ಕ್ವಿಕ್ ನ್ಯೂಸ್ @11: ಕಾಂಗ್ರೆಸ್ ಕಾರ್ಯತಂತ್ರ, ಪಾಕ್ ನಲ್ಲಿಲ್ಲ ಮಸ್ತಾನಿ, ಅಮೆರಿಕದ ವೀಸಾ ಪೆಟ್ಟು

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಡಿಸೆಂಬರ್ 19ರಂದು ನ್ಯಾಯಾಲಯಕ್ಕೆ ಹಾಜರಾಗಲಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಜಾಮೀನು ಕೋರದೇ ಇರುವುದಕ್ಕೆ ನಿರ್ಧರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗುತ್ತಿದೆ.
ಪ್ರಕ್ರಿಯೆಯ ಪ್ರಕಾರ ಸಮನ್ಸ್ ಪಡೆದ ಆರೋಪಿ ನ್ಯಾಯಾಲಯದ ಎದುರು ಹಾಜರಾದಾಗ ಜಾಮೀನು ಅರ್ಜಿ ಸಲ್ಲಿಸುತ್ತಾನೆ. ಆರೋಪಿಗೆ ಜಾಮೀನು ಕೊಡಬೇಕೋ, ನ್ಯಾಯಾಂಗ ವಿಚಾರಣೆಗೆ ನೀಡಬೇಕೋ ಎಂಬುದನ್ನು ಕೋರ್ಟ್ ನಿರ್ಧರಿಸುತ್ತದೆ. ಈ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್ ಅರ್ಜಿಯನ್ನೇ ಸಲ್ಲಿಸದಿದ್ದರೆ ನ್ಯಾಯಾಂಗ ವಿಚಾರಣೆಗೆ ಕರೆದೊಯ್ಯಬಹುದಾಗಿದೆ.
ಈಗಾಗಲೇ ರಾಹುಲ್ ಗಾಂಧಿ ಈ ಪ್ರಕರಣವನ್ನು ಕೇಂದ್ರ ಸರ್ಕಾರದ ದ್ವೇಷದ ನಡೆ ಎಂದೇ ಬಿಂಬಿಸಿಕೊಂಡು ಬಂದಿದ್ದಾರೆ. ಈ ಕುರಿತು ಸಂಸತ್ತಿನ ಒಳಗೂ ಹೊರಗೂ ಗಲಾಟೆಗಳಾಗಿವೆ. ಇದೇ ಕಾವನ್ನು ಮುಂದುವರಿಸಿಕೊಂಡು ಹೋಗುವುದಕ್ಕಾಗಿ, ಜಾಮೀನನ್ನು ಪಡೆಯದೇ ನ್ಯಾಯಾಂಗ ಬಂಧನಕ್ಕೆ ಒಳಗಾಗಿ, ಜನರ ಕಣ್ಣಲ್ಲಿ ಅನುಕಂಪ ಗಿಟ್ಟಿಸುವ ನಡೆ ಇದಾಗಿರಬಹುದೇ ಎಂದು ಚರ್ಚೆಗಳು ಎದ್ದಿವೆ. ಜಾಮೀನು ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ನಿರಾಕರಿಸಿರುವ ಕಾಂಗ್ರೆಸ್ ಪರ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ, ‘ನಮ್ಮ ಕಾರ್ಯತಂತ್ರವನ್ನು ಈಗಲೇ ಬಿಟ್ಟುಕೊಡಲಾರೆವು’ ಎಂದಿದ್ದಾರೆ.

ಪಾಕ್ ನಲ್ಲಿ ಮಸ್ತಾನಿ ಇಲ್ಲ

ದೀಪಿಕಾ ಪಡುಕೋಣೆ ಅಭಿನಯದ ‘ಬಾಜಿರಾವ್ ಮಸ್ತಾನಿ’ ಚಿತ್ರ ಇಸ್ಲಾಂಗೆ ವಿರುದ್ಧ ಎಂದು ಪಾಕಿಸ್ತಾನ ನಿಷೇಧ ಹೇರಿದೆ. ಶುಕ್ರವಾರ ಬಿಡುಗಡೆಯಾಗಲಿರುವ ಶಾರುಖ್ ಖಾನ್ ಅವರ ದಿಲ್ವಾಲೆ ಚಿತ್ರಕ್ಕೆ ಮಾತ್ರ ಪಾಕ್ ನಲ್ಲಿ ಯಾವುದೇ ನಿರ್ಬಂಧ ಇಲ್ಲ.

ಭಾರತದ ಟೆಕ್ ಕಂಪನಿಗಳಿಗೆ ಅಮೆರಿಕ ವೀಸಾ ಪೆಟ್ಟು

ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳು ಹೆಚ್ಚಾಗಿ ಬಳಸುತ್ತಿರುವ ಎಚ್ 1ಬಿ ಮತ್ತು ಎಲ್ 1 ವೀಸಾಗಳ ಶುಲ್ಕವನ್ನು ಅಮೆರಿಕ ದುಪ್ಪಟ್ಟು ಗೊಳಿಸಿದೆ. 2 ಸಾವಿರ ಡಾಲರ್ ಗಳಾಗಿದ್ದ ಎಚ್1ಬಿ ವೀಸಾ ದರವನ್ನು 4 ಸಾವಿರ ಡಾಲರ್ ಗಳಿಗೆ ಹಾಗೂ ಎಲ್ 1 ವೀಸಾ ದರವನ್ನು 4500 ಡಾಲರ್ ಗಳಿಗೆ ಏರಿಸಲಾಗಿದೆ. ಹಿಂದೆಲ್ಲ ಇಂಥ ದರ ಏರಿಕೆ 5 ವರ್ಷಗಳ ಅವಧಿಗೆ ಆಗುತ್ತಿತ್ತು. ಈ ಬಾರಿ 10 ವರ್ಷಗಳ ಅವಧಿಗೆ ಆಗಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ತಮ್ಮ ಆತಂಕವನ್ನು ಹೊರಹಾಕಿದ್ದಾರೆ.

Leave a Reply