ಶಾರುಖ್ ಸಿನಿಮಾ ಬರ್ತಿದೆ, ಭಾರತವೀಗ ಸಹಿಷ್ಣುವಾಗಿದೆ!

ಡಿಜಿಟಲ್ ಕನ್ನಡ ಟೀಮ್

ಶುಕ್ರವಾರ ಶಾರುಖ್ ಖಾನ್ ಅವರ ಹೊಸಚಿತ್ರ ‘ದಿಲ್ವಾಲೆ’ ಬಿಡುಗಡೆಯಾಗಲಿದೆ. ತೀರ ಮೊನ್ನೆ ಮೊನ್ನೆ ತಮ್ಮ ಹುಟ್ಟಿದ ದಿನದಂದು, ‘ಭಾರತ ಸ್ವಲ್ಪ ಮಟ್ಟಿಗೆ ಅಸಹಿಷ್ಣುವಾಗಿರುವುದು ಹೌದು’ ಅಂತ ಸಂದರ್ಶನ ಕೊಟ್ಟಿದ್ದ ಶಾರುಖ್ ಖಾನ್ ಈಗ ಬಾಕ್ಸ್ ಆಫೀಸ್ ಕಡೆ ಕಣ್ಣು ನೆಟ್ಟು ರಾಗ ಬದಲಿಸಿದ್ದಾರೆ. ‘ಯಾರಿಗಾದರೂ ಕೆಟ್ಟದ್ದೆನಿಸಿದ್ದರೆ ಕ್ಷಮಿಸಿಬಿಡಿ. ನನ್ನ ಫಿಲ್ಮ್ ಬರ್ತಿದೆ ಅನ್ನೋ ಕಾರಣಕ್ಕೆ ಹೀಗೆ ಹೇಳ್ತಿಲ್ಲ’ ಅಂತ ಎಬಿಪಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶಾರುಖ್ ನಯವಾದ ಮಾತುಗಳನ್ನು ಹೊರಹಾಕಿದ್ದಾರೆ.

ಆದರೆ ಸಂದರ್ಶನವನ್ನು ವಿವರವಾಗಿ ನೋಡಿದಾಗ, ಈ ಬಾರಿ ಶಾರುಖ್ ತಮ್ಮ ಸಿನಿಮಾ ಮೇಲೆ ಈ ಹಿಂದಿನ ಹೇಳಿಕೆ ದುಷ್ಪರಿಣಾಮ ಬೀರಬಹುದೆಂಬ ಕಳವಳ ಹೊಂದಿರುವುದು ನಿಚ್ಚಳವಾಗಿ ತೋರುತ್ತದೆ. ಏಕೆಂದರೆ ಇನ್ನೊಬ್ಬ ಬಾಲಿವುಡ್ ತಾರೆ ಆಮೀರ್ ಖಾನ್ ಅಸಹಿಷ್ಣುತೆ ರಾಗ ಎಳೆದಾಗ ಅವರಿಗೆ ಕೇವಲ ಟೀಕೆಗಳಷ್ಟೇ ಸಂದಾಯವಾಗಲಿಲ್ಲ; ಬದಲಿಗೆ ಆಮೀರ್ ರಾಯಭಾರತ್ವವಿರುವ ಉತ್ಪನ್ನಗಳ ಮೇಲೂ ಜನ ತಮ್ಮ ಸಿಟ್ಟು ಪ್ರದರ್ಶಿಸಿದರು. ಸೆಲೆಬ್ರಿಟಿಗಳಿಗೆ ಕೆಟ್ಟ ನ್ಯೂಸ್ ಸಹ ಒಳ್ಳೇ ಸುದ್ದಿಯೇ. ಏಕೆಂದರೆ ಪ್ರಚಾರ ಸಿಕ್ಕರೆ ಸಾಕು ಎಂಬುದು ಹೆಚ್ಚಿನವರ ಆಲೋಚನೆ. ಆದರೆ ತಮ್ಮ ಮೇಲಿನ ಅಸಮಾಧಾನ, ಸಿಟ್ಟುಗಳೆಲ್ಲ ವ್ಯಾವಹಾರಿಕ ಆಯಾಮಕ್ಕೆ ಆಘಾತ ನೀಡುವಂಥದ್ದು ಅಂಥ ಗೊತ್ತಾದಾಗ ಇವರೆಲ್ಲ ನಿಜಕ್ಕೂ ಬೆದರುತ್ತಾರೆ. ಭಾರತಕ್ಕೆ ಆಮೀರ್ ಅಸಹಿಷ್ಣುತೆ ಆರೋಪ ಹೊರೆಸಿದಾಗ ಅವರು ಮತ್ತು ಸ್ನ್ಯಾಪ್ ಡೀಲ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾದ ಆಕ್ರೋಶಕ್ಕೆ ಬಾಲಿವುಡ್ ನಿಜಕ್ಕೂ ಬೆಚ್ಚಿದೆಯಾ? ಶಾರುಖ್ ರ ನನ್ನ ಮನ್ನಿಸಿ ಎಂಬ ಧಾಟಿಯ ಮಾತು ಕೇಳಿದರೆ ಹೀಗನಿಸುವುದು ಸಹಜ.

ಈ ಹಿಂದೆ ನೀಡಿದ ಸಂದರ್ಶನಗಳಲ್ಲೂ ಶಾರುಖ್, ಅಸಹಿಷ್ಣುತೆ ಇರುವ ಬಗ್ಗೆ ಆಮೀರ್ ಅವರಷ್ಟು ಖಚಿತವಾಗಿ ಸರ್ಟಿಫಿಕೇಟ್ ಕೊಡುವ ಉಸಾಬರಿಗೆ ಹೋಗಿರಲಿಲ್ಲ. ‘ಹಿಂದೆಲ್ಲ ಮಾಧ್ಯಮಗಳು ಕಡಿಮೆ ಇದ್ದವು. ಸಾಮಾಜಿಕ ಮಾಧ್ಯಮ ಇರಲಿಲ್ಲ. ಹೀಗಾಗಿ ಪ್ರತಿಕ್ರಿಯೆಗಳು ಕಿವಿಗೆ ತಲುಪುತ್ತಿರಲಿಲ್ಲ. ಈಗ ಎಲ್ಲರ ಕೈಗೆ ಮಾಧ್ಯಮವಿದೆ. ಹೀಗಾಗಿ ಸದ್ದು ಜೋರು. ಜಗತ್ತಿನಲ್ಲೇ ಹಾಗೊಂದು ಗಲಾಟೆ ಇದೆ. ಭಾರತದಲ್ಲೂ ಸ್ವಲ್ಪಮಟ್ಟಿಗೆ ಅಸಹಿಷ್ಣುತೆ ಇರೋದು ನಿಜ.’ ಅಂದಿದ್ರು.

ಆಮೀರ್ ಖಾನ್ ಮಾತ್ರ ‘ಕಳೆದ ಏಳೆಂಟು ತಿಂಗಳಿಂದ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಅನ್ನಿಸ್ತಿದೆ’ ಅಂತಲೇ ‘ರಾಜಕೀಯ’ ಮಾತು ಪ್ರಾರಂಭಿಸಿದ್ದು, ಹೆಂಡತಿಗೆ ದೇಶವನ್ನೇ ತೊರೆಯುವಷ್ಟು ಹೆದರಿಕೆ ಆಗಿದೆ ಎಂದೂ ಮಾತು ಹೊಸೆದಿದ್ದರು.

ಬರ್ಖಾ ಮತ್ತು ರಾಜದೀಪ್ ಇಬ್ಬರಿಗೂ ಕೊಟ್ಟ ಸಂದರ್ಶನದಲ್ಲಿ ಶಾರುಖ್ ಅಸಹಿಷ್ಣುತೆ ಕೊಂಚ ಇದೆ ಎಂದಿದ್ದು ಹೌದಾಗಿತ್ತಾದರೂ ಅದರ ಹಿಂದೆ- ಮುಂದೆ ಬೇರೆ ಮಾತುಗಳಿದ್ದವು. ಆದರೆ ಈಗ ಶಾರುಖ್ ಅಷ್ಟು ರಿಸ್ಕ್ ಬೇಡ ಎಂದು ಮತ್ತೊಂದು ಮಗ್ಗುಲಲ್ಲಿ ನಿಂತಿದ್ದಾರೆ. ಅಸಹಿಷ್ಣುತೆ ಇದೆ ಅಂತೀರಾ, ಇಲ್ವಾ ಎಂದು ಈ ಸಲ ಮೇಲಿಂದ ಮೇಲೆ ಕೇಳಿದಾಗ ಶಾರುಖ್ ಹೇಳಿದ್ದು- ‘ಧರ್ಮ, ಜಾತಿ, ಬಣ್ಣ, ಲಿಂಗ ಈ ವಿಚಾರಗಳ ಮೇಲೆ ತಾರತಮ್ಯ ಇರಬಾರದು ಎಂಬುದು ನನ್ನ ಅನಿಸಿಕೆ. ಹಾಗಂತ ಈಗ ಭಾರತದಲ್ಲಿ ಅಂಥ ಸ್ಥಿತಿ ಇದೆ ಅನ್ನೋದು ನನ್ನ ಮಾತಿನ ಅರ್ಥ ಅಲ್ಲ… ಭಾರತ ಈಗ ಆಧುನಿಕತೆಯ ಹೊಸ್ತಿಲಲ್ಲಿದೆ. ಇದು ದೇಶ ಇರಬೇಕಾದ ಉತ್ತಮ ಜಾಗ. ನಾವು ಸೂಪರ್ ಪವರ್ ಆಗಬಲ್ಲೆವು…. ಆಗಲೇಬೇಕು. ಆದರೆ ಕೆಲ ಸಣ್ಣ ಸಣ್ಣ ವಿಷಯಗಳು… ನನಗನಿಸೋದೇನೆಂದರೆ, ಯುವ ಜನಾಂಗ… ಹಂಗಂತ ಈಗಿರೋ ಜನರೇಷನ್ ಬಗ್ಗೆ ನಾ ಹೇಳ್ತಿಲ್ಲ…ಈಗ ಅಸಹಿಷ್ಣುತೆ ಇದೆ ಅನ್ನೋದು ನನ್ನ ಮಾತಿನ ಅರ್ಥ ಅಲ್ಲ..’ ಹೀಗೆಲ್ಲ ಶಾರುಖ್ ಕಷ್ಟಪಟ್ಟಿದ್ದು ಸ್ಪಷ್ಟವಾಗಿತ್ತು.

ಒಂದು ಹಂತದಲ್ಲಿ ಇನ್ಟಾಲರನ್ಸ್ ಗೆ ಹಿಂದಿ ಶಬ್ದ ಏನು ಅಂತ ವೇದಿಕೆ ಮುಂಭಾಗದಲ್ಲಿದ್ದ ಪ್ರೇಕ್ಷಕರನ್ನೇ ಕೇಳಿದರು. ಅಸಹಿಷ್ಣುತಾ ಎಂಬ ಉತ್ತರ ಬಂದಾಗ… ಅದು ದೇಶದಲ್ಲಿ ಈ ಕ್ಷಣದಲ್ಲಿ ಇದೆ ಅಂತ ನಾನು ಹೇಳ್ತಾ ಇಲ್ಲ ಅಂತ ಇನ್ನೊಮ್ಮೆ ಸ್ಪಷ್ಟಪಡಿಸಿದರು.

Leave a Reply