ಡಿನೋಟಿಫಿಕೇಷನ್ ಅಧಿಕಾರ ಸಚಿವ ಸಂಪುಟಕ್ಕೆ, ಮಕ್ಮಲ್ ಟೋಪಿ ಸಾರ್ವಜನಿಕರಿಗೆ

ಡಿಜಿಟಲ್ ಕನ್ನಡ ಟೀಮ್

ಇನ್ನು ಮುಂದೆ ಡಿನೋಟಿಫಿಕೇಷನ್ ಅಧಿಕಾರವನ್ನು ಸಚಿವ ಸಂಪುಟಕ್ಕೆ ವಹಿಸುವ ರಾಜ್ಯ ಸರಕಾರದ ತೀರ್ಮಾನದ ಹಿಂದೆ ಸಾರ್ವಜನಿಕರಿಗೆ ‘ಮಕ್ಮಲ್ ಟೋಪಿ’ ಹಾಕುವ ಉದ್ದೇಶ ಬಿಟ್ಟು ಬೇರೇನೂ ಇದ್ದಂತಿಲ್ಲ.

ಈವರೆಗೂ ಇದ್ದ ಪ್ರತೀತಿ ಅಂದರೆ, ನಾನಾ ಇಲಾಖೆಗಳ ಡಿನೋಟಿಫಿಕೇಷನ್ ಪ್ರಸ್ತಾವಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಪರಿಶೀಲಿಸಿ ಮುಖ್ಯಮಂತ್ರಿಯವರ ಮುಂದೆ ಇಡುತ್ತಿತ್ತು. ಅದಕ್ಕೆ ಮುಖ್ಯಮಂತ್ರಿಗಳು ಸಹಿ ಹಾಕುತ್ತಿದ್ದರು. ಅದೇ ಅಂತಿಮ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಅಧಿಕಾರವನ್ನು ಸಚಿವ ಸಂಪುಟಕ್ಕೆ ವಹಿಸಲು ನಿರ್ಧರಿಸಿದ್ದು, ಇದರಲ್ಲಿ ‘ಅಳಿಯ ಅಲ್ಲ ಮಗಳ ಗಂಡ’ ಅನ್ನುವ ಕುತತ್ವ ಮಾತ್ರ ಆಡಗಿದೆ.

ಯದ್ವಾತದ್ವಾ ಡಿನೋಟಿಫಿಕೇಷನ್ ಮಾಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರಂತ ಘಟಾನುಘಟಿ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ. ಇಂಥ ನಿದರ್ಶನಗಳ ಹಿನ್ನೆಲೆಯಲ್ಲಿ ಡಿನೋಟಿಫಿಕೇಷನ್ ಗೆ ಸಾಮೂಹಿಕ ಹೊಣೆಗಾರಿಕೆ ವಹಿಸುವ ತಂತ್ರಗಾರಿಕೆ ಇದಾಗಿದೆಯೇ ಹೊರತು ಡಿನೋಟಿಫಿಕೇಷನ್ ತಡೆಯುವ ಅಥವಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಯಾವುದೇ ಅಂಶ ಕಂಡು ಬರುತ್ತಿಲ್ಲ.

ಮುಖ್ಯಮಂತ್ರಿ ಆದವರೇ ಸಚಿವ ಸಂಪುಟ ಸಭೆಯ ಅಧ್ಯಕ್ಷರು. ಸಾಮಾನ್ಯವಾಗಿ ಅವರು ಪರಿಶೀಲಿಸಿದ, ಅವರು ಹೇಳಿದ ಕಡತಗಳಷ್ಟೇ ಸಂಪುಟ ಸಭೆಯಲ್ಲಿ ಮಂಡನೆ ಆಗುತ್ತವೆ. ಸಂಪುಟದಲ್ಲಿ ಮಂಡನೆ ಆಗುವ ಪ್ರಸ್ತಾವಗಳ ಬಗ್ಗೆ ಸಾಕಷ್ಟು ಮೊದಲೇ ಸರಕಾರದ ಮುಖ್ಯಕಾರ್ಯದರ್ಶಿಗಳು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳ ಜತೆ ಅನೌಪಚಾರಿಕವಾಗಿ ವಿಚಾರ ವಿನಿಮಯ ಮಾಡಿಕೊಳ್ಳುವುದು ವಾಡಿಕೆ. ಅಂದರೆ ಸಂಪುಟ ಸಭೆಯಲ್ಲಿ ಯಾವ ವಿಚಾರ ಬರುತ್ತದೆ ಎಂಬ ಮಾಹಿತಿ ಮುಖ್ಯಮಂತ್ರಿಗಳಿಗೆ ಮೊದಲೇ ರವಾನೆ ಆಗಿರುತ್ತದೆ. ಈ ಮಾಹಿತಿ ಅನ್ವಯ ಯಾವುದು ಸಂಪುಟ ಸಭೆಯಲ್ಲಿ ಮಂಡನೆ ಆಗಬೇಕು, ಆಗಬಾರದು, ಒಂದೊಮ್ಮೆ ಮಂಡನೆ ಆದರೂ ಯಾವುದಕ್ಕೆ ಅನುಮೋದನೆ ನೀಡಬೇಕು, ನೀಡಬಾರದು ಎಂಬ ಪೂರ್ವಸೂಚನೆ ಸಂಬಂಧಪಟ್ಟವರಿಗೆ ಹೋಗಿರುತ್ತದೆ.

ಇನ್ನೂ ಕೆಲವು ಸಂದರ್ಭಗಳಲ್ಲಿ ಗಹನ ವಿಚಾರಗಳ ಸಂಬಂಧ ನಿರ್ದಿಷ್ಟ ಸಚಿವರಿಗೆ ಆಕ್ಷೇಪ ಎತ್ತಲು ಸೂಚಿಸಿ, ಸಭೆಯಲ್ಲಿ ಅದಕ್ಕೆ ಸಮಜಾಯಿಷಿಗಳನ್ನು ಕೊಟ್ಟು, ಸುದೀರ್ಘ ಸಮಾಲೋಚನೆ ನಡೆಸಿದ ಚಿತ್ರಣವನ್ನು ಕೊಡುವ ತಂತ್ರಗಾರಿಕೆಯೂ ಉಂಟು. ಹೀಗಾಗಿ ಮುಖ್ಯಮಂತ್ರಿಗಳು ಹೇಳಿದ್ದು, ಅವರು ಸೂಚನೆ ಕೊಟ್ಟದ್ದು ಅಲ್ಲಿ ಫೈನಲ್ ಆಗುತ್ತದೆಯೇ ಹೊರತು ಅವರ ನಿರ್ಧಾರಕ್ಕೆ ವಿರುದ್ಧವಾದದ್ದು ಏನೂ ನಡೆಯುವುದಿಲ್ಲ. ಹೀಗಾಗಿ ಡಿನೋಟಿಫಿಕೇಷನ್ ವಿಚಾರದಲ್ಲಿ ಅಧಿಕಾರ ಸಿಎಂ ಬಳಿ ಇದ್ದರೂ ಒಂದೇ, ಸಚಿವ ಸಂಪುಟಕ್ಕೆ ಕೊಟ್ಟರೂ ಒಂದೇ.

ಈ ಹಿಂದೆ ಸಾರ್ವಜನಿಕ ಉದ್ದೇಶಕ್ಕೆಂದು ಸ್ವಾಧೀನಪಡಿಸಿಕೊಂಡ ಜಮೀನನ್ನು ನಾನಾ ಕಾರಣಗಳ ನೆಪದಲ್ಲಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಾಗ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದು,  ಹಗರಣಗಳ ಸರಮಾಲೆಯೇ ಸೃಷ್ಟಿಯಾಯಿತು. ಆದರೆ ಸುಪ್ರೀಂ ಕೋರ್ಟ್ ತೀರ್ಪು ಆಧಾರವಾಗಿಟ್ಟುಕೊಂಡು ಪುನರ್ ಪರಿಶೀಲನೆ (ರೀಡೂ) ನೆಪದಲ್ಲಿ ಈಗಲೂ ಒಂದಷ್ಟು ಡಿನೋಫಿಕೇಷನ್ ಆಗಿದ್ದು, ಅಲ್ಲಲ್ಲಿ ಕೆಟ್ಟ ವಾಸನೆಯೂ ಬಡಿಯುತ್ತಿದೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ನಂತರ ಡಿನೋಟಿಫಿಕೇಷನ್ ಕಡತಗಳಿಗೆ ಸಹಿ ಹಾಕಿಲ್ಲವಾದರೂ ಡಿನೋಟಿಫಿಕೇಷನ್ ಗಳನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರವನ್ನು ಸಚಿವ ಸಂಪುಟಕ್ಕೆ ವರ್ಗಾವಣೆ ಮಾಡುವ ತೀರ್ಮಾನ ತೆಗೆದುಕೊಂಡಿದ್ದು, ಇದರ ಹಿಂದೆ ಜಾಣತನದ ನಡೆ ಮಾತ್ರ ಕಂಡಿದೆ.

ಹಾಗೊಂದು ವೇಳೆ ವ್ಯವಸ್ಥೆಯಲ್ಲಿ ಸುಧಾರಣೆ ತರಲೇಬೇಕು ಎನ್ನುವ ಸದುದ್ದೇಶ ಇದ್ದಿದ್ದೇ ಆದರೆ ಡಿನೋಟಿಫಿಕೇಷನ್ಗೆ ಮೊದಲೇ ಉನ್ನತ ಮಟ್ಟದ ಸಮಿತಿಯಿಂದ ಸಂಬಂಧಪಟ್ಟ ಜಮೀನಿನ ಮೂಲ ಮಾಲೀಕರ ವಿಚಾರಣೆ ನಡೆಸಿ, ಅನಿವಾರ್ಯ ಎನಿಸಿದವರ ಜಮೀನುಗಳನ್ನು ಆಗಲೇ ಕೈಬಿಟ್ಟರೆ ಡಿನೋಟಿಫಿಕೇಷನ್ ವಿಷಯವೇ ಉದ್ಭವವಾಗುವುದಿಲ್ಲ. ಈ ಬಗ್ಗೆ ಶಾಸನಸಭೆಯಲ್ಲಿ ಚರ್ಚೆ ಆಗಬೇಕು. ಶಾಸನ ತರಬೇಕು. ಅದನ್ನು ಬಿಟ್ಟು ಹೊಣೆಗಾರಿಕೆ ಹಂಚಿಕೊಂಡರೆ, ವ್ಯವಸ್ಥೆ ಇದ್ದಂತೆಯೇ ನರಳುತ್ತದೆಯೇ ಹೊರತು ಸುಧಾರಣೆ ಕಾಣುವುದಿಲ್ಲ.

Leave a Reply