡಿಯಲ್ಲಿ ಪಡೆಯಬಹುದು.

ಇದು ತುಂಬ ಮಹತ್ವದ ನಡೆಯೇ ಸರಿ. ಏಕೆಂದರೆ ‘ಡಿಜಿಟಲ್ ಇಂಡಿಯಾ’ ಕನಸು ಕಾಣುತ್ತಿರುವ ನಾವು, ಕೇವಲ ತಂತ್ರಜ್ಞಾನವೊಂದೇ ಎಲ್ಲವನ್ನೂ ಬದಲಿಸಿಬಿಡುತ್ತದೆಂಬ ಉತ್ಸಾಹದಲ್ಲಿದ್ದೇವೆ. ಆದರೆ ಆ ತಂತ್ರಜ್ಞಾನವು ಪ್ರಾದೇಶಿಕ ಭಾಷೆಗಳಲ್ಲಿ ಇರದಿದ್ದರೆ ಹೇಗೆ ತಾನೇ ಬಳಕೆದಾರರನ್ನು ತೃಪ್ತಿ ಪಡಿಸುವುದಕ್ಕೆ ಸಾಧ್ಯ? ಉದಾಹರಣೆಗೆ, ಎ ಟಿ ಎಂ ತಂತ್ರಜ್ಞಾನವು ಬ್ಯಾಂಕ್ ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಒತ್ತಡವನ್ನು ತಪ್ಪಿಸಿ, ಗ್ರಾಹಕ- ಬ್ಯಾಂಕ್ ಉದ್ಯೋಗಿಗಳಿಗಿಬ್ಬರಿಗೂ ಅನುಕೂಲ ಮಾಡಿಕೊಡುವುದನ್ನು ಉದ್ದೇಶಿಸಿದೆ ಅಲ್ಲವೇ? ಆದರೆ ಕನ್ನಡಿಗನೊಬ್ಬ ಎಷ್ಟೇ ದೊಡ್ಡ ಮೊತ್ತವನ್ನು ಬ್ಯಾಂಕ್ ನಲ್ಲಿ ಇರಿಸಿದ್ದರೂ ಇಂಗ್ಲಿಷ್ ಬಾರದಿದ್ದರೆ ಆತ ನೆಮ್ಮದಿ ಕಳೆದುಕೊಳ್ಳಬೇಕಾದ ದಯನೀಯತೆ ಇದೆ. ನಮ್ಮೆಲ್ಲರ ಅನುಭವಕ್ಕೂ ಬಂದಿರುವಂತೆ ಎ ಟಿ ಎಂ ವ್ಯವಹಾರದಲ್ಲಿ ಕನ್ನಡ ಕಡೆಗಣನೆಯಾಗಿದೆ, ಕನ್ನಡದ ಆಯ್ಕೆ ಇದ್ದರೂ ಅದು ಹೆಸರಿಗಷ್ಟೇ ಎಂಬಂತಿರುತ್ತದೆ. ಇದು ಗ್ರಾಹಕನಿಗೆ ಮಾಡುವ ಮೋಸ.

ಈಗ ಇದನ್ನೇ ಇ- ಕಾಮರ್ಸ್ ಗೆ ಅನ್ವಯಿಸೋಣ. ಇ- ವಾಣಿಜ್ಯದ ವಲಯವು ಭರದಿಂದ ಬೆಳೆಯುತ್ತಿದೆ, ಎಲ್ಲರ ಕೈಗೂ ಸ್ಮಾರ್ಟ್ ಫೋನ್ ಗಳು ಬಂದಿರುವುದರಿಂದ ವ್ಯವಹಾರದ ವ್ಯಾಪ್ತಿ ಹಿಗ್ಗಿದೆ ಎಂದೆಲ್ಲ ವರದಿಗಳನ್ನು ಓದುತ್ತಿರುತ್ತೇವೆ. ಆದರೆ, ತನ್ನ ಕೈಯಲ್ಲಿರುವ ಸ್ಮಾರ್ಟ್ ಸಾಧನದಿಂದ ವಸ್ತುಗಳನ್ನು ಪಡೆಯುವ ಗ್ರಾಹಕನಿಗೆ ಆತನ ಭಾಷೆಯಲ್ಲೇ ಸೇವೆ ಒದಗಿಸಲಾಗುತ್ತಿದೆಯಾ ಎಂದರೆ ನಕಾರಾತ್ಮಕ ಉತ್ತರವೇ ಬರುತ್ತಿತ್ತು. ಗ್ರಾಹಕ ಆಂಗ್ಲಭಾಷೆಗೆ ಒಗ್ಗಿಕೊಂಡು ವ್ಯವಹಾರ ನಡೆಸಬೇಕು. ದುಡ್ಡು ಕೊಟ್ಟು ವಸ್ತುಗಳನ್ನು ಪಡೆಯುವವನಿಗೆ ತನಗೆ ಖಚಿತವಾಗಿ ಅರ್ಥವಾಗುವ ತಾಯ್ನುಡಿಯಲ್ಲಿ ವ್ಯವಹಾರದ ವಿವರಗಳನ್ನು ಪಡೆಯುವ ಹಕ್ಕಿಲ್ಲವಾದರೆ, ಅದು ಗುಲಾಮೀತನವಲ್ಲದೇ ಇನ್ನೇನು?

ಈ ನಿಟ್ಟಿನಲ್ಲಿ ಸ್ನ್ಯಾಪ್ ಡೀಲ್, ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ನೀಡಲಿರುವ ಕ್ರಮ ಸ್ವಾಗತಾರ್ಹ. ಹಾಗಂತ ಇದನ್ನು ಉಪಕಾರ ಎಂದೇನೂ ಭಾವಿಸಬೇಕಿಲ್ಲ. ಯಾವುದೇ ವಸ್ತು- ಸೇವೆಯನ್ನು ಒಬ್ಬ ಕನ್ನಡಿಗನೋ, ಮಲಯಾಳಿಯೋ, ಪಂಜಾಬಿಯೋ ಹಣ ತೆತ್ತು ಪಡೆದುಕೊಳ್ಳುತ್ತಿರುವಾಗ ಅದಕ್ಕೆ ಸಂಬಂಧಿಸಿದ ವ್ಯವಹಾರ ತನ್ನದೇ ಭಾಷೆಯಲ್ಲಿರಲಿ ಎಂದು ಬಯಸುವುದು ಕೋರಿಕೆಯಾಗುವುದಿಲ್ಲ; ಆತನ ಹಕ್ಕಾಗುತ್ತದೆ. ಹೀಗಾಗಿ ಸ್ನ್ಯಾಪ್ ಡೀಲ್ ಮಾರ್ಗವನ್ನೇ ಅನುಸರಿಸಿ ಉಳಿದೆಲ್ಲ ಅಂತರ್ಜಾಲ ಆಧರಿತ ವಾಣಿಜ್ಯ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು ಕನ್ನಡದಲ್ಲಿ ಸೇವೆ ನೀಡಲೇಬೇಕೆಂಬ ಒತ್ತಡ ರೂಪುಗೊಳ್ಳಬೇಕಿದೆ.

ಸ್ನ್ಯಾಪ್ ಡೀಲ್ ಇಂಥ ಕ್ರಮಕ್ಕೆ ಮುಂದಾಗಿರುವುದರಲ್ಲೂ ವ್ಯವಹಾರ ಚಾತುರ್ಯವಿದೆ. ಸ್ನ್ಯಾಪ್ ಡೀಲ್ ಸಹ ಸಂಸ್ಥಾಪಕ ರೋಹಿತ್ ಬನ್ಸಲ್ ಅವರು ಈ ನಿರ್ಧಾರದ ಬಗ್ಗೆ ಹೀಗೆ ಹೇಳುತ್ತಾರೆ- ‘ಭಾರತದ ಭಾಷಾ ವೈವಿಧ್ಯ ನಮ್ಮ ಮುಂದೆ ಅಗಾಧ ಅವಕಾಶಗಳನ್ನು ಹರವಿಟ್ಟಿದೆ. ಬಳಕೆದಾರರು ಉತ್ಪನ್ನಗಳ ಬಗ್ಗೆ ತಮ್ಮದೇ ಭಾಷೆಯಲ್ಲಿ ವಿವರಗಳನ್ನು ಪಡೆಯುವುದಕ್ಕೆ ಆಶಿಸುತ್ತಿದ್ದಾರೆ. ಬಳಕೆದಾರರು ನಿರಂತರವಾಗಿ ಈ ಬಗ್ಗೆ ನೀಡುತ್ತಿದ್ದ ಪ್ರತಿಕ್ರಿಯೆಗಳೇ ಬಹುಭಾಷೆಗಳಲ್ಲಿ ಸೇವೆ ನೀಡುವ ನಮ್ಮ ನಿರ್ಧಾರಕ್ಕೆ ಕಾರಣ. ಇದರಿಂದ ಡಿಜಿಟಲ್ ವಾಣಿಜ್ಯ ಕ್ರಾಂತಿಗೆ ಲಕ್ಷ ಲಕ್ಷ ಸಂಖ್ಯೆಗಳಲ್ಲಿ ಹೊಸ ಬಳಕೆದಾರರ ಸೇರ್ಪಡೆ ಆಗಲಿದೆ’.

ಮಾರಾಟಗಾರರ ಸಂಖ್ಯೆಯ ಮಾನದಂಡದಲ್ಲಿ ಸ್ನ್ಯಾಪ್ ಡೀಲ್ ಭಾರತದ ಅತಿದೊಡ್ಡ ಇ ಕಾಮರ್ಸ್ ಕಂಪನಿ. ಹೀಗಾಗಿ, ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ನೀಡುವಲ್ಲಿ ಇದು ತೆಗೆದುಕೊಂಡಿರುವ ನಿರ್ಧಾರವು ಇದೇ ಡಿಜಿಟಲ್ ವೇದಿಕೆಯಲ್ಲಿರುವ ಫ್ಲಿಪ್ ಕಾರ್ಟ್, ಅಮೆಜಾನ್ ಇತ್ಯಾದಿ ದೈತ್ಯ ಕಂಪನಿಗಳಿಗೂ ಇದೇ ರೀತಿ ಆಲೋಚಿಸುವಂತೆ ಪ್ರೇರೇಪಿಸುವುದರಲ್ಲಿ ಸಂಶಯವಿಲ್ಲ.

ಈ ನಡೆಯಿಂದ ದೀರ್ಘಾವಧಿಯಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳ ಹಲವು ಚಟುವಟಿಕೆಗಳಿಗೆ ಲಾಭವಾಗಲಿದೆ. ಉದಾಹರಣೆಗೆ, ಸ್ನ್ಯಾಪ್ ಡೀಲ್, ಅಮೆಜಾನ್, ಫ್ಲಿಪ್ ಕಾರ್ಟ್ ನಂಥ ದೈತ್ಯ ಸಂಸ್ಥೆಗಳ ಜಾಹೀರಾತುಗಳನ್ನು ಈಗ ಹೆಚ್ಚಾಗಿ ಗಮನಿಸಲಿಕ್ಕೆ ಸಾಧ್ಯವಿರುವುದು ಇಂಗ್ಲಿಷ್ ನ ಪತ್ರಿಕೆ, ಟಿವಿ, ಅಂತರ್ಜಾಲ ತಾಣಗಳಲ್ಲಿ. ಏಕೆಂದರೆ ತಾವು ತಲುಪಬೇಕಾಗಿರುವ ಗ್ರಾಹಕರು ಅಲ್ಲಿಯೇ ಇದ್ದಾರೆ ಅಂತ ಇಷ್ಟು ದಿನ ಅವರೆಲ್ಲ ನಂಬಿದ್ದರು. ಈಗ ಕಂಪನಿಗಳೆಲ್ಲ ತಮ್ಮ ವಿಸ್ತಾರ ಹೆಚ್ಚಿಸಿಕೊಳ್ಳುವ ತವಕದಲ್ಲಿವೆ. ಕೈಯಲ್ಲಿ ಇಂಗ್ಲಿಷ್ ಪತ್ರಿಕೆ ಹಿಡಿದವನಿಗೆ ಮಾತ್ರವಲ್ಲದೇ, ನಗರದ ಹೊರವಲಯದಲ್ಲಿ ಸ್ಥಳೀಯ ಮಾಧ್ಯಮಗಳಿಗೆ ಒಡ್ಡಿಕೊಂಡಿರುವವನಿಗೂ ಖರೀದಿ ಸಾಮರ್ಥ್ಯ ಇದೆ, ಆತನ ಅಗತ್ಯಗಳನ್ನು ಪೂರೈಸಿ ಲಾಭ ಮಾಡಿಕೊಳ್ಳುವ ಅವಕಾಶ ತಮಗೂ ಇದೆ ಅಂತ ನಿಧಾನವಾಗಿ ಇ- ವಾಣಿಜ್ಯದ ವಲಯ ಅರ್ಥಮಾಡಿಕೊಳ್ಳುತ್ತಿದೆ. ಪರಿಣಾಮವೇ ಪ್ರಾದೇಶಿಕ ಭಾಷೆಗಳ ಅಳವಡಿಕೆಯ ಚಿಂತನೆ. ಇದರಿಂದ ಮುಂಬರುವ ದಿನಗಳಲ್ಲಿ ಏನಾಗಬಹುದು ಅಂತಂದ್ರೆ… ಶಿರಸಿಯಂಥ ಪಟ್ಟಣದಲ್ಲಿ ಮಾಧ್ಯಮ ನಡೆಸುವವರು, ಕಾರ್ಯಕ್ರಮ ಆಯೋಜನೆ ಮಾಡುವವರು ಸಹ ನಾಳೆ ಸ್ನ್ಯಾಪ್ ಡೀಲ್ ಇನ್ನಿತರ ಕಂಪನಿಗಳ ಬಳಿ ಹಿಂಜರಿಕೆ ಇಲ್ಲದೇ ಪ್ರಾಯೋಜಕತ್ವ- ಜಾಹೀರಾತು ಕೇಳಬಹುದಾದ ಅವಕಾಶ ಪ್ರಾಪ್ತವಾಗುತ್ತದೆ. ಆಂಗ್ಲಭಾಷೆಯ ನುಣುಪು ಶಬ್ದಗಳು, ಮಾರ್ಕೆಟಿಂಗ್ ಕಾರ್ಯತಂತ್ರದ ಅಭಿವ್ಯಕ್ತಿ ಶೈಲಿ ಬರದಿದ್ದರೂ ಶಿವಮೊಗ್ಗದಲ್ಲಿ ಹಪ್ಪಳ ತಯಾರಿಸಿಕೊಡುವ ಸಾಮಾನ್ಯನೂ ಕೀಳರಿಮೆ ಇಲ್ಲದೇ ಡಿಜಿಟಲ್ ವೇದಿಕೆಯ ಭಾಗವಾಗಿ ತನ್ನ ಉತ್ಪನ್ನಗಳನ್ನು ಜಗತ್ತಿಗೆ ಮಾರುವಂತಾದೀತು. ಕೆಲವೇ ನಗರಗಳಲ್ಲದೇ ಆರ್ಥಿಕತೆಯ ನರನಾಡಿ ಸ್ಥಳೀಯ ಮಂಡಲವನ್ನೂ ಪ್ರವೇಶಿಸಿದಂತಾಗುತ್ತದೆ. ಇವೆಲ್ಲ ಸಾಧ್ಯತೆಗಳ ಪೈಕಿ ಕೆಲವು ಮಾತ್ರ. ಯಾವುದೇ ಮಾರುಕಟ್ಟೆ ಪ್ರಾದೇಶಿಕ ಭಾಷೆಯಲ್ಲಿ ತೆರೆದುಕೊಂಡಾಗ ಅದರ ಲಾಭ ಸ್ಥಳೀಯರಿಗೆ, ಆ ಭಾಷಿಕರಿಗೆ ಹೆಚ್ಚಾಗಿ ಸಿಗುತ್ತದೆ ಮತ್ತು ನಿಜಾರ್ಥದಲ್ಲಿ ‘ಡಿಜಿಟಲ್ ಇಂಡಿಯಾ’ ಸಾಕಾರವಾಗಬೇಕಾದರೇ ಇದುವೇ ಮಾರ್ಗ ಎಂಬ ಬಗ್ಗೆ ಅನುಮಾನ ಬೇಡ.

ಇದರೊಂದಿಗೆ ವಹಿಸಬೇಕಾದ ಎಚ್ಚರಿಕೆಯೂ ಇದೆ. ಸ್ನ್ಯಾಪ್ ಡೀಲ್ ಅಥವಾ ಇನ್ನ್ಯಾವುದೇ ಸಂಸ್ಥೆ, ಕನ್ನಡವನ್ನು ಅನುಷ್ಠಾನಕ್ಕೆ ತರುವಾಗ ಅದು ನೆಪಮಾತ್ರದ ಕ್ರಮವಾಗಿರಬಾರದು. ಅಂದರೆ, ಆಂಗ್ಲಪದಗಳನ್ನೇ ಕನ್ನಡದ ಅಕ್ಷರಗಳಲ್ಲಿ ಬರೆದುಬಿಟ್ಟರೆ ಪ್ರಾದೇಶಿಕ ಭಾಷೆಯಲ್ಲಿ ಸೇವೆ ನೀಡಿದಂತಾಗುವುದಿಲ್ಲ.
ಈ ಎಚ್ಚರಿಕೆಯೊಂದಿಗೇ ಸ್ನ್ಯಾಪ್ ಡೀಲ್ ನಿರ್ಧಾರವನ್ನು ಸ್ವಾಗತಿಸೋಣ, ಉಳಿದೆಲ್ಲ ಕಂಪನಿಗಳು ಇದೇ ಮಾರ್ಗ ತುಳಿಯಲೆಂದು ಒತ್ತಾಯಿಸೋಣ.. ಅಲ್ವಾ?

2 COMMENTS

  1. […] ಪಿಚೈ ಅವರ ಈ ಹೇಳಿಕೆ ಗಮನಿಸಿದರೆ, ಅಂತರ್ಜಾಲದ ಮುಂದಿನ ದೊಡ್ಡ ಬೆಳವಣಿಗೆ ಪ್ರಾದೇಶಿಕ ಭಾಷೆಗಳಲ್ಲಿ ಆಗಲಿದೆ ಎಂಬುದು ಸ್ಪಷ್ಟವಾಗಿದೆ. ಅಂತರ್ಜಾಲ ವಹಿವಾಟಿನಲ್ಲಿರುವ ಕಂಪನಿಗಳೂ ಇದನ್ನು ಅರ್ಥಮಾಡಿಕೊಳ್ಳುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲೇ ಸ್ನ್ಯಾಪ್ ಡೀಲ್ ಕನ್ನಡದಲ್ಲೇ ಸೇವೆ ನೀಡುವ ನಿರ್ಧಾರ ಪ್ರಕಟಿಸಿರುವುದರ ನಡೆಯನ್ನು ‘ಡಿಜಿಟಲ್ ಕನ್ನಡ’ ಈ ಲೇಖನದಲ್ಲಿ ವಿಶ್ಲೇಷಿಸಿತ್ತು. […]

Leave a Reply