ಜಾಮೀನು ಕೋರದಿದ್ದರೆ ಸೋನಿಯಾ- ರಾಹುಲ್ ಸಾಧಿಸಲಿಕ್ಕಿರುವುದೇನು?

ನವೀನ್ ಉಪಾಧ್ಯಾಯ

‘ನ್ಯಾಷನಲ್ ಹೆರಾಲ್ಡ್’ ಪ್ರಕರಣದಲ್ಲಿ ಶನಿವಾರ ನ್ಯಾಯಾಲಯದ ಮುಂದೆ ಆರೋಪಿಗಳಾಗಿ ಹಾಜರಾಗಲಿರುವ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಜಾಮೀನಿಗೆ ಅರ್ಜಿ ಸಲ್ಲಿಸದೇ ಇರಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಾದಲ್ಲಿ ರಾಹುಲ್ ಮತ್ತು ಸೋನಿಯಾ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕೊಡಬಹುದಾಗಿದೆ. ಹೀಗೆ ಜಾಮೀನು ಕೋರಿಕೆ ಸಲ್ಲಿಸದೇ ಉಳಿದುಬಿಡುವ ಯೋಜನೆ ಇದೆಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ನ್ಯಾಯಾಲಯದಲ್ಲಿ ಇವರಿಬ್ಬರನ್ನೂ ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ನ ಅಭಿಷೇಕ್ ಮನು ಸಿಂಘ್ವಿ ಅವರು, ‘ನಮ್ಮ ಕಾರ್ಯತಂತ್ರದ ಬಗ್ಗೆ ಈಗೇನೂ ಹೇಳುವುದಿಲ್ಲ ‘ ಎಂದಿದ್ದಾರೆ. ಅರ್ಥಾತ್ ಜಾಮೀನು ತೆಗೆದುಕೊಳ್ಳದೇ ಉಳಿಯುವ ಪ್ಲಾನ್ ಅನ್ನು ತಳ್ಳಿ ಹಾಕುವುದಿಲ್ಲ ಅಂತಲೂ ಅರ್ಥ.

ಹೀಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗುವುದರಿಂದ ಸೋನಿಯಾ- ರಾಹುಲ್ ಅವರಿಗೆ ಏನು ಸಿಗಲಿದೆ? ತಮ್ಮ ವಿರುದ್ಧ ಬಂದಿರುವ ಆರೋಪಗಳಿಗೆ ತಾರ್ಕಿಕವಾಗಿ ಉತ್ತರಿಸಬೇಕಿದ್ದವರು, ತಮ್ಮದೇನೂ ತಪ್ಪಿಲ್ಲವೆಂದು ಎಲ್ಲ ಬಗೆಯ ಮಾಧ್ಯಮಗಳನ್ನೂ ಉಪಯೋಗಿಸಿಕೊಂಡು ಜನರಿಗೆ ಸಾರಬೇಕಾದವರು ಹೀಗೆ ಮೌನವಾಗಿ ಬಿಡೋದ್ರಿಂದ ಸಾಧಿಸೋದೇನು? ನ್ಯಾಯಾಂಗ ಬಂಧನಕ್ಕೆ ಒಳಗಾದರೆ ವರ್ಚಸ್ಸು ಕುಂದುವುದಿಲ್ಲವಾ? ಇಂಥ ಎಲ್ಲ ಪ್ರಶ್ನೆಗಳು ಏಳುವುದು ಸಹಜ.

ಎಲ್ಲವಕ್ಕೂ ಉತ್ತರವೆಂದರೆ- ‘ಬಲಿಪಶುವಾಗಿ ನರಳುವುದು’, ಆಂಗ್ಲದಲ್ಲಿ ‘ವಿಕ್ಟಿಮ್ ಸಿಂಡ್ರೋಮ್’ ಅಂತೇನನ್ನುತ್ತಾರೋ, ಅದು ರಾಜಕಾರಣದ ಮಟ್ಟಿಗೆ ಬಹಳ ಲಾಭದಾಯಕ. ‘ನೋಡಿ, ನೋಡಿ ನನ್ನನ್ನು ಎಲ್ಲರೂ ತುಳೀತಿದಾರೆ’ ಅಂತ ಮೇಲಿಂದ ಮೇಲೆ ಹೇಳುತ್ತಿದ್ದರೆ ಅನುಕಂಪ ಸಿಗುವ ಸಾಧ್ಯತೆಗಳು ಹೆಚ್ಚು. ಇದು ರಾಜಕಾರಣದಲ್ಲಿ ಸಾಕಷ್ಟು ಬಾರಿ ಸಾಬೀತಾಗಿದೆ.

ಅಧಿಕಾರಕ್ಕೆ ಬರುತ್ತಲೇ ಅವತ್ತಿನ ಪ್ರಧಾನಿ ಮೊರಾರ್ಜಿ ದೇಸಾಯಿಯವರು ಇಂದಿರಾ ಅವರನ್ನು ಜೈಲಿಗೆ ಕಳುಹಿಸಿದಾಗ ಇಂದಿರಾ ಅದಾಗಲೇ ತುರ್ತು ಪರಿಸ್ಥಿತಿ- ಭ್ರಷ್ಟಾಚಾರ ಅಂತೆಲ್ಲ ತೀರ ವರ್ಚಸ್ಸು ಕೆಡಿಸಿಕೊಂಡಿದ್ದರೂ ಜನರು ಮಾತ್ರ ಛೇ, ದೇಶ ಆಳಿದವರನ್ನು ಜೈಲಲ್ಲಿ ಕೂರಿಸಬಾರದಿತ್ತು ಅಂತ ಅನುಕಂಪ ಸೂಸಿದರು. ನಂತರ ಚುನಾವಣೆಯಲ್ಲಿ ಮತ್ತೆ ಗೆಲ್ಲಿಸಿದರು. ಲಾಲು ಪ್ರಸಾದ್ ಯಾದವ್ ರಂತೆ ಆರೋಪ ಸಾಬೀತಾಗಿ ಶಿಕ್ಷೆ ಅನುಭವಿಸಿದ ರಾಜಕಾರಣಿಯೂ ಭಾರತದ ರಾಜಕಾರಣದಲ್ಲಿ ‘ಹೋಗ್ಲಿ ಬಿಡಪ್ಪಾ, ಆಗಿದ್ದು ಆಗಿಹೋಯ್ತು. ನಮ್ಮನ್ನಾಳಿದವರು ತೀರ ಮೂಲೆಗೆ ಕೂರಬಾರದು’ ಎಂಬಂತಹ ಅನುಕಂಪವೊಂದನ್ನು ಪಡೆದುಕೊಂಡು ಬಿಡುವ ಉದಾಹರಣೆ ನಮ್ಮ ಮುಂದೆಯೇ ಇದೆ. ಯಡಿಯೂರಪ್ಪನವರ ಅವಧಿಯಲ್ಲಿ ದಿನಬೆಳಗಾದರೆ ಭಿನ್ನಮತ- ಹಗರಣಗಳ ಆರೋಪ ವಿಜೃಂಭಿಸುತ್ತಿದ್ದಿದ್ದರ ಬಗ್ಗೆ ಜನರು ರೋಸಿಹೋಗಿದ್ದು ನಿಜ, ಚುನಾವಣೆಯಲ್ಲಿ ಪಾಠ ಕಲಿಸಿದ್ದೂ ನಿಜ. ಆದರೆ, ‘ಅಧಿಕಾರದಲ್ಲಿದ್ದಾಗ ಹಣ ಮಾಡದವರು ಯಾರಿದ್ದಾರೆ, ಪಾಪ ಜೈಲಿಗೆ ಹೋಗಿದ್ದು ಮಾತ್ರ ಯಡಿಯೂರಪ್ಪ’ ಎಂದು ಮಾತಾಡಿಕೊಳ್ಳುವ ಜನ ಸಾಕಷ್ಟು ಸಿಗುತ್ತಾರೆ.

ಎಲ್ಲ ದೊಡ್ಡ ದೊಡ್ಡ ನಾಯಕರೂ ಒಂದೊಂದು ಹಂತದಲ್ಲಿ ಈ ‘ಸಂತ್ರಸ್ತ ಸಿಂಡ್ರೋಮ್’ ನ ಫಸಲು ತೆಗೆದವರೇ. ಗುಜರಾತ್ ನ ಎಲ್ಲ ಅಭಿವೃದ್ಧಿ ಮಾದರಿಗಳ ಹೊರತಾಗಿಯೂ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಿದ್ದು ಅವರ ರಾಜಕೀಯ ಎದುರಾಳಿಗಳು ಇವರ ಮೇಲೆ ನಡೆಸಿದ ಅವಿರತ ಸಮರ. ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್, ರಮಣ್ ಸಿಂಗ್ ಇವರಿಗೂ ಅಭಿವೃದ್ಧಿ ರಾಜಕಾರಣದ ಹರಿಕಾರರೆಂಬ ಹೆಸರಿತ್ತು. ಆದರೆ ಅದು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿಯಲಿಲ್ಲ. ಗೋದ್ರೋತ್ತರ ಹಿಂಸಾಚಾರ ಇಟ್ಟುಕೊಂಡು ನರೇಂದ್ರ ಮೋದಿಯವರ ರಾಜಕೀಯ ಎದುರಾಳಿಗಳು ಹೇಗೆಲ್ಲ ದಾಳಿ ಮಾಡುತ್ತ ಹೋದರೋ ಹಾಗೆಲ್ಲ ಅವರ ಬೆಂಬಲಿಗರ ಸಂಖ್ಯೆ ಬೆಳೆಯಿತು. ಇದೊಂದು ಸರಳ ಸೈಕಾಲಜಿ. ವ್ಯಕ್ತಿಯೊಬ್ಬನನ್ನು ಎಲ್ಲರೂ ಗುರಿ ಮಾಡುತ್ತಿದ್ದಾರೆ ಎಂದಾದಾಗ, ಆ ಕ್ಷಣದಲ್ಲಿ ಸರಿ-ತಪ್ಪುಗಳ ನಿಷ್ಕರ್ಷೆಗಿಂತ ಹೆಚ್ಚಾಗಿ ದಾಳಿಗೊಳಗಾಗುತ್ತಿರುವವರ ಬಗ್ಗೆ ‘ಅಯ್ಯೋ ಪಾಪ’ ಎಂಬ ಭಾವನೆ ವ್ಯಕ್ತವಾಗಿಬಿಡುತ್ತದೆ.

ರಾಜಕಾರಣದ ಇನ್ನೊಂದು ಆಯಾಮ ಎಂದರೆ ಇಲ್ಲಿ ಏಕಾಏಕಿ ನೇತಾರರು ರೂಪುಗೊಂಡುಬಿಡುವುದಿಲ್ಲ. ಅದೊಂದು ದೀರ್ಘ ಪ್ರಕ್ರಿಯೆ. ಹೀಗಾಗಿ ಚಾನೆಲ್ ಗಳನ್ನು ಬದಲಿಸಿದಂತೆ ಪಕ್ಷವನ್ನೋ, ಮುಖಂಡನನ್ನೋ ಆರಿಸಿಕೊಳ್ಳುವ ಆಯ್ಕೆ ಇಲ್ಲ. ಮೋದಿ, ರಾಹುಲ್ ಗಾಂಧಿ, ಕೇಜ್ರಿವಾಲ್ ಈ ಪೈಕಿಯೇ ಯಾವುದೋ ಒಂದು ಮಾದರಿಯನ್ನು ಜನರು ಆಯ್ದುಕೊಳ್ಳಲೇಬೇಕು.

ಸದ್ಯಕ್ಕೆ ನರೇಂದ್ರ ಮೋದಿ ಮತ್ತು ಬಿಜೆಪಿ ಇತರರಿಗೆ ಹೋಲಿಸಿದಾಗ ಸುಸ್ಥಿತಿಯಲ್ಲೇ ಇವೆ. ಈ ಮಾದರಿಗೆ ಪ್ರತಿರೋಧ ಕೊಡುವುದಕ್ಕೆ ಎರಡು ಮಾರ್ಗಗಳಿವೆ. ಈಗಿರುವುದಕ್ಕಿಂತ ಅದ್ಭುತ ಮಾದರಿ ತಾನು ಎಂದು ಸಾಬೀತು ಪಡಿಸೋದು. ಇಲ್ಲದಿದ್ದರೆ ಈಗಿರುವ ವ್ಯವಸ್ಥೆ ತುಂಬ ಭಯಾನಕ ಅಂತ ಜನರಿಗೆ ಮನದಟ್ಟು ಮಾಡೋದು.

ಕೇಂದ್ರದಲ್ಲಿ ಬಿಜೆಪಿ ಆಡಳಿತ ಎಷ್ಟು ಸಮರ್ಥವಾಗಿದೆ ಎಂಬಂಶ ಪಕ್ಕಕ್ಕಿರಲಿ. ಆದರೆ ತನ್ನ ಹತ್ತು ವರ್ಷಗಳ ಆಡಳಿತದಲ್ಲಿ ಹಗರಣಗಳ ಸರಮಾಲೆ, ಅದಕ್ಷತೆ ಇಂಥವುಗಳಲ್ಲೇ ಮುಳುಗಿದ್ದ ಕಾಂಗ್ರೆಸ್, ತಾನು ಈಗಿನ ಬಿಜೆಪಿಗಿಂತ ಭಿನ್ನ ನೀತಿಗಳನ್ನು ನಿರೂಪಿಸಬಲ್ಲೆ ಅಂತ ಮನದಟ್ಟು ಮಾಡಿಸುವ ಸ್ಥಿತಿಯಲ್ಲಿಲ್ಲ. ಕೇಂದ್ರ ಸರ್ಕಾರದ ಯಾವ ಲೋಪಗಳನ್ನು ಹೇಳುವುದಕ್ಕೆ ಹೋದರೂ, ಹತ್ತು ವರ್ಷ ನೀವು ಮಾಡಿದ್ದೇನು ಅಂತ ಜನ ಕೇಳುತ್ತಾರೆ. ಹೀಗಾಗಿ ಕಾಂಗ್ರೆಸ್ ಗೆ ಬಿಜೆಪಿಯನ್ನು ಮಣಿಸುವ ಏಕೈಕ ಮಾರ್ಗ ಎಂದರೆ ಹೇಗಾದರೂ ಮಾಡಿ ತಾನು ‘ಅಯ್ಯೋ ಪಾಪ’ ಜಾಗದಲ್ಲಿ ನಿಂತು ಕೇಂದ್ರ ಸರ್ಕಾರವನ್ನು ತನ್ನನ್ನು ಮುಗಿಸಲಿಕ್ಕೆಂದೇ ನಿಂತಿರುವ ವಿಲನ್ ನಂತೆ ಚಿತ್ರಿಸುವುದು. ಆಮೂಲಕ ಅನುಕಂಪಕ್ಕಾಗಿ ಶ್ರಮಿಸುವುದು. ಈ ಮಾರ್ಗ ಅದ್ಭುತವೇನಲ್ಲದಿದ್ದರೂ ಕಾಂಗ್ರೆಸ್ ಗೆ ಸದ್ಯಕ್ಕೆ ಬೇರೆ ಮಾರ್ಗವಿಲ್ಲ.

ಪ್ರಾರಂಭದಿಂದಲೂ ಕಾಂಗ್ರೆಸ್ ನರೇಂದ್ರ ಮೋದಿಯವರನ್ನು ಸರ್ವಾಧಿಕಾರಿ, ಫ್ಯಾಸಿಸ್ಟ್ ಎಂಬ ಚೌಕಟ್ಟಿನಲ್ಲೇ ಬಿಂಬಿಸಿದೆ. ಇವರು ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ ಎಂದೇ ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಬಿಂಬಿಸಲು ಯತ್ನಿಸಿತಾದರೂ ಯಶ ಸಿಗಲಿಲ್ಲ. ನಂತರವೂ ಅದು ಅನುಸರಿಸಿದ ಹಾದಿಯೆಂದರೆ ಮೋದಿ ತಮ್ಮನ್ನು ಮುಗಿಸಲೇ ಬಂದಿದ್ದಾರೆ ಎಂದು ಹೇಳಿಕೊಂಡಿದ್ದು. ಚುನಾವಣೆ ಹುಮ್ಮಸ್ಸಿನಲ್ಲಿ ಬಿಜೆಪಿ ಬಳಸಿದ್ದ ‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆ ಇದಕ್ಕೆ ಇಂಬು ಕೊಟ್ಟಿತು.

ಬ್ರಿಟಿಷ್ ಪೌರತ್ವದ ಆರೋಪ ಬಂದಾಗಲೂ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿ ತಮ್ಮ ಕುಟುಂಬದ ವಿರುದ್ಧವಿದ್ದಾರೆ ಎಂಬುದನ್ನು ಬಿಂಬಿಸುವ ಮಾತುಗಳನ್ನಾಡಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಂತೂ ಇದು ಕೇಂದ್ರದ್ದೇ ಕೈವಾಡ ಎಂದು ಸಾರಿ ಸಾರಿ ಆರೋಪಿಸಿದ್ದಾರೆ. ಒರಿಸ್ಸಾದಲ್ಲಿ ದೇವಾಲಯ ಪ್ರವೇಶಿಸದಂತೆ ಆರೆಸ್ಸೆಸ್ ನವರು ತಡೆ ಒಡ್ಡಿದರು ಅಂತ ರಾಹುಲ್ ಇತ್ತೀಚೆಗೆ ಆರೋಪಿಸಿದ್ದರು. ಅದನ್ನು ದೇಗುಲದ ಪೂಜಾರಿ ಅಲ್ಲಗೆಳೆದಿದ್ದಾರೆ. ರಾಹುಲ್ ಮಾತು ನಿಜವೆಂಬುದಕ್ಕೆ ಆಧಾರಗಳ್ಯಾವವೂ ಸಿಗುತ್ತಿಲ್ಲ. ಅದಕ್ಕೂ ಮೊದಲು ಸಂಸತ್ ಅಧಿವೇಶನದಲ್ಲಿ ಸಂವಿಧಾನದ ಕುರಿತ ಚರ್ಚೆಯಲ್ಲಿ ಕಾಂಗ್ರೆಸ್ ನ ಕುಮಾರಿ ಶೆಲ್ಜಾ ಸಹ 2013ರಲ್ಲಿ ಗುಜರಾತ್ ನ ದೇವಸ್ಥಾನದಲ್ಲಿ ತಮ್ಮ ಜಾತಿ ಕೇಳಲಾಗಿತ್ತು ಅಂತ ವಿಷಯ ಸ್ಫೋಟಿಸಿದರು. ಅವರು ಹೇಳಿದ ದಿನದಲ್ಲಿ ದ್ವಾರಕಾ ದೇವಸ್ಥಾನದ ಪ್ರತಿಕ್ರಿಯೆ ಪುಸ್ತಕದಲ್ಲಿ ಏನಿತ್ತು ಎಂಬುದನ್ನು ಸಂಸತ್ತಿನಲ್ಲೇ ಹೊರಗೆಡವಿದ ಅರುಣ್ ಜೇಟ್ಲಿಯವರು, ಸೆಲ್ಜಾ ಅವರೇ ‘ಭೇಟಿ ಅದ್ಭುತವಾಗಿತ್ತು’ ಅಂತ ಬರೆದ ಟಿಪ್ಪಣಿ ತೋರಿಸಿದರು. ಆದರೆ ತಾವು ಆ ದೇವಾಲಯದ ಬಗ್ಗೆ ಅಲ್ಲ, ಮತ್ತೊಂದು ದೇಗುಲದ ಬಗ್ಗೆ ಹೇಳಿದ್ದು ಅಂತ ಜಾರಿಕೊಂಡರು ಸೆಲ್ಜಾ.

ಈ ಎಲ್ಲ ವಿದ್ಯಮಾನಗಳಲ್ಲೂ ‘ಮೋದಿ ಆಡಳಿತದಲ್ಲಿ ತಾವು ಬಲಿಪಶು ಆಗುತ್ತಿದ್ದೇವೆ’, ‘ದೇಶವನ್ನೆಲ್ಲ ಅಸಹಿಷ್ಣುತೆ ಆವರಿಸಿದೆ, ದೇವಾಲಯವನ್ನೂ ಪ್ರವೇಶಿಸದ ಸ್ಥಿತಿ ಇದೆ’ ಅಂತೆಲ್ಲ ಬಿಂಬಿಸು ನಿಖರ ಪ್ರಯತ್ನಗಳಿವೆ.

ಮೋದಿ ಅಧಿಕಾರಕ್ಕೆ ಬಂದ ವರ್ಷದಲ್ಲೇ ರಾಜಕೀಯ ಎದುರಾಳಿಗಳನ್ನು ಜೈಲಿಗೆ ಕಳುಹಿಸಿಬಿಟ್ಟರು ನೋಡಿ, ಇವರು ಪ್ರತಿಪಕ್ಷಗಳನ್ನೇ ಇಲ್ಲವಾಗಿಸುತ್ತಾರೆ- ಇಂಥದೆಲ್ಲ ಭಯವನ್ನು ಇನ್ನಷ್ಟು ಹಬ್ಬಿಸುವುದಕ್ಕೆ ಸಾಧ್ಯವಾದರೆ ತನಗೆ ಎಷ್ಟರಮಟ್ಟಿಗೆ ಲಾಭವಾಗಬಹುದು ಎಂಬ ಗಂಭೀರ ಚಿಂತನೆಯಲ್ಲಿ ಕಾಂಗ್ರೆಸ್ ಇದ್ದಂತಿದೆ. ಈ ‘ಸಂತ್ರಸ್ತ ಸಿಂಡ್ರೋಮ್’ಗೆ ಒಳಗಾಗುವುದಕ್ಕೆ ಆ ಪಕ್ಷದೊಳಗಿನ ತೀವ್ರತೆ ಯಾವ ಮಟ್ಟದಲ್ಲಿದೆ ಅನ್ನೋದನ್ನು, ಡಿ. 19ರಂದು ಜಾಮೀನು ಪಡೆಯುವ/ ಪಡೆಯದಿರುವುದರ ನಡುವೆ ಕಾಂಗ್ರೆಸ್ ಏನನ್ನು ಆಯ್ದುಕೊಳ್ಳುತ್ತದೆ ಎಂಬುದರ ಮೇಲೆ ಹೇಳಬಹುದು.

Leave a Reply